ರಾಜ್ಯದಲ್ಲಿ ರಣಬಿಸಿಲು: ಉಷ್ಣಮಾರುತಕ್ಕೆ ಮೊದಲ ಸಾವು?
ರಾಜ್ಯದಲ್ಲಿ, ಅದರಲ್ಲೂ ವಿಶೇಷವಾಗಿ ಕರಾವಳಿ, ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಸಿಲಿನ ತಾಪ ಅಧಿಕವಾಗಿದ್ದು, ಕಲಬುರಗಿ ಜಿಲ್ಲೆಯಲ್ಲಿ ಉಷ್ಣಮಾರುತಕ್ಕೆ ಕೂಲಿ ಕಾರ್ಮಿಕನೊಬ್ಬ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಕಲಬುರಗಿ (ಏ.01): ರಾಜ್ಯದಲ್ಲಿ, ಅದರಲ್ಲೂ ವಿಶೇಷವಾಗಿ ಕರಾವಳಿ, ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಸಿಲಿನ ತಾಪ ಅಧಿಕವಾಗಿದ್ದು, ಕಲಬುರಗಿ ಜಿಲ್ಲೆಯಲ್ಲಿ ಉಷ್ಣಮಾರುತಕ್ಕೆ ಕೂಲಿ ಕಾರ್ಮಿಕನೊಬ್ಬ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಜಿಲ್ಲೆಯ ಆಳಂದ ತಾಲೂಕಿನ ದಣ್ಣೂರ ಗ್ರಾಮದಲ್ಲಿ ಭಾನುವಾರ ನರೇಗಾ ಕೂಲಿ ಕೆಲಸ ಮಾಡುವಾಗ ಕುಸಿದು ಬಿದ್ದು ಶರಣಪ್ಪ ಸಮಗಾರ (42) ಎಂಬುವರು ಮೃತಪಟ್ಟಿದ್ದಾರೆ. ಶರಣಪ್ಪ ಅವರು ಬಿಸಿಲಿನ ತಾಪದಿಂದ ಅಥವಾ ಹೃದಯಾಘಾತದಿಂದ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆಯ ನಂತರವಷ್ಟೇ ಸತ್ಯ ತಿಳಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದೊಂದು ವಾರದಿಂದ ಕಲಬುರಗಿ ಸೇರಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ತಾಪಮಾನ 40ರ ಗಡಿ ದಾಟಿದೆ. ಭಾನುವಾರ ಕೂಡ ರಾಜ್ಯದಲ್ಲೇ ಅತಿ ಹೆಚ್ಚು ತಾಪಮಾನ, ಕಲಬುರಗಿಯಲ್ಲಿ (42 ಡಿಗ್ರಿ ಸೆಲ್ಸಿಯಸ್) ದಾಖಲಾಗಿತ್ತು. ಇದೇ ವೇಳೆ, ರಾಯಚೂರು ಹಾಗೂ ಬಾಗಲಕೋಟೆಗಳಲ್ಲಿ 40.4 ಡಿಗ್ರಿ, ಕೊಪ್ಪಳದಲ್ಲಿ 39.7, ವಿಜಯಪುರದಲ್ಲಿ 39.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಈ ಮಧ್ಯೆ, ಕಲಬುರಗಿ, ಬಾಗಲಕೋಟೆ, ರಾಯಚೂರು, ಕೊಪ್ಪಳ ಜಿಲ್ಲೆಗಳ ವ್ಯಾಪ್ತಿಯಲ್ಲಿ ಏ.2, 3, 4 ಹಾಗೂ 5ರಂದು ಉಷ್ಣಮಾರುತದ ಅಲೆ ಏಳುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
Lok Sabha Election 2024: ನಾನು ದೇವೇಗೌಡರ ಗರಡಿಯಲ್ಲಿ ಬೆಳೆದವ: ವಿ.ಸೋಮಣ್ಣ
ಬಿಸಿಲಿನ ಝಳಕ್ಕೆ ಕರಟಿದ ಕಾಫಿ ಮೊಗ್ಗು: ನಾಲ್ಕು ನಾಡು ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಹೂಗಳು ಸಂಪೂರ್ಣವಾಗಿ ಅರಳದೆ ಬಿಸಿಲಿನ ಝಳಕ್ಕೆ ಮುದುಡುತ್ತಿವೆ. ಕೆಲವೆಡೆ ಹೂಗಳು ಅರ್ಧಂಬರ್ಧ ಅರಳಿ ಕೆಂಪಾಗಿವೆ. ಹತ್ತು ದಿನಗಳ ಹಿಂದೆ ಬೆಳಗಿನ ಜಾವ ಹಲವಡೆ ತುಂತುರು ಮಳೆಯಾಗಿದೆ. ಕಾಫಿ ಹೂಗಳು ಅರಳುವ ಸಮಯ ಇದಾಗಿದ್ದು ಬಿದ್ದ ಅಲ್ಪ ಮಳೆಯಿಂದ ಮೊಗ್ಗುಗಳು ಮುಂದೆ ಬಂದು ಕಮರುತ್ತಿವೆ. ಸಾಮಾನ್ಯವಾಗಿ ಫೆಬ್ರವರಿ ಅಂತ್ಯಕ್ಕೆ ಅಥವಾ ಮಾರ್ಚ್ ತಿಂಗಳಲ್ಲಿ ಮಳೆಯಾಗಿ ಕಾಫಿಯ ಹೂಗಳು ಅರಳಿ ತೋಟಗಳಲ್ಲಿ ಘಮಘಮಿಸುತ್ತವೆ. ಇದೀಗ ಮಾರ್ಚ್ ಅಂತ್ಯಕ್ಕೆ ಬಂದಿದ್ದರೂ ಮಳೆಯಾಗಿಲ್ಲ. ಜಲ ಮೂಲಗಳೆಲ್ಲ ನೀರಿಲ್ಲದೆ ಬರಡಾಗಿದೆ. ಮುಂದಿನ ವರ್ಷದ ಫಸಲನ್ನು ನಿರ್ಧರಿಸುವ ಕಾಫಿಯ ಮೊಗ್ಗುಗಳು ಬಿಸಿಲಿನ ಝಳಕ್ಕೆ ಕರಕಲಾಗುತ್ತಿವೆ.
