ಬಳ್ಳಾರಿ ಹಿಂಸಾಚಾರದ ಹಿನ್ನೆಲೆಯಲ್ಲಿ ಕರ್ತವ್ಯ ಲೋಪದ ಆರೋಪದ ಮೇಲೆ ಅಮಾನತುಗೊಂಡಿದ್ದ ಎಸ್‌ಪಿ ಪವನ್ ನೆಜ್ಜೂರು ಅವರು ತೀವ್ರ ಮನನೊಂದು ಆತ್ಮ*ಹತ್ಯೆಗೆ ಯತ್ನಿಸಿದ್ದಾರೆ. ತುಮಕೂರಿನ ತಮ್ಮ ನಿವಾಸದಲ್ಲಿ ಅತಿಯಾದ ಮಾತ್ರೆ ಸೇವಿಸಿದ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಬೆಂಗಳೂರು/ಬಳ್ಳಾರಿ/ತುಮಕೂರು (ಜ.03): ಬಳ್ಳಾರಿ ನಗರದಲ್ಲಿ ನಡೆದ ಹಿಂಸಾಚಾರದ ಹಿನ್ನೆಲೆಯಲ್ಲಿ ಕರ್ತವ್ಯ ಲೋಪದ ಆರೋಪದ ಮೇಲೆ ಅಮಾನತುಗೊಂಡಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪವನ್ ನೆಜ್ಜೂರು (IPS-2016) ಅವರು ಆತ್ಮ*ಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಸರ್ಕಾರದ ದಿಢೀರ್ ಕ್ರಮದಿಂದ ತೀವ್ರ ಮನನೊಂದಿದ್ದ ಪವನ್ ಅವರು ತುಮಕೂರಿನ ತಮ್ಮ ನಿವಾಸದಲ್ಲಿ ಅತಿಯಾದ ಮಾತ್ರೆಗಳನ್ನು ಸೇವಿಸಿ ಆತ್ಮ*ಹತ್ಯೆಗೆ ಯತ್ನಿಸಿದ್ದು, ಸದ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆಯ ಹಿನ್ನೆಲೆ:

ಬಳ್ಳಾರಿ ನಗರದಲ್ಲಿ ವಾಲ್ಮೀಕಿ ಮಹರ್ಷಿ ಪ್ರತಿಮೆ ಪ್ರತಿಷ್ಠಾಪನೆ ವೇಳೆ ಎಸ್‌ಪಿ ವೃತ್ತದ ಬಳಿ ಬ್ಯಾನರ್ ಕಟ್ಟುವ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ರಾಜಕೀಯ ಬಣಗಳ ನಡುವೆ ಭೀಕರ ಸಂಘರ್ಷ ಏರ್ಪಟ್ಟಿತ್ತು. ಈ ವೇಳೆ ನಡೆದ ಕಲ್ಲು ತೂರಾಟ ಹಾಗೂ ಹಿಂಸಾಚಾರದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯಾಗಿತ್ತು. ಈ ಸಂದರ್ಭದಲ್ಲಿ ಗುಂಡಿನ ದಾಳಿಯೂ ನಡೆದಿದ್ದು, ಪ್ರಕರಣವು ರಾಜಕೀಯ ತಿರುವು ಪಡೆದುಕೊಂಡಿತ್ತು. ಈ ಗಲಭೆಯನ್ನು ಹತೋಟಿಗೆ ತರುವಲ್ಲಿ ಜಿಲ್ಲಾ ಪೊಲೀಸ್ ಆಡಳಿತ ವಿಫಲವಾಗಿದೆ ಎಂಬ ಮಾತುಗಳು ಕೇಳಿಬಂದಿದ್ದವು.

ಅಮಾನತು ಮತ್ತು ಆರೋಪ

ಡಿಜಿ ಮತ್ತು ಐಜಿಪಿ (DG&IGP) ಅವರು ನೀಡಿದ ಪ್ರಾಥಮಿಕ ವರದಿಯನ್ನು ಆಧರಿಸಿ ರಾಜ್ಯ ಸರ್ಕಾರವು ಪವನ್ ನೆಜ್ಜೂರು ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿತ್ತು. ಅಖಿಲ ಭಾರತ ಸೇವೆಗಳ (ಶಿಸ್ತು ಮತ್ತು ಮೇಲ್ಮನವಿ) ನಿಯಮಗಳು 1969 ರ ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿತ್ತು. ಮುಖ್ಯವಾಗಿ, ಗಲಭೆಯ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸದಿರುವುದು ಮತ್ತು ಮೈದಾನದಲ್ಲಿನ ನೈಜ ಸ್ಥಿತಿಗತಿಯ ಬಗ್ಗೆ ಹಿರಿಯ ಅಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿದ (Mis-briefing) ಗಂಭೀರ ಆರೋಪಗಳನ್ನು ಇವರ ಮೇಲೆ ಹೊರಿಸಲಾಗಿತ್ತು.

ಖಿನ್ನತೆಗೆ ಜಾರಿದ್ದ ಎಸ್ಪಿ

ಸದಾ ದಕ್ಷತೆಯಿಂದ ಕೆಲಸ ಮಾಡುತ್ತಿದ್ದ ಪವನ್ ನೆಜ್ಜೂರು ಅವರಿಗೆ ಸರ್ಕಾರದ ಈ ಅಮಾನತು ಆದೇಶ ದೊಡ್ಡ ಆಘಾತ ನೀಡಿತ್ತು ಎನ್ನಲಾಗಿದೆ. ಅಮಾನತು ಬೆನ್ನಲ್ಲೇ ತೀವ್ರ ಖಿನ್ನತೆಗೆ ಒಳಗಾಗಿದ್ದ ಅವರು, ಇಂದು ತುಮಕೂರು ನಿವಾಸದಲ್ಲಿದ್ದಾಗ ವಿಷಕಾರಿ ಮಾತ್ರೆಗಳನ್ನು ಸೇವಿಸಿದ್ದಾರೆ. ವಿಷಯ ತಿಳಿದ ತಕ್ಷಣ ಕುಟುಂಬಸ್ಥರು ಅವರನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಸದ್ಯ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆಯುತ್ತಿದ್ದಾರೆ. ಜನಾರ್ದನ ರೆಡ್ಡಿ ಅವರ ಮನೆ ಬಳಿ ನಡೆದ ಗುಂಡಿನ ದಾಳಿ ಪ್ರಕರಣದ ಬೆನ್ನಲ್ಲೇ ಎಸ್ಪಿಯ ಈ ನಡೆ ಪೊಲೀಸ್ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ.