Bangalore University: ಜ್ಞಾನಭಾರತಿ ಜಾಗ ರಕ್ಷಣೆಗೆ ವಿವಿ ನಿರ್ಧಾರ!

ಜ್ಞಾನಭಾರತಿ ಕ್ಯಾಂಪಸ್‌ ಜಾಗವನ್ನು ಅಧಿಕಾರಕ್ಕೆ ಬಂದ ಸರ್ಕಾರಗಳೆಲ್ಲಾ ಬೇರೆ ಬೇರೆ ಸಂಸ್ಥೆಗಳಿಗೆ ಒಂದೊಂದಷ್ಟುಹಂಚುತ್ತಾ ಬರುತ್ತಿರುವುದಕ್ಕೆ ವಿವಿಧ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಬೆಂಗಳೂರು ವಿಶ್ವವಿದ್ಯಾಲಯ ಇದೀಗ ಕ್ಯಾಂಪಸ್‌ ಜಾಗ ಸಂರಕ್ಷಿಸಿಕೊಳ್ಳಲು ದಿಟ್ಟಹೆಜ್ಜೆ ಇಟ್ಟಿದೆ. 

bangalore universitys decision to protect jnanabharathi campus space gvd

ಲಿಂಗರಾಜು ಕೋರಾ

ಬೆಂಗಳೂರು (ಅ.07): ಜ್ಞಾನಭಾರತಿ ಕ್ಯಾಂಪಸ್‌ ಜಾಗವನ್ನು ಅಧಿಕಾರಕ್ಕೆ ಬಂದ ಸರ್ಕಾರಗಳೆಲ್ಲಾ ಬೇರೆ ಬೇರೆ ಸಂಸ್ಥೆಗಳಿಗೆ ಒಂದೊಂದಷ್ಟು ಹಂಚುತ್ತಾ ಬರುತ್ತಿರುವುದಕ್ಕೆ ವಿವಿಧ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಬೆಂಗಳೂರು ವಿಶ್ವವಿದ್ಯಾಲಯ ಇದೀಗ ಕ್ಯಾಂಪಸ್‌ ಜಾಗ ಸಂರಕ್ಷಿಸಿಕೊಳ್ಳಲು ದಿಟ್ಟ ಹೆಜ್ಜೆ ಇಟ್ಟಿದೆ. ಜತೆಗೆ ಕೆಲ ಸಂಸ್ಥೆಗಳಿಗೆ ನೀಡಲಾಗಿದ್ದ ಸುಮಾರು 25 ಎಕರೆ ಜಾಗವನ್ನು ವಾಪಸ್‌ ಪಡೆಯಲು ಮುಂದಾಗಿರುವ ವಿವಿಯು, ಈ ಸಂಬಂಧ ಇತ್ತೀಚೆಗೆ ನಡೆದ ಸಿಂಡಿಕೇಟ್‌ ಸಭೆಯಲ್ಲಿ ಮಹತ್ವದ ನಿರ್ಣಯ ಕೈಗೊಂಡಿದೆ.

ಪ್ರಮುಖವಾಗಿ ಗುಲ್ಬರ್ಗಾ ಕೇಂದ್ರ ವಿಶ್ವವಿದ್ಯಾಲಯಕ್ಕೆ ನೀಡಲಾಗಿದ್ದ 10 ಎಕರೆ ಜಾಗದಲ್ಲಿ ಆ ವಿವಿಯವರು ಇದುವರೆಗೆ ಯಾವುದೇ ಕಾರ್ಯ ಚಟುವಟಿಕೆ ಆರಂಭಿಸದ ಕಾರಣ ಆ ಜಾಗವನ್ನು ವಾಪಸ್‌ ಪಡೆಯಲು ಸಿಂಡಿಕೇಟ್‌ ನಿರ್ಧರಿಸಿದೆ. ಜತೆಗೆ ಅಂತರ್‌ ವಿಶ್ವವಿದ್ಯಾಲಯ ಯೋಗ ವಿಜ್ಞಾನ ಕೇಂದ್ರಕ್ಕೆ ನಿಗದಿಪಡಿಸಿದ್ದ 15 ಎಕರೆ ಜಾಗದಲ್ಲಿ ಬಹುತೇಕ ಜೀವ ವೈವಿಧ್ಯ ಪಾರ್ಕ್ ಇರುವುದರಿಂದ ಈ ಪ್ರದೇಶವನ್ನು ವಾಪಸ್‌ ಪಡೆಯುವ ಬಗ್ಗೆ ಪರಿಶೀಲಿಸಿ ವರದಿ ನೀಡಲು ಸಿಂಡಿಕೇಟ್‌ ಸಮಿತಿ ರಚಿಸಲಾಗಿದೆ ಎಂದು ವಿವಿಯ ಉನ್ನತ ಮೂಲಗಳು ಖಚಿತಪಡಿಸಿವೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಹೊಸ ದೇಗುಲಕ್ಕೆ ವಿರೋಧ

‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ವಿವಿಯ ಉನ್ನತ ಅಧಿಕಾರಿಯೊಬ್ಬರು, ಅಂತರ್‌ ವಿಶ್ವವಿದ್ಯಾಲಯ ಯೋಗ ವಿಜ್ಞಾನ ಕೇಂದ್ರಕ್ಕೆ ನೀಡಬೇಕೆಂದು ಗುರುತಿಸಲಾಗಿದ್ದ 15 ಎಕರೆ ಜಾಗದಲ್ಲಿ ಶ್ರೀಗಂಧ, ರಕ್ತಚಂದನ ಸೇರಿದಂತೆ ಭಾರೀ ಬೆಲೆ ಬಾಳುವ ಗಿಡ ಮರಗಳಿವೆ. ಹಿಂದೆ ಈ ಜಾಗವನ್ನು ಬಯೋ ಪಾರ್ಕ್ ಆಗಿ ನಿರ್ಮಿಸಲಾಗಿತ್ತು. ಇಲ್ಲಿ ಕೋತಿ, ನವಿಲು ಸೇರಿದಂತೆ ಹಲವು ಪ್ರಾಣಿ, ಪಕ್ಷಿಗಳೂ ಇವೆ. ಈ ಹಿಂದೆ ಅಳಿವಿನಂಚಿನಲ್ಲಿರುವ ಕಾಡುಪಾಪ ಕೂಡ ಕ್ಯಾಂಪಸ್‌ನಲ್ಲಿ ಪತ್ತೆಯಾಗಿತ್ತು. ಇಂತಹ ಜಾಗವನ್ನು ಯೋಗ ವಿಜ್ಞಾನ ಕೇಂದ್ರ ನೀಡುವ ಬಗ್ಗೆ ಪರಿಸರ ತಜ್ಞರು, ಸಾರ್ವಜನಿಕರು, ವಿವಿಯ ವಿದ್ಯಾರ್ಥಿಗಳು, ಬೋಧಕರ ಸಂಘಟನೆಗಳನ್ನು ಒಳಗೊಂಡ ಬೆಂಗಳೂರು ವಿವಿ ಉಳಿಸಿ ಹೋರಾಟ ಸಮಿತಿಯಿಂದ ಭಾರೀ ವಿರೋಧ ವ್ಯಕ್ತವಾಗಿದೆ. ಅವರೆಲ್ಲಾ ವಿವಿಯ ಕುಲಪತಿ ಡಾ

ಎಸ್‌.ಎಂ.ಜಯಕರ ಅವರಿಗೆ ಈ ಜಾಗ ಸಂರಕ್ಷಣೆಗೆ ಮನವಿ ಮಾಡಿದ್ದಾರೆ. ಹಾಗಾಗಿ ಈ ವಿಷಯವನ್ನು ಸಿಂಡಿಕೇಟ್‌ ಸಭೆಯಲ್ಲಿ ಚರ್ಚಿಸಿ ಈ ಜಾಗ ನೀಡಬೇಕೆ ಅಥವಾ ಬೇಡವೆ ಎಂದು ಪರಿಶೀಲಿಸಿ ವರದಿ ನೀಡಲು ಸಿಂಡಿಕೇಟ್‌ ಸಮಿತಿ ರಚಿಸಲಾಗಿದೆ. ಈ ನಿರ್ಣಯವನ್ನು ಸರ್ಕಾರಕ್ಕೆ ಕಳುಹಿಸಿ ವಿವಿ ಜಾಗ ಸಂರಕ್ಷಣೆಗೆ ಕ್ರಮ ವಹಿಸಲಾಗುವುದು ಎಂದು ಅವರು ಹೇಳಿದ್ದಾರೆ.

297 ಎಕರೆ ವಿವಿ ಜಾಗ ಬೇರೆಯವರಿಗೆ ಹಂಚಿಕೆ: ಬೆಂ.ವಿವಿ ಕ್ಯಾಂಪಸ್‌ನ ಸುಮಾರು 1200 ಎಕರೆಯಷ್ಟುಜಾಗದಲ್ಲಿ ಸಾಯಿ ಸಂಸ್ಥೆಗೆ 81.2 ಎಕರೆ, ಐಸೆಕ್‌-38.2 ಎಕರೆ, ಅಂಬೇಡ್ಕರ್‌ ಸ್ಕೂಲ್‌ ಎಕನಾಮಿಕ್ಸ್‌ ವಿಶ್ವವಿದ್ಯಾಲಯಕ್ಕೆ (ಬೇಸ್‌)-40 ಎಕರೆ, ರಾಷ್ಟ್ರೀಯ ಕಾನೂನು ಶಾಲೆ-24 ಎಕರೆ, ಕಲಾಗ್ರಾಮ-20 ಎಕರೆ, ಆಟೋಮ್ಯಾಟಿಕ್‌ ಎನರ್ಜಿ-15 ಎಕರೆ ಸೇರಿ ಸುಮಾರು 297 ಎಕರೆ ಜಾಗವನ್ನು ಸರ್ಕಾರದ ಸೂಚನೆಯಂತೆ ಬೇರೆ ಬೇರೆ ಸಂಸ್ಥೆಗಳಿಗೆ ನೀಡಲಾಗಿದೆ. ಜೊತೆಗೆ ಯೋಗ ವಿಜ್ಞಾನ ಕೇಂದ್ರ ಸೇರಿ ಬೇರೆ ಬೇರೆ ಸಂಸ್ಥೆಗಳಿಗೆ ಇನ್ನೂ 18 ಎಕರೆ ನೀಡುವ ಪ್ರಸ್ತಾವನೆ ಇತ್ತು. ಇದರ ಜೊತೆಗೆ ಒಂದಷ್ಟುಜಾಗ ಭೂಗಳ್ಳರ ಪಾಲಾಗಿದೆ. ಒತ್ತುವರಿ ತೆರವಿಗೆ ಸರ್ಕಾರವಾಗಲಿ, ವಿವಿಯಾಗಲಿ ಯಾವುದೇ ಕ್ರಮ ಕೈಗೊಂಡಿಲ್ಲ.

Bangalore University: ಅಪರಿಚಿತರಿಂದ ಬೆಂವಿವಿ ಜಾಗ ಕಬ್ಜ ಯತ್ನ

ಈ ರೀತಿ ಕ್ಯಾಂಪಸ್‌ ಜಾಗವನ್ನು ಸರ್ಕಾರ ಬೇರೆ ಬೇರೆ ಸಂಸ್ಥೆಗಳಿಗೆ ನೀಡುತ್ತಾ ಹೋಗುತ್ತಿರುವುದಕ್ಕೆ ಬೆಂ.ವಿವಿ ಉಳಿಸಿ ಹೋರಾಟ ಸಮಿತಿಯಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಸಮಿತಿಯಡಿ ವಿದ್ಯಾರ್ಥಿಗಳು, ಬೋಧಕರು, ಬೋಧಕೇತರ ಸಿಬ್ಬಂದಿ ಕುಲಪತಿ ಅವರನ್ನು ಭೇಟಿ ಮಾಡಿ ಕ್ಯಾಂಪಸ್‌ ಜಾಗ ರಕ್ಷಣೆಗೆ ಆಗ್ರಹಿಸಿದ್ದರು. ಕ್ಯಾಂಪಸ್‌ ಜಾಗದ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಮತ್ತು ಜಾಗವು ಒತ್ತುವರಿಯಾಗದಂತೆ ತಡೆಗೋಡೆ ನಿರ್ಮಿಸುವಂತೆ ಬೆಂ.ವಿವಿ ಉಳಿಸಿ ಹೋರಾಟ ಸಮಿತಿಯು ಒತ್ತಾಯಿಸಿತ್ತು.

Latest Videos
Follow Us:
Download App:
  • android
  • ios