ಸುವರ್ಣ ನ್ಯೂಸ್ ನಡೆಸಿದ ಸ್ಟಿಂಗ್ ಆಪರೇಷನ್‌ನಿಂದ ಶಿವಮೊಗ್ಗದ ಬೇಕರ್ಸ್ ಮಾಫಿಯಾ ಬಯಲಾಗಿದೆ. ಹಾಳಾದ ಬ್ರೆಡ್ ಬಳಸಿ, ಅನೈರ್ಮಲ್ಯ ವಾತಾವರಣದಲ್ಲಿ ತಿನಿಸುಗಳನ್ನು ತಯಾರಿಸುತ್ತಿದ್ದ ಘಟಕಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿ, ಕಳಪೆ ಆಹಾರವನ್ನು ನಾಶಪಡಿಸಿದ್ದಾರೆ.
ಶಿವಮೊಗ್ಗ (ಡಿ.30): ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಸಾರ್ವಜನಿಕರ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿದ್ದ ಬೇಕರ್ಸ್ ಮಾಫಿಯಾವನ್ನು 'ಸುವರ್ಣ ನ್ಯೂಸ್' ಬಯಲಿಗೆಳೆದಿದೆ. ಸ್ಟಿಂಗ್ ಆಪರೇಷನ್ ಮೂಲಕ ಈ ಕರಾಳ ಮುಖವನ್ನು ಅನಾವರಣಗೊಳಿಸಿದ ಬೆನ್ನಲ್ಲೇ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು, ಇದು 'ಸುವರ್ಣ ನ್ಯೂಸ್ ಬಿಗ್ ಇಂಪ್ಯಾಕ್ಟ್' ಆಗಿದೆ.

ಹೇವರಿಕೆ ತರಿಸುವ ಸ್ಥಳ: ಹಾಳಾದ ಬ್ರೆಡ್‌ನಿಂದಲೇ ತಯಾರಾಗ್ತಿತ್ತು ತಿನಿಸು!
ಸ್ವಚ್ಛತೆ ಎನ್ನುವುದೇ ಇಲ್ಲದ ಕಿರಿದಾದ ಜಾಗಗಳಲ್ಲಿ ಕೇಕ್, ಬ್ರೆಡ್ ಹಾಗೂ ವಿವಿಧ ಸಿಹಿ ತಿಂಡಿಗಳನ್ನು ತಯಾರಿಸುತ್ತಿದ್ದ ದೃಶ್ಯಗಳನ್ನು ಸುವರ್ಣ ನ್ಯೂಸ್ ಸ್ಟಿಂಗ್ ಆಪರೇಷನ್ ಮೂಲಕ ಬಯಲು ಮಾಡಿತ್ತು. ಮಾರುಕಟ್ಟೆಗೆ ಬರುವ ತಿಂಡಿಗಳ ಮೇಲೆ ತಯಾರಿಕಾ ದಿನಾಂಕವಾಗಲಿ (Date of Mfg) ಅಥವಾ 'ಬೆಸ್ಟ್ ಬಿಫೋರ್' (Best Before Use) ಲೇಬಲ್ ಆಗಲಿ ಇರುತ್ತಿರಲಿಲ್ಲ. ಅಚ್ಚರಿಯೆಂದರೆ, ಹಾಳಾದ ಮತ್ತು ಬೂಷ್ಟು ಹಿಡಿದ ಬ್ರೆಡ್‌ಗಳನ್ನು ಬಳಸಿ ಮತ್ತೆ ಹೊಸ ತಿನಿಸುಗಳನ್ನು ತಯಾರಿಸುವ ಆಘಾತಕಾರಿ ಸತ್ಯ ವರದಿಯಿಂದ ಬಯಲಾಗಿತ್ತು.

