ಸರ್ಕಾರ ನಿರ್ಲಕ್ಷಿಸಿದ್ರೂ ನೆರವಿಗೆ ಬಂದ ಸುಧಾಮೂರ್ತಿ: 5,000 ಖಾಸಗಿ ಅರ್ಚಕರಿಗೆ ಆಹಾರ ಕಿಟ್
* ಖಾಸಗಿ ಪುರೋಹಿತರ ಸಂಘದಿಂದ ಕೃತಜ್ಞತೆ ಸಲ್ಲಿಕೆ
* ಲಾಕ್‌ಡೌನ್‌ನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಪುರೋಹಿತರು
* ಖಾಸಗಿ ಪುರೋಹಿತರ ಪಾಲಿಗೆ ಅನ್ನಪೂರ್ಣೆಶ್ವರಿ ಆದ ಸುಧಾಮೂರ್ತಿ
ಬೆಂಗಳೂರು(ಜೂ.04): ಲಾಕ್‌ಡೌನ್‌ನಿಂದ ಸಮಸ್ಯೆಗೆ ಸಿಲುಕಿರುವ ಖಾಸಗಿ ದೇವಾಲಯಗಳ ಸುಮಾರು ಐದು ಸಾವಿರ ಪುರೋಹಿತರಿಗೆ ಇನ್ಫೋಸಿಸ್ ಪ್ರತಿಷ್ಠಾನದ ಸುಧಾಮೂರ್ತಿ ಅವರು ಆಹಾರ ಕಿಟ್ ವಿತರಿಸಿದ್ದಾರೆ.
ರಾಜ್ಯ ಸರ್ಕಾರ ಮುಜರಾಯಿ ಇಲಾಖೆ ವ್ಯಾಪ್ತಿಯ ಪುರೋಹಿತರಿಗಷ್ಟೇ ಮೂರು ತಿಂಗಳ ವೇತನ, ತಸ್ತಿಕ್ ಹಾಗೂ ದಿನಸಿ ಕಿಟ್ ನೀಡಿ, ಖಾಸಗಿ ದೇವಾಲಯಗಳ ಪುರೋಹಿತರನ್ನು ನಿರ್ಲಕ್ಷಿಸಿದೆ. ಆದರೆ ಸುಧಾಮೂರ್ತಿ ಅವರು ಸಹಾಯಹಸ್ತ ಚಾಚುವ ಮೂಲಕ ಖಾಸಗಿ ಪುರೋಹಿತರ ಪಾಲಿಗೆ ಅನ್ನಪೂರ್ಣೆಶ್ವರಿ ಆಗಿದ್ದಾರೆ ಎಂದು ಕ್ಷೇಮಾಭಿವೃದ್ಧಿ ಸಂಸ್ಥೆ ರಾಜ್ಯಾಧ್ಯಕ್ಷ ಡಾ.ವೇದಬ್ರಹ್ಮಶ್ರೀ ಎಂ.ಬಿ.ಅನಂತಮೂರ್ತಿ ತಿಳಿಸಿದ್ದಾರೆ.
ಹಂಪಿಯ 100 ಗೈಡ್‌ಗಳ ಖಾತೆಗೆ ಇನ್ಫಿ ಸುಧಾಮೂರ್ತಿ ತಲಾ 10,000 ರು. ಜಮೆ
ರಾಜ್ಯದಲ್ಲಿ ಜನತಾ ಕರ್ಫ್ಯೂ ಆರಂಭ ಆದಾಗಿನಿಂದ ಈವರೆಗೆ ದಾವಣಗೆರೆ, ಹಾವೇರಿ, ಬಳ್ಳಾರಿ, ಮೈಸೂರು, ಬೆಂಗಳೂರು ಗ್ರಾಮಾಂತರ ಮತ್ತು ನಗರದಲ್ಲಿ ಒಟ್ಟು ಐದು ಸಾವಿರ ಪುರೋಹಿತರಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸಲಾಗಿದೆ. ಉಳಿದವರಿಗೆ ಕಿಟ್ ವಿತರಣಾ ಕಾರ್ಯ ಮುಂದುವರಿದಿದೆ ಎಂದರು.
ಲಾಕ್‌ಡೌನ್‌ನಿಂದಾಗಿ ಖಾಸಗಿ ದೇವಾಲಯಗಳ ಪುರೋಹಿತರು ಕೂಡ ಸಾಕಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ತುತ್ತು ಅನ್ನಕ್ಕೂ ಪರದಾಡುತ್ತಿದ್ದಾರೆ. ಹೊರಗಿನ ಧಾರ್ಮಿಕ ಕಾರ್ಯಕ್ರಮಗಳು ರದ್ದಾಗಿದ್ದರಿಂದ ಔಷಧಿ ಕೊಳ್ಳಲು ಕೂಡ ಪುಡಿಗಾಸು ಇಲ್ಲದಂತಾಗಿದೆ. ಕೂಡಲೇ ಸರ್ಕಾರ, ಸಂಘ-ಸಂಸ್ಥೆಗಳು ಖಾಸಗಿ ಪುರೋಹಿತರ ನೆರವಿಗೆ ಧಾವಿಸಬೇಕು ಎಂದು ಅವರು ಮನವಿ ಮಾಡಿದರು.