ಮೈಸೂರು ಗ್ಯಾಂಗ್ ರೇಪ್: ಕಾಂಗ್ರೆಸ್ ಸತ್ಯಶೋಧ ವರದಿ ಸಲ್ಲಿಕೆ
* ಆರಗ ತಲೆದಂಡ ಸೇರಿ 19 ಶಿಫಾರಸು
* ವಿ.ಎಸ್.ಉಗ್ರಪ್ಪ ನೇತೃತ್ವದ ಸಮಿತಿ
* ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು
ಬೆಂಗಳೂರು(ಸೆ.08): ಮೈಸೂರು ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಯುವತಿಯ ಮುಂದೆ ಪರೇಡ್ ನಡೆಸಿ ಪತ್ತೆ ಹಚ್ಚುವ ಕಾರ್ಯವಾಗಬೇಕು, ನಿಷ್ಪಕ್ಷಪಾತವಾಗಿ ತನಿಖೆ ನಡೆದು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು, ನೈತಿಕ ಹೊಣೆ ಹೊತ್ತು ಗೃಹ ಸಚಿವರು ರಾಜೀನಾಮೆ ನೀಡಬೇಕು ಎಂಬುದು ಸೇರಿದಂತೆ ಕಾಂಗ್ರೆಸ್ ಸತ್ಯಶೋಧನಾ ಸಮಿತಿಯು 19 ಶಿಫಾರಸುಗಳ ವರದಿ ಸಲ್ಲಿಸಿದೆ.
ಮಂಗಳವಾರ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ನೇತೃತ್ವದ ಸಮಿತಿಯು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ವರದಿ ಸಲ್ಲಿಸಿತು. ನೈತಿಕ ಹೊಣೆ ಹೊತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ಜನಾಂದೋಲನ ರೂಪಿಸಲು ವಿಧಾನ ಮಂಡಲದ ಹೊರಗೆ ಮತ್ತು ಒಳಗೆ ವಿರೋಧ ಪಕ್ಷಗಳು ಹೋರಾಟ ರೂಪಿಸಬೇಕು ಎಂದು ಶಿಫಾರಸು ಮಾಡಲಾಗಿದೆ.
ಮೈಸೂರಲ್ಲಿ ಅತ್ಯಾಚಾರ ಯತ್ನ ಆರೋಪ: ಆರೋಪಿ ಅರೆಸ್ಟ್ ಬಳಿಕ ಯೂ ಟರ್ನ್ ಹೊಡೆದ ಯುವತಿ.!
ಸಮರೋಪಾದಿಯಲ್ಲಿ ತನಿಖೆ ನಡೆದು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಸಂತ್ರಸ್ತೆಯ ಹೇಳಿಕೆಯನ್ನು ಪೊಲೀಸರು ತಕ್ಷಣ ಪಡೆದು, ಆರೋಪಿಗಳ ಪರೇಡ್ ಮಾಡಿಸಿ ಗುರುತು ಪತ್ತೆ ಮಾಡಬೇಕು. ಇದಕ್ಕೆ ನಿರಾಕರಿಸಿದರೆ ಸಂತ್ರಸ್ತೆ ವಿರುದ್ಧ ಐಪಿಸಿ ಸೆಕ್ಷನ್ 202ರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕು. ಶೀಘ್ರ ಚಾರ್ಜ್‌ಶೀಟ್ ಸಲ್ಲಿಸಿ 5 ತಿಂಗಳಲ್ಲಿ ನ್ಯಾಯಾಲಯದ ಮುಂದೆ ವಿಚಾರಣೆ ನಡೆಯುವಂತೆ ಮಾಡಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಇಂತಹ ಕೃತ್ಯ ತಡೆಗಟ್ಟಲು ವಿಫಲವಾದರೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೇ ಜವಾಬ್ದಾರರೆಂದು ಕಾನೂನು ರೂಪಿಸಬೇಕು ಎಂಬುದು ಸೇರಿದಂತೆ 19 ಶಿಫಾರಸುಗಳ ವರದಿಯನ್ನು ಸಮಿತಿ ಸಲ್ಲಿಸಿತು.
ಮಾಜಿ ಸಚಿವ ತನ್ವೀರ್ ಸೇಠ್, ಮಾಜಿ ಶಾಸಕಿ ಮಲ್ಲಾಜಮ್ಮ, ಕೆಪಿಸಿಸಿ ವಕ್ತಾರ ಲಕ್ಷ್ಮಣ್, ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪ ಅಮರನಾಥ್, ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.