ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕಾವೇರಿ ನದಿಯ ನಾಲ್ಕು ಜಲಾಶಯಗಳ ಒಟ್ಟು ಒಳಹರಿವಿನ ಪ್ರಮಾಣ 200 ಟಿಎಂಸಿ ಕಡಿಮೆಯಾಗಿದೆ. ಹೀಗಾಗಿ ಬಿಳಿಗುಂಡ್ಲುವಿಗೆ ಆಗಸ್ಟ್‌ 20ರವರೆಗೆ ಕೇವಲ 24 ಟಿಎಂಸಿ ನೀರು ಹರಿಸಲಾಗಿದೆ. ಅದೇ ಕಳೆದ ವರ್ಷ ಈ ಅವಧಿಗೆ 284.86 ಟಿಎಂಸಿ ನೀರು ಹರಿಸಲಾಗಿದೆ ಎಂದು ಜಲಸಂಪನ್ಮೂಲ ಇಲಾಖೆ ಮಾಹಿತಿ ನೀಡಿದೆ.

ಬೆಂಗಳೂರು (ಆ.22) :  ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕಾವೇರಿ ನದಿಯ ನಾಲ್ಕು ಜಲಾಶಯಗಳ ಒಟ್ಟು ಒಳಹರಿವಿನ ಪ್ರಮಾಣ 200 ಟಿಎಂಸಿ ಕಡಿಮೆಯಾಗಿದೆ. ಹೀಗಾಗಿ ಬಿಳಿಗುಂಡ್ಲುವಿಗೆ ಆಗಸ್ಟ್‌ 20ರವರೆಗೆ ಕೇವಲ 24 ಟಿಎಂಸಿ ನೀರು ಹರಿಸಲಾಗಿದೆ. ಅದೇ ಕಳೆದ ವರ್ಷ ಈ ಅವಧಿಗೆ 284.86 ಟಿಎಂಸಿ ನೀರು ಹರಿಸಲಾಗಿದೆ ಎಂದು ಜಲಸಂಪನ್ಮೂಲ ಇಲಾಖೆ ಮಾಹಿತಿ ನೀಡಿದೆ.

ತಮಿಳುನಾಡಿಗೆ ನಿಗದಿಗಿಂತ ಹೆಚ್ಚಿನ ನೀರು ಹರಿಸಲಾಗಿದೆ ಎಂಬ ಆರೋಪದ ಕುರಿತಂತೆ ಅಂಕಿ-ಅಂಶಗಳ ಸಹಿತವಾಗಿ ಉತ್ತರಿಸಿರುವ ಇಲಾಖೆ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌, ಕಳೆದ ವರ್ಷಕ್ಕೆ ಹೋಲಿಸಿದರೆ ಕಾವೇರಿ ನದಿಯ ನಾಲ್ಕು ಜಲಾಶಯಗಳಾದ ಕೆಆರ್‌ಎಸ್‌, ಕಬಿನಿ, ಹಾರಂಗಿ ಮತ್ತು ಹೇಮಾವತಿ ಜಲಾಶಯಗಳಿಗೆ ಶೇ. 46.72ರಷ್ಟುಒಳಹರಿವಿನ ಕೊರತೆಯಿದೆ. ಕಳೆದ ವರ್ಷ ಈ ಅವಧಿಯಲ್ಲಿ 294.53 ಟಿಎಂಸಿ ಒಳಹರಿವಿದ್ದರೆ, ಈ ವರ್ಷ ಅದು 94.15 ಟಿಎಂಸಿಗೆ ಇಳಿಕೆಯಾಗಿದೆ. ಜಲಾಶಯಗಳಿಂದ ಈ ವರ್ಷ ಒಟ್ಟು 33.34 ಟಿಎಂಸಿ ಹೊರಹರಿವಿದ್ದು, ಅದರಲ್ಲಿ ಕಾಲುವೆಗಳಿಗೆ 13.37 ಟಿಎಂಸಿ ನೀರು ಹರಿಸಲಾಗಿದೆ. ಅದೇ ಕಳೆದ ವರ್ಷ ಹೊರಹರಿವು 226.44 ಟಿಎಂಸಿಯಷ್ಟಿದ್ದರೂ, ಕಾಲುವೆಗಳ ಮೂಲಕ ರಾಜ್ಯದ ಕೃಷಿ ಭೂಮಿಗಳಿಗೆ ಕೇವಲ 16.75 ಟಿಎಂಸಿ ಮಾತ್ರ ಇತ್ತು ಎಂದು ತಿಳಿಸಿದ್ದಾರೆ.

ರಾಜಕೀಯ ನನಗೆ ಅನಿವಾರ್ಯವಲ್ಲ, ಆಕಸ್ಮಿಕ: ಲೋಕಸಭೆಗೂ ಮುನ್ನ ಟ್ವಿಸ್ಟ್‌ ಕೊಟ್ಟ ಸುಮಲತಾ ಅಂಬರೀಶ್‌

ಕಾವೇರಿ ಜಲವಿವಾದ ನ್ಯಾಯಾಧಿಕರಣ ಹಾಗೂ ಸುಪ್ರೀಂಕೋರ್ಚ್‌ ತೀರ್ಪಿನಂತೆ ಆಗಸ್ಟ್‌ 20ರವರೆಗೆ ಅಂತಾರಾಜ್ಯ ಗಡಿಯಾದ ಬಿಳಿಗುಂಡ್ಲುವಿಗೆ ಹರಿಸಬೇಕಾದ ನೀರಿನ ಪ್ರಮಾಣ 70.07 ಟಿಎಂಸಿ ನಿಗದಿಯಾಗಿದೆ. ಆದರೆ, ಈ ವರ್ಷ ಬಿಳಿಗುಂಡ್ಲುವಿನಲ್ಲಿ ಹರಿಸಿರುವ ನೀರಿನ ಪ್ರಮಾಣ ಕೇವಲ 24.05 ಟಿಎಂಸಿ ಮಾತ್ರ. ಅದೇ ಕಳೆದ ವರ್ಷ 284.86 ಟಿಎಂಸಿ ನೀರು ಹರಿಸಲಾಗಿತ್ತು ಎಂದಿದ್ದಾರೆ.

ತಮಿಳುನಾಡಿನ ಮೆಟ್ಟೂರು ಜಲಾಶಯಕ್ಕೆ 2022ರ ಆಗಸ್ಟ್‌ 21ರವರೆಗೆ 291.86 ಟಿಎಂಸಿ ಒಳಹರಿವಿತ್ತು. ಅದೇ ಈ ವರ್ಷ ಆ ಪ್ರಮಾಣ 15 ಟಿಎಂಸಿಗೆ ಕುಸಿದಿದೆ. ಅಲ್ಲದೆ, ಹೊರಹರಿವು ಕಳೆದ ವರ್ಷ 282.43 ಟಿಎಂಸಿಯಿತ್ತು. ಅದೇ ಈ ವರ್ಷ 62.03 ಟಿಎಂಸಿಗೆ ಕುಸಿದಿದೆ. ಮೆಟ್ಟೂರು ಜಲಾಶಯದಿಂದ ನಾಲೆಗಳಿಗೆ ಹಾಗೂ ನೀರಾವರಿಗಾಗಿ ಈ ವರ್ಷ 63.52 ಟಿಎಂಸಿ ನೀರನ್ನು ಬಿಡುಗಡೆ ಮಾಡಲಾಗಿದೆ. ಈ ಎಲ್ಲ ಅಂಕಿ-ಅಂಶಗಳು ಕಳೆದ ವರ್ಷಕ್ಕಿಂತ ಈ ವರ್ಷ ರಾಜ್ಯದಿಂದ ತಮಿಳುನಾಡಿಗೆ ಹರಿಸಲಾಗಿರುವ ನೀರಿನ ಪ್ರಮಾಣ ಭಾರೀ ಕುಸಿತ ಕಂಡಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ ಎಂದು ತಿಳಿಸಿದ್ದಾರೆ.

ತಮಿಳುನಾಡು ಎದುರು ದೈನೇಸಿಯಾಗಿ ಮಂಡಿಯೂರಿದ ಕರ್ನಾಟಕ ಕಾಂಗ್ರೆಸ್‌ ಸರ್ಕಾರ : 10 ಟಿಎಂಸಿ ಕಾವೇರಿ ನೀರು ಬಿಡುಗಡೆ