Asianet Suvarna News Asianet Suvarna News

ಮೇಕೆದಾಟು ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಸಿದ್ಧ: ಸಚಿವ ಡಿ.ಕೆ. ಶಿವಕುಮಾರ್

ಮೇಕೆದಾಟು ಯೋಜನೆ ರಾಜ್ಯಕ್ಕೆ ಅಗತ್ಯವಾಗಿದ್ದು ನ್ಯಾಯಾಲಯದಲ್ಲಿ ಹೋರಾಟ ಮಾಡಿ ಯಾದರೂ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಸರ್ಕಾರ ಸಿದ್ಧವಿದೆ ಈ ಯೋಜನೆ ಅನುಷ್ಠಾನದಿಂದ ಜಿಲ್ಲೆ ಯ 550 ರಿಂದ 600 ಎಕರೆಯಷ್ಟು ಜಮೀನು ಮುಳುಗಡೆ ಆಗಬಹುದು ಅವರಿಗೆ ಪರ್ಯಾಯವಾಗಿ ಜಮೀನು ನೀಡಲಾಗುವುದು ಅಥವಾ ಕಳೆದುಕೊಳ್ಳುವ ಜಮೀನಿಗೆ ಉತ್ತಮ ಬೆಲೆ ನೀಡಲಾಗುವುದು ಎಂದ ಉಪ ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ 

state government is ready for the implementation of Mekedatu Project says DCM DK Shivakumar grg
Author
First Published Sep 9, 2024, 8:34 AM IST | Last Updated Sep 9, 2024, 8:34 AM IST

ಕನಕಪುರ(ಸೆ.09): ಕಾವೇರಿ ನದಿ ತೀರದ ಜನರ ಬದುಕು ಹಸನಗೊಳಿಸಲು ಹಾಗೂ ಬೆಂಗಳೂರು ಜನತೆಗೆ ಕುಡಿಯುವ ನೀರು ಪೂರೈಸಲು ಅನುಕೂಲವಾಗುವಂತೆ ಮೇಕೆದಾಟು ಯೋಜನೆ ನಮ್ಮ ರಾಜ್ಯಕ್ಕೆ ಅನಿವಾರ್ಯವಾಗಿದ್ದು ನ್ಯಾಯಾಲಯದಲ್ಲಿ ಹೋರಾಟ ಮಾಡಿಯಾದರೂ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿದರು.

ತಾಲೂಕಿನ ಹಾರೋಬೆಲೆ ಹತ್ತಿರದ ಮೂಲೆಗುಂದಿಯಲ್ಲಿ ಕಾವೇರಿ ನೀರಾವರಿ ನಿಗಮ ನಿಯಮಿತದಿಂದ ಅರ್ಕಾವತಿ ಜಲಾಶಯ ಬಲದಂಡೆ ಏತ ನೀರಾವರಿ ಯೋಜನೆಯ ಪುನಃಶ್ಚೇತನ ಕಾಮಗಾರಿಗೆ ಪರೀಕ್ಷಾರ್ಥ ಚಾಲನೆ ನೀಡಿ ಮಾತನಾಡಿದ ಅವರು, ಮೇಕೆದಾಟು ಯೋಜನೆ ರಾಜ್ಯಕ್ಕೆ ಅಗತ್ಯವಾಗಿದ್ದು ನ್ಯಾಯಾಲಯದಲ್ಲಿ ಹೋರಾಟ ಮಾಡಿ ಯಾದರೂ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಸರ್ಕಾರ ಸಿದ್ಧವಿದೆ ಈ ಯೋಜನೆ ಅನುಷ್ಠಾನದಿಂದ ಜಿಲ್ಲೆ ಯ 550 ರಿಂದ 600 ಎಕರೆಯಷ್ಟು ಜಮೀನು ಮುಳುಗಡೆ ಆಗಬಹುದು ಅವರಿಗೆ ಪರ್ಯಾಯವಾಗಿ ಜಮೀನು ನೀಡಲಾಗುವುದು ಅಥವಾ ಕಳೆದುಕೊಳ್ಳುವ ಜಮೀನಿಗೆ ಉತ್ತಮ ಬೆಲೆ ನೀಡಲಾಗುವುದು ಎಂದರು.

ಮೇಕೆದಾಟು ಕೇಸಲ್ಲಿ ನಮಗೇ ನ್ಯಾಯ: ಡಿಕೆಶಿ ವಿಶ್ವಾಸ

ಈ ಯೋಜನೆ ಅನುಷ್ಠಾನದಿಂದ ಕೆಲ ಅರಣ್ಯ ಪ್ರದೇಶವು ಮುಳುಗಡೆಯಾಗಬಹುದು, ಮಡಿವಾಳ, ಸಂಗಮದ ಗ್ರಾಮಗಳು ಮುಳುಗಡೆ ಆಗಿತೊಂದರೆ ಆಗಬಹುದಾಗಿದೆ ಆದರೂ ರಾಜ್ಯದ ಹಿತ ದೃಷ್ಟಿಯಿಂದ ಈ ಯೋಜನೆ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದೆ ಎಂದರು.

