ಮೇಕೆದಾಟು ವಿವಾದ ಮಧ್ಯಸ್ಥಿಕೆ ವಹಿಸಲು ಪ್ರಧಾನಿ ಮೋದಿ ನಕಾರ: ಡಿಕೆಶಿ
ಮಹದಾಯಿ ಸಮಸ್ಯೆ ಬಗೆಹರಿಸಲು ಸಭೆ ನಡೆಸುವಂತೆ ಕೇಳಿಕೊಂಡಿದ್ದೇವೆ. ಇದೇ ವೇಳೆ ಮೇಕೆದಾಟು ಸಮಸ್ಯೆ ವಿಚಾರ ಪ್ರಸ್ತಾಪಿದಾಗ ನೀವೇ ಮಾತುಕತೆ ಮೂಲಕ ಬಗೆಹರಿಸಿಕೊಂಡರೆ ಉತ್ತಮ ಎಂದು ಮೋದಿ ಸಲಹೆ ನೀಡಿದ್ದಾರೆ ಎಂದ ಡಿ.ಕೆ.ಶಿವಕುಮಾರ್
ನವದೆಹಲಿ(ಆ.01): ತಮಿಳುನಾಡು ಮತ್ತು ಕರ್ನಾಟಕದ ನಡುವೆ ತಿಕ್ಕಾಟಕ್ಕೆ ಕಾರಣವಾಗಿರುವ ಮೇಕೆದಾಟು ಯೋಜನೆ ವಿಚಾರದಲ್ಲಿ ಸದ್ಯಕ್ಕೆ ಮಧ್ಯಪ್ರವೇಶಿಸದಿರಲು ಕೇಂದ್ರ ನಿರ್ಧರಿಸಿದೆ. ಮೇಕೆದಾಟು ವಿವಾದವನ್ನು ತಮಿಳುನಾಡು ಮತ್ತು ಕರ್ನಾಟಕ ಪರಸ್ಪರ ಮಾತುಕತೆ ಮೂಲಕ ಬಗೆಹರಿಸಿಕೊಂಡರೆ ಉತ್ತಮ ಎಂದು ಪ್ರಧಾನಿ ಮೋದಿ ಅವರು ರಾಜ್ಯಕ್ಕೆ ಸಲಹೆ ನೀಡಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ದೆಹಲಿಯಲ್ಲಿ ಬುಧವಾರ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿದ್ದು, ಈ ವೇಳೆ ಅವರು ಈ ಸಲಹೆ ನೀಡಿದ್ದಾರೆ.
ಮೋದಿ ಭೇಟಿ ಬಳಿ ಬಳಿಕ ಸುದ್ದಿಗಾರರ ಜತೆಗೆ ಈ ವಿಚಾರ ಹಂಚಿಕೊಂಡ ಡಿ.ಕೆ.ಶಿವಕುಮಾರ್, ಮಹದಾಯಿ ಸಮಸ್ಯೆ ಬಗೆಹರಿಸಲು ಸಭೆ ನಡೆಸುವಂತೆ ಕೇಳಿಕೊಂಡಿದ್ದೇವೆ. ಇದೇ ವೇಳೆ ಮೇಕೆದಾಟು ಸಮಸ್ಯೆ ವಿಚಾರ ಪ್ರಸ್ತಾಪಿದಾಗ ನೀವೇ ಮಾತುಕತೆ ಮೂಲಕ ಬಗೆಹರಿಸಿಕೊಂಡರೆ ಉತ್ತಮ ಎಂದು ಮೋದಿ ಸಲಹೆ ನೀಡಿದ್ದಾರೆ ಎಂದರು.
ಮೇಕೆದಾಟು ಯೋಜನೆಗೆ ತಮಿಳರ ಅಡ್ಡಿ ಬೇಡ: ಮೋದಿಗೆ ದೇವೇಗೌಡ ಮನವಿ
ಇತಿಹಾಸದಲ್ಲೇ ಹೆಚ್ಚಿನ ನೀರು: ಈ ಬಾರಿ ತಮಿಳುನಾಡಿಗೆ 40 ಟಿಎಂಸಿ ನೀರು ಬಿಡಬೇಕಿತ್ತು. ಆದರೆ, 84 ಟಿಎಂಸಿಗಿಂತ ಹೆಚ್ಚು ನೀರು ಬಿಟ್ಟಿದ್ದೇವೆಂದು ಪ್ರಧಾನಿ ಗಮನಕ್ಕೆ ಇದೇ ವೇಳೆ ತರಲಾಗಿದೆ. ಈ ಬಾರಿ 2.25 ಲಕ್ಷ ಕ್ಯುಸೆಕ್ಸ್ ನೀರನ್ನು ತಮಿಳುನಾಡಿಗೆ ಮಂಗಳವಾರದ ತನಕ ಹರಿಸಲಾಗಿದೆ. ಮೊದಲ ಬಾರಿಗೆ ಇಷ್ಟು ಪ್ರಮಾಣದ ನೀರು ಹರಿಸಲಾಗಿದೆ. ಮಳೆ ಸ್ವಲ್ಪ ತಗ್ಗಿದ ಕಾರಣಕ್ಕೆ 1.45 ಲಕ್ಷ ಕ್ಯುಸೆಕ್ಸ್ ನೀರು ಹರಿಸುತ್ತಿದ್ದೇವೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಕೇರಳದಲ್ಲೂ ಉತ್ತಮ ಮಳೆಯಾಗುತ್ತಿರುವ ಕಾರಣಕ್ಕೆ ಕಬಿನಿ ಹಾಗೂ ಕೆಆರ್‌ಎಸ್ ಜಲಾಶಯದಲ್ಲಿ ನೀರನ್ನು ಸಂಗ್ರಹ ಮಾಡದೆ ಹೊರ ಬಿಡಲಾಗುತ್ತಿದೆ. ನದಿ ಪಾತ್ರದ ಜನ ಎಚ್ಚರಿಕೆಯಿಂದ ಇರಬೇಕು. ನದಿ ಬಳಿ ಹೋಗಬಾರದು ಎಂದು ಎಚ್ಚರಿಕೆ ನೀಡಲಾಗಿದೆ ಎಂದು ಡಿ.ಕೆ.ಶಿವಕುಮಾರ್ ಮಾಹಿತಿ ನೀಡಿದರು.