ಬೆಂಗಳೂರು (ಮೇ. 20):  ರಾಜ್ಯ ಸರ್ಕಾರವು ಕೊರೋನಾ ಸಂಕಷ್ಟದಿಂದ ಹೊರ ಬಂದು ರಾಜ್ಯದ ಅಭಿವೃದ್ಧಿಗೆ ವೇಗ ನೀಡಲು ಭಾರೀ ಪ್ರಮಾಣದ ಸಾಲದ ಮೊರೆ ಹೋಗಿದೆ. ಪ್ರಸಕ್ತ ಸಾಲಿನಲ್ಲಿ ಬಜೆಟ್‌ನಲ್ಲಿ (2020-21) 52,918 ಕೋಟಿ ರು. ಸಾಲ ಪಡೆಯುವುದಾಗಿ ಘೋಷಿಸಿದ್ದ ರಾಜ್ಯವು ಕೇಂದ್ರ ನೀಡಿರುವ ಅವಕಾಶ ಬಳಸಿಕೊಂಡು ಹೆಚ್ಚುವರಿಯಾಗಿ ಸುಮಾರು 15 ಸಾವಿರ ಕೋಟಿ ರು. ಸಾಲ ಮಾಡಲು ಮುಂದಾಗಿದೆ.

ಈ ಮೂಲಕ ಒಂದೇ ವರ್ಷದಲ್ಲಿ ಬರೋಬ್ಬರಿ 68 ಸಾವಿರ ಕೋಟಿಗೂ ಅಧಿಕ ಮೊತ್ತದ ಸಾಲ ಪಡೆಯಲು ಸಿದ್ಧತೆ ಆರಂಭಿಸಿದ್ದು, ಇದಕ್ಕಾಗಿ ಕರ್ನಾಟಕ ರಾಜ್ಯ ವಿತ್ತೀಯ ಹೊಣೆಗಾರಿಕೆ ಕಾಯಿದೆ-2002 ಕ್ಕೆ ತಿದ್ದುಪಡಿ ತರಲೂ ಸಹ ಪ್ರಸ್ತಾವನೆ ಸಿದ್ಧಪಡಿಸಲಾಗುತ್ತಿದೆ.

ಹಣಕಾಸು ಸಚಿವರೂ ಆದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಂಗಳವಾರ ಬೆಳಗ್ಗೆ ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐಎಸ್‌ಎನ್‌ ಪ್ರಸಾದ್‌ ನೇತೃತ್ವದಲ್ಲಿ ಸಭೆ ನಡೆಸಿದ್ದು, ಈ ವೇಳೆ ಕೇಂದ್ರ ಸರ್ಕಾರ ಕಲ್ಪಿಸಿರುವ ಅವಕಾಶ ಬಳಸಿಕೊಂಡು ಜೈಕಾ, ಹುಡ್ಕೋದಂತಹ ಬ್ಯಾಂಕ್‌ಗಳಿಂದ ಸಾಲ ಪಡೆಯಲು ಪ್ರಸ್ತಾವನೆ ಸಿದ್ಧಪಡಿಸಬೇಕು. ಇದಕ್ಕಾಗಿ ಕಾಯಿದೆ ತಿದ್ದುಪಡಿಗೆ ಪ್ರಸ್ತಾವನೆ ಸಿದ್ಧಪಡಿಸಬೇಕು ಎಂದು ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಕೊರೋನಾ ಭೀತಿ: 'ಮೇ 31 ರವರೆಗೆ ನಿಷೇಧಾಜ್ಞೆ ಮುಂದುವರಿಕೆ'

