Asianet Suvarna News Asianet Suvarna News

ರೋಗಿಗಳ ಸುಲಿಗೆ ನಿಲ್ಲಿಸುವ ಕಾಯ್ದೆ ಲೆಕ್ಕಕ್ಕೇ ಇಲ್ಲ..!

*  ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದಿದ್ದ ಕೆಪಿಎಂಇ ಕಾಯ್ದೆ ಖಾಸಗಿ ಆಸ್ಪತ್ರೆಗಳಿಗೆ ಆಟಕ್ಕುಂಟು ಲೆಕ್ಕಕ್ಕಿಲ್ಲ
*  ಬಹುತೇಕ ನಿಯಮ ಜಾರಿ ಇಲ್ಲ
*  ಕೊರೋನಾ ಚಿಕಿತ್ಸಾ ದರವೇ ಪಾಲನೆಯಾಗಿಲ್ಲ
 

Still KPME Amendment Not Implement in Karnataka grg
Author
Bengaluru, First Published Mar 27, 2022, 6:43 AM IST | Last Updated Mar 27, 2022, 6:43 AM IST

ಶ್ರೀಕಾಂತ್‌ ಎನ್‌. ಗೌಡಸಂದ್ರ

ಬೆಂಗಳೂರು(ಮಾ.27):  ರಾಜ್ಯದ ಖಾಸಗಿ ಆಸ್ಪತ್ರೆಗಳಲ್ಲಿ(Private Hospitals) ರೋಗಿಗಳ ಸುಲಿಗೆ ನಿಯಂತ್ರಿಸಲು 2017-18ರಲ್ಲಿ ಉಭಯ ಸದನಗಳಲ್ಲಿ ಅಂಗೀಕೃತಗೊಂಡು ಕಾನೂನಾಗಿ ರೂಪುಗೊಂಡಿರುವ ಕೆಪಿಎಂಇ ತಿದ್ದುಪಡಿ-2017 ಕಾಯಿದೆ(KPME Amendment-2017) ನಿಯಮಗಳು ಕಾಗದದ ಮೇಲೆಯೇ ಉಳಿದಿದ್ದು, ಬಹುತೇಕ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದರ ಪಟ್ಟಿ ಪ್ರದರ್ಶನ ಸೇರಿದಂತೆ ಕೆಪಿಎಂಇ ತಿದ್ದುಪಡಿ ಕಾಯ್ದೆಯನ್ವಯ ವಿಧಿಸಿರುವ ಷರತ್ತುಗಳೆಲ್ಲ ಉಲ್ಲಂಘನೆಯಾಗುತ್ತಿವೆ.

ಹೀಗಿದ್ದರೂ ಸರ್ಕಾರ(Government of Karnataka), ಆರೋಗ್ಯ ಇಲಾಖೆ(Department of Health), ಜಿಲ್ಲಾಡಳಿತಗಳು ಕಣ್ಮುಚ್ಚಿ ಕುಳಿತಿವೆ. ಇದರಿಂದ ಜನಸಾಮಾನ್ಯರ ಸುಲಿಗೆ ಮುಂದುವರೆದಿದ್ದು, ಕೊರೋನಾ(Coronavirus) ರೋಗಿಗಳಿಗಂತೂ(Patients) ಸರ್ಕಾರವೇ ಇಂತಿಷ್ಟುದರ ಮಾತ್ರ ಪಡೆಯಬೇಕು ಎಂಬ ಸ್ಪಷ್ಟ ಆದೇಶ ಹೊರಡಿಸಿದ್ದರೂ ಯಾವ ಆಸ್ಪತ್ರೆಯೂ ಪಾಲಿಸುತ್ತಿಲ್ಲ. ಸರ್ಕಾರ ನಿಗದಿಪಡಿಸಿರುವ ಚಿಕಿತ್ಸೆ ದರದ 2-3 ಪಟ್ಟು ಹೆಚ್ಚು ವಸೂಲಿ ಮಾಡುತ್ತಿದ್ದು, ಇದು ತಮ್ಮ ಗಮನಕ್ಕೆ ಬಂದಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

