ಇಂದು ರಾಜ್ಯಾದ್ಯಂತ ಕೋವಿಡ್ ಬೂಸ್ಟರ್ ಡೋಸ್ ಅಭಿಯಾನ: ಆರೋಗ್ಯ ಕೇಂದ್ರಗಳಿಗೆ ಹೋಗಿ ಲಸಿಕೆ ಪಡೆಯಿರಿ
ರಾಜ್ಯ ಆರೋಗ್ಯ ಇಲಾಖೆಯು ಕೊರೋನಾ ಮುನ್ನೆಚ್ಚರಿಕೆ ಡೋಸ್ ಹೆಚ್ಚಿನ ಸಂಖ್ಯೆಯಲ್ಲಿ ನೀಡುವ ನಿಟ್ಟಿನಲ್ಲಿ ಶನಿವಾರ (ಜ.21) ಬೃಹತ್ ಲಸಿಕಾ ಅಭಿಯಾನ ಆಯೋಜಿಸಿದೆ.
ಬೆಂಗಳೂರು (ಜ.21): ರಾಜ್ಯ ಆರೋಗ್ಯ ಇಲಾಖೆಯು ಕೊರೋನಾ ಮುನ್ನೆಚ್ಚರಿಕೆ ಡೋಸ್ ಹೆಚ್ಚಿನ ಸಂಖ್ಯೆಯಲ್ಲಿ ನೀಡುವ ನಿಟ್ಟಿನಲ್ಲಿ ಶನಿವಾರ (ಜ.21) ಬೃಹತ್ ಲಸಿಕಾ ಅಭಿಯಾನ ಆಯೋಜಿಸಿದೆ. ಕೊರೋನಾ ಮೂರನೇ ಅಲೆಯಲ್ಲಿ ಎದುರಾದ ಒಮಿಕ್ರಾನ್ ವೈರಸ್ ಅಷ್ಟೇನು ಗಂಭೀರ ಪ್ರಭಾವ ಬೀರದ ಕಾರಣ ಹಾಗೂ ನಂತರದಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳಿದ್ದರ ಪರಿಣಾಮ ಜನರು ಮುನ್ನೆಚ್ಚರಿಕೆ ಡೋಸ್ ಪಡೆಯುವ ಬಗ್ಗೆ ಆಸಕ್ತಿ ತೋರಲಿಲ್ಲ. ಸದ್ಯ ರಾಜ್ಯದಲ್ಲಿ ಶೇ.22 ಮಂದಿ ಮಾತ್ರ ಮುನ್ನೆಚ್ಚರಿಕೆ ಲಸಿಕೆ ಪಡೆದುಕೊಂಡಿದ್ದಾರೆ. ನಾಲ್ಕನೇ ಅಲೆ ಆತಂಕದಿಂದ ಮುನ್ನೆಚ್ಚರಿಕೆ ಡೋಸ್ ಹೆಚ್ಚಿನ ಸಂಖ್ಯೆಯಲ್ಲಿ ನೀಡಲು ತಜ್ಞರು ಸೂಚಿಸಿದ್ದರು.
ಈ ಹಿನ್ನೆಲೆ ರಾಜ್ಯದ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಅಭಿಯಾನ ನಡೆಸುತ್ತಿದೆ. ಆರೋಗ್ಯ ಇಲಾಖೆ ಈಗಾಗಲೇ 4 ಲಕ್ಷ ಕೋವ್ಯಾಕ್ಸಿನ್ ಲಸಿಕೆ ದಾಸ್ತಾನು ಹೊಂದಿದೆ. ಸದ್ಯ ರಾಜ್ಯಕ್ಕೆ 8 ಲಕ್ಷ ಡೋಸ್ ಕೋವಿಶೀಲ್ಡ್ ಲಭ್ಯವಾಗಿದೆ. ಈಗಾಗಲೇ ಬೇಡಿಕೆಗೆ ಅನುಗುಣವಾಗಿ ಆಯಾ ಜಿಲ್ಲೆಗಳಿಗೆ ಲಸಿಕೆ ಕಳುಹಿಸಲಾಗಿದೆ. ತಿಂಗಳಾಂತ್ಯದ ವೇಳೆಗೆ ಶೇ. 50 ಮುನ್ನೆಚ್ಚರಿಕೆ ಡೋಸ್ ವಿತರಿಸುವ ಗುರಿ ಹೊಂದಿದೆ. ಕೊರೋನಾ ಲಸಿಕೆ ಎರಡನೇ ಡೋಸ್ ಪಡೆದು ಆರು ತಿಂಗಳು ಪೂರೈಸಿದವರು ಸಮೀಪದ ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ತೆರಳಿ ಮುನ್ನೆಚ್ಚರಿಕೆ ಡೋಸ್ ಪಡೆಯಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಚೀನಾ ಹೊಸವರ್ಷ: ನಿತ್ಯ ಕೋವಿಡ್‌ಗೆ 36,000 ಜನರ ಸಾವು..?
