ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ತಡೆಗೆ ರಾಜ್ಯದಲ್ಲಿ 3 ತಂಡ ರಚನೆ: ಸಚಿವ ಪ್ರಿಯಾಂಕ್‌

ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡುವುದನ್ನು ತಡೆಯಲು ಹೊಸ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದ್ದು, ಶೀಘ್ರದಲ್ಲಿ ಪ್ರತ್ಯೇಕ ತಂಡ ರಚಿಸಿ ಆ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದರು. 

Formation of 3 teams in the state to prevent fake news Says Minister Priyank Kharge gvd

ಬೆಂಗಳೂರು (ಸೆ.15): ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡುವುದನ್ನು ತಡೆಯಲು ಹೊಸ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದ್ದು, ಶೀಘ್ರದಲ್ಲಿ ಪ್ರತ್ಯೇಕ ತಂಡ ರಚಿಸಿ ಆ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದರು. ವಿಧಾನಸೌಧದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಸುದ್ದಿ ಹರಡುವ ಪ್ರಕ್ರಿಯೆ ಹೆಚ್ಚುತ್ತಿದೆ. ಅದನ್ನು ತಡೆಯಲು ಸರ್ಕಾರ ಹೊಸ ವ್ಯವಸ್ಥೆ ಜಾರಿಗೊಳಿಸುತ್ತಿದೆ. 

ಪ್ರಮುಖವಾಗಿ ತಪ್ಪು ಮಾಹಿತಿ ಹರಡುವುದು, ಸಮಾಜದಲ್ಲಿ ಕೋಮು ಸೌಹಾರ್ದಕ್ಕೆ ಧಕ್ಕೆ ತರುವಂತಹ ಸುದ್ದಿಗಳನ್ನು ಹಂಚಿಕೊಂಡರೆ ಅದನ್ನು ಪತ್ತೆ ಹಚ್ಚಿ, ಅದರ ಬಗ್ಗೆ ಜನರನ್ನು ಎಚ್ಚರಿಸುವ ಕೆಲಸ ಮಾಡಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರು ಈ ವ್ಯವಸ್ಥೆ ಬಗ್ಗೆ ಪರಿಶೀಲನೆ ಮಾಡಿದ್ದು, ಜಾರಿಗೆ ಅನುಮತಿಸಿದ್ದಾರೆ. ಆದರೂ ಕೆಲ ಸಣ್ಣಪುಟ್ಟ ಕೆಲಸಗಳಿದ್ದು ಅದನ್ನು ಪೂರ್ಣಗೊಳಿಸಿ ಶೀಘ್ರದಲ್ಲಿ ಜಾರಿ ಮಾಡಲಾಗುವುದು ಎಂದರು.

