Asianet Suvarna News Asianet Suvarna News

National Youth Day 2024: ರಾಷ್ಟ್ರಕಾರ್ಯದ ಮಹಾ ಪ್ರೇರಣೆ ಸ್ವಾಮಿ ವಿವೇಕಾನಂದರು..!

ವಿವೇಕಾನಂದರು ಬಂಗಾಳದಲ್ಲಿ ಕ್ಷಾಮ, ಫ್ಲೇಗ್‌ ಬಂದಾಗ, ಭೂಕಂಪವಾದಾಗಿ ಜನ ನರಳಿದಾಗ ಸ್ವತಃ ನಿಂತು ಜನರ ಸೇವೆ ಮಾಡಿದರು. ಒಂದೊಮ್ಮೆ ಅಮೆರಿಕಗೆ ಹೋಗಲು ಅವರ ಶಿಷ್ಯ ಬಳಗದ ಅರುಸಿಂಗ್‌ ಪೆರಮಾಳ್‌ ಕೆಲ ಹಣ ತಂದು ಸ್ವಾಮಿಜಿಗೆ ಕೊಡಲು ಬಂದರೆ ರಾಜ್ಯದ ಜನ ಕಷ್ಟದಿಂದ ಕಂಗೆಟ್ಟಿದ್ದಾರೆ, ಇದೇ ಹಣ ಅವರಿಗೆ ನೀಡು ಎಂದು ಹೇಳಿ ಕಲುಹಿಸಿದ್ದರು. ಈ ಬಗೆಯ ಸಮಾಜದ ಬಗೆಗಿನ ಕಾಳಜಿ ಅಪರೂಪವೇ.

Swami Vivekananda the great Inspiration of Nationalism Kirankumar Vivekavamshi grg
Author
First Published Jan 12, 2024, 10:06 AM IST

ಕಿರಣಕುಮಾರ ವಿವೇಕವಂಶಿ: ಕನ್ನಡಪ್ರಭ ಉಪ ಸಂಪಾದಕ

ವಿವೇಕಾನಂದರಲ್ಲಿನ ಅಪ್ರತಿಮ ರಾಷ್ಟ್ರಭಕ್ತಿ, ಸಮಾಜದೆಡೆಗಿನ ಅನಂತ ಪ್ರೇಮ, ಯುವಕರ ಮೇಲಿನ ಅದಮ್ಯ ಭರವಸೆ, ಆಧ್ಯಾತ್ಮಿಕ ಉತ್ಕಟಕೆ ಮತ್ತು ಔನ್ನತ್ಯ, ಅಪಾರ ಧರ್ಮ ಶ್ರದ್ಧೆ, ಸ್ತ್ರೀ ಬಗೆಗಿನ ಗೌರವ, ನೈಜ ಶಿಕ್ಷಣದ ಪರಿಕಲ್ಪನೆ, ಅದಮ್ಯ ವ್ಯಕ್ತಿತ್ವ ಆಯಸ್ಕಾಂತದಂತೆ ಜಗತ್ತಿನ ಜನರನ್ನು ಸೆಳೆಯುತ್ತದೆ

"ನನ್ನೆಲ್ಲ ಸಹ ಪ್ರಾಧ್ಯಾಪಕರ ಜ್ಞಾನವನ್ನು ಒಂದು ತಕ್ಕಡಿಯಲ್ಲಿ ಇರಿಸಿ, ವಿವೇಕಾನಂದರ ಜ್ಞಾನವನ್ನು ಇನ್ನೊಂದು ತಕ್ಕಡಿಯಲ್ಲಿ ಇರಿಸಿದರೆ ವಿವೇಕಾನಂದರ ಜ್ಞಾನದ ತೂಕವೇ ಹೆಚ್ಚಾಗುತ್ತದೆ. ಅಮೆರಿಕೆಯ ನಾಲ್ಕು ನೂರು ವರ್ಷಗಳ ಇತಿಹಾಸದಲ್ಲಿ ಇಂತಹ ವ್ಯಕ್ತಿ ಈ ನೆಲದ ಮೇಲೆ ಓಡಾಡಿರಲಿಲ್ಲ" ಎಂದು ಹಾರ್ವರ್ಡ್ ವಿಶ್ವವಿದ್ಯಾಲಯದ ಪ್ರೊಫೆಸರ್ ಜೆ.ಎಚ್.ರೈಟ್ ಸ್ವಾಮಿ ವಿವೇಕಾನಂದರೊಂದಿಗಿನ ಸಂವಾದದ ನಂತರ ಹೇಳಿದ್ದು ಇತಿಹಾಸ. ಅವರೇಕೆ ಹೀಗೆ ಹೇಳಿದರು? ಅಷ್ಟು ಪಂಡಿತರೇ ವಿವೇಕಾನಂದರು ಎಂದು ಪ್ರಶ್ನೆ ಉದ್ಭವಿಸಬಹುದು. ಇದಕ್ಕೆ ಉತ್ತರ ವಿವೇಕಾನಂದರ ಜೀವನ ಮತ್ತು ಸಂದೇಶಗಳ ಅಧ್ಯಯನ ಮಾತ್ರದಿಂದ ಕಂಡುಕೊಳ್ಳಲು ಸಾಧ್ಯ.

