ಬಳ್ಳಾರಿಯಲ್ಲಿ ನಡೆದ ಗಲಾಟೆಗೆ ಜನಾರ್ಧನ ರೆಡ್ಡಿ ಕಾರಣ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ. ಅವರ ಕೊಲೆ ಯತ್ನದ ಆರೋಪವನ್ನು 'ಡ್ರಾಮಾ' ಎಂದು ತಳ್ಳಿಹಾಕಿ, ಕೋಟೆ ಕಟ್ಟಿಕೊಂಡು ಕುಳಿತಿರುವ ಅವರಿಗೆ ಯಾರಿಂದಲೂ ಭಯವಿಲ್ಲ, ಬದಲಿಗೆ ಅವರಿಂದಲೇ ಜನರಿಗೆ ಭಯವಿದೆ ಎಂದು ಹೇಳಿದರು.
ಬೆಂಗಳೂರು (ಜ.03): ಗಂಗಾವತಿ ಶಾಸಕ ಜನಾರ್ಧನ ರೆಡ್ಡಿ ಬಳ್ಳಾರಿಗೆ ಪ್ರವೇಶ ಮಾಡಿದ ನಂತರವೇ ಈ ಗಲಾಟೆ ಸಂಭವಿಸಿದೆ. ಸಾರ್ವಜನಿಕ ರಸ್ತೆಯಲ್ಲಿ ಬ್ಯಾನರ್ ಹಾಕಿದರೆ ಇವರೇಕೆ ಗಲಾಟೆ ಮಾಡಬೇಕು? ಅಲ್ಲಿ ಕಳೆದುಕೊಂಡಿದ್ದು ನಮ್ಮ ಪಕ್ಷದ ಕಾರ್ಯಕರ್ತರನ್ನು. ಅಷ್ಟಕ್ಕೂ ಜನಾರ್ಧನರೆಡ್ಡಿ ಕೊಲೆ ಯತ್ನ ಆಗಿದೆ ಎಂಬುದೇ ಸುಳ್ಳು. ಕೋಟೆ ಕಟ್ಟಿ ಕುಳಿತುಕೊಂಡಿದ್ದಾರೆ, ಅವರನ್ಯಾರು ಕೊಲೆ ಮಾಡ್ತಾರೆ. ಅದೆಲ್ಲಾ ಡ್ರಾಮಾ ಅಷ್ಟೇ. ಇವರಿಂದಲೇ ಜನರಿಗೆ ಭಯವಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಳ್ಳಾರಿಯಲ್ಲಿ ನಡೆದ ಗಲಾಟೆ ಹಾಗೂ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ 'ಕೊಲೆ ಸಂಚು' ಆರೋಪದ ಕುರಿತು 'ಎಲ್ಲಾ ಬೆಳವಣಿಗೆಗಳ ಹಿಂದೆ ರಾಜಕೀಯ ಹತಾಶೆ ಇದೆ' ಎಂದು ಹೇಳಿದರು.
ಬ್ಯಾನರ್ ವಿವಾದಕ್ಕೆ ತಿರುಗೇಟು:
ಯಾರದೋ ಮನೆ ಮುಂದೆ ರಸ್ತೆಯಲ್ಲಿ ಬ್ಯಾನರ್ ಹಾಕಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, 'ನಮ್ಮ ಮನೆ ಮುಂದೆ ಬಿಜೆಪಿ ಯವರು ಬ್ಯಾನರ್ ಹಾಕ್ತಾರೆ, ಎನೀಗ? ಅದು ಸಾರ್ವಜನಿಕ ರಸ್ತೆ. ಸಂಭ್ರಮದಿಂದ ಕಾರ್ಯಕ್ರಮ ಮಾಡಲು ನಾವು ಬ್ಯಾನರ್ ಹಾಕಿದ್ದು ಅಷ್ಟೇ. ಆದರೆ ಈ ಘಟನೆಯಿಂದ ನಮ್ಮ ಕಾರ್ಯಕರ್ತರನ್ನು ಕಳೆದುಕೊಂಡಿದ್ದೇವೆ" ಎಂದು ವಿಷಾದ ವ್ಯಕ್ತಪಡಿಸಿದರು. ಕಳೆದ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಯ ಸೋಲನ್ನು ಬಿಜೆಪಿ ನಾಯಕರಿಗೆ ಅರಗಿಸಿಕೊಳ್ಳಲು ಆಗ್ತಾ ಇಲ್ಲ' ಎಂದು ಲೇವಡಿ ಮಾಡಿದರು.
