ಬೆಂಗಳೂರು :  ಶಿರಾಡಿಘಾಟ್‌ನಿಂದ ಮಂಗಳೂರುವರೆಗೆ 23 ಕಿ.ಮೀ. ಉದ್ದದ ಸುರಂಗ ಮಾರ್ಗ ರಸ್ತೆ ನಿರ್ಮಿಸುವ ಯೋಜನೆಯ ಸಮೀಕ್ಷೆ ಪೂರ್ಣಗೊಂಡಿದ್ದು, ಈ ಯೋಜನೆ ಜಾರಿಗೆ ನಾಲ್ಕೈದು ಸಾವಿರ ಕೋಟಿ ರು. ಬೇಕಾಗಿರುವುದರಿಂದ ಕೇಂದ್ರದ ನೆರವಿಗೆ ಪ್ರಸ್ತಾವನೆ ಕಳಿಸಲಾಗಿದೆ ಎಂದು ಲೋಕೋಪಯೋಗಿ ಸಚಿವ ಎಚ್‌.ಡಿ. ರೇವಣ್ಣ ತಿಳಿಸಿದರು.

ಗುರುವಾರ ವಿಧಾನಸೌಧ ಮುಂಭಾಗ ನಡೆದ ಕಾರ್ಯಕ್ರಮದಲ್ಲಿ ಇಲಾಖೆಯ ‘ಯೋಜನೆ ಮತ್ತು ರಸ್ತೆ ಆಸ್ತಿ ನಿರ್ವಹಣೆ ಕೇಂದ್ರ(ಪಿಆರ್‌ಎಎಂಸಿ) ಕಾರ್ಯಾಚರಣೆ ಹಾಗೂ ತಂತ್ರಾಂಶ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಶಿರಾಡಿಘಾಟ್‌, ಚಾರ್ಮಡಿ ಘಾಟ್‌ ಮತ್ತು ಆಗುಂಬೆ ಮೂಲಕ ಮಂಗಳೂರು ತಲುಪುವ ರಸ್ತೆಗಳಲ್ಲಿ ಅತಿಭಾರದ ವಾಹನಗಳು ಸಂಚರಿಸುವುದು ಕಷ್ಟದಾಯಕವಾಗಿದೆ. ಹೀಗಾಗಿ ಈ ರಸ್ತೆಗಳನ್ನು ಅತ್ಯುತ್ತಮ ಗುಣಮಟ್ಟದಲ್ಲಿ ನಿರ್ಮಿಸಬೇಕಾಗಿದೆ ಎಂದರು.

ಲೋಕೋಪಯೋಗಿ ಇಲಾಖೆ ರಾಜ್ಯದ ವಿವಿಧ ಯೋಜನೆಯಡಿ ಹಲವಾರು ರಸ್ತೆ ನಿರ್ಮಾಣ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದೆ. ಇದಕ್ಕಾಗಿ ಸಾವಿರಾರು ಕೋಟಿ ರು. ವೆಚ್ಚ ಮಾಡಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ರಾಜ್ಯ ಹೆದ್ದಾರಿ, ಪ್ರಮುಖ ಜಿಲ್ಲಾ ರಸ್ತೆ ಯೋಜನೆಗಳ ಕಾಮಗಾರಿ ನಡೆಯುತ್ತಿದೆ.ಕೆ-ಶಿಫ್‌ ಯೋಜನೆಯಡಿ ಕೈಗೆತ್ತಿಕೊಂಡಿರುವ ಎರಡನೇ ಹಂತದ ಕಾಮಗಾರಿ ಮುಗಿಯುವ ಹಂತದಲ್ಲಿದ್ದು, ಶೀಘ್ರವೇ ಮೂರನೇ ಹಂತದ ಯೋಜನೆ ಆರಂಭಿಸಲಾಗುವುದು. ಮೂರನೇ ಹಂತದಲ್ಲಿ 6900 ಕಿ.ಮೀ ರಸ್ತೆಯನ್ನು 8400 ಕೋಟಿ ರು. ವೆಚ್ಚದಲ್ಲಿ ಮೂರು ವರ್ಷದಲ್ಲಿ ಪೂರ್ಣಗೊಳಿಸಲಾಗುವುದು, ಕೆ-ಶಿಪ್‌ ನಾಲ್ಕನೆಯ ಹಂತದಲ್ಲಿ 1500 ಕಿ.ಮೀ. ರಸ್ತೆಯನ್ನು ಆರು ಸಾವಿರ ಕೋಟಿ ರು ವೆಚ್ಚದಲ್ಲಿ ತೆಗೆದುಕೊಳ್ಳಲು ಉದ್ದೇಶಿಸಲಾಗಿದೆ ಎಂದು ಸಚಿವ ರೇವಣ್ಣ ವಿವರಿಸಿದರು.

ಪ್ರಮುಖ ಜಿಲ್ಲಾ ರಸ್ತೆ, ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕಿಸುವ ಉದ್ದೇಶದಿಂದ ಸಮೀಕ್ಷೆ ಕಾರ್ಯ ನಡೆಯುತ್ತಿದ್ದು, ಡಿಸೆಂಬರ್‌-ಮಾಚ್‌ರ್‍ ಒಳಗೆ ಪೂರ್ಣಗೊಳ್ಳಲಿದೆ. ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಯೋಜನೆಗೆ ಸಂಬಂಧಪಟ್ಟಂತೆ ಶೇ.80ರಷ್ಟುಭೂ ಸ್ವಾಧೀನ ಪಡಿಸಿಕೊಂಡು ನೀಡಲಾಗಿದೆ.ಡಿಸೆಂಬರ್‌ ಮೊದಲ ವಾರದಲ್ಲಿ ಈ ಕಾಮಗಾರಿ ಆರಂಭವಾಗಲಿದೆ. ಯೋಜನೆ ಪೂರ್ಣಗೊಳ್ಳಲು 30 ತಿಂಗಳು ಅವಕಾಶವಿದ್ದರೂ, 15 ತಿಂಗಳಲ್ಲಿ ಯೋಜನೆ ಪೂರ್ಣಗೊಳಿಸುವುದಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಭರವಸೆ ನೀಡಿದೆ ಎಂದರು.