ಮಧ್ಯಾಹ್ನ ಸುದ್ದಿ ಪ್ರಸಾರ, ಸಂಜೆಯ ವೇಳೆಗೆ ಖದೀಮರ ಅಡ್ಡೆಗೆ ಎಸಿ ಎಂಟ್ರಿ!
ಇಂದು ಮಧ್ಯಾಹ್ನ ಸುವರ್ಣ ನ್ಯೂಸ್‌ನಲ್ಲಿ ಬೇಕರ್ಸ್ ಮಾಫಿಯಾದ ವಿಸ್ತೃತ ವರದಿ ಪ್ರಸಾರವಾಗುತ್ತಿದ್ದಂತೆಯೇ ಜಿಲ್ಲಾಡಳಿತ ಸಮರೋಪಾದಿಯಲ್ಲಿ ಕಾರ್ಯಾಚರಣೆಗೆ ಇಳಿಯಿತು. ಸಂಜೆಯ ವೇಳೆಗೆ ಶಿವಮೊಗ್ಗ ಉಪ ವಿಭಾಗಾಧಿಕಾರಿ ಸತ್ಯನಾರಾಯಣ ಅವರ ನೇತೃತ್ವದಲ್ಲಿ ಜಿಲ್ಲಾ ಆಹಾರ ಮತ್ತು ಪಡಿತರ ಇಲಾಖೆ ನಿರ್ದೇಶಕ ಅವಿನ್, ಪಾಲಿಕೆಯ ಆರೋಗ್ಯ ನಿರೀಕ್ಷಕ ವಿಕಾಸ್ ಕುಮಾರ್ ಅವರನ್ನೊಳಗೊಂಡ ತಂಡ ಸರಣಿ ದಾಳಿ ಆರಂಭಿಸಿತು.

ದುರ್ಗಿಗುಡಿಯ 'ಕೇಕ್ ವರ್ಲ್ಡ್'ಗೆ ಬಿಸಿ ಮುಟ್ಟಿಸಿದ ಅಧಿಕಾರಿಗಳು!
ಶಿವಮೊಗ್ಗದ ಪ್ರತಿಷ್ಠಿತ ಬಡಾವಣೆ ದುರ್ಗಿಗುಡಿಯಲ್ಲಿರುವ 'ಕೇಕ್ ವರ್ಲ್ಡ್' ಮೇಲೆ ದಾಳಿ ನಡೆಸಿದ ಎಸಿ ಸತ್ಯನಾರಾಯಣ ಅವರು, ಅಲ್ಲಿನ ಕೆಟ್ಟಾ ಕೊಳಕು ಸ್ಥಳ ಕಂಡು ಬೆಚ್ಚಿಬಿದ್ದರು. ಅತಿಯಾದ ರಾಸಾಯನಿಕ ಬಳಸಿದ ಕೇಕ್‌ಗಳು ಮತ್ತು ಹಳೆಯ ಬ್ರೆಡ್‌ಗಳನ್ನು ವಶಪಡಿಸಿಕೊಂಡ ಅಧಿಕಾರಿಗಳು, ಅವುಗಳನ್ನು ತಕ್ಷಣವೇ ಕಸದ ಲಾರಿಗೆ ತುಂಬಿಸಿ ನಾಶಪಡಿಸಿದರು.

ನಾಲ್ಕು ದಿನ ನಿರಂತರ ಬೇಟೆ; ಮಾಫಿಯಾ ವಿರುದ್ಧ ಸಮರ ಸಾರಿದ ಎಸಿ ಸತ್ಯನಾರಾಯಣ
ಜಿಲ್ಲಾ ಆಹಾರ ಸುರಕ್ಷಿತ ಅಂಕಿತ ಅಧಿಕಾರಿಯೂ ಆಗಿರುವ ಎಸಿ ಸತ್ಯನಾರಾಯಣ ಅವರು, ಈ ಕಾರ್ಯಾಚರಣೆ ಇಷ್ಟಕ್ಕೆ ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮುಂದಿನ ನಾಲ್ಕು ದಿನಗಳ ಕಾಲ ಶಿವಮೊಗ್ಗದ ಎಲ್ಲಾ ಬೇಕರಿ ಹಾಗೂ ತಿನಿಸು ತಯಾರಿಕಾ ಘಟಕಗಳ ಮೇಲೆ ನಿರಂತರ ದಾಳಿ ನಡೆಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ. ಸುವರ್ಣ ನ್ಯೂಸ್ ಜಾಗೃತಿಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.


