ರಾಜ್ಯದ ಮೊದಲ ಬೂತ್‌ಲೆಸ್ ಟೋಲ್, ನ.17 ರಿಂದ ದೊಡ್ಡಬಳ್ಳಾಪುರ-ಹೊಸಕೋಟೆ ಸೆಕ್ಷನ್‌ನಲ್ಲಿ ಟೋಲ್ ಜಾರಿ!
Bengaluru Satellite Town Ring Road ರಾಜ್ಯದ ಮೊಟ್ಟಮೊದಲ ಬೂತ್‌ಲೆಸ್ ಟೋಲ್ ಕಾರ್ಯಾರಂಭ ಮಾಡಲು ಸಜ್ಜಾಗಿದೆ. ಸ್ಯಾಟಲೈಟ್ ಟೌನ್ ರಿಂಗ್ ರೋಡ್ (ಎಸ್‌ಟಿಆರ್‌ಆರ್) ದೊಡ್ಡಬಳ್ಳಾಪುರ-ಹೊಸಕೋಟೆ ಸೆಕ್ಷನ್ ನವೆಂಬರ್ 17 ರಿಂದ ಕಾರ್ಯಾರಂಭವಾಗಲಿದೆ.
ಬೆಂಗಳೂರು (ನ.11): ಸ್ಯಾಟಲೈಟ್ ಟೌನ್ ರಿಂಗ್ ರೋಡ್ (ಎಸ್‌ಟಿಆರ್‌ಆರ್) ಭಾಗವಾಗಿರುವ ದೊಡ್ಡಬಳ್ಳಾಪುರ-ಹೊಸಕೋಟೆ ಸೆಕ್ಷನ್‌ನ ಬಳಸುತ್ತಿರುವ ವಾಹನಗಳು ನವೆಂಬರ್ 17 ರಿಂದ ಈ ರಸ್ತೆಯ ಬಳಕೆಗಾಗಿ ಟೋಲ್ ಪಾವತಿ ಮಾಡಬೇಕಿದೆ. 288-ಕಿಮೀ ಸ್ಯಾಟಲೈಟ್ ಟೌನ್ ರಿಂಗ್ ರೋಡ್ (ಎಸ್‌ಟಿಆರ್‌ಆರ್) ಅನ್ನು ಬೆಂಗಳೂರನ್ನು ನೆರೆಯ ಪಟ್ಟಣಗಳಾದ ದಾಬಸ್‌ಪೇಟೆ, ದೇವನಹಳ್ಳಿ, ಹೊಸಕೋಟೆ ಮತ್ತು ರಾಮನಗರದೊಂದಿಗೆ ಸಂಪರ್ಕಿಸಲು ನಿರ್ಮಾಣ ಮಾಡಲಾಗುತ್ತದೆ. ಒಮ್ಮೆ ಸಂಪೂರ್ಣವಾಗಿ ಸಿದ್ಧವಾದ ನಂತರ, ದೂರದ ವಾಣಿಜ್ಯ ವಾಹನಗಳು ಬೆಂಗಳೂರನ್ನು ಪ್ರವೇಶಿಸುವ ಅಗತ್ಯವನ್ನು ತಪ್ಪಿಸುತ್ತದೆ. ಸ್ಯಾಟಲೈಟ್ ಟೌನ್‌ಗಳ ನಡುವೆ ಚಲಿಸುವ ಸಂಚಾರವು ನಗರವನ್ನು ಬೈಪಾಸ್ ಮಾಡಲು ಸಾಧ್ಯವಾಗುತ್ತದೆ. 17,000 ಕೋಟಿ ರೂಪಾಯಿಗಳ ಯೋಜನೆಯನ್ನು 10 ಪ್ಯಾಕೇಜ್‌ಗಳಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಅಭಿವೃದ್ಧಿಪಡಿಸುತ್ತಿದೆ. 10 ಪ್ಯಾಕೇಜ್‌ಗಳಲ್ಲಿ ದೊಡ್ಡಬಳ್ಳಾಪುರ ಬೈಪಾಸ್-ಹೊಸಕೋಟೆ ಭಾಗ (34.15 ಕಿ.ಮೀ) ಪೂರ್ಣಗೊಂಡಿದೆ. ಇದು ಗಂಟೆಗೆ 10,000 ಪ್ಯಾಸೆಂಜರ್ ಕಾರ್ ಯುನಿಟ್ (PCU) ನೊಂದಿಗೆ ನಾಲ್ಕು ಲೇನ್‌ಗಳನ್ನು ಹೊಂದಿದೆ.
