Asianet Suvarna News Asianet Suvarna News

BMTC ಬಸ್‌ಗೆ ವಿದ್ಯಾರ್ಥಿನಿ ಸಾವು; ಜ್ಞಾನಭಾರತಿಯಲ್ಲಿ ವಾಹನ ವೇಗಕ್ಕೆ ಬ್ರೇಕ್‌

  • ಜ್ಞಾನಭಾರತಿಯಲ್ಲಿ ವಾಹನ ವೇಗಕ್ಕೆ ಬ್ರೇಕ್‌
  • ಅಗತ್ಯವಿರುವೆಡೆ ಇನ್ನಷ್ಟುಹಂಪ್‌, ಬ್ಯಾರಿಕೇಡ್‌, ಸಿಸಿ ಕ್ಯಾಮರಾ, ಭದ್ರತೆ ಹೆಚ್ಚಿಸಲು ನಿರ್ಧಾರ
Student dies  BMTC bus accident   Brakes on vehicle speed in bengaluru university rav
Author
First Published Oct 13, 2022, 12:52 PM IST

 ಬೆಂಗಳೂರು (ಅ.13) : ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ವಾಹನಗಳ ಸಂಚಾರ ವೇಗ ನಿಯಂತ್ರಣಕ್ಕೆ ಗುರುವಾರದಿಂದಲೇ ಟ್ರಾಫಿಕ್‌ ‘ಎಂಪವರ್ಮೆಂಟ್‌’ ಜಾರಿ’! ಅರ್ಥಾತ್‌, ಅಗತ್ಯವಿರುವೆಡೆ ಇನ್ನಷ್ಟುಹಂಪ್‌ಗಳನ್ನು ವೈಜ್ಞಾನಿಕವಾಗಿ ಹಾಕುವುದು, ರಸ್ತೆಯಲ್ಲಿ ಒಂದಷ್ಟುಬ್ಯಾರಿಕೇಡ್‌ಗಳನ್ನು ಅಳವಡಿಸುವುದು, ಎರಡೂ ಕಡೆಯ ಪ್ರವೇಶ ದ್ವಾರದಲ್ಲಿ ಸಿಸಿ ಕ್ಯಾಮರಾಗಳೊಂದಿಗೆ ಪರಿಶೀಲನೆ ಹಾಗೂ ಭದ್ರತಾ ಕ್ರಮಗಳನ್ನು ಅನುಸರಿಸುವುದು.

ಯಮರೂಪಿ ಬಿಎಂಟಿಸಿ, ಸಾವು ಬದುಕಿನ ನಡುವೆ ವಿದ್ಯಾರ್ಥಿನಿ ಹೋರಾಟ!

ಇವು, ಜ್ಞಾನಭಾರತಿ ಕ್ಯಾಂಪಸ್‌ನ ರಸ್ತೆಯಲ್ಲಿ ಸಾರ್ವಜನಿಕ ಹಾಗೂ ಖಾಸಗಿ ವಾಹನಗಳ ಸಂಚಾರ ನಿರ್ಬಂಧದ ವಿಚಾರ ಸರ್ಕಾರದ ಮಟ್ಟದಲ್ಲಿ ಆಗಬೇಕಿರುವುದರಿಂದ ಏಕಮುಖವಾಗಿ ಯಾವುದೇ ತೀರ್ಮಾನ ಕೈಗೊಳ್ಳಲಾಗದ ಬೆಂಗಳೂರು ವಿಶ್ವವಿದ್ಯಾಲಯ, ಕ್ಯಾಂಪಸ್‌ನಲ್ಲಿ ಮತ್ತೆ ಅಪಘಾತ ಪ್ರಕರಣಗಳು ಮರುಕಳಿಸದಂತೆ ಎಚ್ಚರ ವಹಿಸಲು ಮುಂದಾಗಿದೆ.