Karnataka Politics: ಶಾಸಕನಾಗಿ ನಾನು ಬದುಕಿರಬೇಕಾ?: ರಮೇಶ್‌ ಕುಮಾರ್‌

2017ರಲ್ಲಿ ಅಂದಿನ ಆರೋಗ್ಯ ಸಚಿವ ಕೆ.ಆರ್‌.ರಮೇಶ್‌ ಕುಮಾರ್‌ ಕೆಪಿಎಂಇ (Karnataka Private Medical Institute) ಕಾಯಿದೆ ಮಂಡಿಸಲು ಸಜ್ಜಾದಾಗ ರಾಜ್ಯಾದ್ಯಂತ ವೈದ್ಯರು ಕರ್ತವ್ಯ ಬಹಿಷ್ಕರಿಸಿ ಪ್ರತಿಭಟಿಸಿದ್ದರು. ಬೆಳಗಾವಿ ಸುವರ್ಣಸೌಧದ ಎದುರು ಬೃಹತ್‌ ಹೋರಾಟ ನಡೆದಿತ್ತು. ಇದರಿಂದ ಮೂರು ಮಂದಿ ರೋಗಿಗಳು ಚಿಕಿತ್ಸೆ ದೊರೆಯದೆ ಸಾವನ್ನಪ್ಪಿದ್ದರು. ಇದನ್ನೇ ನೆಪ ಮಾಡಿಕೊಂಡು ಕೆಪಿಎಂಇ ಕಾಯಿದೆಯಲ್ಲಿ ಎಲ್ಲಾ ಕಠಿಣ ಅಂಶಗಳನ್ನು ತೆಗೆದುಹಾಕಿ ಹಲ್ಲಿಲ್ಲದ ಹುಲಿಯಂತಹ ವಿಧೇಯಕಕ್ಕೆ ಉಭಯ ಸದನಗಳಲ್ಲಿ ಒಪ್ಪಿಗೆ ನೀಡಲಾಗಿತ್ತು. ಅದು ರಾಜ್ಯಪಾಲರಿಂದ ಅಂಗೀಕೃತಗೊಂಡು ಆದೇಶವೂ ಆಗಿದೆ. ಅದರಲ್ಲಿರುವ ನಿಯಮಗಳನ್ನೂ ಈಗ ಆಸ್ಪತ್ರೆಗಳು ಪಾಲಿಸುತ್ತಿಲ್ಲ.

ಬಹುತೇಕ ಆಸ್ಪತ್ರೆಗಳಲ್ಲಿ ದರಪಟ್ಟಿ ಇಲ್ಲ:

ಕೆಪಿಎಂಇ ಕಾಯಿದೆ ಪ್ರಕಾರ ವೈದ್ಯರ ತಪಾಸಣೆ ಮತ್ತು ಚಿಕಿತ್ಸೆ ಶುಲ್ಕ, ವಿವಿಧ ಪರೀಕ್ಷೆ ದರ, ವಾರ್ಡ್‌ (ಜನರಲ್‌, ಸೆಮಿ ಸ್ಪೆಷಲ್‌, ಸ್ಪೆಷಲ್‌, ಐಸಿಯು, ಐಸಿಯು ವಿತ್‌ ವೆಂಟಿಲೇಟರ್‌) ದರ ವಿವರ ಆಸ್ಪತ್ರೆಯಲ್ಲಿ ಎದ್ದು ಕಾಣುವಂತೆ ಪ್ರದರ್ಶಿಸಬೇಕು. ಆದರೆ, ರಾಜ್ಯದ(Karnataka) ಬಹುತೇಕ ಆಸ್ಪತ್ರೆಗಳಲ್ಲಿ ಈವರೆಗೂ ಚಿಕಿತ್ಸೆ ದರ(Treatment Rate) ಪಟ್ಟಿ ಪ್ರದರ್ಶನ ಮಾಡಿಲ್ಲ. ನಾಮ್‌ಕೆವಾಸ್ತೆಗೆ ಕೆಲವು ಆಸ್ಪತ್ರೆಗಳಲ್ಲಿ ಪ್ರದರ್ಶಿಸಿದ್ದರೂ, ಸಾರ್ವಜನಿಕರಿಗೆ ಕಾಣದಂತಹ ಸ್ಥಳದಲ್ಲಿ ಪ್ರದರ್ಶಿಸಲಾಗುತ್ತಿದೆ.