ಈ ವಿಭಾಗಕ್ಕೆ ಟೋಲ್ ಶುಲ್ಕಗಳನ್ನು ನವೆಂಬರ್ 2 ರಂದು ಗೆಜೆಟ್ ನೋಟಿಫಿಕೇಷನ್‌ನಲ್ಲಿ ತಿಳಿಸಲಾಗಿದೆ. ಎನ್‌ಎಚ್ಎಐ ನವೆಂಬರ್ 9 ರಂದು ಅವುಗಳನ್ನು ಅನುಮೋದಿಸಿದೆ. ಲಘು ಮೋಟಾರು ವಾಹನಗಳಿಗೆ ಒಂದೇ ಟ್ರಿಪ್‌ಗೆ 70 ರೂ. ಮತ್ತು 24 ಗಂಟೆಗಳ ಒಳಗೆ ಒಂದು ಸುತ್ತಿನ ಪ್ರಯಾಣಕ್ಕೆ 105 ರೂಪಾಯಿ. ಬಸ್ ಮತ್ತು ಟ್ರಕ್‌ಗಳು ಕ್ರಮವಾಗಿ 240 ಮತ್ತು 360 ರೂಪಾಯಿ ಪಾವತಿ ಮಾಡಬೇಕಿದೆ. "ಟೋಲ್ ದರಗಳು 2024ರ ಮಾರ್ಚ್ 31 ರವರೆಗೆ ಜಾರಿಯಲ್ಲಿರುತ್ತವೆ ಮತ್ತು ನಲ್ಲೂರು ಟೋಲ್ ಪ್ಲಾಜಾದಲ್ಲಿ (ದೇವನಹಳ್ಳಿ ಬಳಿ) ಇದನ್ನು ಸಂಗ್ರಹಿಸಲಾಗುತ್ತದೆ" ಎಂದು ಎನ್‌ಎಚ್‌ಎಐ ಬೆಂಗಳೂರಿನ ಯೋಜನಾ ನಿರ್ದೇಶಕ ಕೆ.ಬಿ.ಜಯಕುಮಾರ್ ತಿಳಿಸಿದ್ದಾರೆ. ದ್ವಿಚಕ್ರ ವಾಹನಗಳಿಗೆ ಟೋಲ್ ಪಾವತಿಯಿಂದ ವಿನಾಯಿತಿ ನೀಡಲಾಗುತ್ತದೆ. ಈ ಸೆಕ್ಷನ್‌ನಲ್ಲಿ ವೀಲಿಂಗ್ ಮಾಡಿದವರ ಮೇಲೆ ಎನ್‌ಎಚ್‌ಎಐನಿಂದಲೇ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಎಸ್‌ಟಿಆರ್‌ಆರ್ ಕರ್ನಾಟಕದ ಮೊದಲ ಬೂತ್‌ಲೆಸ್ ಟೋಲ್ ಪ್ಲಾಜಾವನ್ನು ಹೊಂದಿರುತ್ತದೆ, ಅಂದರೆ ಯಾವುದೇ ವ್ಯಕ್ತಿಗಳು ಟೋಲ್ ಕೌಂಟರ್‌ಗಳಲ್ಲಿ ಇರೋದಿಲ್ಲ ಎಂದು ಜಯಕುಮಾರ್ ಹೇಳಿದ್ದಾರೆ. "ವಾಹನದ ನಂಬರ್ ಪ್ಲೇಟ್ ಮತ್ತು ತೂಕವನ್ನು ಟೋಲ್ ಪ್ಲಾಜಾದಿಂದ 50 ಮೀಟರ್ ಒಳಗೆ ತಲುಪಿದ ತಕ್ಷಣ ಸ್ಕ್ಯಾನ್ ಮಾಡಲಾಗುತ್ತದೆ. ಫಾಸ್ಟ್ಯಾಗ್ ಮೂಲಕ ಟೋಲ್ ಪಾವತಿಸಿದರೆ ಮತ್ತು ಉಳಿದೆಲ್ಲವೂ ಸರಿಯಾಗಿದ್ದರೆ, ಬೂಮ್ ತಡೆಗೋಡೆ ತೆರೆದು ವಾಹನವನ್ನು ಹೊರಗೆ ಬಿಡಲಾಗುತ್ತದೆ. ಫಾಸ್ಟ್‌ಟ್ಯಾಗ್ ಇಲ್ಲದ ವಾಹನಗಳು ಟೋಲ್ ಅನ್ನು ನಗದು ರೂಪದಲ್ಲಿ ಪಾವತಿಸಲು ಇನ್ನಷ್ಟು ಶ್ರಮ ಪಡಬೇಕಾಗುತ್ತದೆ. ಅನುಮತಿಸುವ ತೂಕದ 105% ಅನ್ನು ಸಾಗಿಸುವವರಿಗೆ 10 ಪಟ್ಟು ದಂಡವನ್ನು ವಿಧಿಸಲಾಗುತ್ತದೆ ಮತ್ತು ಮುಂದುವರಿಯಲು ಅನುಮತಿಸುವ ಮೊದಲು ಹೆಚ್ಚಿನ ಭಾರವನ್ನು ಇಳಿಸುವಂತೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ದರೋಡೆಯಿಂದ ತಪ್ಪಿಸಿಕೊಳ್ಳಬೇಕೇ? ಈ ನಿಯಮ ಪಾಲಿಸಿ: ಸಂಸದ ಪ್ರತಾಪ್‌ಸಿಂಹ
42 ಕಿಮೀ ಉದ್ದದ ದಾಬಸ್‌ಪೇಟೆ-ದೊಡ್ಡಬಳ್ಳಾಪುರ ವಿಭಾಗವು 90% ಪೂರ್ಣಗೊಂಡಿದೆ ಮತ್ತು 2024 ರ ಜನವರಿಯಲ್ಲಿ ಸಿದ್ಧವಾಗಲಿದೆ ಮತ್ತು ಫೆಬ್ರವರಿಯಲ್ಲಿ ಟೋಲ್ ಸಂಗ್ರಹಣೆ ಪ್ರಾರಂಭವಾಗಲಿದೆ. 21 ಕಿ.ಮೀ ಹೊಸಕೋಟೆ-ತಮಿಳುನಾಡು ಗಡಿ ಭಾಗದ ಕಾಮಗಾರಿ ಶೇ.13ರಷ್ಟು ಪೂರ್ಣಗೊಂಡಿದೆ ಎಂದು ಜಯಕುಮಾರ್ ಮಾಹಿತಿ ನೀಡಿದರು. ತಮಿಳುನಾಡು ಗಡಿ-ಓಬಳಾಪುರ ಸ್ಟ್ರೆಚ್ (179.93 ಕಿಮೀ) ನಿರ್ಮಾಣ ಹಂತದಲ್ಲಿದೆ ಅಥವಾ ಬಿಡ್ಡಿಂಗ್ ಹಂತದಲ್ಲಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಜು.1ರಿಂದ ಬೆಂಗಳೂರು-ಮೈಸೂರು ಹೈವೇಯಲ್ಲಿ ಮತ್ತೊಂದು ಟೋಲ್ ಪ್ಲಾಜಾ: ಇಲ್ಲಿದೆ ಟೋಲ್ ದರ ವಿವರ