ಕ್ಯಾಂಪಸ್‌ ರಸ್ತೆಯಲ್ಲಿ ವಿದ್ಯಾರ್ಥಿನಿ ಶಿಲ್ಪಾಶ್ರೀ ಮೇಲೆ ಕಳೆದ ಸೋಮವಾರ ಬಿಎಂಟಿಸಿ ಬಸ್‌ ಹರಿದ ಪ್ರಕರಣದ ಬಳಿಕ ಈ ರಸ್ತೆಯಲ್ಲಿ ಸಾರ್ವಜನಿಕ ವಾಹನ ಸಂಚಾರ ನಿಷೇಧಿಸುವಂತೆ ಆಗ್ರಹಿಸಿ ವಿವಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಬುಧವಾರವೂ ಹೋರಾಟ ಮುಂದುವರೆಸಿದ್ದರು. ಇದರಿಂದ ಎಚ್ಚೆತ್ತ ವಿಶ್ವವಿದ್ಯಾಲಯದ ಕುಲಪತಿ ಡಾಜಯಕರ ಅವರು ಬುಧವಾರ ಸಂಜೆ ವಲಯ ಪೊಲೀಸ್‌ ಅಧಿಕಾರಿಗಳು, ಬಿಬಿಎಂಪಿ ಅಧಿಕಾರಿಗಳು ಹಾಗೂ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ವಿವಿಯ ವಿದ್ಯಾರ್ಥಿ ಸಂಘಟನೆಗಳ ಪ್ರತಿನಿಧಿಗಳು, ಬೋಧ ಕರು, ಬೋಧಕೇತರ ಸಂಘದ ಪ್ರತಿನಿಧಿಗಳ ಸಭೆ ನಡೆಸಿ ಎಲ್ಲರ ಅಹವಾಲುಗಳು, ಸಲಹೆಗಳನ್ನು ಪಡೆದ ಬಳಿಕ ಕೆಲವೊಂದು ತಾತ್ಕಾಲಿಕ ಪರಿಹಾರ ಕ್ರಮಗಳನ್ನು ಕೈಗೊಂಡಿದ್ದಾರೆ.

ಸಭೆ ಬಳಿಕ ಈ ಕುರಿತು ಮಾಹಿತಿ ನೀಡಿದ ಕುಲಪತಿ, ಕ್ಯಾಂಪಸ್‌ ರಸ್ತೆಯಲ್ಲಿ ಸಾರ್ವಜನಿಕ ಹಾಗೂ ಖಾಸಗಿ ವಾಹನ ಸಂಚಾರ ನಿಷೇಧಿಸಬೇಕೆಂಬುದು ವಿದ್ಯಾರ್ಥಿಗಳ ಬೇಡಿಕೆಯಾಗಿದೆ. ಆದರೆ, ಇದು ವಿವಿ ಮಟ್ಟದಲ್ಲಿ ಕೈಗೊಳ್ಳುವ ನಿರ್ಧಾರವಲ್ಲ. ಸರ್ಕಾರದ ಮಟ್ಟದಲ್ಲಿ ಆಗಬೇಕು. ಹಾಗಾಗಿ ಪೊಲೀಸ್‌, ಬಿಬಿಎಂಪಿ, ಬಿಎಂಟಿಸಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮತ್ತೆ ಅಪಘಾತ ಪ್ರಕರಣಗಳು ನಡೆಯದಂತೆ ಒಂದಷ್ಟುಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಇದಕ್ಕಾಗಿ ಗುರುವಾರದಿಂದಲೇ ಮೂರೂ ಇಲಾಖೆಗಳ ಸಹಕಾರದೊಂದಿಗೆ ಕ್ಯಾಂಪಸ್‌ನಲ್ಲಿ ಟ್ರಾಫಿಕ್‌ ಎಂಪವರ್ಮೆಂಟ್‌ ಜಾರಿಗೊಳಿಸಲಾಗುತ್ತದೆ. ಈ ರಸ್ತೆಯಲ್ಲಿ ಸಂಚರಿಸುವ ವಾಹನಗಳ ವೇಗ ನಿಯಂತ್ರಿಸಲು ಪೂರಕವಾಗಿ ಅಗತ್ಯವಿರುವೆಡೆ ಬಿಬಿಎಂಪಿಯಿಂದ ಇನ್ನಷ್ಟುಹಂಪ್‌ಗಳನ್ನು ಹಾಕಲಾಗುತ್ತದೆ. ಪೊಲೀಸರು ರಸ್ತೆಯ ಅಲ್ಲಲ್ಲಿ ವೇಗ ನಿಯಂತ್ರಣಕ್ಕೆ ಬ್ಯಾರಿಕೇಡ್‌ಗಳನ್ನು ಅಳವಡಿಸಲಿದ್ದಾರೆ. ಪ್ರವೇಶ ದ್ವಾರಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿ ಸುರಕ್ಷತೆ ದೃಷ್ಟಿಯಿಂದ ಹೆಚ್ಚಿ ನಿಗಾವಹಿಸಲು ಕ್ರಮ ವಹಿಸಲಾಗುವುದು. ವಿವಿಯ ಆವರಣದ ಆಯಕಟ್ಟಿನ ಜಾಗಗಳಲ್ಲೂ ಹೆಚ್ಚಿನ ಸಿಸಿ ಕ್ಯಾಮರಾ ಅಳವಡಿಸಲಾಗುವುದು ಎಂದರು.

