ಹಾವೇರಿ(ಮೇ.20): ಕೊರೋನಾ ವೈರಸ್‌ ರೋಗ ಹರಡದಂತೆ ತಡೆಯಲು ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿ ಜಾರಿಗೊಳಿಸಿದ ನಿಷೇಧಾಜ್ಞೆಯನ್ನು ಮೇ. 31ರ ವರೆಗೆ ಮುಂದುವರಿಸಿ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಆದೇಶ ಹೊರಡಿಸಿದ್ದಾರೆ.

ಕೊರೋನಾ ವೈರಸ್‌ ಸೋಂಕನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಮತ್ತು ಪ್ರತ್ಯೇಕತೆ ಅಳವಡಿಸಿಕೊಳ್ಳುವುದು ಕಡ್ಡಾಯವಾಗಿದೆ. ನಿಷೇಧಾಜ್ಞೆ ಅವಧಿಯಲ್ಲಿ ಸಾರ್ವಜನಿಕರು ಐದಕ್ಕಿಂತ ಹೆಚ್ಚು ಜನ ಗುಂಪಾಗಿ ಸೇರುವುದನ್ನು ನಿಷೇಧಿಸಿದೆ. ತುರ್ತು ವೈದ್ಯಕೀಯ ಕಾರಣ ಅಥವಾ ಇತರೆ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಅಂತರ್‌ ರಾಜ್ಯಕ್ಕೆ ಖಾಸಗಿ ವಾಹನಗಳಲ್ಲಿ ಪ್ರಯಾಣಿಕರು ಪ್ರಯಾಣಿಸಲು ಸಕ್ಷಮ ಪ್ರಾಧಿಕಾರದಿಂದ ಕಡ್ಡಾಯ ಅನುಮತಿ ಪಡೆಯಬೇಕು. ಪ್ರತಿದಿನ ಸಂಜೆ 7 ರಿಂದ ಬೆಳಗ್ಗೆ 7ರ ವರೆಗೆ ಎಲ್ಲ ಚಟುವಟಿಕೆಗಳ ವ್ಯಕ್ತಿಗಳ ಸಂಚಾರವನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ. ಭಾನುವಾರದಂದು ಹೆಚ್ಚುವರಿಯಾಗಿ ಎಲ್ಲ ಅವಶ್ಯಕವಲ್ಲದ ಚಟುವಟಿಕೆಗಳ ವ್ಯಕ್ತಿಗಳ ಸಂಚಾರವನ್ನು ನಿಷೇಧಿಸಿದೆ.

ಕೊರೋನಾ ಹೊಡೆತ: 'ಆರ್ಥಿಕ ಸಂಕಷ್ಟದಿಂದ ಪುಟಿದೇಳುವ ಶಕ್ತಿ ರಾಜ್ಯಕ್ಕಿದೆ'

ಜಿಲ್ಲೆಯಲ್ಲಿನ ಎಲ್ಲ ಶಾಲಾ ಕಾಲೇಜುಗಳು, ಶೈಕ್ಷಣಿಕ ಹಾಗೂ ತರಬೇತಿ ಸಂಸ್ಥೆಗಳನ್ನು ಮತ್ತು ಕೋಚಿಂಗ್‌ ಸೆಂಟರ್‌ ತೆರೆಯುವುದನ್ನು ನಿರ್ಬಂಧಿಸಿದೆ. ಅದಾಗ್ಯೂ ಆನ್‌ಲೈನ್‌ ಮತ್ತು ದೂರ ಶಿಕ್ಷಣದ ಮೂಲಕ ತರಬೇತಿ, ಶಿಕ್ಷಣ ನೀಡಬಹುದಾಗಿದೆ. ಕೊರೋನಾ ವೈರಸ್‌ ಕಾರ್ಯದಲ್ಲಿ ತೊಡಗಿರುವ ಸಿಬ್ಬಂದಿಗಳಿಗೆ ಹಾಗೂ ಪ್ರವಾಸಿಗರಿಗೆ ಅಥವಾ ಕ್ವಾರಂಟೈನ್‌ನಲ್ಲಿ ಇರುವ ವ್ಯಕ್ತಿಗಳಿಗೆ ಮೀಸಲಿರಿಸಿರುವ ಅತಿಥಿ ಗೃಹಗಳನ್ನು ಹೊರತುಪಡಿಸಿ ಉಳಿದ ಎಲ್ಲ ಅತಿಥಿ ಗೃಹಗಳು, ಲಾಡ್ಜ್‌, ರೆಸಾರ್ಟ್‌, ಹೋಂ ಸ್ಟೆತೆರೆಯುವುದನ್ನು ನಿಷೇಧಿಸಿದೆ. ಆದಾಗ್ಯೂ ಸಾರ್ವಜನಿಕರಿಗೆ ಹೋಟೆಲ್‌ಗಳಲ್ಲಿ ಪಾರ್ಸಲ್‌ ಸೇವೆಯನ್ನು ಮಾತ್ರ ನಿಯಮಾನುಸಾರ ಮುಂದುವರಿಸಬಹುದಾಗಿದೆ. ಧಾರ್ಮಿಕ ಸ್ಥಳಗಳಿಗೆ, ಪ್ರಾರ್ಥನಾ ಮಂದಿರಗಳಿಗೆ, ಚಚ್‌ರ್‍, ಗುರುದ್ವಾರಗಳಲ್ಲಿ ಸಾರ್ವಜನಿಕ ಪ್ರಾರ್ಥನೆ, ಧರ್ಮ ಸಭೆ ನಡೆಸುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ.

