Asianet Suvarna News Asianet Suvarna News

ಸುಳ್ಳು ಸುದ್ದಿ, ದ್ವೇಷ ಭಾಷಣ ಮಾಡಿದ್ರೆ ಸುಮೋಟೋ ಕೇಸ್‌: ಸಿಎಂ ಸಿದ್ದರಾಮಯ್ಯ

ಕಾನೂನು ಕೈಗೆತ್ತಿಕೊಳ್ಳುವವರು, ಸುಳ್ಳು ಸುದ್ದಿ ಹಬ್ಬಿಸುವ ಹಾಗೂ ದ್ವೇಷ ಭಾಷಣದ ಮೂಲಕ ಸಮಾಜದಲ್ಲಿ ಅಶಾಂತಿ ಉಂಟು ಮಾಡುವವರ ವಿರುದ್ಧ ಸಾರ್ವಜನಿಕರು ದೂರು ನೀಡುವವರೆಗೆ ಕಾಯದೆ ಪೊಲೀಸರೇ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ತಾಕೀತು ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ

Suo Moto Case Against Who Post Fake News and Hate Speech Says CM Siddaramaiah grg
Author
First Published Sep 16, 2023, 11:59 AM IST | Last Updated Sep 16, 2023, 11:59 AM IST

ಬೆಂಗಳೂರು(ಸೆ.16):  ಕಾನೂನು ಕೈಗೆತ್ತಿಕೊಳ್ಳುವವರು (ನೈತಿಕ ಪೊಲೀಸ್ ಗಿರಿ), ದ್ವೇಷ ಭಾಷಣಕಾರರು ಹಾಗೂ ಸುಳ್ಳು ಸುದ್ದಿ ಹಬ್ಬಿಸುವವರು ಸೇರಿದಂತೆ ಸಮಾಜದಲ್ಲಿ ಶಾಂತಿ ಭಂಗ ಉಂಟು ಮಾಡುವವರ ವಿರುದ್ಧ ಪೊಲೀಸರು ಸ್ವಯಂಪ್ರೇರಿತ (ಸುಮೋಟೋ) ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು.

ನಗರದ ನೃತಪತುಂಗ ರಸ್ತೆಯ ರಾಜ್ಯ ಪೊಲೀಸ್ ಇಲಾಖೆ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ನಡೆದ ಹಿರಿಯ ಅಧಿಕಾರಿಗಳ ವಾರ್ಷಿಕ ಸಮಾವೇಶದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಅಭಿವೃದ್ಧಿ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ನಡುವೆ ನಿಕಟ ಸಂಬಂಧವಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದ್ದರೆ ಆ ನಾಡು ಪ್ರಗತಿ ಸಹ ಕಾಣಲಿದೆ ಎಂದರು.

ಸುಳ್ಳು ಸುದ್ದಿ: ಆಜ್‌ತಕ್‌ ವಾಹಿನಿ ವಿರುದ್ಧ ಬಲವಂತದ ಕ್ರಮಕ್ಕೆ ಹೈಕೋರ್ಟ್‌ ‘ತಡೆ’

ಅನೈತಿಕ ಪೊಲೀಸ್‌ ಗಿರಿ ವಿಚಾರದಲ್ಲಿ ಜೀರೋ ಟಾಲರೆನ್ಸ್‌ (ಶೂನ್ಯ ಸಹನೆ) ಎಂಬುದು ಸರ್ಕಾರದ ಸ್ಪಷ್ಟ ನಿಲುವಾಗಿದೆ. ಕಾನೂನು ಕೈಗೆತ್ತಿಕೊಳ್ಳುವವರು, ಸುಳ್ಳು ಸುದ್ದಿ ಹಬ್ಬಿಸುವ ಹಾಗೂ ದ್ವೇಷ ಭಾಷಣದ ಮೂಲಕ ಸಮಾಜದಲ್ಲಿ ಅಶಾಂತಿ ಉಂಟು ಮಾಡುವವರ ವಿರುದ್ಧ ಸಾರ್ವಜನಿಕರು ದೂರು ನೀಡುವವರೆಗೆ ಕಾಯದೆ ಪೊಲೀಸರೇ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಮುಖ್ಯಮಂತ್ರಿಗಳು ತಾಕೀತು ಮಾಡಿದರು.