ಸರ್ಕಾರಿ ಆಸ್ಪತ್ರೆಗಳಲ್ಲಿ ಜನರಿಗೆ ಆರೋಗ್ಯ ಸೇವೆ ನೀಡಲು ಬದ್ದ: ಸಚಿವ ದಿನೇಶ್ ಗುಂಡೂರಾವ್

3 ತಂಡಗಳ ರಚನೆ: ಸುಳ್ಳು ಸುದ್ದಿ ಪತ್ತೆ ಹಾಗೂ ಅದರ ಬಗ್ಗೆ ಜಾಗೃತಿ ಮೂಡಿಸಲು ಮೂರು ತಂಡಗಳನ್ನು ರಚಿಸಲಾಗುವುದು. ಸುಳ್ಳು ಸುದ್ದಿ ಪತ್ತೆ ಮಾಡಿ, ಅದರ ಸತ್ಯಾಸತ್ಯತೆ ಪರಿಶೀಲಿಸಲು ಫ್ಯಾಕ್ಟ್‌ಚೆಕ್‌ ತಂಡ, ಅದಾದ ನಂತರ ಫ್ಯಾಕ್ಟ್‌ಚೆಕ್‌ ತಂಡ ಸುಳ್ಳು ಸುದ್ದಿ ಪತ್ತೆ ಮಾಡಿರುವುದು ಸರಿಯಾಗಿದೆಯೇ ಎಂಬುದನ್ನು ಪರಿಶೀಲಿಸಲು ಅನಾಲಿಟಿಕ್‌ ತಂಡ ಹಾಗೂ ಆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಕೆಪಾಸಿಟಿ ಬಿಲ್ಡಿಂಗ್‌ ತಂಡವನ್ನು ರಚಿಸಲಾಗುವುದು ಎಂದು ಪ್ರಿಯಾಂಕ್‌ ಖರ್ಗೆ ಹೇಳಿದರು. 3 ತಂಡಗಳ ಮೇಲುಸ್ತುವಾರಿಗೆ ಓವರ್‌ಸೈಟ್‌ ಸಮಿತಿ, ಆ ಸಮಿತಿ ಮಾಡುವ ಶಿಫಾರಸುಗಳನ್ನು ಪರಿಶೀಲಿಸಲು ರಿವ್ಯೂ ಎಸ್‌ಪಿಒಸಿ ಸಮಿತಿ ಹಾಗೂ ಉಳಿದೆರಡು ಸಮಿತಿಗಳು ಮಾಡುವ ಶಿಫಾರಸುಗಳನ್ನು ಸುಳ್ಳು ಸುದ್ದಿ ಪತ್ತೆ ಹಾಗೂ ಜಾಗೃತಿಗಾಗಿ ರಚಿಸಲಾಗಿರುವ ಮೂರು ತಂಡಗಳೊಂದಿಗೆ ಸಮನ್ವಯ ಸಾಧಿಸಲು ನೋಡೆಲ್‌ ಅಧಿಕಾರಿಗಳನ್ನು ನೇಮಿಸಲಾಗುತ್ತದೆ ಎಂದು ತಿಳಿಸಿದರು.

ಓವರ್‌ಸೈಟ್‌ ಸಮಿತಿಯಲ್ಲಿ ಐಟಿ-ಬಿಟಿ ಇಲಾಖೆಯ ಮುಖ್ಯಸ್ಥರು, ಗುಪ್ತಚರ ಇಲಾಖೆ ಎಡಿಜಿಪಿ ಅಥವಾ ಸಿಐಡಿ ಎಡಿಜಿಪಿ, ಡಿಐಪಿಆರ್‌ನ ಪ್ರತಿನಿಧಿ, ಕೈಟ್ಸ್‌ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕ, ಐಐಎಸ್ಸಿಯ ಇಇಸಿಎಸ್‌ ವಿಭಾಗದ ಡೀನ್‌, ಹೆಚ್ಚುವರಿ ಅಡ್ವೋಕೇಟ್‌ ಜನರಲ್‌, ಸಿವಿಕ್‌ ಸೊಸೈಟಿಯ ಪ್ರತಿನಿಧಿಗಳು ಸದಸ್ಯರಾಗಿರಲಿದ್ದಾರೆ. ಅದೇ ರೀತಿ ರಿವೀವ್‌ ಎಸ್‌ಪಿಒಸಿಯಲ್ಲಿ ಗುಪ್ತಚರ ಇಲಾಖೆಯ ಪೊಲೀಸ್‌ ವರಿಷ್ಠಾಧಿಕಾರಿ ಅಥವಾ ಗೃಹ ಇಲಾಖೆ ಸೂಚಿಸುವಂತಹ ಅಧಿಕಾರಿಗಳು ಸದಸ್ಯರಾಗಿರಲಿದ್ದಾರೆ ಎಂದರು.