National Youth Day 2023: ವಿವೇಕಾನಂದರ ಈ ಜೀವನ ಪಾಠ ತಿಳ್ಕೊಂಡ್ರೆ ಲೈಫ್‌ನಲ್ಲಿ ಸಕ್ಸಸ್ ಸಿಗೋದು ಖಂಡಿತ

ಆಧ್ಯಾತ್ಮದ ಉತ್ಕಟತೆ: 

ವಿಶ್ವನಾಥ ದತ್ತ ಹಾಗೂ ಭುವನೇಶ್ವರಿ ದೇವಿಗೆ ಕಾಶಿ ವಿಶ್ವನಾಥನ ಕೃಪೆಯಿಂದ ಜನಿಸಿದ ನರೇಂದ್ರ ಬಾಲ್ಯದಲ್ಲಿಯೇ ಆಧ್ಯಾತ್ಮದ ತುಡಿತ ಹೊಂದಿದ್ದ. ಹೀಗಾಗಿಯೇ ಮನೆಯಲ್ಲಿ ಅಮ್ಮನಿಗೆ, ಶಾಲೆಯಲ್ಲಿ ಗುರುಗಳಿಗೆ, ಆರ್ಯ ಸಮಾಜ, ಬ್ರಹ್ಮ ಸಮಾಜದ ಪ್ರಮುಖರಿಗೆ, ಕೊನೆಗೆ ರವಿಂದ್ರನಾಥ ಠ್ಯಾಗೋರರ ತಂದೆ ದೇವೇಂದ್ರನಾಥರಿಗೂ ಕೇಳಿದ್ದು ಒಂದೇ ಪ್ರಶ್ನೆ, ಮಹಾಶಯರೇ ನೀವು ದೇವರನ್ನು ನೋಡಿದ್ದೀರಾ? ಹೇಗಿದ್ದಾನೆ ಅವನು? ನನಗೆ ತೋರಬಲ್ಲಿರಾ? ಎಂದು. ಆದರೆ ಯಾರಿಂದಲೂ ನಿರೀಕ್ಷಿತ ಉತ್ತರ ಸಿಗಲಿಲ್ಲ. ಕೊನೆಗೆ ಶಿಕ್ಷಕರೊಬ್ಬರ ಅಣತಿ ಮೇರೆಗೆ ದಕ್ಷಿಣೇಶ್ವರದ ಕಾಳಿ ಮಂದಿರದ ಅರ್ಚಕರಾದ ರಾಮಕೃಷ್ಣರ ಬಳಿ ಹೋದರು. ಅಲ್ಲಿಯೂ ಅನುಮಾನದಿಂದ ಮತ್ತೆ ಅದೇ ಪ್ರಶ್ನೆ ಕೇಳಿದರು. ಆದರೆ ಸಿಕ್ಕ ಉತ್ತರ ಮಾತ್ರ ಕುತೂಹಲ ಕೆರಳಿಸಿತ್ತು. ಗುರು ರಾಮಕೃಷ್ಣ ಪರಮಹಂಸರು ನಿನ್ನನ್ನು ನೊಡಿದಷ್ಟೇ ಚನ್ನಾಗಿ ಕಾಳಿಯನ್ನು (ದೇವರು) ನೋಡಿದ್ದೇನೆ, ಬೇಕಿದ್ದರೆ ನಿನಗೂ ತೋರಿಸಬಲ್ಲೆ ಎಂದರು. ಇದನ್ನು ಕೇಳಿದ ನರೇಂದ್ರ ಒಂದು ಕ್ಷಣ ಬೆರಗಾದ, ತಾನು ದೇವರನ್ನು ನೊಡಬೇಕೆಂಬ ಉತ್ಕಟತೆಯಿಂದ ರಾಮಕೃಷ್ಣರ ಸಂಪರ್ಕಕ್ಕೆ ಬಂದ. ಮುಂದೊಮ್ಮೆ ರಾಮಕೃಷ್ಣರು ಕಾಳಿಯ ದರ್ಶನವನ್ನೂ ಮಾಡಿಸಿದರು. ಅಷ್ಟೇ ಅಲ್ಲ ರಾಷ್ಟ್ರಕಾರ್ಯಕ್ಕೆ ಅವನ್ನು ಸಿದ್ಧಗೊಳಿಸಿ ಸರ್ವಸ್ವವನ್ನೂ ಧಾರೆ ಎರೆದರು.