ಅರ್ಕಾವತಿ ಜಲಾಶಯ ಬಲದಂಡೆ ಏತ ನೀರಾವರಿ ಯೋಜನೆಯ ಆರಂಭದಿಂದಲೂ ತಾವು ಸಾಕಷ್ಟು ಶ್ರಮಿಸಿರುವುದಾಗಿ ತಿಳಿಸಿದ ಉಪಮುಖ್ಯಮಂತ್ರಿಗಳು, ಈ ಯೋಜನೆಯ ಅನುಷ್ಠಾನದಲ್ಲಿ ಭೂಮಿ ಕಳೆದು ಕೊಂಡವರಿಗೆ ಉತ್ತಮ ಪರಿಹಾರ ಕಲ್ಪಿಸಿಕೊಡಲು ಅಂದಿನ ಮುಖ್ಯಮಂತ್ರಿಗಳಾಗಿದ್ದ ಎಸ್.ಎಂ. ಕೃಷ್ಣ ಅವರು ಪ್ರಯತ್ನಿಸಿದ್ದರು, ಈ ಯೋಜನೆಯ ಲಾಭ ಪಡೆ ಯುತ್ತಿರುವವರು ತಮ್ಮ ಬದುಕನ್ನು ಹಸನು ಮಾಡಿಕೊಳ್ಳ ಬೇಕು ಈ ಯೋಜನೆಯಿಂದ ಅಂತರ್ಜಲ ಮಟ್ಟ ಹೆಚ್ಚಲಿದ್ದು,ಕೃಷಿ, ಹೈನುಗಾರಿಕೆಗೆ ಉಪಯುಕ್ತವಾಗಿದೆ ಎಂದು ಹೇಳಿದರು.

ಶಿಂಷಾದಿಂದ ಸಾತನೂರು ಹೋಬಳಿ ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ, ಹರಿಹರದ ಕೆಂಪೇಗೌಡನ ದೊಡ್ಡಿ ಕೆರೆ, ದೊಡ್ಡಾಲಳ್ಳಿಗೆ ಕೆರೆಗೂ ಕೂಡ ನೀರು ತುಂಬಿಸಲು ಯತ್ನಿಸಲಾಗುತ್ತಿದೆ, ಕೈಲಾಂಚ ಹೋಬಳಿ ಸೇರಿದಂತೆ ಮಾಗಡಿ, ಚನ್ನಪಟ್ಟಣ ಮಾಥೂರು ಕೆರೆಗೆ ನೀರು ತುಂಬಿಸುವ ಕೆಲಸ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ಮೇಕೆದಾಟು ವಿವಾದ ಮಧ್ಯಸ್ಥಿಕೆ ವಹಿಸಲು ಪ್ರಧಾನಿ ಮೋದಿ ನಕಾರ: ಡಿಕೆಶಿ

ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕೆ ಸಿ ವ್ಯಾಲಿ ಯಿಂದ ನೀರು ಪೂರೈಸಲಾಗುತ್ತಿದೆ, ಅದರಿಂದಾಗಿ ಅಲ್ಲಿನ ಜನ ಕೃಷಿ ಚಟುವಟಿಕೆ ನಿರ್ವಹಿಸುತ್ತಿದ್ದಾರೆ, ಎತ್ತಿನಹೊಳೆ ಯೋಜನೆಯಿಂದ ಅವರಿಗೆ ಕುಡಿಯುವ ನೀರು ಪೂರೈಸಲಾಗುವುದು ಎಂದು ಹೇಳಿದರು.

ಇನ್ನು ಮುಂದೆ ಕನಕಪುರ ತಾಲೂಕಿಗೆ ನಿಯಮಿತವಾಗಿ ಭೇಟಿ ನೀಡುವುದಾಗಿ ತಿಳಿಸಿದ ಉಪಮುಖ್ಯಮಂತ್ರಿಗಳು, ತಾಲೂಕಿನ ಹೋಬಳಿ ಕೇಂದ್ರಗಳಲ್ಲಿ ಸಾರ್ವಜನಿಕರ ಅಹವಾಲು ಆಲಿಸಲಾಗುವುದು ಎಂದರು.
ವಿಧಾನ ಪರಿಷತ್ ಸದಸ್ಯ ಎಸ್. ರವಿ, ಆರ್. ಇ. ಎಸ್. ಸಂಸ್ಥೆಯ ಅಧ್ಯಕ್ಷ ಚ್. ಕೆ. ಶ್ರೀಕಂಠು ಸೇರಿದಂತೆ ಪಕ್ಷದ ಸ್ಥಳೀಯ ಮುಖಂಡರು ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು.

Latest Videos
Follow Us:
Download App:
  • android
  • ios