Asianet Suvarna News Asianet Suvarna News

ಸಿದ್ದು ವಿರುದ್ಧ ಗೂಢಚರ್ಯೆ : ಪರಿಶೀಲನೆಗೆ ಕೇಂದ್ರ ಸೂಚನೆ

 • ಪೆಗಾಸಸ್‌ ತಂತ್ರಾಂಶ ಮೂಲಕ ತಮ್ಮ ವಿರುದ್ಧ ಗೂಢಚಾರಿಕೆ ನಡೆಯುತ್ತಿದೆ ಎಂದು ಆರೋಪ
 • ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬರೆದಿರುವ ಪತ್ರದ ಸಂಬಂಧ ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರ ಸೂಚನೆ 
Spying on Siddaramaiah Central govt instruct stat govt  To take Action snr
Author
Bengaluru, First Published Nov 7, 2021, 7:23 AM IST
 • Facebook
 • Twitter
 • Whatsapp

 ಬೆಂಗಳೂರು (ನ.07):  ಪೆಗಾಸಸ್‌ (Pegasas) ತಂತ್ರಾಂಶ ಮೂಲಕ ತಮ್ಮ ವಿರುದ್ಧ ಗೂಢಚಾರಿಕೆ ನಡೆಯುತ್ತಿದೆ ಎಂದು ಆರೋಪಿಸಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (siddaramaiah) ಬರೆದಿರುವ ಪತ್ರದ ಸಂಬಂಧ ಕೇಂದ್ರ ಸರ್ಕಾರವು (Govt Of india) ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ಪರಿಶೀಲನೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ (Karnataka Govt) ಸೂಚನೆ ನೀಡಿದೆ.

ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವ ಕೇಂದ್ರ ಗೃಹ ಸಚಿವಾಲಯವು, ಇದು ರಾಜ್ಯಕ್ಕೆ ಸಂಬಂಧಪಟ್ಟ ಕಾನೂನು ಸುವ್ಯವಸ್ಥೆಯ (law and Order) ವಿಷಯವಾಗಿದೆ. ಪೊಲೀಸ್‌ (Police) ಮತ್ತು ಸಾರ್ವಜನಿಕ (Publics) ಆದೇಶವು ರಾಜ್ಯ ಸರ್ಕಾರದ ವ್ಯಾಪ್ತಿಗೊಳಪಡುತ್ತದೆ. ಹೀಗಾಗಿ ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಸಿದ್ದರಾಮಯ್ಯ ಅವರು ಬರೆದಿರುವ ಪತ್ರದ ಕುರಿತು ಕೈಗೊಂಡಿರುವ ಸೂಕ್ತ ಕ್ರಮದ ಬಗ್ಗೆ ನೇರವಾಗಿ ಅವರಿಗೆ ಮಾಹಿತಿ ನೀಡಬೇಕು. ಅದಷ್ಟು ತ್ವರಿತವಾಗಿ ಈ ಬಗ್ಗೆ ವಿಚಾರಣೆ ಕೈಗೊಳ್ಳಬೇಕು ಎಂದು ಸೂಚನೆ ನೀಡಿದೆ.

ತಮ್ಮ ವಿರುದ್ಧ ಗೂಢಚಾರಿಕೆ ನಡೆಯುತ್ತಿದೆ ಎಂದು ಆರೋಪಿಸಿ ಸಿದ್ದರಾಮಯ್ಯ (Siddaramaiah) ಕೇಂದ್ರ ಗೃಹ ಇಲಾಖೆಗೆ ಪತ್ರ ಬರೆದಿದ್ದರು. ಪೆಗಾಸಸ್‌ ಗೂಢಚರ್ಯೆ ವಿಚಾರವಾಗಿ ಪ್ರಸ್ತಾಪ ಮಾಡಿದ್ದ ಅವರು, ತಮ್ಮ ವಿರುದ್ಧ ಗೂಢಚಾರಿಕೆ ನಡೆಯುತ್ತಿದೆ ಎಂದು ದೂರಿದ್ದರು. ಇದನ್ನು ಪರಿಶೀಲನೆ ನಡೆಸಿದ ಕೇಂದ್ರ ಗೃಹ ಇಲಾಖೆಯು ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದೆ.