ಈ ಬಗ್ಗೆ ಪ್ರಶ್ನಿಸಿದರೆ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಟಿ.ಕೆ. ಅನಿಲ್‌ಕುಮಾರ್‌, ನಿಯಮ ಪಾಲಿಸದಿದ್ದರೆ ಕರ್ನಾಟಕ ಪ್ರೈವೇಟ್‌ ಮೆಡಿಕಲ್‌ ಎಸ್ಟಾಬ್ಲಿಷ್‌ಮೆಂಟ್‌ (ಕೆಪಿಎಂಇ) ಅಡಿ ಕ್ರಮ ಕೈಗೊಳ್ಳಲು ಜಿಲ್ಲಾ ಮಟ್ಟದ ನೋಂದಣಿ ಸಮಿತಿಗೆ ಅಧಿಕಾರ ಇದೆ. ಜಿಲ್ಲಾಧಿಕಾರಿಗಳು ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಸಮಿತಿಯು ಪರಿಶೀಲಿಸಿ ನೋಟಿಸ್‌ ನೀಡಿ ಸೂಕ್ತ ಕ್ರಮ ಕೈಗೊಳ್ಳಲಿದೆ. ಈ ಬಗ್ಗೆ ಹಲವರಿಗೆ ನೋಟಿಸನ್ನೂ ನೀಡಲಾಗಿದೆ ಎನ್ನುತ್ತಾರೆ.

ಶಾಸಕರು, ಸಚಿವರಿಂದಲೇ ಉಲ್ಲಂಘನೆ!

ಅನಿವಾರ್ಯ ಇಲ್ಲದಿದ್ದರೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೆ ಕೆಪಿಎಂಇ ಅಡಿ ವೈದ್ಯಕೀಯ ವೆಚ್ಚ ಮರುಪಾವತಿ ಮಾಡುವುದಿಲ್ಲ ಎಂದು 2018ರ ಜು.13ರಂದು ಅಂದಿನ ವಿಧಾನಸಭೆ ಸ್ಪೀಕರ್‌ ಆದೇಶ ಹೊರಡಿಸಿದ್ದರು. ಅಪಘಾತ, ಹೃದಯಾಘಾದಂತಹ ತುರ್ತು ಚಿಕಿತ್ಸೆ ಹೊರತುಪಡಿಸಿ ಉಳಿದ ಎಲ್ಲ ಚಿಕಿತ್ಸೆಗಳನ್ನು ಸರ್ಕಾರಿ ಆಸ್ಪತ್ರೆಗಳಲ್ಲೇ ಪಡೆಯಬೇಕು. ಒಂದು ವೇಳೆ ಅವಶ್ಯಕ ಚಿಕಿತ್ಸೆ ಸರ್ಕಾರಿ ಆಸ್ಪತ್ರೆಯಲ್ಲಿ ಲಭ್ಯವಾಗದಿದ್ದರೆ ಮಾತ್ರ ವೈದ್ಯರ ಹಿಂಬರಹದೊಂದಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು. ಆದರೆ, ಕೆಪಿಎಂಇ ಅಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ನಿಯಮ ರೂಪಿಸದ ಹಿನ್ನೆಲೆಯಲ್ಲಿ ಕೆಪಿಎಂಇ ಅನುಷ್ಠಾನದ ಬಳಿಕವೂ ಶಾಸಕರು, ಮಾಜಿ ಶಾಸಕರು, ಸಚಿವರು ಕೋಟ್ಯಂತರ ರು. ಬಿಲ್‌ ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ನೋಂದಣಿಗೆ ಆಸ್ಪತ್ರೆಗಳ ಹಿಂದೇಟು

