ಚಾಮರಾಜನಗರ[ಜ.27]: ಪ್ರಸಕ್ತ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆ ತರುವ ನಿಟ್ಟಿನಲ್ಲಿ ಪರೀಕ್ಷೆ ಅವಧಿಯನ್ನು ವಿಸ್ತರಣೆ ಮಾಡಲು ನಿರ್ಧರಿಸಲಾಗಿದೆ ಎಂದು ಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ಹೇಳಿದರು.

ನಗರದ ಜಿಲ್ಲಾಡಳಿತ ಭವನದಲ್ಲಿ ಆಯೋಜಿಸಿದ್ದ ಫಲಪುಷ್ಪ ಹಾಗೂ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ಸಾಲಿಗಿಂತ ಈ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆ ತರುವ ನಿಟ್ಟಿನಲ್ಲಿ ಅನೇಕ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದ್ದೇವೆ. ಮಕ್ಕಳಿಗೆ ಪರೀಕ್ಷೆ ವೇಳೆಯಲ್ಲಿ ನೀಡಿರುವ ಅವಧಿ ಕಡಿಮೆ ಇದೆ. ಇದರಿಂದ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಲು ಸಾಧ್ಯವಾಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಆದ್ದರಿಂದ ಪರೀಕ್ಷಾ ಅವಧಿಯನ್ನು ವಿಸ್ತರಣೆ ಮಾಡಲು ನಿರ್ಧರಿಸಲಾಗಿದ್ದು, ಪರೀಕ್ಷಾ ಅವಧಿಯನ್ನು ಕೆಲವು ವಿಷಯಕ್ಕೆ ಅರ್ಧಗಂಟೆ ಹಾಗೂ ಕೆಲವು ವಿಷಯಕ್ಕೆ ಕಾಲು ಗಂಟೆ ಅವಧಿಯನ್ನು ವಿಸ್ತರಣೆ ಮಾಡಲು ನಿರ್ಧರಿಸಲಾಗಿದೆ ಎಂದರು.

7ನೇ ಕ್ಲಾಸ್‌ ಪರೀಕ್ಷೆ ಮತ್ತೆ ಗೊಂದಲ, ಮೌಲ್ಯಾಂಕನ ಪರೀಕ್ಷೆ ಆದೇಶವೇ ಇಲ್ಲ!

ಸಿಸಿ ಕ್ಯಾಮೆರಾಗಳನ್ನು ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯುವ ಪ್ರತಿಯೊಂದು ಕೊಠಡಿಯಲ್ಲಿ ಅಳವಡಿಸಬೇಕು. ಆದರೆ ಕೆಲವು ಶಾಲೆಗಳಲ್ಲಿ ಕಾರಿಡಾರ್‌ನಲ್ಲಿ ಮಾತ್ರ ಅಳವಡಿಸಿರುತ್ತಾರೆ. ಈ ಕುರಿತು ಮಾಹಿತಿ ಬಂದಿದ್ದು, ಬೇರೆ ಯಾವ ರೀತಿ ಕ್ರಮ ಕೈಗೊಂಡರೆ ನಕಲು ತಪ್ಪಿಸಬಹುದು ಎಂಬುದನ್ನು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಜತೆ ಚರ್ಚಿಸಲಾಗುವುದು ಎಂದು ತಿಳಿಸಿದರು.

ಪರೀಕ್ಷೆ ಎನ್ನುವುದು ಹಬ್ಬವಾಗಬೇಕು. ಪರೀಕ್ಷೆ ಮಕ್ಕಳಿಗೆ ರಣಾಂಗಣ ಅಲ್ಲ, ಎಸ್‌ಎಸ್‌ಎಲ್‌ಸಿ ಮಕ್ಕಳ ಜೀವನದಲ್ಲಿ ತಿರುವು ಪಡೆದುಕೊಳ್ಳುವ ಕ್ಷಣ. ಆದ್ದರಿಂದ ಮಕ್ಕಳಿಗೆ ಪರೀಕ್ಷೆಯನ್ನು ಹಬ್ಬವ ವಾತಾವರಣವನ್ನು ಕಲ್ಪಿಸಬೇಕು ಎಂದರು.

ನಾಳೆ ಫೋನ್‌ಇನ್‌:

ಪ್ರತಿ ತಿಂಗಳು ಶಿಕ್ಷಣ ಇಲಾಖೆ ನಡೆಸುವ ಫೋನ್‌ಇನ್‌ ಕಾರ್ಯಕ್ರಮ ನಡೆಸಲಾಗುತ್ತಿದ್ದು, ಜ.28ರಂದು ನಡೆಯುವ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಕುರಿತು ಚರ್ಚೆ ನಡೆಸಲಾಗುತ್ತಿದೆ. ಮಕ್ಕಳು ಹಾಗೂ ಪೋಷಕರು ಕರೆ ಮಾಡಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಕುರಿತು ಮಾಡಬೇಕಾದ ಬದಲಾವಣೆಗಳು, ಈಗಿರುವ ಪರೀಕ್ಷಾ ಪದ್ಧತಿಯಿಂದ ಉಂಟಾಗುತ್ತಿರುವ ಸಮಸ್ಯೆಗಳ ನಿವಾರಣೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು.