ನವದೆಹಲಿ(ಫೆ.09): ವಿಧಾನ ಪರಿಷತ್‌ ಸಭಾಪತಿ ಚುನಾವಣೆ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಕ್ಸ್‌ಪೋಸ್‌ ಆಗುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟಿರುವ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಸಿದ್ದರಾಮಯ್ಯ ಅವರು ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದು ಹಾಸ್ಯಾಸ್ಪದ ಎಂದು ಅಭಿಪ್ರಾಯಪಟ್ಟಿದ್ದಾರೆ.

ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡ ಸಮಯ ಸಾಧಕ, ಸೆಕ್ಯೂಲರ್‌ ಲೀಡರ್‌ ಅಲ್ಲ ಅಂತೆಲ್ಲ ಸಿದ್ದರಾಮಯ್ಯ ಅರೋಪ ಮಾಡಿದ್ದರು. ಈಗ ಸಿದ್ದರಾಮಯ್ಯ ಅವರೇ ಎಕ್ಸ್‌ಪೋಸ್‌ ಆಗ್ತಿದ್ದಾರೆ. ಅವರು ಮುಸ್ಲಿಂ ಅಭ್ಯರ್ಥಿ ಹಾಕಿಸಿದ್ದಾರೆ. ಇದು ಹಾಸ್ಯಾಸ್ಪದ ಎಂದರು.

ಜೆಡಿಎಸ್‌ನಿಂದ ದೂರ ಉಳಿದ ದೇವೇಗೌಡ ಉಚ್ಛಾಟನೆ ಸುಳಿವು ಕೊಟ್ಟ ಎಚ್‌ಡಿಕೆ

ಕಾಂಗ್ರೆಸ್‌ ಜೊತೆ ಮೈತ್ರಿಯಿದ್ದಾಗ ಅವರೇ ಸ್ಪೀಕರ್‌ ಇದ್ದರು. ಸಾಕಷ್ಟು ಪ್ರಯತ್ನ ಮಾಡಿದ್ದರೂ ನಮಗೆ ಸಿಕ್ಕಿರಲಿಲ್ಲ. ಇದೀಗ ಸತತ ಏಳು ಬಾರಿ ಗೆಲುವು ಸಾಧಿಸಿರುವ ಬಸವರಾಜ್‌ ಹೊರಟ್ಟಿ ಸ್ಪರ್ಧೆ ಮಾಡಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸೂಚನೆ ಅನ್ವಯ ಉಪಸಭಾಪತಿ ಸ್ಥಾನವನ್ನು ಬಿಜೆಪಿಯವರು ಪಡೆದುಕೊಂಡಿದ್ದು, ಸಭಾಪತಿ ಸ್ಥಾನಕ್ಕೆ ನಮಗೆ ಅವಕಾಶ ಕೊಟ್ಟಿದ್ದಾರೆ ಎಂದರು.

ಉತ್ತರ ಕರ್ನಾಟಕ ಪ್ರವಾಸ: 

ಇದೇ ವೇಳೆ 2023ರ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿರಿಸಿ ಪಕ್ಷವನ್ನು ಬಲಪಡಿಸುವ ಸಲುವಾಗಿ ಉತ್ತರ ಕರ್ನಾಟಕ ಪ್ರವಾಸ ಮಾಡುವುದಾಗಿ ದೇವೇಗೌಡರು ತಿಳಿಸಿದ್ದಾರೆ. ನನ್ನ ಕೊನೆಯ ಘಟ್ಟದಲ್ಲಿ ಚುನಾವಣೆ ನಡೆಯಲಿದೆ. ನಮಗೆ ಕೊನೆಯ ಬಾರಿಗೆ ಅವಕಾಶ ಕೊಡುತ್ತಾರೆ ಎಂಬ ನಂಬಿಕೆಯಿದೆ ಎಂದರು.