ಕೆಲ ಆಸ್ಪತ್ರೆಗಳು ದರ ಪಟ್ಟಿ ಪ್ರದರ್ಶನ ಮಾಡುತ್ತಿಲ್ಲ ಎಂಬುದು ಸತ್ಯ. ಆದರೆ ಕೆಪಿಎಂಇ ಅಡಿ ಆಸ್ಪತ್ರೆಗಳು ನೋಂದಣಿ ಮಾಡಿಕೊಳ್ಳಲೇ ಸಾಕಷ್ಟುಸಮಸ್ಯೆಗಳಿವೆ. ಅಧಿಕಾರಿಗಳಿಂದ ಅನಗತ್ಯ ಕಿರುಕುಳ ಇದೆ. ಹೀಗಾಗಿ ಹಲವು ಆಸ್ಪತ್ರೆಗಳು ನೋಂದಣಿಗೆ ಹಿಂದೇಟು ಹಾಕುತ್ತಿವೆ. ಇನ್ನು ವೈದ್ಯಕೀಯ ಅರ್ಹತೆ ಇಲ್ಲದೆ ನಡೆಸುವ ಆಸ್ಪತ್ರೆ, ಕ್ಲಿನಿಕ್‌ಗಳು ಕೆಪಿಎಂಇ ಅಡಿ ಬರುವುದಿಲ್ಲ. ಇದರಿಂದ ಬಹುತೇಕ ಕ್ಲಿನಿಕ್‌, ಆಸ್ಪತ್ರೆಗಳಿಗೆ ಕಡಿವಾಣ ಇಲ್ಲದಂತಾಗಿದೆ ಅಂತ ಅಧ್ಯಕ್ಷ, ರಾಷ್ಟ್ರೀಯ ಸ್ಥಾಯಿ ಸಮಿತಿ (ಮಕ್ಕಳ), ಐಂಎಎ ಡಾ.ಶ್ರೀನಿವಾಸ್‌ ತಿಳಿಸಿದ್ದಾರೆ. 

ಆಸ್ಪತ್ರೆಗಳಿಗೆ ಬುದ್ಧಿ ಹೇಳುತ್ತೇವೆ

ಕೆಪಿಎಂಇ ಕಾಯಿದೆ ಪ್ರಕಾರ ಈಗಾಗಲೇ ಹಲವು ಆಸ್ಪತ್ರೆಗಳಲ್ಲಿ ದರ ಪಟ್ಟಿಪ್ರದರ್ಶನ ಮಾಡಲಾಗುತ್ತಿದೆ. ಕೆಲ ಆಸ್ಪತ್ರೆಗಳು ನಿಯಮ ಉಲ್ಲಂಘಿಸುತ್ತಿದ್ದು, ಅಂತಹ ಆಸ್ಪತ್ರೆಗಳಿಗೆ ತಿಳಿ ಹೇಳಲಾಗುವುದು ಅಂತ ಖಾಸಗಿ ಆಸ್ಪತ್ರೆಗಳ ಒಕ್ಕೂಟದ ಅಧ್ಯಕ್ಷ ಡಾ.ಎಚ್‌.ಎಂ. ಪ್ರಸನ್ನ ಹೇಳಿದ್ದಾರೆ. 

