Karnataka Legislative Council : ಸಭಾಪತಿ ಚುನಾವಣೆ ಹಠಾತ್‌ ಮುಂದೂಡಿಕೆ

  • ಸಭಾಪತಿ ಚುನಾವಣೆ ಹಠಾತ್‌ ಮುಂದೂಡಿಕೆ
  •  ಹೊರಟ್ಟಿಆಯ್ಕೆಗೆ ಬಿಜೆಪಿಯಲ್ಲಿ ವಿರೋಧ
  •  ಸೆ.21ಕ್ಕೆ ನಡೆಯಬೇಕಿದ್ದ ಎಲೆಕ್ಷನ್‌ಗೆ ಬ್ರೇಕ್‌
  • ಸಭಾಪತಿ ಆಯ್ಕೆಗೆ ಚುನಾವಣೆ ನಡೆಸಲು ನಿರ್ಧರಿಸಿದ್ದ ಸಚಿವ ಸಂಪುಟ
  •  ಹೊರಟ್ಟಿ ಬೇಡ ಎಂದು ಸಿಎಂ, ಕಟೀಲ್‌ಗೆ ಕಟೀಲ್‌ಗೆ ಕೆಲವರ ಮನವಿ
Sudden postponement of speaker's election rav

ಬೆಂಗಳೂರು (ಸೆ.16) : ವಿಧಾನಪರಿಷತ್ತಿನ ನೂತನ ಸಭಾಪತಿ ಆಯ್ಕೆ ಸಂಬಂಧ ಚುನಾವಣೆ ನಡೆಸುವ ವಿಷಯ ಅನಿಶ್ಚಿತತೆಗೆ ಸಿಲುಕಿದ್ದು, ಮುಂದಿನ ಅಧಿವೇಶನದವರೆಗೂ ಯಥಾಸ್ಥಿತಿಯನ್ನೇ ಮುಂದುವರೆಸಿಕೊಂಡು ಹೋಗುವ ಸಾಧ್ಯತೆ ಹೆಚ್ಚಿದೆ. ಜೆಡಿಎಸ್‌ ತೊರೆದು ಬಂದು ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿರುವ ಹಿಂದಿನ ಸಭಾಪತಿ ಬಸವರಾಜ ಹೊರಟ್ಟಿಅವರನ್ನೇ ಮತ್ತೊಂದು ಅವಧಿಗೆ ಸಭಾಪತಿಯನ್ನಾಗಿ ಮಾಡಬೇಕು ಎಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಪಕ್ಷದ ನಾಯಕರ ನಿಲವಿಗೆ ಪರಿಷತ್ತಿನ ಹಲವು ಹಿರಿಯ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

 

 

21ಕ್ಕೆ ಸಭಾಪತಿ ಚುನಾವಣೆ: ಹೊರಟ್ಟಿಗೆ ಮತ್ತೆ ಅವಕಾಶ?

ಹೀಗಾಗಿ, ಇದೇ ತಿಂಗಳ 21ರಂದು ಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಸುವ ಸಂಬಂಧ ರಾಜ್ಯಪಾಲರಿಗೆ ಕಳುಹಿಸಲು ಮುಂದಾಗಿದ್ದ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ತಡೆ ಹಿಡಿದಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಬುಧವಾರ ಸಂಜೆ ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿ ಪರಿಷತ್ತಿನ ಸಭಾಪತಿ ಚುನಾವಣೆಗೆ ಸಂಬಂಧಿಸಿದಂತೆ 21ರ ದಿನಾಂಕ ನಿಗದಿಪಡಿಸಿ ರಾಜ್ಯಪಾಲರಿಗೆ ಪ್ರಸ್ತಾವನೆ ಕಳುಹಿಸಲು ನಿರ್ಣಯ ಕೈಗೊಳ್ಳಲಾಗಿತ್ತು. ಆ ಚುನಾವಣೆಗೆ ಬಸವರಾಜ ಹೊರಟ್ಟಿಅವರನ್ನೇ ಅಭ್ಯರ್ಥಿಯನ್ನಾಗಿಸಲಾಗುತ್ತದೆ ಎಂಬ ಸುದ್ದಿ ದಟ್ಟವಾಗುತ್ತಿದ್ದಂತೆಯೇ ಪರಿಷತ್ತಿನ ಬಿಜೆಪಿಯ ಹಲವು ಸದಸ್ಯರು ಮುಖ್ಯಮಂತ್ರಿ ಬೊಮ್ಮಾಯಿ ಹಾಗೂ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಅವರನ್ನು ಸಂಪರ್ಕಿಸಿ ವಿರೋಧ ಹೊರಹಾಕಿದ್ದಾರೆ. ಇದರಿಂದ ವಿಚಲಿತರಾದ ಮುಖ್ಯಮಂತ್ರಿಗಳು ಅಂತಿಮವಾಗಿ ರಾಜ್ಯಪಾಲರಿಗೆ ಪ್ರಸ್ತಾವನೆ ಕಳುಹಿಸುವ ನಿರ್ಧಾರದಿಂದ ಹಿಂದೆ ಸರಿದರು ಎಂದು ತಿಳಿದು ಬಂದಿದೆ.

