ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿದೆ. ಪವಿತ್ರಾ ಗೌಡ ಮತ್ತು ದರ್ಶನ್ ಸಂಬಂಧದ ಬಗ್ಗೆ ವಿವರಣೆ ನೀಡುವಂತೆ ಕೋರ್ಟ್ ಪ್ರಶ್ನಿಸಿದೆ. ಸಾಕ್ಷಿ ನಾಶದ ಆರೋಪ ಕೂಡ ಕೇಳಿಬಂದಿದೆ.
ರೇಣುಕಾಸ್ವಾಮಿ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿದೆ. ಹೈಕೋರ್ಟ್ ನೀಡಿರುವ ಜಾಮೀನು ರದ್ದಾಗುತ್ತಾ ಅಥವಾ ಮುಂದುವರೆಯುತ್ತಾ ಎಂಬುದು ತೀರ್ಮಾನವಾಗಲಿದೆ. ಸದ್ಯ ವಿಚಾರಣೆ ಮುಂದುವರೆದಿದೆ.
ಈ ನಡುವೆ ವಿಚಾರಣೆ ಮಧ್ಯದಲ್ಲಿ ಪವಿತ್ರಾ ಗೌಡ ಮತ್ತು ದರ್ಶನ್ ಸಂಬಂಧದ ಬಗ್ಗೆ ವಿವರಣೆ ನೀಡುವಂತೆ ಸುಪ್ರೀಂ ಕೋರ್ಟ್ ವಕೀಲರ ಬಳಿ ಪ್ರಶ್ನಿಸಿತು. ಈ ವೇಳೆ ಪವಿತ್ರಾ ಗೆಳತಿ ಸಮತಾ ನೀಡಿರುವ ಹೇಳಿಕೆಯಂತೆ. ಜೂನ್ 8 ರಂದು ನಾನು ತಲಘಟ್ಟಪುರದಲ್ಲಿ ಇದ್ದೆ. ನನಗೆ ಪವಿತ್ರ ಕರೆ ಮಾಡಿ ನಿನ್ನ ಪತಿಯಿಂದ ಸಹಾಯ ಮಾಡಿಸಬಹುದಾ ಎಂದು ಕೇಳಿದ್ದಳು, ನಾನು ಇಲ್ಲ ಎಂದು ಕರೆ ಕಟ್ ಮಾಡಿದೆ ಎಂದಿದ್ದಾರೆ.
ಕೋರ್ಟ್‌ಗೆ ವಕೀಲರ ವಿವರಣೆ ಹೀಗಿತ್ತು.
ಹತ್ಯೆಗೆ ಮೊದಲು ರೇಣುಕಾಸ್ವಾಮಿ, ಪವಿತ್ರಾ ಅವರಿಗೆ ಮೆಸೇಜ್ ಮಾಡಿದ್ದನು. ಈ ವಿಷಯವನ್ನು ಪವಿತ್ರಾ, ಎ-3 ಗೆ ತಿಳಿಸಿದ್ದಾಳೆ. ನಂತರ ಎ-3, ಪವಿತ್ರಾ ಎಂಬಂತೆ ವರ್ತಿಸಿ ರೇಣುಕಾಸ್ವಾಮಿಯೊಂದಿಗೆ ಸಂಪರ್ಕದಲ್ಲಿದ್ದನು. ಈ ವಿಚಾರದ ಬಗ್ಗೆ ದರ್ಶನ್‌ಗೆ ಮಾಹಿತಿ ಲಭಿಸಿದೆ. ಇದರಿಂದ ಕೋಪಗೊಂಡ ದರ್ಶನ್, ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಅಪಹರಿಸಿದ್ದಾರೆ ಎಂಬ ಆರೋಪವಿದೆ. ನಂತರ ಶೆಡ್ ಒಂದರಲ್ಲಿ ರೇಣುಕಾಸ್ವಾಮಿಗೆ ಗಂಭೀರ ಹಲ್ಲೆ ನಡೆಸಲಾಗಿದೆ. ಈ ಪ್ರಕರಣದ ವಿಚಾರವಾಗಿ ಹೈಕೋರ್ಟ್ ನೀಡಿರುವ ತೀರ್ಪನ್ನು ಸರ್ಕಾರ ಪರ ವಕೀಲ ಸಿದ್ದಾರ್ಥ ಲೂತ್ರಾ ಉಲ್ಲೇಖಿಸಿದ್ದಾರೆ. ವೈದ್ಯಕೀಯ ಕಾರಣವನ್ನು ಆಧಾರವನ್ನಾಗಿ ಮಾಡಿಕೊಂಡು ದರ್ಶನ್ ಅವರು ಜೈಲಿನಿಂದ ಬಿಡುಗಡೆಗೆ ಹೈಕೋರ್ಟ್‌ನಿಂದ ಜಾಮೀನು ಪಡೆದಿದ್ದಾರೆ. ಜಾಮೀನಿನ ಬಳಿಕ ದರ್ಶನ್ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದ್ದೂ ಗಮನಾರ್ಹವಾಗಿದೆ. ಆರೋಪಿಗಳೆಲ್ಲರೂ ಈಗ ಜಾಮೀನಿನಲ್ಲಿದ್ದಾರೆ. ಆದರೆ ಈ ಪ್ರಕರಣದಲ್ಲಿ ಈಗಾಗಲೇ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ.
ಸತ್ವ ಅನುಗ್ರಹ ಅಪಾರ್ಟ್‌ಮೆಂಟ್‌ನಲ್ಲಿ ಸೆಕ್ಯುರಿಟಿ ಗಾರ್ಡ್ ರೇಣುಕಾಸ್ವಾಮಿಯ ಶವವನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶವದ ಮೇಲೆ ಹಲ್ಲೆಯ ಗುರುತುಗಳು ಕಂಡು ಬಂದಿದ್ದು, ಮಹಜರ್ ವರದಿ ಇದೆ. ಜೂನ್ 8-9ರ ಮಧ್ಯರಾತ್ರಿ ವೇಳೆ ಶವವನ್ನು ಸ್ಥಳಕ್ಕೆ ತಂದು ಇಡಲಾಗಿದೆ. ಸ್ಕಾರ್ಪಿಯೋ ವಾಹನದಲ್ಲಿ ಶವವನ್ನು ತಂದು ಬಿಟ್ಟಿರುವುದು ಮತ್ತು ಒಂದು ಕೆಂಪು ಬಣ್ಣದ ಜೀಪ್ ಕೂಡ ಸ್ಥಳಕ್ಕೆ ಬಂದು ಹೋಗಿರುವುದು ಸಿಸಿಟಿವಿ ದಾಖಲೆಗಳಲ್ಲಿ ದಾಖಲಾಗಿದೆ ಎಂದು ಸುಪ್ರೀಂ ಪೀಠಕ್ಕೆ ತಿಳಿಸಲಾಯ್ತು.