ಮಿತಿಮೀರಿದರೆ ಪ್ರಕರಣದ ದಾಖಲು: ಸಾಮಾಜಿಕ ಜಾಲತಾಣದಲ್ಲಿ ಸರ್ಕಾರ ಮತ್ತು ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆ ಬರುವಂತೆ ಮಾಡಲಾಗುವ ಪೋಸ್ಟ್‌ಗಳನ್ನಷ್ಟೇ ಪರಿಶೀಲನೆ ನಡೆಸಲಾಗುವುದು. ರಾಜಕೀಯ ಅಥವಾ ವೈಯಕ್ತಿಕ ವಿಚಾರಗಳ ಬಗ್ಗೆ ಪರಿಶೀಲನೆ ನಡೆಸುವುದಿಲ್ಲ. ಮೂರು ಹಂತದಲ್ಲಿ ಪರಿಶೀಲಿಸಲಾಗುತ್ತಿದ್ದು, ತಪ್ಪು ಮಾಹಿತಿ ನೀಡುವುದು, ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿ ಹರಡುವುದು ಹಾಗೂ ಸಮಾಜದಲ್ಲಿ ಗಲಭೆ ಉಂಟಾಗುವುದಕ್ಕೆ ಕಾರಣವಾಗುವಂತಹ ಸುಳ್ಳು ಪೋಸ್ಟ್‌ಗಳನ್ನು ಪತ್ತೆ ಮಾಡಲಾಗುತ್ತದೆ. ಹೀಗೆ ಪತ್ತೆ ಮಾಡುವ ಸುಳ್ಳು ಸುದ್ದಿಯನ್ನೊಳಗೊಂಡ ಪೋಸ್ಟ್‌ಗಳನ್ನು ಗುರುತು ಮಾಡಿ ಅವುಗಳನ್ನು ನಂಬದಂತೆ ಜನರಿಗೆ ತಿಳಿಸಲಾಗುವುದು. ಅಲ್ಲದೆ, ಸಮಾಜದ ಸಾಮರಸ್ಯ ಕದಡುವುದಕ್ಕಾಗಿಯೇ ಸುಳ್ಳು ಸುದ್ದಿ ಪೋಸ್ಟ್‌ ಮಾಡುವವರ ವಿರುದ್ಧ ಸರ್ಕಾರ ಕಾನೂನು ರೀತಿ ಕ್ರಮ ಕೈಗೊಳ್ಳಲಿದೆ ಎಂದು ಪ್ರಿಯಾಂಕ್‌ ಖರ್ಗೆ ವಿವರಿಸಿದರು.

ಹೊಸ ಕಾಯ್ದೆ ರಚನೆಯಿಲ್ಲ: ಸುಳ್ಳು ಸುದ್ದಿ ಪತ್ತೆ ಮಾಡುವ ಕಾರ್ಯಕ್ಕೆ ಯಾವುದೇ ರೀತಿಯ ಹೊಸ ಕಾಯ್ದೆ ಅಥವಾ ಈಗಿರುವ ಕಾಯ್ದೆಗೆ ತಿದ್ದುಪಡಿ ತರುವುದಿಲ್ಲ. ಬದಲಿಗೆ ಈಗಾಗಲೇ ಚಾಲ್ತಿಯಲ್ಲಿರುವ ಕಾಯ್ದೆಗಳನ್ನು ಬಳಸಿ ಕೆಲಸ ಮಾಡಲಾಗುವುದು. ಐಟಿ ಕಾಯ್ದೆ 2000, ಐಟಿ ಕಾಯ್ದೆ (ತಿದ್ದುಪಡಿ) 2008, ಇಂಡಿಯಲ್‌ ಪೀನಲ್ ಕೋಡ್‌, ನೈಸರ್ಗಿಕ ವಿಕೋಪ ನಿರ್ವಹಣೆ ಕಾಯ್ದೆ 2005ರ ಅಡಿಯಲ್ಲಿ ಕೆಲಸ ಮಾಡಲಾಗುತ್ತದೆ ಎಂದು ಪ್ರಿಯಾಂಕ್‌ ಹೇಳಿದರು.

ಮಾಧ್ಯಮ ಸ್ವಾತಂತ್ರ್ಯಕ್ಕೆ ಧಕ್ಕೆಯಿಲ್ಲ: ಸುಳ್ಳು ಸುದ್ದಿ ಹರಡುವುದನ್ನು ತಡೆಯುವ ನೆಪದಲ್ಲಿ ರಾಜ್ಯ ಸರ್ಕಾರ ಮಾಧ್ಯಮಗಳ ಮೇಲೆ ನಿಯಂತ್ರಣ ಹೇರುವ ಕೆಲಸ ಮಾಡುತ್ತಿದೆ ಎಂಬ ಆರೋಪ ಮಾಡಲಾಗುತ್ತಿದೆ. ಆದರೆ, ಐಟಿ-ಬಿಟಿ ಇಲಾಖೆ ಜಾರಿಗೆ ತರುತ್ತಿರುವ ವ್ಯವಸ್ಥೆಯಿಂದ ಮಾಧ್ಯಮಗಳ ಸ್ವಾತಂತ್ರ್ಯಕ್ಕೆ ಯಾವುದೇ ಧಕ್ಕೆ ಬರುವುದಿಲ್ಲ. ಅಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ಬರುವ ತಪ್ಪು ಮಾಹಿತಿಯನ್ನಷ್ಟೇ ಗುರುತಿಸಿ, ಅದರ ಬಗ್ಗೆ ಜನರಿಗೆ ತಿಳಿಸಲಾಗುವುದು. ಅದನ್ನು ಹಂಚಿಕೊಂಡವರಿಗೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಆದರೆ, ಗಂಭೀರ ಪ್ರಕರಣಳಲ್ಲಷ್ಟೇ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಿಯಾಂಕ್‌ ಖರ್ಗೆ ತಿಳಿಸಿದರು.