ಸಮಾಜದೆಡೆಗೆ ಅನಂತ ಪ್ರೇಮ:

ರಾಮಕೃಷ್ಣರ ಶಿಷ್ಯನಾಗಿ ಅವರಿಂದ ಆಧ್ಯಾತ್ನದ ಔನ್ನತ್ಯಕ್ಕೇರಿದ ನರೇಂದ್ರ ಮುಂದೊಮ್ಮೆ ತಂದೆಯನ್ನು ಕಳೆದುಕೊಂಡು ಸರ್ವಶಕ್ತ ರಾಮಕೃಷ್ಣರು ತನ್ನ ಕುಟುಂಬದ ಸಮಸ್ಯೆಯನ್ನು ಬಗೆಹರಿಸಿ, ತಾಯಿಗೊಂದು ಜೀವನ ಮಾರ್ಗ ತೋರಬೇಕೆಂದು ಕೇಳಿದ. ಆಗ ಕಾಳಿಯ ಹತ್ತಿರ ನೀನೇ ಕೇಳು ಎಂದು ಪ್ರೀತಿಯ ನರೇನ್‌ನನ್ನು ಗರ್ಭರ ಗುಡಿಯ ಒಳಗೆ ಕಳುಹಿಸಿದರೆ, ನರೇಂದ್ರ ಮೂರು ಬಾರಿ ಒಳ ಹೋದರೂ ಕೇಳಿದ್ದು ಜ್ಞಾನ, ಭಕ್ತಿ, ವಿವೇಕ ಹಾಗೂ ವೈರಾಗ್ಯ ಮಾತ್ರ! ಇದೆಲ್ಲವೂ ಮುಂದೆ ಸಮಾಜಕ್ಕಾಗಿ ಕೆಲಸ ಮಾಡಲು ಬೇಕಾಗಿದ್ದ ಸರಕು. ಇದನ್ನೇ ಜಗನ್ಮಾತೆ ಪಾಲಿಸಿದಳು. 

ವಿವೇಕಾನಂದರು ಬಂಗಾಳದಲ್ಲಿ ಕ್ಷಾಮ, ಫ್ಲೇಗ್‌ ಬಂದಾಗ, ಭೂಕಂಪವಾದಾಗಿ ಜನ ನರಳಿದಾಗ ಸ್ವತಃ ನಿಂತು ಜನರ ಸೇವೆ ಮಾಡಿದರು. ಒಂದೊಮ್ಮೆ ಅಮೆರಿಕಗೆ ಹೋಗಲು ಅವರ ಶಿಷ್ಯ ಬಳಗದ ಅರುಸಿಂಗ್‌ ಪೆರಮಾಳ್‌ ಕೆಲ ಹಣ ತಂದು ಸ್ವಾಮಿಜಿಗೆ ಕೊಡಲು ಬಂದರೆ ರಾಜ್ಯದ ಜನ ಕಷ್ಟದಿಂದ ಕಂಗೆಟ್ಟಿದ್ದಾರೆ, ಇದೇ ಹಣ ಅವರಿಗೆ ನೀಡು ಎಂದು ಹೇಳಿ ಕಲುಹಿಸಿದ್ದರು. ಈ ಬಗೆಯ ಸಮಾಜದ ಬಗೆಗಿನ ಕಾಳಜಿ ಅಪರೂಪವೇ.