ಗುರುವಾರದಿಂದಲೇ ಬೆಂಗಳೂರು ವಿವಿ ಕ್ಯಾಂಪಸ್‌ನಲ್ಲಿ ಟ್ರಾಫಿಕ್‌ ಎಂಪವರ್ಮೆಂಟ್‌ ಜಾರಿ ಆಗುತ್ತದೆ. ಪ್ರವೇಶ ದ್ವಾರಗಳಲ್ಲಿ ಭದ್ರತೆ ಹೆಚ್ಚಿಸಿ ಹೆಲ್ಮೆಟ್‌, ತ್ರಿಬಲ್‌ ರೈಡಿಂಗ್‌, ಡ್ರಂಕ್‌ ಆ್ಯಂಡ್‌ ಡ್ರೈವ್‌ ತಪಾಸಣೆ ದಿನದ 24 ಗಂಟೆಯೂ ನಡೆಸಲಾಗುತ್ತೆ. ಸಾರ್ವಜನಿಕರು ಸೇರಿದಂತೆ ವಿದ್ಯಾರ್ಥಿಗಳಿಗೂ ಈ ನಿಯಮ ಅನ್ವಯವಾಗಲಿದೆ.

- ಲಕ್ಷ್ಮಣ್‌ ನಿಂಬರಗಿ, ಪಶ್ಚಿಮ ವಿಭಾಗದ ಡಿಸಿಪಿ

ಸ್ಥಳೀಯರ ಆಕ್ರೋಶ:

ಕ್ಯಾಂಪಸ್‌ ವ್ಯಾಪ್ತಿಯ ರಸ್ತೆಗಳಲ್ಲಿ ಸಾರ್ವಜನಿಕ ವಾಹನ ಸಂಚಾರ ನಿಷೇಧಕ್ಕೆ ಸಭೆಯಲ್ಲಿ ನಿರ್ಧಾರ ಮಾಡಲಾಗುತ್ತದೆ ಎಂಬ ಸುದ್ದಿ ಹಬ್ಬುತ್ತಿದ್ದಂತೆ ಸುತ್ತಮುತ್ತಲ ಪ್ರದೇಶದ ಕೆಲ ಸ್ಥಳೀಯರು ಸಭೆ ನಡೆಯುತ್ತಿದ್ದ ಜಾಗಕ್ಕೆ ಆಗಮಿಸಿ ವಿರೋಧ ವ್ಯಕ್ತಪಡಿಸಿದ ಘಟನೆಯೂ ನಡೆದಿದೆ. ಯಾವುದೇ ಕಾರಣಕ್ಕೂ ಸಾರ್ವಜನಿಕ ವಾಹನಗಳಿಗೆ ನಿರ್ಬಂಧ ಹೇರಬಾರದು. ಹೇರುವುದಾದರೆ ಸರ್ಕಾರ ಪರ್ಯಾಯ ಮಾರ್ಗ ಕಲ್ಪಿಸಬೇಕು. ಇಲ್ಲದಿದ್ದರೆ ಕ್ಯಾಂಪಸ್‌ಗೆ ಹೊಂದಿಕೊಂಡಿರುವ ಪ್ರದೇಶಗಳ ಜನರ ಸಂಚಾರಕ್ಕೆ ತೀವ್ರ ಸಮಸ್ಯೆಯಾಗಲಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಭಾರೀ ವಾಹನಗಳಿಗೆ ಬೇಕಿದ್ದರೆ ನಿಷೇಧ ಹೇರಿ. ಈ ಭಾಗದ ಜನ ನಿತ್ಯ ತಮ್ಮ ಮನೆಗಳಿಂದ ಹೊರಗೆ ಹೋಗಲು ಬೈಕ್‌, ಕಾರು ಬಳಸುತ್ತಾರೆ. ಅವುಗಳ ನಿಷೇಧ ಮಾಡಿದರೆ ಬೇರೆ ಮಾರ್ಗ ಇಲ್ಲ. ಹತ್ತಾರು ಕಿ.ಮೀ ಸುತ್ತಿ ಬರಬೇಕಾಗುತ್ತದೆ ಎಂದು ವಸ್ತು ಸ್ಥಿತಿ ತಿಳಿಸಿದರು ಎಂದು ತಿಳಿದು ಬಂದಿದೆ.

Bangalore University: ಜ್ಞಾನಭಾರತಿ ಜಾಗ ರಕ್ಷಣೆಗೆ ವಿವಿ ನಿರ್ಧಾರ!

ಪ್ರತಿಭಟನೆ ಕೈಬಿಟ್ಟವಿದ್ಯಾರ್ಥಿಗಳು

ಕ್ಯಾಂಪಸ್‌ ರಸ್ತೆಯಲ್ಲಿ ಸಾರ್ವಜನಿಕ ವಾಹನ ಸಂಚಾರ ನಿಬಂರ್‍ಧಕ್ಕೆ ಆಗ್ರಮಿಸಿ ಮೂರು ದಿನಗಳಿಂದ ಪ್ರತಿಭಟನೆ ನಡೆಸಿದ್ದ ಬೆಂಗಳೂರು ವಿವಿ ವಿದ್ಯಾರ್ಥಿಗಳು ತಾತ್ಕಾಲಿಕವಾಗಿ ಪ್ರತಿಭಟನೆಯಿಂದ ಹಿಂದೆ ಸರಿದಿರುವುದಾಗಿ ತಿಳಿಸಿದ್ದಾರೆ.

