ಬೆಂಗಳೂರು(ಡಿ.21): ಚಲಿಸುತ್ತಿದ್ದ ವಾಹನದಲ್ಲಿ ತಕ್ಷಣ ಏನೇ ಸಮಸ್ಯೆ ಎದುರಾದರೂ ಕೈ ಕಾಲು ನಡುಗುವುದು ಖಚಿತ. ಮುಂದೇನು ಮಾಡುವುದು ಅನ್ನೋ ಚಿಂತೆ. ಇದರ ನಡುವೆ ಅಪಾಯದಿಂದ ಪಾರಾಗುವ ದಾರಿಗಳು ಕಾಣುವುದೇ ಇಲ್ಲ. ಆದರೆ ಧೈರ್ಯಶಾಲಿಗಳು ಹಾಗೂ ಸಾಹಸಿಗರು ಇದನ್ನು ಮೆಟ್ಟಿನಿಲ್ಲುತ್ತಾರೆ. ಹೀಗೆ ಬ್ರೇಕ್ ಫೇಲ್ ಆದ ಬಸ್ಸನ್ನು ನಿಲ್ಲಿಸಿ ಪ್ರಯಾಣಿಕರ ಉಳಿಸಿದ ಕಲಬುರಗಿಯ ಅಬಕಾರಿ ಇಲಾಖೆ ಗಾರ್ಡ್ ಯಶವಂತರಾವ್ ಸೂರ್ಯವಂಶಿಗೆ ಸುವರ್ಣನ್ಯೂಸ್-ಕನ್ನಡಪ್ರಭ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಿದೆ.

ಸೂರ್ಯವಂಶಿ ಸಾಧನೆ
ಕಲಬುರಗಿ ರೇಲ್ವೇ ಮೇಲ್ಸೆತುವೆಯಿಂದ ಇಳಿಜಾರಿನತ್ತ ಸಾಗುತ್ತಿದ್ದ ವೇಳೆ ಬಸ್‌ನ ಬ್ರೇಕ್ ಕಾರ್ಯನಿರ್ವಹಿಸುತ್ತಿಲ್ಲ ಅನ್ನೋ ಆತಂಕದ ವಿಚಾರ ಚಾಲಕ ಅಂಬರೀಷ್ ಗಮನಕ್ಕೆ ಬಂದಿದೆ. ಇಳಿಜಾರಾದ ಕಾರಣ ಬಸ್‌ ವೇಗ ಹೆಚ್ಚುತ್ತಿತ್ತು. ತಕ್ಷಣವೇ ನಿರ್ವಾಹಕ ಮಹೇಶ್ ಅವರನ್ನು ಕರೆದು ಚಾಲಕ ಸೂಚನೆ ನೀಡಿದ್ದಾನೆ. ಇಷ್ಟೇ ಅಲ್ಲ ಪ್ರಯಾಣಿಕರಿಗೆ ತಿಳಿಯದಂತೆ ಏನಾದರು ಮಾಡಲು ಸೂಚಿಸಿದ್ದಾರೆ.

ಪ್ರಾಣ ಒತ್ತೆಯಿಟ್ಟು ಇನ್ನೊಬ್ಬರ ಜೀವ ಕಾಪಾಡಿದವರಿಗೆ ಕನ್ನಡಪ್ರಭ-ಸುವರ್ಣ ನ್ಯೂಸ್ ಶೌರ್ಯ ಪ್ರಶಸ್ತಿ

ನಿರ್ವಾಹಕ ತಕ್ಷಣವೇ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಅಬಕಾರಿ ಇಲಾಖೆ ಗಾರ್ಡ್ ಯಶವಂತ್ ರಾವ್ ಸೂರ್ಯವಂಶಿ ಬಳಿ ಬ್ರೇಕ್ ಫೇಲ್ ವಿಚಾರ ಹೇಳಿ ಪರಿಹಾರ ಕೇಳಿದ್ದಾರೆ. ತಕ್ಷಣವೇ ಮಹೇಶ್ ಹಾಗೂ ಸೂರ್ಯವಂಶಿ ಮಾತನಾಡಿ, ಚಲಿಸುತ್ತಿದ್ದ ಬಸ್‌ನಿಂದ ದುಮುಕಿದ್ದಾರೆ. ಬಸ್ ಚಕ್ರಕ್ಕೆ ಕಲ್ಲು ಗುಂಡುಗಳನ್ನು ಹಾಕಿ ಬಸ್ಸಿನ ವೇಗ ಕುಗ್ಗುವಂತೆ ಮಾಡಿದ್ದಾರೆ. 300 ಮೀಟರ್ ಹೀಗೆ ಮಾಡೋ ಮೂಲಕ ಬಸ್ಸನ್ನು ನಿಲ್ಲಿಸಿದ್ದಾರೆ.

ಹೆಸರು:  ಸೂರ್ಯವಂಶಿ
ಊರು   :        ಕಲಬುರಗಿ
ವೃತ್ತಿ     :       ಗಾರ್ಡ್
ಸಾಧನೆ: ಬ್ರೇಕ್ ಫೇಲ್ ಬಸ್ ನಿಲ್ಲಿಸಿ ಪ್ರಯಾಣಿಕರ ಜೀವ ಉಳಿಸಿದ ಸಾಹಸಿಗ