ಪರಿವ್ರಾಜಕರಾಗಿ ರಾಷ್ಟ್ರದ ನಾಡಿ ಅರಿತರು:

ಸ್ವಾಮಿ ವಿವೇಕಾನಂದರು ರಾಮಕೃಷ್ಣರ ದೇಹತ್ಯಾಗದ ನಂತರ ಗುರುವಿಯೋಗದ ದುಃಖವನ್ನು ಕಡಿಮೆ ಮಾಡಿಕೊಳ್ಳಲೆಂದು ಶಾರದಾ ಮಾತೆಯವರ ಅನುಮತಿ ಪಡೆದು ದೇಶ ಪರ್ಯಟನೆಗೆ ಪರಿವ್ರಾಜಕರಾಗಿ ನಡೆದರು. ಈ ವೇಳೆ ಉತ್ತರದ ಕಶ್ಮೀರದಿಂದ ಕನ್ಯಾಕುಮಾರಿವರೆಗೆ ಪಾದಯಾತ್ರೆ ಕೈಗೊಂಡು ಭಾರತೀಯರ ಬದುಕನ್ನು ಅರಿತರು. ಕನ್ಯಾಕುಮಾರಿ ಬಳಿಯ ಸಮುದ್ರ ಮಧ್ಯಕ್ಕೆ ತೆರಳಿ ಬಂಡೆಯ ಮೇಲೆ ಕುಳಿತು ನಿರಂತರ ಮೂರು ದಿನಗಳ ಕಾಲ ರಾಷ್ಟ್ರದ ಲಾಸ್ಯ ಮುಕ್ತಿಗಾಗಿ ಜಗನ್ಮಾತೆಯಲ್ಲಿ ಮೊರೆ ಇಟ್ಟರು. ಆಕೆಯ ಸಾಕ್ಷಾತ್ಕಾರವಾದಾಗ 'ಹೇ ಜಗನ್ಮಾತೆ ನನಗೆ ಮುಕ್ತಿ ಬೇಡ, ಸ್ವರ್ಗ ಬೇಡ. ಈ ದೇಶದ ಕೋಟ್ಯಾನು ಕೋಟಿ ದೀನ, ದಲಿತ, ದರಿದ್ರರನ್ನು ಮೇಲೆತ್ತುವ ಸನ್ಮಾರ್ಗ ತೋರು' ಎಂದು ಮೊರೆಯಿಟ್ಟರು. ರಾಷ್ಟ್ರದ ಉದ್ಧಾರಕ್ಕಾಗಿ ಕಣ್ಣೀರುಗರೆದರು. ಅಲ್ಲಿಂದ ಜಗನ್ಮಾತೆಯ ಅಪ್ಪಣೆ ಪಡೆದು ಹೊರಟದ್ದು ಅಮೆರಿಕೆಯೆಡೆಗೆ! ವಿಶ್ವ ಪರ್ಯಟನೆ ಮಾಡಿ ಭಾರತೀಯ ವೇದಾಂತದ ಸಾರವನ್ನು ಜಗತ್ತಿಗೆ ಅರುಹಿ, ಅಲ್ಲಿಂದ ಸಂಪತ್ತನ್ನು ತಂದು ಈ ದೇಶದ ದಾರಿದ್ರ್ಯವನ್ನು ಹೋಗಲಾಡಿಸುವ ಸಂಕಲ್ಪ ಅವರದ್ದಾಗಿತ್ತು. 

ಅಪ್ರತಿಮ ರಾಷ್ಟ್ರಭಕ್ತ:

ಅಮೆರಿಕೆಯಿಂದ ಮರಳಿದಾಗ ಸ್ವಾಮಿ ವಿವೇಕಾನಂದರಿಗೆ, ನಾಲ್ಕು ವರ್ಷಗಳ ಕಾಲ ಭೋಗ ಭೂಮಿಯಲ್ಲಿ ಸುತ್ತಿ ಬಂದ ನಂತರ ನಿಮಗೆ ಈಗ ಭಾರತದ ಬಗ್ಗೆ ಏನೆನ್ನಿಸುತ್ತದೆ?ಎಂದು ಪತ್ರಕರ್ತರೊಬ್ಬರು ಕೇಳಿದರು. ಇದಕ್ಕೆ ಉತ್ತರಿಸಿದ ಸ್ವಾಮೀಜಿ, ಮೊದಲು ಭಾರತವೆಂದರೆ ಪುಣ್ಯಭೂಮಿ ಎಂದು ಭಾವಿಸಿದ್ದೆ. ಆದರೆ, ಈಗ ಅನ್ನಿಸುತ್ತಿದೆ, ಭಾರತದ ಮಣ್ಣು, ಗಾಳಿ, ನೀರು ಎಲ್ಲವೂ ಪವಿತ್ರ. ಅದುವೇ ನನ್ನ ಪಾಲಿಗೆ ತೀರ್ಥಕ್ಷೇತ್ರ ಎಂದಿದ್ದರು. 