ಬೂಸ್ಟರ್ ಡೋಸ್ ಆಗಿ ಕೋವೊವ್ಯಾಕ್ಸ್‌ಗೆ ಡಿಜಿಸಿಎ ಅನುಮತಿ: ಕೋವಿಡ್-19ಗೆ ಕೋವಿಶೀಲ್ಡ್ ಅಥವಾ ಕೋವ್ಯಾಕ್ಸಿನ್ ಎರಡೂ ಡೋಸ್ ಲಸಿಕೆ ಪಡೆದ ವಯಸ್ಕರಿಗೆ ಸಿರಂ ಇನ್ಸ್‌ಟಿಟ್ಯೂಟ್ ಆಫ್ ಇಂಡಿಯಾದ ಕೋವೊವ್ಯಾಕ್ಸ್ ಅನ್ನು ಬೂಸ್ಟರ್ ಡೋಸ್ ಆಗಿ ನೀಡಲು ಭಾರತೀಯ ಔಷಧಿ ನಿಯಂತ್ರಕ ಮಂಡಳಿ(ಡಿಸಿಜಿಐ) ಸಮ್ಮತಿಸಿದೆ. ಇದರ ಬೆನ್ನಲ್ಲೇ ಕೋವಿನ್ ಪೋರ್ಟಲ್‌ಗೆ ಕೋವೋವ್ಯಾಕ್ಸ್ ಸೇರಿಸಿ ಎಂದು ಸರ್ಕಾರಕ್ಕೆ ಲಸಿಕೆ ನಿರ್ಮಾತೃ ಸೀರಂ ಇನ್ಸ್‌ಟಿಟ್ಯೂಟ್ ಕೋರಿದೆ.
ಅಮೆರಿಕದ ನೋವೊವ್ಯಾಕ್ಸ್‌ನಿಂದ ತಂತ್ರಜ್ಞಾನ ವರ್ಗಾವಣೆ ಮೂಲಕ ಕೋವೊವ್ಯಾಕ್ಸ್ ಅನ್ನು ತಯಾರಿಸಲಾಗುತ್ತದೆ. 2020ರಲ್ಲಿ ಅಮೆರಿಕ ಮೂಲದ ನೋವೊವ್ಯಾಕ್ಸ್ ತಯಾರಕ ಕಂಪನಿ, ಸಿರಂ ಇನ್ಸ್‌ಟಿಟ್ಯೂಟ್ ಆಫ್ ಇಂಡಿಯಾಗೆ ಅಭಿವೃದ್ಧಿ ಮತ್ತು ವಾಣಿಜ್ಯೀಕರಣದ ಭಾಗವಾಗಿ ಕೋವೊವ್ಯಾಕ್ಸ್ ತಯಾರಿಕೆಗೆ ಪರವಾನಿಗೆ ನೀಡಿತ್ತು.