ಕೇಂದ್ರ ಸರ್ಕಾರವು ರಾಜ್ಯದ ಜಿಡಿಪಿ (ಒಟ್ಟು ಆಂತರಿಕ ಉತ್ಪನ್ನ) ಮೇಲೆ ಶೇ.3 ರಷ್ಟಿದ್ದ ಸಾಲದ ಮಿತಿಯನ್ನು ಶೇ.5ಕ್ಕೆ ಹೆಚ್ಚಳ ಮಾಡಿದೆ. 2020-21ನೇ ಸಾಲಿನಲ್ಲಿ 18,05,742 ಕೋಟಿ ರು. ಜಿಡಿಪಿ ಉತ್ಪನ್ನದ ಅಂದಾಜಿನಲ್ಲಿರುವ ರಾಜ್ಯವು ಕೇಂದ್ರದ ಸಾಲದ ಮಿತಿ ಹೆಚ್ಚಳದಿಂದ ರಾಜ್ಯವು ಪ್ರಸಕ್ತ ಸಾಲಿನಲ್ಲಿ 90,287 ಕೋಟಿ ರು.ವರೆಗೂ ಸಾಲ ಮಾಡುವ ಅರ್ಹತೆ ಪಡೆಯುತ್ತದೆ.

ಪ್ರಸಕ್ತ ಬಜೆಟ್‌ನಲ್ಲಿ 52,918 ಕೋಟಿ ರು. ಸಾಲ ಪಡೆಯುವುದಾಗಿ ಘೋಷಿಸಿದ್ದ ಸರ್ಕಾರಕ್ಕೆ ಈಗ ಹೆಚ್ಚುವರಿಯಾಗಿ ಸುಮಾರು 37 ಸಾವಿರ ಕೋಟಿ ಸಾಲ ಪಡೆಯಲು ಅರ್ಹತೆಯಿದೆ. ಆದಾಗ್ಯೂ ಮೊದಲ ಹಂತದಲ್ಲಿ 15 ಸಾವಿರ ಕೋಟಿ ರು. ಪಡೆಯಲು ಸರ್ಕಾರ ಸಿದ್ಧತೆ ಆರಂಭಿಸಿದೆ.

ಇದನ್ನು ಬಳಕೆ ಮಾಡಿಕೊಳ್ಳಲು ಸೋಮವಾರ ಮೊದಲ ಸುತ್ತಿನ ಸಭೆ ನಡೆಸಿದ ಮುಖ್ಯಮಂತ್ರಿ ಯಡಿಯೂರಪ್ಪ 15 ಸಾವಿರ ರು. ಸಾಲ ಪಡೆಯಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡುವಂತೆ ತಿಳಿಸಿದ್ದರು. ಮಂಗಳವಾರ ಮತ್ತೆ ಸಭೆ ನಡೆಸಿ ಕಾಯ್ದಿ ತಿದ್ದುಪಡಿಗೆ ಪ್ರಸ್ತಾವನೆ ಸಿದ್ದಪಡಿಸಲು ಸೂಚಿಸಿದರು ಎಂದು ಉನ್ನತ ಮೂಲಗಳು ಹೇಳಿವೆ.

ಸಾಲ ಒಂದೇ ಮುಂದಿನ ಆಯ್ಕೆ:

ಕೊರೋನಾ ಸಂಕಷ್ಟದಿಂದಾಗಿ ರಾಜ್ಯದ ಬಹುತೇಕ ಆದಾಯ ಮೂಲಗಳು ಸ್ಥಗಿತಗೊಂಡಿವೆ. 2.37 ಲಕ್ಷ ಕೋಟಿ ರು. ಗಾತ್ರದ 2020-21ರ ಸಾಲಿನ ಆಯವ್ಯಯ ಅಂದಾಜಿನ ಪ್ರಕಾರ 1,80 ಲಕ್ಷ ಕೋಟಿ ರು. (ಶೇ.77) ಮೊತ್ತ ಸರ್ಕಾರದ ವಿವಿಧ ಮೂಲಗಳಿಂದ ಬರುವ ನಿರೀಕ್ಷೆ ಇತ್ತು. ಇದರಲ್ಲಿ 1,19,758 ಕೋಟಿ ರು. (ಶೇ.67) ರಾಜ್ಯದ ಮೂಲಗಳಿಂದ, 60,162 ಕೋಟಿ ರು. (ಶೇ.33) ಕೇಂದ್ರದ ತೆರಿಗೆ ಪಾಲು, ಅನುದಾನದಿಂದ ಬರಲಿದೆ.

