ಬೆಂಗಳೂರು(ಮಾ.25): ಕೊರೋನಾ ಎರಡನೇ ಅಲೆಯ ಲಕ್ಷಣಗಳು ಸ್ಪಷ್ಟವಾಗುತ್ತಿರುವಾಗಲೇ, ಆರೋಗ್ಯ ಇಲಾಖೆಯು ಕೊರೋನಾ ಮಾರ್ಗಸೂಚಿ ಉಲ್ಲಂಘಿಸುವವರ ವಿರುದ್ಧ ದುಬಾರಿ ದಂಡಾಸ್ತ್ರ ಪ್ರಯೋಗಕ್ಕೆ ಮುಂದಾಗಿದೆ. ಶಾಪಿಂಗ್‌ ಮಾಲ್‌, ತಾರಾ ಹೋಟೆಲ್‌, ಸಾರ್ವಜನಿಕ ಸಮಾರಂಭ ಹಾಗೂ ರಾರ‍ಯಲಿಗಳಲ್ಲಿ ಮಾಸ್ಕ್‌ ಮತ್ತು ಸಾಮಾಜಿಕ ಅಂತರ ನಿಯಮ ಪಾಲನೆಯಾಗದಿದ್ದರೆ ಮಾಲೀಕರು ಅಥವಾ ಆಯೋಜಕರಿಗೆ 10 ಸಾವಿರ ರು.ವರೆಗೆ ದಂಡ ವಿಧಿಸಲು ಆದೇಶಿಸಿದೆ.

"

ಕೊರೋನಾ ನಿಯಮಾವಳಿ ಉಲ್ಲಂಘಿಸುವವರಿಗೆ ಹಾಗೂ ಸಂಬಂಧಪಟ್ಟಸ್ಥಳದ ಮಾಲೀಕರಿಗೆ ದುಬಾರಿ ದಂಡ ವಿಧಿಸುವುದಾಗಿ ಆರೋಗ್ಯ ಇಲಾಖೆಯು 2020ರ ಡಿಸೆಂಬರ್‌ನಲ್ಲಿ ಆದೇಶ ಹೊರಡಿಸಿತ್ತು. ಬಳಿಕ ಕೊರೋನಾ ಸೋಂಕು ಪ್ರಕರಣ ಕಡಿಮೆಯಾಗುತ್ತಿದ್ದಂತೆ ದಂಡ ವಿಧಿಸುವ ಬಗ್ಗೆ ನಿರ್ಲಕ್ಷ್ಯ ವಹಿಸಿತ್ತು. ಇದೀಗ ಬುಧವಾರ ಮತ್ತೆ ಅದೇ ಆದೇಶವನ್ನು ಪುನಃ ಹೊರಡಿಸಿರುವ ಆರೋಗ್ಯ ಇಲಾಖೆ, ಯಾವ್ಯಾವ ಉಲ್ಲಂಘನೆಗೆ ಎಷ್ಟುದಂಡ ಹಾಗೂ ಯಾರು ಸಂಗ್ರಹಿಸಬೇಕು ಎಂದು ತಿಳಿಸಿದೆ.

ಮಾಸ್ಕ್‌ ಧರಿಸದಿದ್ದರೆ 250 ರು. ದಂಡ:

ಬಿಬಿಎಂಪಿ ವ್ಯಾಪ್ತಿ ಹಾಗೂ ನಗರ ಸಭೆ ವ್ಯಾಪ್ತಿಗಳಲ್ಲಿ ಮಾಸ್ಕ್‌ ಧರಿಸದಿದ್ದರೆ 250 ರು. ದಂಡ ಹಾಗೂ ಇತರೆ ಪ್ರದೇಶದಲ್ಲಿ ಮಾಸ್ಕ್‌ ಧರಿಸದಿದ್ದರೆ 100 ರು. ದಂಡ ವಿಧಿಸಬೇಕು. ಬಿಬಿಎಂಪಿ ವ್ಯಾಪ್ತಿಯಲ್ಲಿ ಮಾರ್ಷಲ್‌ಗಳು, ಇತರೆ ನಗರಸಭೆ ವ್ಯಾಪ್ತಿಯಲ್ಲಿ ಹೆಡ್‌ ಕಾನ್ಸ್‌ಟೇಬಲ್‌ಗಿಂತ ಮೇಲಿನ ರಾರ‍ಯಂಕ್‌ನ ಪೊಲೀಸರು, ಆರೋಗ್ಯಾಧಿಕಾರಿಗಳು ದಂಡ ವಿಧಿಸಬಹುದು. ಇನ್ನು ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಹಾಗೂ ಗ್ರಾಮ ಪಂಚಾಯ್ತಿ ಕಾರ್ಯದರ್ಶಿಗಳು ದಂಡ ಸಂಗ್ರಹಿಸಬೇಕು ಎಂದು ಹೇಳಲಾಗಿದೆ.

