ರಾಜ್ಯದಲ್ಲಿ ತೃತೀಯ ಲಿಂಗಿಗಳ ಕಲ್ಯಾಣ ಮಂಡಳಿ ರಚಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ಇತ್ತೀಚೆಗೆ ನಡೆದ ಸಮೀಕ್ಷೆಯಲ್ಲಿ 10,365 ತೃತೀಯ ಲಿಂಗಿಗಳು ಪತ್ತೆಯಾಗಿದ್ದು, ಈ ಸಂಖ್ಯೆಯನ್ನು ಮರುಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ವಿಧಾನ ಪರಿಷತ್ತು (ಮಾ.13): ತೃತೀಯ ಲಿಂಗಿಗಳ ಕಲ್ಯಾಣ ಮಂಡಳಿ ರಚನೆಗೆ ರಾಜ್ಯ ಸರ್ಕಾರ ಕ್ರಮಕೈಗೊಳ್ಳಲಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದರು.

ತೃತೀಯ ಲಿಂಗಿಗಳ ಕಲ್ಯಾಣ ಮಂಡಳಿ 

ಗುರುವಾರ ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ ಅವರು ನಿಯಮ 330ರಡಿ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದ ಸಚಿವರು, ಕೇಂದ್ರ ಸರ್ಕಾರ ಮಂಡಳಿ ರಚನೆ ಕುರಿತಂತೆ ಮಾದರಿ ನೀಡಿದೆ. ಅದರಂತೆ ಪ್ರಸ್ತುತ ತೃತೀಯ ಲಿಂಗಿಗಳ ಸಮೀಕ್ಷೆ ಕಾರ್ಯ ಮುಗಿದಿದೆ. ಈ ಹಿನ್ನೆಲೆಯಲ್ಲಿ ತೃತೀಯ ಲಿಂಗಿಗಳ ಕಲ್ಯಾಣ ಮಂಡಳಿ ರಚನೆಗೆ ಸರ್ಕಾರ ಕ್ರಮ ವಹಿಸಲಿದೆ ಎಂದರು.

ಕರ್ನಾಟಕ ರಾಜ್ಯ ಟ್ರಾನ್ಸ್‌ಜೆಂಡರ್‌ ನೀತಿ

ರಾಜ್ಯದಲ್ಲಿ ಕರ್ನಾಟಕ ರಾಜ್ಯ ಟ್ರಾನ್ಸ್‌ಜೆಂಡರ್‌ ನೀತಿಯನ್ನು 2017ರ ಅನ್ವಯ ಟ್ರಾನ್ಸ್‌ಜೆಂಡರ್‌ ಅವರ ಮೂಲ ಹಂತದ ಸಮೀಕ್ಷೆಯನ್ನು ರಾಜ್ಯದ 31 ಜಿಲ್ಲೆಗಳಲ್ಲಿ 2025 ಸೆಪ್ಟೆಂಬರ್‌ 15ರಿಂದ ನವೆಂಬರ್‌ 21ರವರೆಗೆ ಕೈಗೊಳ್ಳಲಾಗಿತ್ತು. ಸಮೀಕ್ಷೆಯಲ್ಲಿ ಒಟ್ಟಾರೆ 10,365 ಟ್ರಾನ್ಸ್‌ ಜೆಂಡರ್‌ ಇರುವುದು ಇಳಿದು ಬಂದಿದೆ. ಇವರ ಸಂಖ್ಯೆ 70 ಸಾವಿರ ಇದೆ ಎಂದು ಸದಸ್ಯೆ ಭಾರತಿ ಶೆಟ್ಟಿ ಅವರು ನೀಡಿರುವ ಮಾಹಿತಿ ಅನ್ವಯ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸುವುದಾಗಿ ತಿಳಿಸಿದರು.