ಸ್ವದೇಶಿ ಮಂತ್ರವನ್ನು ನೀಡಿ, ಭಾರತೀಯರು ನಾವು, ಭಾರತೀಯರೆಲ್ಲ ನಮ್ಮ ಸಹೋದರರು. ಸಾರಿ ಹೇಳಿ, ಮೂರ್ಖ ಭಾರತೀಯರೂ ನಮ್ಮ ಸಹೋದರರು, ಬ್ರಾಹ್ಮಣ ಭಾರತೀಯರೆಮ್ಮ ಸಹೋದರರು, ಪಂಚಮ ಭಾರತೀಯರೆಮ್ಮ ಸಹೋದರರು. ನೀವು ಒಂದು ಚಿಂದಿಬಟ್ಟೆಯನ್ನು ಸೊಂಟಕ್ಕೆ ಕಟ್ಟಿಕೊಂಡಿದ್ದರೂ ಕೂಡ, ಅಭಿಮಾನಪೂರ್ವಕವಾಗಿ ದಿಕ್‌ತಟಗಳು ಅನುರಣಿತವಾಗುವಂತೆ ತಾರಸ್ವರದಿಂದ ಸಾರಿ ಹೇಳಿ ‘ಭಾರತೀಯರು ನಮ್ಮ ಸಹೋದರರು, ಭಾರತೀಯರು ನಮ್ಮ ಪ್ರಾಣ. ಭಾರತೀಯ ದೇವ ದೇವತೆಗಳೆಲ್ಲರೂ ನಮ್ಮ ದೇವರು. ಭಾರತೀಯ ಸಮಾಜ ನಮ್ಮ ಬಾಲ್ಯದ ತೊಟ್ಟಿಲು, ತಾರುಣ್ಯದ ನಂದನವನ, ವೃದ್ಧಪ್ಯದ ವಾರಾಣಸಿ.’ ಸಹೋದರರೆ, ಹೀಗೆ ಸಾರಿ ‘ಭಾರತ ಭೂಮಿಯೆ ನಮ್ಮ ಪರಂಧಾಮ. ಭಾರತದ ಶುಭವೆ ನಮ್ಮ ಶುಭ.’ ಹಗಲೂ ರಾತ್ರಿಯೂ ಇದು ನಿಮ್ಮ ಪ್ರಾರ್ಥನೆಯಾಗಲಿ, ‘ಹೇ ಗೌರೀನಾಥ, ಹೇ ಜಗನ್ಮಾತೆ, ಪೌರುಷವನ್ನು ಎಮಗೆ ದಯಪಾಲಿಸು. ಹೇ ಸರ್ವಶಕ್ತಿಶಾಲಿನಿ, ನಮ್ಮ ದೌರ್ಬಲ್ಯವನ್ನು ದಹಿಸು. ಕ್ಲೈಬ್ಯವನ್ನು ಹೋಗಲಾಡಿಸು. ನಮ್ಮ ಷಂಡತನವನ್ನು ಹೋಗಲಾಡಿಸಿ, ನಮ್ಮಲ್ಲಿ ವೀರತ್ವವನ್ನು ತುಂಬು’ ಎಂದು ನಿತ್ಯ ಪ್ರಾರ್ಥಿಸುವಂತೆ ಕರೆಕೊಟ್ಟ ಸ್ವಾಮೀಜಿ ಇಡೀಯ ಬದುಕನ್ನು ರಾಷ್ಟ್ರದ ಹಿತಕ್ಕಾಗಿಯೇ ಬದುಕಿದರು. ಅವರ ರಕ್ತದ ಕಣಕಣದಲ್ಲೂ ಭಾರತದ ನಾಮವೇ ಅನುರಣಿಸುತ್ತಿತ್ತು. ಮನಸ್ಸು ರಾಷ್ಟ್ರಕ್ಕಾಗಿ ಸದಾ ತುಡಿಯುತ್ತಿತ್ತು.