ಬುಧವಾರ ಕೂಡ ಅಪಘಾತದಿಂದ ಸಾವು ಬದುಕಿನ ನಡುವೆ ಹೋರಾಡುತ್ತಿರುವ ವಿದ್ಯಾರ್ಥಿನಿ ಶಿಲ್ಪಾ ಶ್ರೀ ಭಾವಚಿತ್ರ ಹಿಡಿದು ರಸ್ತೆಯ ಒಂದು ಬದಿಯಲ್ಲಿ ಪ್ರತಿಭಟನೆ ನಡೆಸಿದರು. ಶಿಲ್ಪಾಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ದೊರೆಯಬೇಕು. ಮತ್ತೆ ಇಂತಹ ಘಟನೆಗಳು ಆಗದಂತೆ ಸರ್ಕಾರ ಕ್ರಮ ವಹಿಸಬೇಕೆಂದು ಆಗ್ರಹಿಸಿದರು. ಬಳಿಕ ಕುಲಪತಿ ಸಭೆಯಲ್ಲಿ ಪಾಲ್ಗೊಂಡರು. ವಿವಿ ಕುಲಪತಿಗಳ ನೇತೃತ್ವದ ಸಭೆಯಲ್ಲಿ ಒಂದಷ್ಟುಪರಿಹಾರ ಸೂತ್ರಗಳನ್ನು ರೂಪಿಸಲಾಗಿದೆ. ಇದು ಎಷ್ಟರ ಮಟ್ಟಿಗೆ ಸಾಕಾರಗೊಳ್ಳಲಿದೆ ಎಂಬುದನ್ನು ನೋಡುತ್ತೇವೆ. ಸಂಪೂರ್ಣ ವಾಹನ ಸಂಚಾರ ನಿಬಂರ್‍ಧಿಸಬೇಕೆಂಬುದು ನಮ್ಮ ಬೇಡಿಕೆ ಕೈಬಿಟ್ಟಿಲ್ಲ. ಸರ್ಕಾರ ಈ ಬಗ್ಗೆ ಗಮನ ಹರಿಸಿ ಬೇಡಿಕೆ ಈಡೇರಿಗೆ ಕ್ರಮ ವಹಿಸಬೇಕು. ಅಲ್ಲಿಯವರೆಗೆ ಪ್ರತಿಭಟನೆ ಕೈಬಿಟ್ಟಿರುವುದಾಗಿ ಹೇಳಿದ್ದಾರೆ.

ರಾತ್ರಿ ಸಂಚಾರ ನಿರ್ಬಂಧ

ಬೆಂಗಳೂರು ವಿಶ್ವವಿದ್ಯಾಲಯದ ರಸ್ತೆಯಲ್ಲಿ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ಸಾರ್ವಜನಿಕ ವಾಹನಗಳ ಸಂಚಾರಕ್ಕೆ ನಿಬಂರ್‍ಧ ವಿಧಿಸಲು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ಸಭೆಯಲ್ಲಿ ರಾತ್ರಿ 8ರಿಂದಲೇ ಸಂಚಾರ ನಿರ್ಬಂಧಿಸಬೇಕೆಂಬ ಬೇಡಿಕೆಯನ್ನು ವಿವಿಯ ಅಧಿಕಾರಿಗಳು, ವಿದ್ಯಾರ್ಥಿಗಳು ಮಂಡಿಸಿದರು. ಆದರೆ, ಅಷ್ಟುಬೇಗ ಸಾಧ್ಯವಿಲ್ಲ ಎಂಬ ಕಾರಣಕ್ಕೆ ರಾತ್ರಿ 10 ಗಂಟೆ ನಂತರ ನಿರ್ಬಂಧಿಸಲು ತೀರ್ಮಾನಿಸಲಾಗಿದೆ. ವಿವಿಗೆ ಸಂಬಂಧಿಸಿದ ವಾಹನಗಳನ್ನು ಹೊರತುಪಡಿಸಿ ಉಳಿದ ಯಾವುದೇ ವಾಹನಗಳ ಸಂಚಾರಕ್ಕೆ ಈ ಅವಧಿಯಲ್ಲಿ ಅವಕಾಶ ಇರುವುದಿಲ್ಲ ಎಂದು ತಿಳಿಸಿದ್ದಾರೆ.

Follow Us:
Download App:
  • android
  • ios