ಪ್ರಯಾಣಿಕರ ವಾಹನಗಳು ಮತ್ತು ಬಸ್‌ಗಳ ಅಂತರ್‌ ರಾಜ್ಯ ಚಲನೆ, ರಾಜ್ಯಗಳು, ಯುಟಿಗಳ ಪರಸ್ಪರ ಒಪ್ಪಿಗೆಯೊಂದಿಗೆ ಅನುಮತಿಸಿದೆ. ರಾಜ್ಯಾದ್ಯಂತ ಪ್ರವಾಸಿ ವಾಹನಗಳು ರೈಲುಗಳು ಮತ್ತು ಬಸ್‌ಗಳು ಒಳಗೊಂಡಂತೆ ಸಾರಿಗೆ ಬಸ್‌ ಸೇವೆ ಮುಫೋಸಿಲ್‌ ಬಸ್‌ ಸರ್ವಿಸ್‌, ಸಬ್‌ ಅರ್ಬನ್‌ ರೈಲು ಸೇವೆಗಳು ಮತ್ತು ಖಾಸಗಿ ಬಸ್‌ಗಳು ಸಾಮಾಜಿಕ ಅಂತರ ಕ್ರಮಗಳನ್ನು ಕೈಗೊಂಡು ಸಂಚರಿಸಲು ಅನುಮತಿಸಿದೆ. ಜನರ ಮತ್ತು ವಾಹನದ ಅಂತರ್‌ ಜಿಲ್ಲಾ ಸಂಚಾರಕ್ಕೆ ಯಾವುದೇ ಪಾಸ್‌ ಅಗತ್ಯವಿಲ್ಲ.

ವ್ಯಕ್ತಿಗಳ ಚಲನೆಗಾಗಿ ಸ್ಟ್ಯಾಂಡರ್ಡ್‌ ಆಪರೇಟಿಂಗ್‌ ಪ್ರೊಸೆಸರ್‌ನಂತೆ ಕಾರ್ಯನಿರ್ವಹಿಸುವುದು, ಕಂಟೆನ್‌ಮೆಂಟ್‌ ನೋಟಿಫೈಡ್‌ ಏರಿಯಾಗಳಲ್ಲಿ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದ ಸೇವೆಗಳನ್ನು ನಿರ್ಬಂಧಿಸಿದೆ. ಯಾವುದೇ ವ್ಯಕ್ತಿ ಲಾಕ್‌ಡೌನ್‌ ನಿಯಮಗಳನ್ನು ಉಲ್ಲಂಘಿಸಿದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ ಅಡಿ ಶಿಕ್ಷೆಗೆ ಒಳಪಡುತ್ತಾರೆ. ಜಿಲ್ಲಾದ್ಯಂತ ಆರೋಗ್ಯ ಇಲಾಖೆ ಹೊರಡಿಸಿರುವ ಮಾರ್ಗಸೂಚಿ (ಎಸ್‌ಒಪಿ) ಅನ್ವಯ ಸಲೂನ್‌ ಹಾಗೂ ಬ್ಯೂಟಿ ಪಾರ್ಲರ್‌ ಆರಂಭಿಸಲು ಅನುಮತಿ ನೀಡಿದೆ. ಜಿಲ್ಲಾದ್ಯಂತ ಸಾಮಾಜಿಕ ಅಂತರ ಕಾಯ್ದುಕೊಂಡು ಆಟೋ ರಿಕ್ಷಾದಲ್ಲಿ ಡ್ರೈವರ್‌ ಸೇರಿ 2 ಪ್ರಯಾಣಿಕರು ಮತ್ತು ಟ್ಯಾಕ್ಸಿಯಲ್ಲಿ ಡ್ರೈವರ್‌ ಸೇರಿ 2 ಪ್ರಯಾಣಿಕರು ಮಾತ್ರ ನಿಯಮಾನುಸಾರ ಪ್ರಯಾಣಿಸಲು ಅನುಮತಿ ನೀಡಿದೆ ಎಂದು ತಿಳಿಸಿದ್ದಾರೆ.