SSLC ಪೂರ್ವಸಿದ್ಧತಾ ಪರೀಕ್ಷೆಗೆ ವಿದ್ಯಾರ್ಥಿಗಳೇ ಉತ್ತರ ಪತ್ರಿಕೆ ತರಬೇಕೆಂಬ ಆದೇಶ ಸಮರ್ಥಿಸಿಕೊಂಡ ಇಲಾಖೆ!
ಎಸ್‌ಎಸ್‌ಎಲ್‌ಸಿ ಪೂರ್ವಸಿದ್ಧತಾ ಪರೀಕ್ಷೆಗೆ ವಿದ್ಯಾರ್ಥಿಗಳೇ ಉತ್ತರ ಪತ್ರಿಕೆಗಳನ್ನ ತರುವ ವಿಚಾರಕ್ಕೆ ಮೌಖಿಕ ಆದೇಶದ ಕುರಿತಾಗಿ ಪರೀಕ್ಷೆ ಹಾಗೂ ಮೌಲ್ಯ ನಿರ್ಣಯಕ ಮಂಡಳಿ ಅಧ್ಯಕ್ಷೆ ಮಂಜುಶ್ರೀ ಸಮರ್ಥಿಸಿಕೊಂಡಿದ್ದಾರೆ. ಅದರಲ್ಲಿ ವಿಶೇಷವೇನಿಲ್ಲ ಹಿಂದಿನಿಂದಲೂ ವಿದ್ಯಾರ್ಥಿಗಳೇ ಉತ್ತರ ಪತ್ರಿಕೆಗಳನ್ನು ತರುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಬೆಂಗಳೂರು (ಫೆ.22): ಎಸ್‌ಎಸ್‌ಎಲ್‌ಸಿ ಪೂರ್ವಸಿದ್ಧತಾ ಪರೀಕ್ಷೆಗೆ ವಿದ್ಯಾರ್ಥಿಗಳೇ ಉತ್ತರ ಪತ್ರಿಕೆಗಳನ್ನ ತರುವ ವಿಚಾರಕ್ಕೆ ರಾಜ್ಯಾದ್ಯಂತ ಇದೀಗ ಚರ್ಚೆಗೆ ಗ್ರಾಸವಾಗಿದೆ. ಇತ್ತೀಚೆಗೆ ಪರೀಕ್ಷೆ ಶುಲ್ಕವೆಂದು ಪ್ರತಿ ವಿದ್ಯಾರ್ಥಿಯಿಂದ 50 ರೂ. ವಸೂಲಿ ಮಾಡಿದ್ದ ಸರ್ಕಾರ ಇದೀಗ ಪರೀಕ್ಷೆ ಬರೆಯಲು ಉತ್ತರ ಪತ್ರಿಕೆಯನ್ನೂ ವಿದ್ಯಾರ್ಥಿಗಳೇ ತರಬೇಕೆಂದ ಮೌಖಿಕ ಆದೇಶವನ್ನು ಕರ್ನಾಟಕ ಪರೀಕ್ಷೆ ಹಾಗೂ ಮೌಲ್ಯ ನಿರ್ಣಯಕ ಮಂಡಳಿ ಸಮರ್ಥಿಸಿಕೊಂಡಿರುವುದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.
ವಿದ್ಯಾರ್ಥಿಗಳೇ ಉತ್ತರ ಪತ್ರಿಕೆ ತರಬೇಕೆಂಬ ಮೌಖಿಕ ಆದೇಶದ ಕುರಿತಾಗಿ ಪರೀಕ್ಷೆ ಹಾಗೂ ಮೌಲ್ಯ ನಿರ್ಣಯಕ ಮಂಡಳಿ ಅಧ್ಯಕ್ಷೆ ಮಂಜುಶ್ರೀ ಪ್ರತಿಕ್ರಿಯೆ ನೀಡಿದ್ದು, ಪ್ರತಿ ಶಾಲೆಯಲ್ಲಿ ಪೂರ್ವ ಸಿದ್ಧತೆ ಪರೀಕ್ಷೆಗಳು ಹಾಗೂ ಮಧ್ಯವಾರ್ಷಿಕ ಪರೀಕ್ಷೆ ಗಳಿಗೆ ಮಕ್ಕಳೇ ಉತ್ತರ ಪತ್ರಿಕೆ ತರುತ್ತಾರೆ. ಈ ವರ್ಷ ಹೊಸದಾಗಿ ಶುರುವಾಗಿದೆ ಅನ್ನೋದೇನೂ ಇಲ್ಲ. ಇದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಮಕ್ಕಳೇ ಉತ್ತರ ಪತ್ರಿಕೆ ತರುವುದು ಬಹಳ ವರ್ಷಗಳಿಂದಲೂ ಇದೇ ಕ್ರಮವಿದ್ದು, ಇದರಲಲ್ಲಿ ವಿಶೇಷವೇನಿಲ್ಲ ಎಂದಿದ್ದಾರೆ. ಶಾಲೆ ಹಂತದಲ್ಲಿ ಆಗುವಂತಹದ್ದಕ್ಕೆ ಎಲ್ಲ ಪರೀಕ್ಷೆಗಳಿಗೂ ಮಕ್ಕಳೇ ಉತ್ತರ ಪತ್ರಿಕೆ ತೆಗೆದುಕೊಂಡು ಹೋಗಬೇಕು ಎಂದು ತಿಳಿಸಿದ್ದಾರೆ.
ಇನ್ನು ಪರೀಕ್ಷೆ ವೆಚ್ಚಕ್ಕಾಗಿ ಮಕ್ಕಳಿಂದ 50 ರೂಪಾಯಿ ಫೀಸ್ ಸಂಗ್ರಹಿಸಿರುವ ಬಗ್ಗೆ ಆರೋಪಗಳು ಕೇಳಿಬಂದಿವೆ. ಆದರೆ ಫೀ ಸಂಗ್ರಹಿಸಿದ್ದು ಪ್ರಶ್ನೆ ಪತ್ರಿಕೆ ಪ್ರಿಂಟ್ ಮಾಡೋದಕ್ಕೆ ಅಲ್ಲ, ಪ್ರಶ್ನೆ ಪತ್ರಿಕೆಯ ಟ್ರಾನ್ಸ್‌ಪೋಟೇಷನ್ ಹಾಗೂ ಸೇಫ್ಟಿಯನ್ನು ಮ್ಯಾನೇಜ್ ಮಾಡಲು ಬಳಸಲಾಗಿದೆ ಎಂದು ತಿಳಿಸಿದ್ದಾರೆ.