ಬೆಂಗಳೂರು(ಜು.09): ಅವಧಿ ಮುಗಿದಿರುವ ಗ್ರಾಮ ಪಂಚಾಯಿತಿಗಳ ಚುನಾವಣೆ ನಡೆಸುವ ಸಂಬಂಧ ಗ್ರಾ.ಪಂ.ಗಳ ಕ್ಷೇತ್ರವಾರು ಮತದಾರರ ಪಟ್ಟಿಯನ್ನು ಸಿದ್ಧಪಡಿಸಿಕೊಳ್ಳುವಂತೆ ರಾಜ್ಯ ಚುನಾವಣಾ ಆಯೋಗ ಜಿಲ್ಲಾಡಳಿತಗಳಿಗೆ ಸೂಚನೆ ನೀಡಿದೆ. 

ಈ ಸಂಬಂಧ ಸುತ್ತೋಲೆ ಹೊರಡಿಸಿರುವ ಆಯೋಗ, ಜು.13 ರಿಂದ 18ರವರೆಗೆ ಗ್ರಾಮ ಪಂಚಾಯಿತಿ ಕ್ಷೇತ್ರದ ವ್ಯಾಪ್ತಿಯಲ್ಲಿ ಮತದಾರರನ್ನು ಗುರುತಿಸಬೇಕು. ಜು.20ರಿಂದ 29ರವರೆಗೆ ಕ್ಷೇತ್ರ ವ್ಯಾಪ್ತಿಯಲ್ಲಿನ ಮನೆ ಮನೆಗೆ ತೆರಳಿ ಮತದಾರರ ಪಟ್ಟಿಯಲ್ಲಿನ ಮತದಾರರನ್ನು ಗುರುತಿಸಿ, ಆ.8ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಬೇಕು. ಆಕ್ಷೇಪಣೆ ಸಲ್ಲಿಸಲು ಆ.7 ಕೊನೆಯ ದಿನಾಂಕವಾಗಿದ್ದು, ಆ.31ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಬೇಕು ಎಂದು ಆಯೋಗ ಸುತ್ತೋಲೆಯಲ್ಲಿ ತಿಳಿಸಿದೆ. 

6 ತಿಂಗ್ಳು ಗ್ರಾಮ ಪಂಚಾಯಿತಿ ಎಲೆಕ್ಷನ್ ಇಲ್ಲ, ಅಧ್ಯಕ್ಷರ ಆಯ್ಕೆಗೆ ಹೊಸ ರೂಲ್ಸ್

ನ್ಯಾಯಾಲಯದ ಸೂಚನೆ ಮೇರೆಗೆ ಅಕ್ಟೋಬರ್‌ ತಿಂಗಳಿನಲ್ಲಿ ಪರಿಸ್ಥಿತಿಯನ್ನು ಅವಲೋಕಿಸಿ ಚುನಾವಣೆ ನಡೆಸುವ ಬಗ್ಗೆ ಆಯೋಗ ಹೈಕೋರ್ಟ್‌ಗೆ ತಿಳಿಸಿತ್ತು. ಈ ಬೆನ್ನಲ್ಲೇ ಇದೀಗ ಮತದಾರರ ಸಿದ್ಧಪಡಿಸಿಕೊಳ್ಳುವಂತೆ ಸೂಚಿಸಿದೆ.