ಕಳೆದ ಪರಿಷತ್‌ ಚುನಾವಣೆ ವೇಳೆ ಜೆಡಿಎಸ್‌ ತೊರೆದು ಬರುವಾಗ ಮತ್ತೆ ಸಭಾಪತಿ ಸ್ಥಾನ ನೀಡುವ ಭರವಸೆಯನ್ನು ಹೊರಟ್ಟಿಅವರಿಗೆ ಹಿರಿಯ ನಾಯಕರು ನೀಡಿದ್ದರು. ಆ ಭರವಸೆ ಬಳಿಕವೇ ಅವರು ಬಿಜೆಪಿಗೆ ವಲಸೆ ಬರಲು ಒಪ್ಪಿಕೊಂಡಿದ್ದರು. ಆದರೆ, ಸುದೀರ್ಘ ಕಾಲದ ಬಳಿಕ ಈಗ ಅಧಿವೇಶನ ಆರಂಭವಾದರೂ ಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಸದೆ ಮುಂದೂಡುವ ಚಿಂತನೆಗೆ ಸ್ವತಃ ಹೊರಟ್ಟಿಅವರೂ ತೀವ್ರ ಬೇಸರಗೊಂಡಿದ್ದಾರೆ ಎಂದು ಅವರ ಆಪ್ತರು ಮಾಹಿತಿ ನೀಡಿದ್ದಾರೆ.

ಪರಿಷತ್‌ ಚುನಾವಣೆಯಲ್ಲಿ ಸಿದ್ದು ಬಣ್ಣ ಬಯಲು: ದೇವೇಗೌಡ

ಪರಿಷತ್ತಿನ ಹಿರಿಯ ಸದಸ್ಯರಾದ ಆಯನೂರು ಮಂಜುನಾಥ್‌, ಶಶಿಲ್‌ ನಮೋಶಿ, ಹಾಲಿ ಹಂಗಾಮಿ ಸಭಾಪತಿ ರಘುನಾಥ್‌ ಮಲ್ಕಾಪುರೆ ಸೇರಿದಂತೆ ಹಲವರು ಹೊರಟ್ಟಿಅವರನ್ನು ಸಭಾಪತಿ ಸ್ಥಾನಕ್ಕೆ ಪರಿಗಣಿಸುವ ಬಗ್ಗೆ ಪಕ್ಷದ ನಾಯಕರ ಬಳಿ ವಿರೋಧ ವ್ಯಕ್ತಪಡಿಸಿದ್ದಾರೆ. ಹೊರಟ್ಟಿಅವರಿಗೆ ಈಗಾಗಲೇ 75 ವರ್ಷದ ವಯೋಮಿತಿ ದಾಟಿದೆ. ಈಗ ಪ್ರಮುಖ ಜವಾಬ್ದಾರಿ ನೀಡುವುದು ಸರಿಯಲ್ಲ. ಮೇಲಾಗಿ ಅವರನ್ನು ಈಗ ಸಭಾಪತಿಯನ್ನಾಗಿ ಮಾಡಿದರೆ ಮುಂದಿನ ಹಲವು ವರ್ಷಗಳ ಕಾಲ ಆ ಸ್ಥಾನದಿಂದ ಕೆಳಗಿಳಿಸುವುದು ಕಷ್ಟವಾಗುತ್ತದೆ. ಹೀಗಾಗಿ, ಪಕ್ಷ ಮೂಲದವರನ್ನೇ ಮಾಡಿ ಎಂಬ ಬೇಡಿಕೆಯನ್ನು ಇಡಲಾಗಿದೆ ಎಂದು ಮೂಲಗಳು ತಿಳಿಸಿವೆ.

Latest Videos
Follow Us:
Download App:
  • android
  • ios