ಬಿಸಿಲಿನ ತಾಪ ತಾಳಲಾರದೆ ಕಾಳು ಮೆಣಸಿನ ಬಳ್ಳಿಗಳು ಕೂಡ ಒಣಗುತ್ತಿವೆ. ಎಲೆಗಳೆಲ್ಲ ಒಣಗಿ ಬಳ್ಳಿ ಸಂಪೂರ್ಣವಾಗಿ ನಾಶವಾಗುತ್ತಿವೆ. ಮಳೆಯ ಕೊರತೆಯಿಂದ ಕೃಷಿಕರಿಗೆ ಇನ್ನಿಲ್ಲದ ಸಮಸ್ಯೆ ಎದುರಾಗಿದೆ. ಕಾಳುಮೆಣಸಿನ ಬಳ್ಳಿಗಳು ಬಣ್ಣ ಕಳೆದುಕೊಂಡು ಎಲೆಗಳು ಸುಟ್ಟಂತಾಗಿ ಒಣಗುತ್ತಿರುವುದು ಬೆಳೆಗಾರರನ್ನು ಕಂಗೆಡಿಸಿದೆ. ಸುರಿದ ಅಲ್ಪ ಮಳೆಯಿಂದ ಕಾಫಿಯ ಮೊಗ್ಗುಗಳು ಹಲವೆಡೆ ಸಂಪೂರ್ಣವಾಗಿ ಅರಳದೆ ಕೆಂಪಾಗುತ್ತಿವೆ. ಬಲ್ಲಮಾವಟಿ ಗ್ರಾಮ ವ್ಯಾಪ್ತಿಯಲ್ಲಿ ತುಂತುರು ಮಳೆಯಾಗಿದ್ದು, ಕಾಫಿ ಹೂಗಳಿಗೆ ಸಾಕಾಗುವಷ್ಟು ಮಳೆ ಸುರಿದಿಲ್ಲ. ಮಳೆಯ ಕೊರತೆಯಿಂದ ಮುಂದಿನ ವರ್ಷದ ಫಸಲಿನ ಮೇಲೆ ತೀವ್ರ ಹೊಡೆತ ಬೀಳುತ್ತದೆ ಎಂದು ಬೆಳೆಗಾರರು ಬೇಸರ ವ್ಯಕ್ತಪಡಿಸಿದ್ದಾರೆ.
Lok Sabha Election 2024: ಮಾಧುಸ್ವಾಮಿ ಭೇಟಿಯಾದ ಸೋಮಣ್ಣ, ಕೈಗೂಡದ ಮನವೊಲಿಕೆಯ ಪ್ರಯತ್ನ
ಬೆಳೆಗಾರರು ಈ ವರ್ಷ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಮಳೆಯ ಕೊರತೆ ಒಂದೆಡೆಯಾದರೆ ಏರುತ್ತಿರುವ ತಾಪಮಾನ ಕಾಫಿ ಗಿಡಗಳಿಗೆ ಸಮಸ್ಯೆಯಾಗಿದೆ. ಹೂ ಮಳೆ ಇದೀಗ ಆಗಬೇಕಿತ್ತು. ಎಲ್ಲಿಯೂ ಮಳೆಯಾಗಿಲ್ಲ. ಈ ಭಾಗದಲ್ಲಿ ಬಂದ ತುಂತುರು ಮಳೆಯಿಂದ ಕಾಫಿ ಹೂಗಳು ಅರಳುತ್ತಿಲ್ಲ. ನೀರು ಹಾಯಿಸಲು ನೀರಿನ ಮೂಲಗಳೆಲ್ಲ ಬತ್ತಿ ಹೋಗಿವೆ. ರೈತರ ಸಮಸ್ಯೆಗಳಿಗೆ ಸರ್ಕಾರ, ಕಾಫಿ ಮಂಡಳಿ ಸ್ಪಂದಿಸಬೇಕು ಎಂದು ಕಾಫಿ ಬೆಳೆಗಾರ ದೊಡ್ಡ ಪುಲಿಕೋಟು ಗ್ರಾಮದ ಕರವಂಡ ರವಿ ಬೋಪಣ್ಣ ಹೇಳಿದರು.