ಚೀನಾಗೆ ಭಾರತದ ಕೋವಿಡ್ ಲಸಿಕೆ ಮಾರಾಟಕ್ಕೆ ಸೀರಂ ಪೂನಾವಾಲಾ ಯತ್ನ: ಚೀನಾ ದೇಶವು ಹೊಸ ಕೋವಿಡ್ ಅಲೆಯಿಂದ ತತ್ತರಿಸುತ್ತಿದ್ದು, ನಿತ್ಯ ಸಾವಿರಾರು ಜನರು ಸೋಂಕಿತರಾಗಿ ಸಾವನ್ನಪ್ಪುತ್ತಿದ್ದಾರೆ. ಚೀನಾ ಲಸಿಕೆಗಳೂ ಪರಿಣಾಮಕಾರಿ ಆಗಿಲ್ಲ. ಇಂಥದ್ದರ ನಡುವೆ ಚೀನಾಗೆ ಸಹಾಯಹಸ್ತ ಚಾಚಲು ಮುಂದಾಗಿರಿವ ಭಾರತದ ಸೀರಂ ಇನ್ಸ್‌ಟಿಟ್ಯೂಟ್ ಮುಖ್ಯಸ್ಥ ಅದಾರ್ ಪೂನಾವಾಲಾ, ತಮ್ಮ ಯಶಸ್ವಿ ಕೋವಿಡ್ ಲಸಿಕೆಯಾದ ‘ಕೋವಿಶೀಲ್ಡ್’ ಅಥವಾ ‘ಕೋವೋವ್ಯಾಕ್ಸ್’ ಅನ್ನು ಚೀನಾಗೆ ನೀಡುವ ಆಫರ್ ಮುಂದಿಟ್ಟಿದ್ದಾರೆ.
ದಾವೋಸ್ ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ಪಾಲ್ಗೊಂಡಿರುವ ಪೂನಾವಾಲಾ, ಈ ಬಗ್ಗೆ ಚೀನಾ ಜತೆ ಮಾತುಕತೆ ನಡೆಸಿ ಆಫರ್ ಇರಿಸಿದ್ದಾಗಿ ಹೇಳಿದ್ದಾರೆ. ‘ರಾಜಕೀಯ ಭಿನ್ನಾಭಿಪ್ರಾಯ ಹಾಗೂ ತಪ್ಪುಕಲ್ಪನೆ ಮರೆತು ವಿದೇಶಿ ಲಸಿಕೆಗಳನ್ನು ಬೂಸ್ಟರ್ ಡೋಸ್ ಆಗಿ ಕೊಂಡುಕೊಳ್ಳಿ ಎಂದು ಚೀನಾಗೆ ನಾವು ಮನವಿ ಮಾಡಿದ್ದು, ಮಾತುಕತೆ ನಡೆಸಿದ್ದೇವೆ. ಇಂದು ಚೀನಾ ಕೋವಿಡ್ ಅಲೆಗೆ ತುತ್ತಾಗಿದ್ದು, ಚೀನಾ ಇದರಿಂದ ಹೊರಬರುವುದು ವಿಶ್ವದ ಪಾಲಿಗೂ ಒಳ್ಳೆಯದು. ಜಗತ್ತು ಈ ಹಿಂದಿನಂತೆ ವಸ್ತುಗಳ ವಿನಿಮಯಕ್ಕೆ ಮುಂದಾಗಬೇಕು’ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಈ ವರ್ಷ ಕರ್ನಾಟಕದಲ್ಲಿ ಕೋವಿಡ್‌ಗೆ ಮೊದಲ ಬಲಿ
‘ಇದಕ್ಕೆ ಚೀನಾ ಪ್ರತಿಕ್ರಿಯೆ ಏನು?’ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಅವರು ಈ ಬಗ್ಗೆ ಚಿಂತಿಸುತ್ತಿದ್ದು, ಉತ್ತಮ ನಿರ್ಧಾರ ಕೈಗೊಳ್ಳುವ ವಿಶ್ವಾಸವಿದೆ’ ಎಂದರು. ಅಲ್ಲದೆ, ‘ಒಮಿಕ್ರೋನ್ ವಿರುದ್ಧ ನಮ್ಮದೇ ಸಹಭಾಗಿತ್ವದ ಉತ್ಪಾದನೆಯಾದ ಅಮೆರಿಕ ಲಸಿಕೆ ಕೋವೊವ್ಯಾಕ್ಸ್ ಉತ್ತಮ ಫಲಿತಾಂಶ ನೀಡಿದೆ. ಕೋವಿಶೀಲ್ಡ್‌ಗಿಂತ 2-3 ಪಟ್ಟು ಉತ್ತಮ ಫಲಿತಾಂಶ ನೀಡಿದೆ. ಶೀಘ್ರ ಭಾರತದಲ್ಲೂ ಕೋವೋವ್ಯಾಕ್ಸ್ 200-300 ರು.ಗೆ ಲಭ್ಯ ಇರಲಿದೆ’ ಎಂದರು.