ಪಿಎಫ್‌ಐ, ಎಸ್‌ಡಿಪಿಐ ನಿಷೇಧಕ್ಕಾಗಿ ರಾಜ್ಯವ್ಯಾಪಿ ಹೋರಾಟ: ಪ್ರಮೋದ್ ಮುತಾಲಿಕ್
ಹಿಂದೂ ಕಾರ್ಯಕರ್ತರ ಕಗ್ಗೊಲೆ ಖಂಡಿಸಿ, ಪಿಎಫ್‌ಐ, ಎಸ್‌ಡಿಪಿಐ ಬ್ಯಾನ್ ಮಾಡುವಂತೆ ಆಗ್ರಹಿಸಿ ಆ.5ರಂದು ಶ್ರೀರಾಮ ಸೇನೆಯಿಂದ ರಾಜ್ಯಮಟ್ಟದ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತಿಳಿಸಿದರು.
ಹುಬ್ಬಳ್ಳಿ (ಜು.29): ಹಿಂದೂ ಕಾರ್ಯಕರ್ತರ ಕಗ್ಗೊಲೆ ಖಂಡಿಸಿ, ಪಿಎಫ್‌ಐ, ಎಸ್‌ಡಿಪಿಐ ಬ್ಯಾನ್ ಮಾಡುವಂತೆ ಆಗ್ರಹಿಸಿ ಆ. 5ರಂದು ಶ್ರೀರಾಮ ಸೇನೆಯಿಂದ ರಾಜ್ಯಮಟ್ಟದ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀರಾಮಸೇನೆಯ ಪ್ರಮೋದ್ ಮುತಾಲಿಕ್ ತಿಳಿಸಿದರು. ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರವೀಣ ನೆಟ್ಟಾರು ಕುಟುಂಬಸ್ಥರಿಗೆ ಭೇಟಿ ಆಗಿ ಸಾಂತ್ವನ ಹೇಳಲಿದ್ದೇವೆ. ಆ. 5ರಂದು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಕಚೇರಿ ಎದುರು ಶ್ರೀರಾಮಸೇನೆಯಿಂದ ಪ್ರತಿಭಟನೆ ನಡೆಯಲಿದೆ. ಬೆಂಗಳೂರಿನಲ್ಲಿ ನಾನು ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಿದ್ದೇನೆ ಎಂದರು.
ಪಿಎಫ್‌ಐ, ಎಸ್‌ಡಿಪಿಐ ಬ್ಯಾನ್ ಕುರಿತು ಮುಖ್ಯಮಂತ್ರಿಗಳು ಛತ್ತೀಸಗಢದ ಉದಾಹರಣೆ ಕೊಟ್ಟು ಕಣ್ಣೊರೆಸುವ ತಂತ್ರ ಮಾಡಿದ್ದಾರೆ. ಕೇಂದ್ರದಲ್ಲಿ ನಿಮ್ಮದೆ ಸರ್ಕಾರ ಇದೆ. ಒಂದೆರಡು ರಾಜ್ಯಗಳಲ್ಲಿ ಬೇಡ, ದೇಶಾದ್ಯಂತ ಪಿಎಫ್‌ಐ, ಎಸ್‌ಡಿಪಿಐ ಬ್ಯಾನ್ ಆಗುವಂತೆ ಮಾಡಿ. ಸಿಮಿ ಸಂಘಟನೆ ಬ್ಯಾನ್ ಆದಂತೆ ಎಸ್‌ಡಿಪಿಐ ಬ್ಯಾನ್ ಮಾಡಿ. ಬೇರೆ ಸ್ವರೂಪದಲ್ಲಿ ಪುನಃ ಬಂದರೆ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದರು. ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ನಿನ್ನೆ ಬಿಜೆಪಿ ಆಯೋಜಿಸಿದ್ದು ಜನೋತ್ಸವ ಅಲ್ಲ, ಮರಣೋತ್ಸವ. ಒಂದು ವೇಳೆ ಕಾರ್ಯಕ್ರಮ ನಡೆದಿದ್ದರೆ ಚಪ್ಪಲಿ ರಾಶಿ ವೇದಿಕೆ ಮೇಲೆ ಇರುತ್ತಿತ್ತು. ಕಾರ್ಯಕ್ರಮ ರದ್ದು ಮಾಡಿ ತಮ್ಮ ಮರ್ಯಾದೆ ಉಳಿಸಿಕೊಂಡಿದ್ದಾರೆ ಎಂದರು.