ಪೆಗಾಸಸ್ ತನಿಖೆ ಸುಪ್ರೀಂ ಸಮಿತಿ

ಮಹತ್ವದ ಬೆಳವಣಿಗೆಯೊಂದರಲ್ಲಿ, ಇಸ್ರೇಲಿ  ಗುಪ್ತಚರ ತಂತ್ರಾಂಶವಾದ ಪೆಗಾಸಸ್‌ (Pegasas) ಬಳಸಿ ಭಾರತದ ರಾಜಕಾರಣಿಗಳು, ಪತ್ರಕರ್ತರು ಹಾಗೂ ಇತರ ಕೆಲವು ಗಣ್ಯರು ಸೇರಿ 300 ಮಂದಿಯ ದೂರವಾಣಿ ಸಂಖ್ಯೆಗಳ ಮೇಲೆ ಗೂಢಚಾರಿಕೆ ನಡೆಸಿದ ಆರೋಪದ ಕುರಿತು ತನಿಖೆ ನಡೆಸಲು ಸುಪ್ರೀಂಕೋರ್ಟ್‌ (Supreme Court) ಮೂವರು ತಜ್ಞರ ಸಮಿತಿಯೊಂದನ್ನು ರಚಿಸಿದೆ.

ತನಿಖೆ ಕೋರಿ ಸಲ್ಲಿಸಿದ್ದ ಹಲವು ಅರ್ಜಿಗಳ ಕುರಿತು ಮಂಗಳವಾರ ಮಧ್ಯಂತರ ಆದೇಶ ಹೊರಡಿಸಿದ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ (NV Ramana) ಅವರನ್ನೊಳಗೊಂಡ ನ್ಯಾಯಪೀಠ, ‘ಸರ್ಕಾರ ರಾಷ್ಟ್ರೀಯ ಭದ್ರತೆಯ ಕಾರಣ ನೀಡಿದೆ ಎಂಬ ಕಾರಣಕ್ಕೆ ನ್ಯಾಯಾಂಗ ಮೂಕ ಪ್ರೇಕ್ಷಕನಾಗಿ ಕುಳಿತಿರುವುದು ಸಾಧ್ಯವಿಲ್ಲ ಮತ್ತು ಪ್ರಜಾಪ್ರಭುತ್ವ ದೇಶವೊಂದರಲ್ಲಿ ಜನರ ಮೇಲೆ ವಿವೇಚನೆಯಿಲ್ಲದೇ ಗೂಢಚರ್ಯೆ ನಡೆಸಲು ಬಿಡಲಾಗದು’ ಎಂದು ಕಠು ಮಾತುಗಳಲ್ಲಿ ಹೇಳಿದೆ.

ನಾಗರಿಕ ಪ್ರಜಾಪ್ರಭುತ್ವ ಸಮಾಜ ಕನಿಷ್ಠ ಖಾಸಗಿತನವನ್ನು ಬಯಸುತ್ತದೆ. ಖಾಸಗಿತನ ಎಂಬುದು ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರಿಗೆ ಮಾತ್ರ ಕಳವಳದ ವಿಷಯವಲ್ಲ. ದೇಶದ ಪ್ರತಿ ಪ್ರಜೆಗೂ ಖಾಸಗಿತನ ಉಲ್ಲಂಘನೆಯಿಂದ ರಕ್ಷಣೆ ನೀಡಬೇಕಾಗುತ್ತದೆ. ಈ ಅಪೇಕ್ಷೆಗಳೇ ನಮಗೆ ನಮ್ಮ ಆಯ್ಕೆಗಳಾದ ಸ್ವಾತಂತ್ರ ಮತ್ತು ಹಕ್ಕುಗಳನ್ನು ಚಲಾಯಿಸಲು ಅವಕಾಶ ಕಲ್ಪಿಸುತ್ತದೆ ಎಂದು ನ್ಯಾಯಪೀಠ ಹೇಳಿತು.

