6 ತಿಂಗ್ಳು ಗ್ರಾಮ ಪಂಚಾಯಿತಿ ಎಲೆಕ್ಷನ್ ಇಲ್ಲ, ಅಧ್ಯಕ್ಷರ ಆಯ್ಕೆಗೆ ಹೊಸ ರೂಲ್ಸ್
* ಕೋವಿಡ್ 19 ಹಿನ್ನೆಲೆ ಇನ್ನಾರು ತಿಂಗಳು ಚುನಾವಣೆ ಇಲ್ಲ
* ಎರಡೂವರೆ ವರ್ಷಕ್ಕೆ ಗ್ರಾಪಂ ಅಧ್ಯಕ್ಷರ ಬದಲಿಗೆ ನಿಯಮ
ಮೈಸೂರು, (ಜೂನ್16): ಬಹಳಷ್ಟು ಕಡೆ ಗ್ರಾಮ ಪಂಚಾಯಿತಿ ಸದಸ್ಯರ ಅವಧಿ ಮುಗಿದಿದೆ. ಆದರೆ, ಇನ್ನು ಕೋವಿಡ್ 19 ಹಿನ್ನೆಲೆಯಲ್ಲಿ 6 ತಿಂಗಳ ಕಾಲ ಯಾವುದೇ ಚುನಾವಣೆ ಇಲ್ಲ. ಆದರೆ, ಈ ಎಲ್ಲ ಕಡೆ ಆಡಳಿತಾಧಿಕಾರಿಗಳ ನೇಮಕ ಶೀಘ್ರದಲ್ಲಿ ಆಗಲಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ಪಿರಿಯಾಪಟ್ಟಣ ತಾಲೂಕಿನ ಕಿರುನಲ್ಲಿಯಲ್ಲಿ ಗ್ರಾಮ ಪಂಚಾಯಿತಿಯಲ್ಲಿ ರಾಜೀವ್ ಗಾಂಧಿ ಸೇವಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು,. 5 ವರ್ಷ ಅವಧಿ ಇರುವ ಕಾರಣಕ್ಕೆ ಉತ್ತಮ ಆಡಳಿತ ದೊರೆಯಬೇಕು ಎಂಬ ನಿಟ್ಟಿನಲ್ಲಿ 3 ವರ್ಷ ಅವಿಶ್ವಾಸ ಇರಲಿಲ್ಲ. ಆದರೆ, ಈಗ ಪುನಃ ಹಳೆಯ ಪದ್ಧತಿಯಂತೆ ಎರಡೂವರೆ ವರ್ಷಕ್ಕೆ ಅಧ್ಯಕ್ಷರ ಬದಲಾವಣೆ ಮಾಡುವ ಬಗ್ಗೆ ನಿಯಮ ಬರಲಿದೆ ಎಂದು ಸ್ಪಷ್ಟಪಡಿಸಿದರು.
ಗ್ರಾಮ ಪಂಚಾಯತ್: ಸದಸ್ಯರ ನೇಮಕಾತಿ ಬದಲಾಗಿ ಬೇರೆ ಮಾರ್ಗ ಕಂಡುಕೊಂಡ ಸರ್ಕಾರ
ಪಂಚಾಯಿತಿ ಪಾಲಿಟಿಕ್ಸ್ ಬಹಳ ಕಷ್ಟ
ಪಂಚಾಯಿತಿ ಪಾಲಿಟಿಕ್ಸ್ ಬಹಳ ಕಷ್ಟ. ಸ್ಥಳೀಯವಾಗಿ ಕೆಲಸ ಮಾಡಿದರೆ ಮಾತ್ರ ಅವರಿಗೆ ಮುಂದಿನ ಚುನಾವಣೆಯಲ್ಲಿ ಗೆಲುವು ಸಾಧ್ಯ. ಹೀಗಾಗಿ ಪಂಚಾಯಿತಿ ಸದಸ್ಯರು ಉತ್ತಮವಾಗಿ ಕೆಲಸ ಮಾಡಿ ಜನರ ವಿಶ್ವಾಸ ಗಳಿಸಿ ಮುಂದಿನ 5 ವರ್ಷ ಅವಧಿಗೆ ಪುನರಾಯ್ಕೆಯಾಗಲಿ ಎಂದು ಸಚಿವ ಸೋಮಶೇಖರ್ ಕಿವಿಮಾತು ಹೇಳಿದರು.
ಡಿಸಿಸಿ ಬ್ಯಾಂಕ್ ನಿಂದ ಹೆಚ್ಚುವರಿ ಸಾಲ
ಡಿಸಿಸಿ ಬ್ಯಾಂಕ್ ನಲ್ಲಿ ಹೊಸ ಸಾಲ ಕೊಡಲು ಪ್ರಾರಂಭಿಸಲಾಗಿದೆ. ಕಳೆದ ವರ್ಷ ಹದಿಮೂರುವರೆ ಸಾವಿರ ಕೋಟಿ ಸಾಲವನ್ನು ಕೊಡಲಾಗಿತ್ತು. ಈ ಬಾರಿ 14.5 ಸಾವಿರ ಕೋಟಿ ಸಾಲ ವಿತರಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಇದರಡಿ ಎಸ್ಸಿಎಸ್ಟಿ, ಬಡವರ ಬಂಧು ಸೇರಿದಂತೆ ಇನ್ನಿತರ ಯೋಜನೆಗಳಡಿ ಹೆಚ್ಚುವರಿ ಸಾಲಗಳನ್ನು ನೀಡಬೇಕು ಎಂದೂ ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಕೋವಿಡ್ ಮುಗಿದ ಬಳಿಕ ಕೆರೆ ತುಂಬಿಸುವ ಯೋಜನೆಗೆ ಚಾಲನೆ
ಪಿರಿಯಾಪಟ್ಟಣ ತಾಲೂಕಿನ ಕಿರುನಲ್ಲಿಗೆ ಕೆರೆ ತುಂಬಿಸುವ ಯೋಜನೆ ಬೇಕೆಂಬ ಬಗ್ಗೆ ಬೇಡಿಕೆ ನನ್ನ ಮುಂದೆ ಶಾಸಕರಿ ಇಟ್ಟಿದ್ದು, ಈ ಬಗ್ಗೆ ನೀರಾವರಿ ಸಚಿವರಾದ ರಮೇಶ್ ಜಾರಿಕಿಹೊಳಿ ಅವರ ಗಮನಕ್ಕೂ ತಂದಿದ್ದೇನೆ. ಕೋವಿಡ್ 19 ಮುಗಿದ ಬಳಿಕ ಚಾಲನೆ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.