ದರ್ಪ ಬಿಟ್ಟು ಕೆಲಸ ಮಾಡಿ-ಸಿಎಂ: ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಬೇಕು ಎಂಬುದು ನಮ್ಮ ಸರ್ಕಾರದ ಧ್ಯೇಯವಾಗಿದೆ. ಠಾಣೆಗೆ ದೂರು ಕೊಡಲು ಬರುವ ನಾಗರಿಕರ ಜತೆ ಗೌರವಯುತವಾಗಿ ಪೊಲೀಸರು ನಡೆದುಕೊಳ್ಳಬೇಕು. ದೂರು ಸ್ವೀಕರಿಸಿದ ಕೂಡಲೇ ಎಫ್‌ಐಆರ್ ದಾಖಲಿಸಿ ಮುಂದಿನ ಕಾನೂನು ಪ್ರಕ್ರಿಯೆ ನಡೆಸಬೇಕು. ಯಾವುದೇ ಕಾರಣಕ್ಕೂ ಠಾಣೆಗಳಲ್ಲಿ ಬಡವ-ಬಲ್ಲಿದ ಎಂಬ ಭೇದಭಾವ ಮಾಡಬಾರದು ಎಂದು ಮುಖ್ಯಮಂತ್ರಿಗಳು ಕಟ್ಟು ನಿಟ್ಟಾಗಿ ಹೇಳಿದರು.

ಇದೇ ವೇಳೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ದೇಶದಲ್ಲಿ ರಾಜ್ಯ ಪೊಲೀಸ್ ಇಲಾಖೆಗೆ ಒಳ್ಳೆಯ ಹೆಸರಿದೆ. ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ರಾಜ್ಯದ 1116 ಪೊಲೀಸ್ ಠಾಣೆಗಳ ಮೇಲೆ ನಿಗಾವಹಿಸುವ ವ್ಯವಸ್ಥೆ ರೂಪಿಸಲಾಗುತ್ತದೆ. ಇಲಾಖೆಯ ಮತ್ತಷ್ಟು ಬಲವರ್ಧನೆಗೆ ಮುಖ್ಯಮಂತ್ರಿಗಳು ನೆರವು ನೀಡಿದ್ದಾರೆ ಎಂದರು.

ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ತಡೆಗೆ ರಾಜ್ಯದಲ್ಲಿ 3 ತಂಡ ರಚನೆ: ಸಚಿವ ಪ್ರಿಯಾಂಕ್‌

ಈ ಸಂದರ್ಭದಲ್ಲಿ ಹಿರಿಯ ಅಧಿಕಾರಿಗಳ ಜತೆ ಮುಖ್ಯಮಂತ್ರಿಗಳ ಗ್ರೂಪ್ ಪೋಟೋ ತೆಗೆಯಲಾಯಿತು. ಅಲ್ಲದೆ ಇ ಚಲನ್ ಹಾಗೂ ಇ-ಎಫ್‌ಐಆರ್ ಸೇವೆಗಳಿಗೆ ಮುಖ್ಯಮಂತ್ರಿಗಳು ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಹಾಗೂ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಜನೀಶ್ ಗೋಯೆಲ್‌, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಕೆ.ಗೋವಿಂದರಾಜು ಹಾಗೂ ಡಿಜಿಪಿ-ಐಜಿ ಅಲೋಕ್ ಮೋಹನ್‌ ಉಪಸ್ಥಿತರಿದ್ದರು.

Latest Videos
Follow Us:
Download App:
  • android
  • ios