ರಾಷ್ಟ್ರೀಯ ಭದ್ರತೆಯ ವಿಷಯ, ಸಂಸ್ಥೆಗಳ ಅಧಿಕಾರ ಮತ್ತು ಇಂಥ ವಿಷಯಗಳ ಪರಿಶೀಲನೆಯಲ್ಲಿ ನ್ಯಾಯಾಂಗದ ಸೀಮಿತ ಪಾತ್ರವನ್ನು ನಾವು ಒಪ್ಪುತ್ತೇವೆಯಾದರೂ, ಪ್ರತಿ ಬಾರಿಯೂ ರಾಷ್ಟ್ರೀಯ ಭದ್ರತೆ ವಿಷಯ ಪ್ರಸ್ತಾಪಿಸಿದಾಗ ಸರ್ಕಾರಗಳಿಗೆ ವಿನಾಯಿತಿ ನೀಡಲಾಗದು. ಕೇವಲ ರಾಷ್ಟ್ರೀಯ ಭದ್ರತೆ ಎಂದು ಹೇಳಿ ಸರ್ಕಾರಗಳು ಸುಮ್ಮನೆ ಕೂರಲಾಗದು. ಜನರು ಬಯಸಿರುವ ಮಾಹಿತಿಗಳು, ರಾಷ್ಟ್ರೀಯ ಭದ್ರತೆಯ ಕಾರಣಕ್ಕಾಗಿ ರಹಸ್ಯವಾಗಿಯೇ ಇರಬೇಕು ಎಂಬುದನ್ನು ಸಾಬೀತುಪಡಿಸುವ ಅಂಶಗಳನ್ನು ಸರ್ಕಾರ ಮುಂದಿಡಬೇಕು. ನಿಮ್ಮ ನಿಲುವನ್ನು ಸಮರ್ಥಿಸಿಕೊಳ್ಳುವ ಅಂಶಗಳನ್ನು ತೋರಿಸಬೇಕು ಎಂದು ಸರ್ಕಾರದ ವಿರುದ್ಧ ಕಿಡಿಕಾರಿತು.

ಇದೇ ವೇಳೆ ಪತ್ರಿಕಾ ಸ್ವಾತಂತ್ರ್ಯವು ಪ್ರಜಾಪ್ರಭುತ್ವದ ಮಹತ್ವದ ಆಧಾರ ಸ್ತಂಭ ಎಂದು ಹೇಳಿರುವ ಸುಪ್ರಿಂ ಕೋರ್ಟ್‌ (Supreme Court), ಪೆಗಾಸಸ್‌ ಕದ್ದಾಲಿಕೆ ವಿವಾದ ಹಿನ್ನೆಲೆಯಲ್ಲಿ ಪತ್ರಿಕಾ ಸ್ವಾತಂತ್ರ್ಯ ರಕ್ಷಣೆಯಲ್ಲಿ ತನ್ನ ಪಾತ್ರ ಮಹತ್ವದ್ದಾಗಿದೆ. ಒಬ್ಬ ವ್ಯಕ್ತಿ ತನ್ನ ಮೇಲೆ ಗೂಢಚಾರಿಕೆ ನಡೆದಿದೆ ಎಂದು ಗೊತ್ತಾದರೆ ಭಯದಲ್ಲಿ ಸಿಲುಕುತ್ತಾನೆ. ಆಗ ಆತನ ಹಕ್ಕುಗಳಿಗೆ ಭಂಗ ಬರುತ್ತದೆ. ಅದೇ ರೀತಿ ಪತ್ರಿಕೆಗಳ ಮೇಲೆ ಗೂಢಚಾರಿಕೆ ನಡೆಸಿದಾಗ ಪತ್ರಿಕಾ ಸ್ವಾತಂತ್ರ್ಯಕ್ಕೆ ದಕ್ಕೆ ಬರುತ್ತದೆ. ಆಗ ಪತ್ರಿಕೆಗಳು ನಿಖರ ಹಾಗೂ ವಿಶ್ವಾಸಾರ್ಹ ವರದಿಗಳನ್ನು ಪ್ರಕಟಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಪತ್ರಿಕೆಗಳು ತಮ್ಮ ಮೂಲಗಳನ್ನೇ ಆಧರಿಸಿ ವರದಿಗಾರಿಕೆ ಮಾಡುತ್ತಿರುತ್ತವೆ. ಆದರೆ ಗೂಢಚಾರಿಕೆ ನಡೆಸಿದ ಪಕ್ಷದಲ್ಲಿ ಮೂಲಗಳು ಜನಹಿತಾಸಕ್ತಿಯ ಮಾಹಿತಿಗಳನ್ನು ಪತ್ರಿಕೆಗಳಿಗೆ ನೀಡದೇ ಹೋಗಬಹುದು. ಹೀಗಾಗಿ ಪೆಗಾಸಸ್‌ ಗೂಢಚಾರಿಕೆ ಪ್ರಕರಣದಲ್ಲಿ ಪತ್ರಿಕಾ ಸ್ವಾತಂತ್ರ್ಯದ ರಕ್ಷಣೆಗೆ ಪ್ರಮುಖ ಆದ್ಯತೆ ನೀಡಬೇಕಾಗುತ್ತದೆ. ಮೂಲಗಳ ರಕ್ಷಣೆಯತ್ತ ಗಮನ ಹರಿಸಬೇಕಾಗುತ್ತದೆ’ ಎಂದಿತು.

Follow Us:
Download App:
 • android
 • ios