ಡಾಕ್ಟರ್‌ಗೆ ಪಾಸಿಟಿವ್: ಮೂಡಿಗೆರೆಯ ಜನರಲ್ಲಿ ಭಯದ ವಾತಾವರಣ

ಆದರೆ, ಈ ಮೊತ್ತದಲ್ಲಿ 37,291 ಕೋಟಿ ರು. ವೇತನ, 22,211 ಕೋಟಿ ರು. ಪಿಂಚಣಿ, 22,216 ಕೋಟಿ ರು. ಬಡ್ಡಿ ಪಾವತಿ ಸೇರಿದಂತೆ 81,718 ಕೋಟಿ ರು. ಅನಿವಾರ್ಯ ವೆಚ್ಚ ಇದೆ. ರಾಜ್ಯದ ಆದಾಯದ ಶೇ.45 ರಷ್ಟುಅನಿವಾರ್ಯ ವೆಚ್ಚಕ್ಕೆ ವೆಚ್ಚವಾಗಲಿದೆ.

ಆದಾಯ ಕುಸಿತ ಭೀತಿಯಲ್ಲಿ ಸರ್ಕಾರ:

ಇನ್ನು ದುರದೃಷ್ಟವಶಾತ್‌ ಲಾಕ್‌ಡೌನ್‌ನಿಂದ ರಾಜ್ಯದ ಆದಾಯ ಮೂಲಗಳೂ ಸ್ಥಗಿತಗೊಂಡಿವೆ. ರಾಜ್ಯ ಜಿಎಸ್‌ಟಿ 47,319 ಕೋಟಿ, ಅಬಕಾರಿ ಸುಂಕ 22,700 ಕೋಟಿ, ಮಾರಾಟ ತೆರಿಗೆ ಹಾಗೂ ವ್ಯಾಟ್‌ನಿಂದ 17,783 ಕೋಟಿ, ನೋಂದಣಿ ಮತ್ತು ಮುದ್ರಾಂಕ ಶುಲ್ಕ 12,655 ಕೋಟಿ ರು., ಮೋಟಾರು ವಾಹನ ತೆರಿಗೆ 7,115 ಕೋಟಿ ರು., ಜಿಎಸ್‌ಟಿ ಪರಿಹಾರದಿಂದ 16,116 ಕೋಟಿ ರು. ನಿರೀಕ್ಷಿಸಲಾಗಿತ್ತು. ಆದರೆ, ಪ್ರಸ್ತುತ ಎಲ್ಲಾ ಆದಾಯದ ಮೂಲಗಳೂ ಬಹುತೇಕ ಸ್ಥಗಿತಗೊಂಡಿವೆ. ಮದ್ಯ ಮಾರಾಟ, ನೋಂದಣಿ ಮುದ್ರಾಂಕ, ಮೋಟಾರು ವಾಹನ ತೆರಿಗೆಯೂ ತೀವ್ರ ಇಳಿಕೆಯಾಗಿದೆ.

2020-21ರ ಆಯವ್ಯಯ ಅಂದಾಜು

ಜಿಡಿಪಿ: 18,05,742 ಕೋಟಿ ರು.

ಶೇ. 3 ಮಿತಿ: 60,000 ಕೋಟಿ ರು.

ಶೇ. 5 ಮಿತಿ: 90,280 ಕೋಟಿ ರು.

ಒಟ್ಟು ಸಾಲ: 3.79 ಲಕ್ಷ ರು.

 

ಕೇಂದ್ರದ ಹೊಸ ನಿಯಮದಂತೆ ಹೆಚ್ಚುವರಿ ಸಾಲದ ಆಯ್ಕೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪರಿಗಣಿಸಿದ್ದಾರೆ. ಇದಕ್ಕಾಗಿ ಕಾಯಿದೆ ತಿದ್ದುಪಡಿಯೂ ಅಗತ್ಯವಿರುವುದರಿಂದ ಹೆಚ್ಚು ಸಮಯ ತೆಗೆದುಕೊಳ್ಳಲಿದೆ.

- ಐಎಸ್‌ಎನ್‌ ಪ್ರಸಾದ್‌, ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