ನಮ್ಮ ಶಾಸಕ ಗಲಾಟೆ ಕಂಟ್ರೋಲ್ ಮಾಡಲು ಹೋಗಿದ್ದರು
ಬಳ್ಳಾರಿಯ ಗಲಾಟೆಯ ಬಗ್ಗೆ ಪ್ರಸ್ತಾಪಿಸುತ್ತಾ, 'ಬಳ್ಳಾರಿಗೆ ಜನಾರ್ದನ ರೆಡ್ಡಿ ಬರುವ ತನಕ ಒಂದು ಗಲಾಟೆ ಆಗಿರಲಿಲ್ಲ, ಈಗ ಶುರುವಾಗಿದೆ. ನಮ್ಮ ಶಾಸಕ ಗಲಾಟೆ ಕಂಟ್ರೋಲ್ ಮಾಡಲು ಹೋಗಿದ್ದರು. ಇನ್ನು ಜನಾರ್ದನ ರೆಡ್ಡಿ ಅವರು ತಮ್ಮ ಕೊಲೆಗೆ ಸಂಚು ನಡೆದಿದೆ ಎಂದು ಮಾಡಿರುವ ಆರೋಪವನ್ನು ತಳ್ಳಿಹಾಕಿದ ಡಿಕೆಶಿ, 'ಅವೆಲ್ಲಾ ಸುಳ್ಳು. ಕೋಟೆ ಕಟ್ಟಿಕೊಂಡು ಕುಳಿತಿದ್ದಾರೆ, ಯಾರು ಕೊಲೆ ಮಾಡ್ತಾರೆ? ನೂರು ಜನ ಸೆಕ್ಯುರಿಟಿ ಇಟ್ಕೊಂಡು ಇದ್ದಾರೆ. ಅದೆಲ್ಲಾ ಬರೀ ಡ್ರಾಮಾ. ವಾಸ್ತವದಲ್ಲಿ ಜನರಿಗೆ ಇವರಿಂದ ಭಯ ಇದೆ' ಎಂದು ಕಿಡಿಕಾರಿದರು.
ಬೆಂಕಿ ಹಚ್ಚುವ ಹೇಳಿಕೆ ಮತ್ತು ತನಿಖೆ
ಶಾಸಕ ಭರತ್ ರೆಡ್ಡಿ ಅವರ 'ಬೆಂಕಿ ಹಚ್ಚುತ್ತಿದ್ದೆ' ಎನ್ನುವ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಹಾರಿಕೆ ಉತ್ತರ ನೀಡಿದ ಅವರು, 'ಯಾರು ಹೋಗ್ತಾರೆ ಬೆಂಕಿ ಹಚ್ಚಲು?' ಎಂದು ಮರುಪ್ರಶ್ನಿಸಿದರು. ಘಟನೆ ನಡೆದಾಗ ಶ್ರೀರಾಮುಲು ಅವರು ಫೋನ್ ಮಾಡಿದ್ದರು, ನಾನೇ ಎಸ್‌ಪಿ ಜೊತೆ ಮಾತನಾಡಿದೆ. ನಮಗೂ ಜವಾಬ್ದಾರಿ ಇದೆ, ಒಬ್ಬ ಕೆಪಿಸಿಸಿ ಅಧ್ಯಕ್ಷ ಆಗಿಯೂ ಜವಾಬ್ದಾರಿ ಇದೆ ಎಂದು ಸ್ಪಷ್ಟಪಡಿಸಿದರು.
ನ್ಯಾಯಾಂಗ ತನಿಖೆಯ ಬೇಡಿಕೆ ಕುರಿತು ಮಾತನಾಡುತ್ತಾ, 'ಕಾನೂನು ತನ್ನ ಕೆಲಸ ಮಾಡಲಿದೆ. ಗಲಾಟೆ ವೇಳೆ ಗುಂಡು ಹಾರಿಸಿದ್ದು ಸರಿನಾ ಎಂಬ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್, 'ಈಗಾಗಲೇ ತನಿಖೆ ಆಗ್ತಾ ಇದೆ, ಉತ್ತರ ಸಿಗಲಿದೆ. ಅದಕ್ಕೇ ನಾವು ತನಿಖಾ ವರದಿ ಬರಲಿ ಅಂದಿರೋದು' ಎಂದು ತಿಳಿಸಿದರು.