Bagalkote: ಬಿಎಸ್‌ವೈ ಕ್ಷೇತ್ರ ಬಿಟ್ಟು ಕೊಟ್ಟು ಎಡುವುತ್ತಿದ್ದಾರೆ ಎನ್ನಿಸುತ್ತಿದೆ: ಪ್ರಮೋದ್ ಮುತಾಲಿಕ್
ಬಿಜೆಪಿಯಿಂದ ಕಠಿಣ ಕ್ರಮ ಎನ್ನುವುದಕ್ಕೆ ಅರ್ಥವಿಲ್ಲ. ಕೊಲೆಗಡುಕರೆಲ್ಲ ರಾಜಾರೋಷವಾಗಿ ಓಡಾಡುತ್ತಿದ್ದಾರೆ. ಮುಖ್ಯಮಂತ್ರಿಗಳು ಪ್ರವೀಣ ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ವನ ಹೇಳಬೇಕು. ಅವರ ಪತ್ನಿಗೆ ಸರ್ಕಾರಿ ನೌಕರಿ ನೀಡಬೇಕು. ಪ್ರವೀಣ ಕನಸಿನಂತೆ ಕುಟುಂಬಕ್ಕೆ ಮನೆ ಕಟ್ಟಿಕೊಡಬೇಕು ಎಂದು ಆಗ್ರಹಿಸಿದರು. ಪರೇಶ ಮೇಸ್ತಾ, ಶರದ್ ಮಡಿವಾಳ ಹಂತಕರು ಸಮಾಜದಲ್ಲಿ ಓಡಾಡಿಕೊಂಡಿದ್ದಾರೆ. ರಾಜ್ಯದಲ್ಲಿ 30 ಹಿಂದೂ ಯುವಕರ ಕೊಲೆಯಲ್ಲಿ 6 ಪ್ರಕರಣವನ್ನು ಎನ್‌ಐಎ ವಹಿಸಲಾಗಿದೆ. ಅದರ ವರದಿ ಬಹಿರಂಗ ಪಡಿಸಿ. ಎನ್‌ಐಎಗೆ ತನಿಖೆಗೆ ನೀಡುವುದು ಕೇವಲ ಕಣ್ಣೊರೆಸುವ ತಂತ್ರ. ಇಲ್ಲಿನ ಪೊಲೀಸರಿಗೆ ತಾಕತ್ತಿದೆ. ಅವರಿಗೆ ತನಿಖೆಗೆ ಮುಕ್ತ ಅವಕಾಶ ನೀಡಬೇಕು ಎಂದು ಮುತಾಲಿಕ್ ಒತ್ತಾಯಿಸಿದರು.
ಪ್ರವೀಣ ಹತ್ಯೆ ಅಪರಾಧಿಗಳನ್ನು ಎನ್‌ಕೌಂಟರ್ ಮಾಡಬೇಕು. ಇಲ್ಲವೆ ಒಂದೇ ತಿಂಗಳಲ್ಲಿ ನ್ಯಾಯಾಲಯದ ಪ್ರಕ್ರಿಯೆ ಮುಗಿಸಿ ಕೊಲೆಗಡುಕರನ್ನು ಗಲ್ಲಿಗೇರಿಸುವ ಪ್ರಕ್ರಿಯೆ ಆಗಬೇಕು ಎಂದ ಮುತಾಲಿಕ್, ಕಾಂಗ್ರೆಸ್, ಬಿಜೆಪಿ ಎರಡೂ ಹಿಂದೂಗಳನ್ನು ಕಾಪಾಡುವುದಿಲ್ಲ. ಅದಕ್ಕಾಗಿ ಪರ್ಯಾಯವಾಗಿ ರಾಜಕೀಯ ಶಕ್ತಿ ಬೇಕಾಗಿದೆ. ಹಿಂದೂಗಳ ರಕ್ಷಣೆಗೆ ಸ್ವಾಮೀಜಿಗಳ ನೇತೃತ್ವದಲ್ಲಿ ಈ ಬಗ್ಗೆ ಚಿಂತನೆ ನಡೆಯಲಿದೆ. ಇಂಥ ಸಂದರ್ಭದಲ್ಲಿ ಎಲ್ಲ ಸ್ವಾಮೀಜಿಗಳು ಪ್ರತಿಕ್ರಿಯಿಸಬೇಕು ಎಂದರು.