ಪ್ರಧಾನಿ ಸೂಚನೆಯಂತೆ ಕೆಲಸ ಮಾಡಿದ್ದೇವೆ: ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡುವುದರ ವಿರುದ್ಧ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಾಧೀಶರು, ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತರು ಸೇರಿದಂತೆ ಹಲವರು ಈ ಹಿಂದೆ ಕಳವಳ ವ್ಯಕ್ತಪಡಿಸಿದ್ದಾರೆ. ಸುಳ್ಳು ಸುದ್ದಿ ಹರಡುವುದರಿಂದ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗುತ್ತಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರು 2022ರ ಅಕ್ಟೋಬರ್‌ 22ರಂದು ಟ್ವೀಟ್‌ ಮಾಡಿ ಸುಳ್ಳು ಸುದ್ದಿಯ ಫ್ಯಾಕ್ಟ್‌ ಚೆಕ್‌ ಮಾಡುವುದು ಅತ್ಯವಶ್ಯ ಎಂದು ತಿಳಿಸಿದ್ದರು. ಅವರ ಆದೇಶವನ್ನು ನಾವು ಪಾಲಿಸುತ್ತಿದ್ದೇವೆ ಎಂದು ಪ್ರಿಯಾಂಕ್‌ ಖರ್ಗೆ ತಿಳಿಸಿದರು.

ಉತ್ತರ ಭಾರತದ ಪಪ್ಪು ರಾಹುಲ್ ಗಾಂಧಿ, ದಕ್ಷಿಣದ ಪಪ್ಪು ಉದಯನಿಧಿ ಸ್ಟಾಲಿನ್: ಶ್ರೀರಾಮುಲು

ಬಿಜೆಪಿ ಫ್ಯಾಕ್ಟರಿ ಬಂದ್‌ ಮಾಡಿದರೆ ಸಮಸ್ಯೆ ನಿವಾರಣೆ: ಫ್ಯಾಕ್ಟ್‌ಚೆಕ್‌ಗೆ ಸಂಬಂಧಿಸಿದಂತೆ ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ಬಿಜೆಪಿ ಆರೋಪಿಸುತ್ತಿದೆ. ಅದರ ಬದಲು ಬಿಜೆಪಿಯ ಐಟಿ ಸೆಲ್‌ನಲ್ಲಿನ ಸುಳ್ಳಿನ ಫ್ಯಾಕ್ಟರಿ ಮುಚ್ಚಿದರೆ ಅರ್ಧ ಸಮಸ್ಯೆ ನಿವಾರಣೆಯಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಸತ್ಯವನ್ನು ಸುಳ್ಳು, ಸುಳ್ಳನ್ನು ಸತ್ಯ ಎಂದು ಬಿಂಬಿಸಿ ಜನರ ದಿಕ್ಕು ತಪ್ಪಿಸುವುದು ಹಾಗೂ ಚುನಾವಣೆಯಲ್ಲಿ ಅನುಕೂಲವಾಗುವಂತೆ ಮಾಡಿಕೊಳ್ಳುವುದು ಸಾಮಾನ್ಯವಾಗಿದೆ. ಅಲ್ಲದೆ ಸರ್ಕಾರದ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿಸಲು ಇದನ್ನು ಅಸ್ತ್ರವನ್ನಾಗಿಸಲಾಗುತ್ತಿದೆ. ಅದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪ್ರಿಯಾಂಕ್‌ ಹೇಳಿದರು.

Latest Videos
Follow Us:
Download App:
  • android
  • ios