ಸನಾತನ ಧರ್ಮದ ಪುನರುತ್ಥಾನ:

ಅಮೆರಿಕದ ಚಿಕ್ಯಾಗೋದಲ್ಲಿ ನಡೆದ ವರ್ಲ್ಡ್‌ ರಿಲಿಜಿಯಸ್‌ ಕಾನ್ಪರೆನ್ಸ್‌ನಲ್ಲಿ ಸನಾತನ ಹಿಂದು ಧರ್ಮದ ಪ್ರತಿನಿಧಿಯಾಗಿ ಭಾಗವಹಿಸಿ ವೇದ ಭೂಮಿಯ ಘನ ವಿಚಾರಗಳನ್ನು ಪ್ರಸ್ತುತ ಪಡಿಸಿದರು. ತತ್ಪರಿಣಾಮ ಭಾರತದವೆಂದರೆ ದೀನ, ದಲಿತ, ದರಿದ್ರ, ಕೃಪಣರ, ಹಾವಾಡಿಗರ ರಾಷ್ಟ್ರ ಎಂದು ಭಾವಿಸಿದ್ದ ಜಗತ್ತಿನ ಅನೇಕ ರಾಷ್ಟ್ರಗಳ ದೃಷ್ಟಿಕೋನ ಬದಲಾಯಿತು. ಕ್ರೈಸ್ತ ಪಾದ್ರಿಗಳು ನಾವಿರುವುದೇ ಜಗತ್ತಿನ‌ ಉದ್ಧಾರಕ್ಕಾಗಿ, ಭಾರತಕ್ಕೆ ನಾಗರಿಕತೆ ಕಲಿಸಲೆಂದೇ ನಮ್ಮ ಪಾದ್ರಿಗಳನ್ನು ಅಲ್ಲಿಗೆ ಕಳುಹಿಸುತ್ತಿದ್ದೇವೆ ಎಂದು ಭಾವಿಸಿದ್ದರು. ಹೀಗೆ ಬೀಗುತ್ತಿದ್ದವರು ಒಂದು ಕ್ಷಣ ನಾಚಿ ತಲೆ ತಗ್ಗಿಸಿದರು. ಸನಾತನ ಹಿಂದು ಧರ್ಮದ ಬಗ್ಗೆ ಗೌರವ ತಳೆದರು. ವಿವೇಕಾನಂದರ ಮಾಡಿದ ವೇದಾಂತ ಪ್ರಸಾರದಿಂದ ಸನಾತನ ಧರ್ಮದ ಪುನರುತ್ಥಾನವಾಯಿತು.

ವಿವೇಕಾನಂದರ ಉನ್ಯಾಸವನ್ನು ಕೇಳಿ ಮಾರ್ಗರೇಟ್‌ ನೋಬೆಲ್‌ (ಸೋದರಿ ನಿವೇದಿತಾ), ಜೊಸೆಫಿನ್‌ ಬುಲ್‌, ಗುಡ್ವಿನ್‌, ಜೊಸೆಫಿನ್‌ ಮ್ಯಾಕ್ಲಾಯ್ಡ್‌ ಸೇರಿದಂತೆ ಅನೇಕ ವಿದೇಶಿಗರು ಅವರ ಶಿಷ್ಯರಾದರು. ವಿವೇಕಾನಂದರ ಚಿಂತನೆಗಳನ್ನು ಜಗತ್ತಿಗೆ ತಲುಪಿಸುವ ಕಾರ್ಯಕ್ಕೆ ಮುಂದಾದರು. 

National Youth Day: ವಿವೇಕಾನಂದರ ಕನಸಿನ ಭಾರತ ನಿರ್ಮಾತೃ ಮೋದಿ

ಯುವ ಜನಾಂಗದ ಮೇಲೆ ಭರವಸೆ:

