ಬೆಂಗಳೂರು(ಅ.20): ಇಸ್ಲಾಮಿಕ್‌ ಸ್ಟೇಟ್ಸ್‌ (ಐಸಿಸ್‌) ಭಯೋತ್ಪಾದಕ ಸಂಘಟನೆಗೆ ಸೇರಲು ಮುಸ್ಲಿಂ ಯುವಕರನ್ನು ಮನವೊಲಿಸಿ ಬೆಂಗಳೂರಿನಿಂದ ಸಿರಿಯಾಗೆ ಕಳುಹಿಸುತ್ತಿದ್ದ ತಂಡದ ಮಾಸ್ಟರ್‌ ಮೈಂಡ್‌ಗಳು ಯಾರೆಂಬುದು ಕೊನೆಗೂ ಪತ್ತೆಯಾಗಿದೆ. ಕೊಲ್ಲಿ ದೇಶದಲ್ಲಿ ನೆಲೆಸಿರುವ ದಂತವೈದ್ಯ ಡಾ| ಮಹಮ್ಮದ್‌ ತೌಕೀರ್‌ ಮೆಹಬೂಬ್‌ ಹಾಗೂ ಆತನ ಸ್ನೇಹಿತ ಸಾಫ್ಟ್‌ವೇರ್‌ ತಂತ್ರಜ್ಞ ಜುಹೇಬ್‌ ಹಮೀದ್‌ ಅಲಿಯಾಸ್‌ ಶಕೀಲ್‌ ಮುನ್ನಾ ಎಂಬುವರೇ ಈ ಸೂತ್ರಧಾರರು ಎಂಬುದು ತಿಳಿದುಬಂದಿದೆ.

ಇವರಿಬ್ಬರ ಗುರುತನ್ನು ಪತ್ತೆಹಚ್ಚಿರುವ ರಾಷ್ಟ್ರೀಯ ತನಿಖಾ ದಳ (ಎನ್‌ಐಎ), ಇಬ್ಬರ ಮೇಲೂ ಎಫ್‌ಐಆರ್‌ ದಾಖಲಿಸಿದೆ. ಕೊಲ್ಲಿ ದೇಶಗಳಲ್ಲಿ ನೆಲೆಸಿರುವ ಇವರನ್ನು ಬಂಧಿಸಲು ಶೋಧ ಕಾರ್ಯಾಚರಣೆ ಆರಂಭವಾಗಿದೆ.

ಐಸಿಸ್‌ ಸೇರಲು ಬೆಂಗಳೂರಿನಿಂದ ಸಿರಿಯಾಕ್ಕೆ ಯುವಕರನ್ನು ಕಳುಹಿಸುವ ಜಾಲದ ವಿರುದ್ಧ ದಾಖಲಾಗಿರುವ ಈ ಎಫ್‌ಐಆರ್‌ನಲ್ಲಿ ದಂತ ವೈದ್ಯ ತೌಕೀರ್‌ ಮೊದಲ ಆರೋಪಿಯಾಗಿದ್ದರೆ, ಜುಹೇಬ್‌ ಎರಡನೇ ಆರೋಪಿಯಾಗಿದ್ದಾನೆ ಎಂದು ಎನ್‌ಐಎ ಅಧಿಕಾರಿಗಳು ಹೇಳಿದ್ದಾರೆ. ಇವರಿಬ್ಬರೂ ಈ ಹಿಂದೆ ಬೆಂಗಳೂರಿನಲ್ಲೇ ಇದ್ದರು. ನಂತರ ಕೊಲ್ಲಿ ರಾಷ್ಟ್ರಗಳಿಗೆ ಹೋಗಿ ತಲೆಮರೆಸಿಕೊಂಡಿದ್ದಾರೆ.

ರಾಮಯ್ಯ ಆಸ್ಪತ್ರೆಯ ಡಾಕ್ಟರನ್ನು ಕಳಿಸಿದ್ದೂ ಇವರೇ:

ಬೆಂಗಳೂರಿನಲ್ಲಿ ಬುದ್ಧಿವಂತ ಮುಸ್ಲಿಂ ಸಮುದಾಯದ ಯುವಕರಿಗೆ ಇಸ್ಲಾಂ ಮೂಲಭೂತವಾದವನ್ನು ಬೋಧಿಸಿ, ಬಳಿಕ ಅವರನ್ನು ಐಸಿಸ್‌ ತರಬೇತಿಗೆ ಸಿರಿಯಾಗೆ ಕಳುಹಿಸುತ್ತಿದ್ದ ಸಂಗತಿ ಕೆಲ ತಿಂಗಳ ಹಿಂದೆ ಬೆಳಕಿಗೆ ಬಂದಿತ್ತು. ಕರ್ನಾಟಕ ಒಳಗೊಂಡಂತೆ ದಕ್ಷಿಣ ಭಾರತದಲ್ಲಿ ಐಸಿಸ್‌ ಸಂಘಟನೆಗೆ ಮುಸ್ಲಿಂ ಯುವಕರ ನೇಮಕಾತಿ ಹಾಗೂ ಸಿರಿಯಾ ಯಾತ್ರೆಗೆ ಹಣಕಾಸು ನೆರವು ಒದಗಿಸುವಲ್ಲಿ ತೌಕೀರ್‌ ಹಾಗೂ ಜುಹೇಬ್‌ ಪ್ರಮುಖ ಪಾತ್ರವಹಿಸಿದ್ದಾರೆ ಎಂದು ಎನ್‌ಐಎ ಮೂಲಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿವೆ.

ಇತ್ತೀಚೆಗೆ ಐಸಿಸ್‌ ಸಂಘಟನೆಗೆ ಆ್ಯಪ್‌ ಅಭಿವೃದ್ಧಿಪಡಿಸುತ್ತಿದ್ದ ಎಂ.ಎಸ್‌.ರಾಮಯ್ಯ ವೈದ್ಯಕೀಯ ಕಾಲೇಜಿನ ನೇತ್ರ ತಜ್ಞ ಡಾ.ಅಬ್ದುರ್‌ ರೆಹಮಾನ್‌ ಎಂಬಾತನನ್ನು ಎನ್‌ಐಎ ಬಂಧಿಸಿತ್ತು. ಬಳಿಕ ಐಸಿಸ್‌ ಸಂಘಟನೆಗೆ ಮುಸ್ಲಿಂ ಯುವಕರನ್ನು ಸಿರಿಯಾಗೆ ಕಳುಹಿಸುವ ‘ಕುರಾನ್‌ ಸರ್ಕಲ್‌’ ತಂಡವನ್ನು ಪತ್ತೆಹಚ್ಚಿದ ಎನ್‌ಐಎ ಅಧಿಕಾರಿಗಳು, ಕೆಲ ದಿನಗಳ ಹಿಂದೆ ಅಕ್ಕಿ ವ್ಯಾಪಾರಿ ಅಹ್ಮದ್‌ ಅಬ್ದುಲ್‌ ಖಾದರ್‌ ಹಾಗೂ ಇರ್ಫಾನ್‌ ನಾಸೀರ್‌ನನ್ನು ಬಂಧಿಸಿದ್ದರು. ಈಗ ‘ಮಾಸ್ಟರ್‌ ಮೈಂಡ್‌’ ದಂತ ವೈದ್ಯ ಹಾಗೂ ಸಾಫ್ಟ್‌ವೇರ್‌ ತಜ್ಞನ ಪತ್ತೆಗೆ ತನಿಖೆ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇಸ್ಲಾಂ ಮೂಲಭೂತವಾದ ಬೋಧನೆ:

‘ವಿಶ್ವದಲ್ಲಿ ಇಸ್ಲಾಂ ಧರ್ಮೀಯರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ನಮ್ಮ ಧರ್ಮಕ್ಕೆ ಅಪಾಯ ಎದುರಾಗಿದೆ. ನಾವೆಲ್ಲ ಒಗ್ಗೂಡಿ ಹೋರಾಡಬೇಕು’ ಎಂದು ಹೇಳಿ ಅಬ್ದುರ್‌ಗೆ ಮೂಲಭೂತವಾದದ ಬಗ್ಗೆ ವೈದ್ಯ ಮಿತ್ರ ತೌಕೀರ್‌ ಬೋಧಿಸಿದ್ದ. ಯೂಟ್ಯೂಬ್‌ನಲ್ಲಿ ಸಿರಿಯಾದಲ್ಲಿ ಐಸಿಸ್‌ ಪಡೆಗಳ ಮೇಲೆ ಅಮೆರಿಕ ನಡೆಸಿದ ದಾಳಿ ಹಾಗೂ ಪ್ರಪಂಚದ ಇತರ ಭಾಗಗಳಲ್ಲಿ ನಡೆದ ಮುಸ್ಲಿಂ ಗಲಭೆಗಳ ಕುರಿತು ವಿಡಿಯೋಗಳನ್ನು ತೋರಿಸಿ ಪ್ರಚೋದನೆಗೊಳಿಸಿದ್ದ ಎಂದು ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.

ಎರಡು ವರ್ಷ ಬೆಂಗಳೂರಿನಲ್ಲಿ ಅಬ್ದುರ್‌ಗೆ ಪ್ರಾಥಮಿಕ ಹಂತದ ತರಬೇತಿ ನೀಡಿ ಐಸಿಸ್‌ ಸಂಘಟನೆಗೆ ಸೆಳೆದ ದಂತ ವೈದ್ಯ, 2014ರಲ್ಲಿ ಹೆಚ್ಚಿನ ತರಬೇತಿಗೆ ಐಸಿಸ್‌ ತವರೂರು ಸಿರಿಯಾಗೆ ಡಾ.ಅಬ್ದುರ್‌ನನ್ನು ಕಳುಹಿಸಿದ್ದ. ತನ್ನ ವೈದ್ಯ ಮಿತ್ರನ ಸೂಚನೆ ಮೇರೆಗೆ ಅಬ್ದುರ್‌, ದುಬೈಗೆ ಆರು ತಿಂಗಳು ವೀಸಾ ಪಡೆದು ತೆರಳಿದ್ದ. ಅಲ್ಲಿ ಐಸಿಸ್‌ ಶಂಕಿತರು ಅಬ್ದುರ್‌ಗೆ ನೆರವಾಗಿದ್ದರು. ತರುವಾಯ ದುಬೈನಿಂದ ರಹಸ್ಯವಾಗಿ ಗಡಿ ದಾಟಿ ಸಿರಿಯಾ ತಲುಪಿದ ಅಬ್ದುರ್‌, ಸುಮಾರು 10 ದಿನ ಸಿರಿಯಾದಲ್ಲೇ ಐಸಿಸ್‌ನ ವೈದ್ಯಕೀಯ ಶಿಬಿರದಲ್ಲಿ ಉಳಿದು ಶಂಕಿತ ಉಗ್ರರಿಗೆ ಶುಶ್ರೂಷೆ ಮಾಡಿದ್ದ. ಅನಂತರ ದುಬೈ ಮೂಲಕ ಭಾರತಕ್ಕೆ ಮರಳಿದ್ದ. ಇದೇ ರೀತಿ ಐದಾರು ಬಾರಿ ಗುಂಪು ಗುಂಪುಗಳಾಗಿ 20ಕ್ಕೂ ಹೆಚ್ಚಿನ ಯುವಕರನ್ನು ತೌಕೀರ್‌ ಕಳುಹಿಸಿದ್ದ. ಬೆಂಗಳೂರಿನಲ್ಲಿ ಆತನ ಸೂಚನೆ ಮೇರೆಗೆ ಕುರಾನ್‌ ಸರ್ಕಲ್‌ನ ಇತರೆ ಸದಸ್ಯರು ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.