Coronavirus ಕರ್ನಾಟಕದಲ್ಲಿ ಕೊರೋನಾ ಹೆಚ್ಚಳ, ಆಸ್ಪತ್ರೆಗಳಿಗೆ ಖಡಕ್ ಸೂಚನೆ ಕೊಟ್ಟ ಸರ್ಕಾರ

ಕೊರೋನಾ ಚಿಕಿತ್ಸಾ ದರವೇ ಪಾಲನೆಯಾಗಿಲ್ಲ:

ಕೊರೋನಾ ವೇಳೆಯಲ್ಲಂತೂ ಖುದ್ದು ಸರ್ಕಾರವೇ ಚಿಕಿತ್ಸೆ ದರ ನಿಗದಿ ಮಾಡಿದ್ದು, ಸರ್ಕಾರ ನಿಗದಿ ಮಾಡಿರುವುದಕ್ಕಿಂತ ಮೂರ್ನಾಲ್ಕು ಪಟ್ಟು ಹೆಚ್ಚಾಗಿ ಆಸ್ಪತ್ರೆಗಳು ವಸೂಲಿ ಮಾಡಿವೆ. ಈಗ ಕೊರೋನಾ ಪ್ರಕರಣಗಳು ಕಡಿಮೆ ಇದ್ದರೂ ಈಗಲೂ ಸರ್ಕಾರ ನಿಗದಿ ಮಾಡಿರುವ ದರದಂತೆ ಯಾವ ಖಾಸಗಿ ಆಸ್ಪತ್ರೆಯಲ್ಲೂ ಚಿಕಿತ್ಸೆ ದೊರೆಯುತ್ತಿಲ್ಲ.

2020ರ ಜೂನ್‌ನಲ್ಲಿ ಕೆಪಿಎಂಇ ಕಾಯ್ದೆಯಡಿ ಆದೇಶ ಹೊರಡಿಸಿದ್ದ ಸರ್ಕಾರ ನೇರವಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವವರಿಂದ ದಿನ ಒಂದಕ್ಕೆ ಜನರಲ್‌ ವಾರ್ಡ್‌ 10 ಸಾವಿರ, ಎಚ್‌ಡಿಯು ವಾರ್ಡ್‌ 12,000, ಐಸಿಯು 15,000, ವೆಂಟಿಲೇಟರ್‌ ಸಹಿತ ಐಸಿಯು ವಾರ್ಡ್‌ಗೆ 25,000 ರು. ನಿಗದಿ ಮಾಡಿತ್ತು. ಸರ್ಕಾರಿ ಕೋಟಾದಡಿ ದಾಖಲಾದರೆ ಕ್ರಮವಾಗಿ ಈ ದರ 5,200, 7,000, 8,500, 10,000 ರು. ಎಂದು ನಿಗದಿ ಮಾಡಲಾಗಿತ್ತು. ಆದರೆ, ಕೊರೋನಾ ಎರಡನೇ ಅಲೆ ವೇಳೆ ಒಂದು ದಿನಕ್ಕೆ 50 ರಿಂದ 60 ಸಾವಿರ ರು.ವರೆಗೆ ಜನರಿಂದ ಆಸ್ಪತ್ರೆಗಳು ಸುಲಿಗೆ ಮಾಡಿವೆ. ಈಗಲೂ ಐಸಿಯು ಹಾಗೂ ವೆಂಟಿಲೇಟರ್‌ ವಾರ್ಡ್‌ವರೆಗೆ ದಿನ ಒಂದಕ್ಕೆ 30 ರಿಂದ 40 ಸಾವಿರ ರು. ಪೀಕುತ್ತಿವೆ. ಹೀಗಿದ್ದರೂ ಪ್ರಶ್ನಿಸುವವರು ಇಲ್ಲ ಎಂದು ಸಾಮಾಜಿಕ ಕಾರ್ಯಕರ್ತ ವಿನಯ್‌ ಶ್ರೀನಿವಾಸ್‌ ದೂರುತ್ತಾರೆ.
 

Latest Videos
Follow Us:
Download App:
  • android
  • ios