ರಾಜ್ಯ ಸರ್ಕಾರದ ವಕೀಲರು, ಶವವನ್ನು ತಂದು ಹಾಕಿದವರು ಸಾಕ್ಷ್ಯನಾಶಕ್ಕೆ ಯತ್ನಿಸಿದ್ದಾರೆಯೆಂದು ಸುಪ್ರೀಂ ಕೋರ್ಟ್ ಎದುರು ಪ್ರಶ್ನೆ ಎತ್ತಿದ್ದಾರೆ. ಜಾಮೀನು ಪಡೆದಿರುವ ಕೆಲವರು, ಈ ಘಟನೆಯಲ್ಲಿ ಭಾಗಿಯಾಗಿರುವ ಶಂಕೆಯಿದ್ದು, ಅವರ ಜಾಮೀನು ರದ್ದುಪಡಿಸಬೇಕು ಎಂದು ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಾಗಿದೆ ಎಂದರು. ಆರ್.ಆರ್. ನಗರದಲ್ಲಿ ಎ1 ಮತ್ತು ಎ2 ಆರೋಪಿಗಳು ವಾಸವಿದ್ದಾರೆ. ಈ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ಪಟ್ಟಣಗೆರೆ ಶೆಡ್ 5-6 ಎಕರೆ ಇದ್ದು, ವಾಹನ ಪಾರ್ಕಿಂಗ್ ಗೆ ಬಳಕೆ ಮಾಡಲಾಗುತ್ತಿದೆ. ಆರೋಪಿಯೊಬ್ಬನ ಅಂಕಲ್ ಗೆ ಈ ಶೆಡ್ ಜಾಗ ಸೇರಿದೆ. ಪಟ್ಟಣಗೆರೆ ಜಯಣ್ಣ ಎಂಬವರಿಗೆ ಈ ಶೆಡ್ ಸೇರಿದೆ. ವಿನಯ್ ಸ್ಚೋನಿ ಬ್ರೂಕ್ ರೆಸ್ಚೊರೆಂಟ್ ಓನರ್ ಆಗಿದ್ದು, ಎ4 ರಾಘವೇಂದ್ರ, ಎ 17 ನಿಖಿಲ್ ಸೇರಿ ಕೆಲವರು ಕಾಮಾಕ್ಷಿಪಾಳ್ಯ ಪೋಲೀಸ್ ಠಾಣೆಯಲ್ಲಿ ಸರೆಂಡರ್ ಆಗಿದ್ದರು.ಎ 4 ರಾಘವೇಂದ್ರ, ಸೇರಿದಂತೆ ನಾಲ್ವರು ಸುಳ್ಳು ಹೇಳಿಕೆಯನ್ನು ಪೊಲೀಸರಿಗೆ ನೀಡಿದ್ದರು. ಎ 3 ಪವನ್ ಗೆ ಉಳಿದ ನಾಲ್ವರು ಆರೋಪಿಗಳು 45 ಕಾಲ್ ಮಾಡಿದ್ದಾರೆ. ಜೂನ್ 12ರ ಮುಂಜಾನೆ 12.30ರ ವೇಳೆಗೆ ಪವನ್, ನಾಗರಾಜ್ ಸೇರಿದಂತೆ ಕೆಲ ಪ್ರಮುಖ ಆರೋಪಿಗಳನ್ನು ಪೊಲೀಸರು ಬಂಧಿಸಿದರು. ನಂತರದ ಹಂತದಲ್ಲಿ ಮತ್ತೊಂದು ಪ್ರಮುಖ ಆರೋಪಿ ಪ್ರದೋಷ್ ಅನ್ನು ಬಂಧಿಸಲಾಯಿತು.ಆರೋಪಿ ಪವನ್, ಪವಿತ್ರಾ ಗೌಡ ಅವರ ಮನೆಯ ಮ್ಯಾನೇಜರ್ ಆಗಿದ್ದನು. ಸಿಡಿಆರ್ ದಾಖಲೆಗಳ ಪ್ರಕಾರ, ನಾಗರಾಜ್ ಕೂಡ ಇತರ ಆರೋಪಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದನು. ದರ್ಶನ್ ಅವರನ್ನು ಮೈಸೂರಿನಲ್ಲಿ ಬಂಧಿಸಿ ಬೆಂಗಳೂರಿಗೆ ಕರೆತರಲಾಯಿತು. ಅದೇ ದಿನ ಮಧ್ಯಾಹ್ನ ಪವಿತ್ರಾ ಗೌಡರನ್ನು ಕೂಡ ಪೊಲೀಸರು ಬಂಧಿಸಲಾಯ್ತು. ಪೊಲೀಸರು ಪ್ರದೋಷ್‌ರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವನಿಂದ ಮಾಹಿತಿ ಪಡೆಯುವ ಮೂಲಕ ಇತರ ಆರೋಪಿಗಳ ಬಂಧನ ಸಾಧ್ಯವಾಯಿತು ಎಂದು ಪೀಠಕ್ಕೆ ತಿಳಿಸಲಾಗಿದೆ.