ಸ್ವಾಮೀಜಿ ತಮ್ಮೆಲ್ಲ ಭರವಸೆಯನ್ನು ತರುಣ ಜನಾಂಗದ ಮೇಲೆ ಇರಿಸಿದ್ದರು. ಈ ರಾಷ್ಟ್ರವನ್ನು ಕಟ್ಟಲು ಬೇಕಾಗಿರುವ ಎಲ್ಲ ಚೈತನ್ಯವಿರುವುದು ದೇಶದ ಯುವಜನರಲ್ಲಿ ಮಾತ್ರ ಎಂದು ಬಲವಾಗಿ ಹೇಳಿದ್ದ ಸ್ವಾಮೀಜಿ, ಕಬ್ಬಿಣದ ಮಾಂಸಖಂಡ, ಉಕ್ಕಿನ ನರಮಂಡಲ, ವಿದ್ಯುತ್ತಿನ ಇಚ್ಛಾಶಕ್ತಿ ಹಾಗೂ ಮಿಮಚಿನಂತಹ ಬುದ್ಧಿ ಶಕ್ತಿಯನ್ನು ಹೊಂದಿರುವ ತರುಣರು ಈ ರಾಷ್ಟ್ರಕ್ಕೆ ಬೇಕು. ಅಗೋ ನೋಡು ಬೆಟ್ಟ ಎಂದರೆ ಕುಟ್ಟಿ ಪುಡಿ ಮಾಡಲಾ ಸ್ವಾಮೀಜಿ ಎಂದು ಕೇಳಬೇಕು, ಅಗೋ ನೋಡು ಸಮುದ್ರ ಎಂದರೆ ಉಗ್ಗಿ ಖಾಲಿ ಮಾಡಲಾ ಎನ್ನಬೇಕು. ಎಂಥ ಅದಮ್ಯ ಇಚ್ಛಾಶಕ್ತಿ ಅವರದ್ದಾಗಿರಬೇಕೆಂದರೆ, ಸಾಗರದ ಆಳಕ್ಕೆ ಹೋಗಿ ಮೃತ್ಯುವಿನ ಜೊತೆ ಸೆಣಸಾಡಿ ಧ್ಯೇಯಕ್ಕಾಗಿ ಗೆದ್ದು ಬರಬಲ್ಲ ಸಾಮರ್ಥ್ಯ ಇರಬೇಕು. ಇಂಥ ನೂರು ಜನ ಯುವಕರು ನನ್ನೊಟ್ಟಿಗೆ ಬಂದರೆ ಜಗತ್ತನ್ನೇ ಗೆಲ್ಲಬಲ್ಲೆ ಎಂದಿದ್ದರು. ಯುವಕರೇ ಈ ದೇಶದ ಭವಿಷ್ಯ ಎಂದು ಸಾರಿದ್ದರು. ತರುಣ ಶಕ್ತಿಯನ್ನು ರಾಷ್ಟ್ರದ ಸಂಪತ್ತಾಗಿಸುವ ಕರೆ ನೀಡಿದ್ದು ವಿವೇಕಾನಂದರೇ. ಪುರುಷ ಸಿಂಹರಾಗಲು ಸದಾ ಯುವಕರಿಗೆ ಪ್ರೇರೇಪಿಸುತ್ತಿದ್ದರು.

ಸ್ವಾಮೀಜಿ ಕೇಳಿದ ಯುವಕರು ನಾವಾಗಿ, ಜಗತ್ತಿನ ಹಿತಕ್ಕಾಗಿ ಕೆಲಸ ಮಾಡುವಂತಾಬೇಕು. ವಿವೇಕಾನಂದರೇ ನೀಡಿದ ‘ಆತ್ಮನೋ ಮೋಕ್ಷಾರ್ಥಂ ಜಗದ್ದಿತಾಯಚ’ ಎಂಬ ಉಪನಿಷದ್‌ ಮಂತ್ರವನ್ನು ಧ್ಯೇಯವಾಗಿಸಿಕೊಂಡು, ವಿಚಾರವೊಂದನ್ನು ಕೈಗೆತ್ತಿಕೊಂಡು ರಾಷ್ಟ್ರ, ಸಮಾಜದ ಹಿತಕ್ಕಾಗಿ ಕೆಲಸ ಮಾಡುವಂತಾದರೆ ಬದುಕು ಸಾರ್ಥಕ. ವಿವೇಕಾನಂದರ ಕಲ್ಪನೆಯಲ್ಲಿ ಭಾರತ ಜಗತ್ತಿನ ರಾಷ್ಟ್ರಗಳಿಗೆ ಹೋಲಿಸಿದರೆ ಯಾವುದರಲ್ಲೂ ಗುಲಗಂಜಿ ತೂಕಕಡಿಮೆ ಇರಬಾರದು ಎಂದಾಗಿತ್ತು. ಈ ಚಿಂತನೆ ನಮ್ಮದೂ ಆಗಬಹುದಲ್ಲವೇ?

Follow Us:
Download App:
  • android
  • ios