ಜನ ಸೇರಲು ಮಿತಿ

ಮದುವೆ ಸಮಾರಂಭಕ್ಕೆ ತೆರೆದ ಪ್ರದೇಶದಲ್ಲಿ 500 ಜನ, ಒಳಾಂಗಣದಲ್ಲಿ 200 ಜನಕ್ಕಿಂತ ಹೆಚ್ಚು ಮಂದಿ ಸೇರಬಾರದು. ಹುಟ್ಟಿದ ಹಬ್ಬದ ಆಚರಣೆಗೆ ತೆರೆದ ಸ್ಥಳದಲ್ಲಿ 100 ಜನ, ಒಳಾಂಗಣದಲ್ಲಿ 50 ಜನ, ಅಂತ್ಯಕ್ರಿಯೆಗೆ 50, ಇತರೆ ಕಾರ್ಯಕ್ರಮಗಳಿಗೆ 100 ಜನ, ಧಾರ್ಮಿಕ ಆಚರಣೆಗೆ ತೆರೆದ ಪ್ರದೇಶದಲ್ಲಿ 500 ಜನರ ಮಿತಿ ಸೂಚಿಸಲಾಗಿದೆ. ಈ ನಿಯಮ ಉಲ್ಲಂಘಿಸಿದರೆ ಹಾಗೂ ತಮ್ಮ ಆವರಣದಲ್ಲಿ ಸಾರ್ವಜನಿಕರು ಮಾಸ್ಕ್‌ ಧರಿಸುವುದು, ಸಾಮಾಜಿಕ ಅಂತರ ಪಾಲಿಸುವುದನ್ನು ಮಾಡದಿದ್ದರೆ ಆಯಾ ಮಾಲಿಕರನ್ನು ಹೊಣೆಯಾಗಿಸಿ ದುಬಾರಿ ದಂಡ ವಿಧಿಸಲಾಗುತ್ತದೆ.

10 ಸಾವಿರ ದಂಡ

ನಿಯಮ ಉಲ್ಲಂಘನೆಗೆ ಎ.ಸಿ. ರಹಿತ ಪಾರ್ಟಿ ಹಾಲ್‌, ವಾಣಿಜ್ಯ ಮಳಿಗೆಗಳಿಗೆ 5 ಸಾವಿರ ರು., ಎ.ಸಿ. ಪಾರ್ಟಿ ಹಾಲ್‌, ವಾಣಿಜ್ಯ ಮಳಿಗೆ, ಬ್ರಾಂಡೆಡ್‌ ಶಾಪ್‌, ಶಾಪಿಂಗ್‌ ಮಾಲ್‌ಗಳಿಗೆ 10 ಸಾವಿರ ರು., ಸ್ಟಾರ್‌ ಹೋಟೆಲ್‌, ಮದುವೆ ಸಮಾರಂಭಗಳಲ್ಲಿ ನಿಯಮ ಉಲ್ಲಂಘಿಸಿದರೆ ಮಾಲೀಕರಿಗೆ 10 ಸಾವಿರ ರು. ಹಾಗೂ ಸಾರ್ವಜನಿಕ ಸಮಾರಂಭ ಅಥವಾ ರಾರ‍ಯಲಿಗಳಲ್ಲಿ ನಿಯಮ ಉಲ್ಲಂಘನೆಯಾದರೆ ಆಯೋಜಕರಿಗೆ 10 ಸಾವಿರ ರು. ದಂಡ ವಿಧಿಸಲು ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್‌ ಆದೇಶಿಸಿದ್ದಾರೆ