ಕಾಮಗಾರಿಯಲ್ಲಿ ರಾಜಿ ಇಲ್ಲ:  ಲೋಕೋಪಯೋಗಿ ಇಲಾಖೆ ಅಡಿಯಲ್ಲಿ ಕೈಗೆತ್ತಿಕೊಳ್ಳುವ ಕಾಮಗಾರಿಗಳ ಗುಣಮಟ್ಟದ ವಿಷಯದಲ್ಲಿ ಯಾವುದೇ ರೀತಿ ರಾಜಿ ಮಾಡಿಕೊಳ್ಳುವುದಿಲ್ಲ, ಈ ನಿಟ್ಟಿನಲ್ಲಿ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಅನುಮಾನ ಕಂಡು ಬಂದರೆ ತಮ್ಮ ಇಲ್ಲವೇ ಇಲಾಖೆ ಮುಖ್ಯಸ್ಥರ ಗಮನಕ್ಕೆ ತರಬೇಕೆಂದು ಎಚ್‌.ಡಿ. ರೇವಣ್ಣ ಹೇಳಿದರು.

ಇಲಾಖೆ ನೂತನವಾಗಿ ಹೊಂದಿರುವ ಅತ್ಯಾಧುನಿಕ ತಂತ್ರಜ್ಞಾನದ ವಾಹನಗಳು ರಸ್ತೆ ಕಾಮಗಾರಿ, ಸೇತುವೆಗಳ ಗುಣಮಟ್ಟ, ಬಾಳಿಕೆ ಬಗ್ಗೆ ನಿಖರವಾದ ಮಾಹಿತಿ ನೀಡಲಿದೆ. ಇಂತಹ ವಾಹನ ಈಶಾನ್ಯ ರಾಜ್ಯ ಬಿಟ್ಟರೆ ಕರ್ನಾಟಕ ಮಾತ್ರ ಹೊಂದಿದೆ ಎಂದರು.

ಕಂದಾಯ ಸಚಿವ ಆರ್‌.ವಿ. ದೇಶಪಾಂಡೆ ಮಾತನಾಡಿ, ಇಲಾಖೆ ನಿರ್ಮಿಸುವ ರಸ್ತೆ ಇತ್ಯಾದಿ ಕಾಮಗಾರಿಗಳ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಯಾವುದೇ ರಸ್ತೆ ನಾಲ್ಕೈದು ವರ್ಷಗಳಾದರೂ ಬಾಳಿಕೆ ಬರಬೇಕು. ಈ ನಿಟ್ಟಿನಲ್ಲಿ ಸಚಿವರು ಗಮನ ಹರಿಸಬೇಕು ಎಂದರು.

ಲೋಕೋಪಯೋಗಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್‌ ಗೋಯಲ್‌, ಇಲಾಖೆ ಕಾರ್ಯದರ್ಶಿ ಡಾ.ಕೆ.ಎಸ್‌. ಕೃಷ್ಣಾರೆಡ್ಡಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಪ್ರಧಾನ ಕಾರ್ಯದರ್ಶಿ ಅತೀಕ್‌ ಮುಂತಾದವರು ಉಪಸ್ಥಿತರಿದ್ದರು.

ಗುಣಮಟ್ಟ ಪರಿಶೀಲನೆಗೆ ಹೊಸ ವ್ಯವಸ್ಥೆ

ಲೋಕೋಪಯೋಗಿ ಇಲಾಖೆಯಿಂದ ನಿರ್ಮಾಣವಾಗುವ ರಸ್ತೆ, ಸೇತುವೆ ಗುಣಮಟ್ಟವನ್ನು ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ತಿಳಿದುಕೊಳ್ಳಲು ರೋಡ್‌ ಮೆಸರ್‌ಮೆಂಟ್‌ ಡಾಟಾ ಅಕ್ವಿಜಿಸಿಷನ್‌ ಸಿಸ್ಟಂ (ಆರ್‌ಒಎಂಡಿಎಎಸ್‌) ಎಂಬ ವಾಹನವನ್ನು ಬಳಸಲಾಗುವುದು, ಈ ವಾಹನ ದಿನಕ್ಕೆ 40 ಕಿ.ಮೀ. ಉದ್ದದ ರಸ್ತೆ ಕಾಮಗಾರಿಯ ಗುಣಮಟ್ಟಪರಿಶೀಲಿಸಲಿದೆ. ಅದೇ ರೀತಿ ಸೇತುವೆಗಳ ಬಾಳಿಕೆ ಇಲ್ಲವೇ ಹಾಳಾಗುವುದನ್ನು ವೈಜ್ಞಾನಿಕವಾಗಿ ಪತ್ತೆ ಹಚ್ಚುವ ವಾಹನವನ್ನು ಹೊಂದಲಾಗಿದೆ. ಇಷ್ಟೇ ಅಲ್ಲ ರಸ್ತೆ ಮತ್ತು ಸೇತುವೆಗಳ ಬಗ್ಗೆ ಪ್ರತಿಯೊಂದು ಮಾಹಿತಿಯನ್ನು ಸಂಗ್ರಹಿಸಿಟ್ಟುಕೊಳ್ಳಲು ಡಾಟಾ ಸೆಂಟರ್‌ ಸ್ಥಾಪಿಸಲಾಗುತ್ತಿದೆ.