ಪ್ರತಿ ಕಾರ್ಯಕರ್ತಗೂ ರಕ್ಷಣೆ ಸಾಧ್ಯವೆ ಎಂಬ ತೇಜಸ್ವಿ ಸೂರ್ಯ ಹೇಳಿಕೆ ಖಂಡಿಸಿದ ಮುತಾಲಿಕ್, ಮಾತು ಹಿಂಪಡೆಯಲು ಒತ್ತಾಯಿಸಿದರು. ರಾಜ್ಯದ ಪೊಲೀಸ್ ವ್ಯವಸ್ಥೆ ಆಂತರಿಕವಾಗಿ ನಾಶವಾಗಿದೆ. ಅದಕ್ಕೆ ಪಿಎಸ್‌ಐ ಹಗರಣವೇ ಸಾಕ್ಷಿ. ಸರ್ಕಾರದ ಬಳಿ ಆಗಲ್ಲ ಎಂದಾದರೆ ನಮಗೆ ಅಧಿಕಾರ ಕೊಡಿ. ಜಿಹಾದಿಗಳ ಹುಟ್ಟು ಅಡಗಿಸುತ್ತೇವೆ. ಅವರನ್ನು ದೇಶ ಬಿಟ್ಟು ಓಡಿಸುತ್ತೇವೆ. ನಮಗೆ ಅಧಿಕಾರ ಕೊಡಿ, ರಾಜ್ಯದಲ್ಲಿ ಎರಡನೇ ಯೋಗಿಯಾಗಿ ಆಡಳಿತ ನಡೆಸುತ್ತೇವೆ. ಬುಲ್ಡೋಜರ್ ಮಾದರಿ ಜಾರಿಗೆ ತರುತ್ತೇವೆ ಎಂದು ಹೇಳಿದರು.
ಎಸ್‌ಡಿಪಿಐ, ಪಿಎಫ್‌ಐ ಬಿಜೆಪಿಯ ಬೀ ಟಿಂ: ರಾಜ್ಯ ಸರ್ಕಾರದ ವಿರುದ್ಧ ಪ್ರಮೋದ್ ಮುತಾಲಿಕ್ ಕಿಡಿ
ಶ್ರೀರಾಮ ಸೇನೆ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಮಾತನಾಡಿ, ಪ್ರಮೋದ್ ಮುತಾಲಿಕ್ ಅವರ ರಕ್ಷಣೆಗೆ ಕಾಂಗ್ರೆಸ್ ಸರ್ಕಾರ ಹಿಂದೆ ಇಬ್ಬರು ಗನ್ ಮ್ಯಾನ್ ಒದಗಿಸಿತ್ತು. ಇದೀಗ ಒಬ್ಬರು ಮಾತ್ರ ಇದ್ದಾರೆ. ಕಳೆದ ಚುನಾವಣೆ ಬಳಿಕ ಅವರ ಗನ್ ಲೈಸನ್ಸ್ ಪರವಾನಗಿ ನವೀಕರಣ ಮಾಡಿಕೊಡುತ್ತಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ ಗೃಹ ಮಂತ್ರಿಗಳು ಉಡಾಫೆ ಮಾತನಾಡಿದ್ದರು. ಅದೇರೀತಿ ಸಿದ್ಧಲಿಂಗ ಸ್ವಾಮೀಜಿಗೆ ಇದ್ದ ಗನ್ ಮ್ಯಾನ್ ವಾಪಸ್ ಪಡೆಯಲಾಗಿದೆ. ಹಿಂದೂ ಮುಖಂಡರ ರಕ್ಷಣೆಗೆ ಬಿಜೆಪಿ ನಿರ್ಲಕ್ಷ್ಯ ವಹಿಸುತ್ತಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಶ್ರೀರಾಮ ಸೇನೆಯ ಮುಖಂಡರಿದ್ದರು.