* ಪೆಗಾಸಸ್‌ ಮೂಲಕ ಬೇಹುಗಾರಿಕೆ, ಸುಪ್ರೀಂ ವಿಚಾರಣೆ* ವಿಸ್ತೃತ ಪ್ರಮಾಣ ಪತ್ರ ಸಲ್ಲಿಕೆಗೆ ಕೇಂದ್ರ ಸರ್ಕಾರ ನಕಾರ

ನವದೆಹಲಿ(ಸೆ.14): ಪೆಗಾಸಸ್‌ ಬೇಹುಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ, ದೇಶದ ಹಿತಾಸಕ್ತಿಯ ದೃಷ್ಟಿಯಿಂದ ವಿಸ್ತೃತ ಪ್ರಮಾಣಪತ್ರವನ್ನು ಸಲ್ಲಿಸಲು ತಾನು ಬಯಸಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರಿಂಕೋರ್ಟ್‌ಗೆ ಸೊಮವಾರ ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಕೋರ್ಟ್‌, ತನಿಖೆ ಕೋರಿದ್ದ ಅರ್ಜಿಯ ತೀರ್ಪನ್ನು ಕಾದಿರಿಸಿರುವುದಾಗಿ ತಿಳಿಸಿದೆ. ಇಸ್ರೇಲ್‌ ಮೂಲದ ಸ್ಪೈವೇರ್‌ ಬಳಸಿ ರಾಜಕಾರಣಿಗಳು, ಗಣ್ಯರು ಮತ್ತು ಸೆಲೆಬ್ರಿಟಿಗಳ ಫೋನ್‌ಗಳನ್ನು ಕದ್ದಾಲಿಕೆ ಮಾಡಿದ ಆರೋಪ ದೇಶದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವತಂತ್ರ ತನಿಖೆ ನಡೆಸಬೇಕು ಎಂದು ಕೋರಿ ಸಲ್ಲಿಕೆಯಾದ ಅರ್ಜಿಗಳ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್‌, ಅಫಿಡವಿಟ್‌ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿತ್ತು.

ಆದರೆ, ಇದು ದೇಶದ ಭದ್ರತೆಗೆ ಸಂಬಂಧಿಸಿದ ವಿಷಯವಾಗಿದ್ದರಿಂದ ಸಾರ್ವಜನಿಕವಾಗಿ ಅವುಗಳ ಮಾಹಿತಿಯನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ದೇಶದ ಭದ್ರತೆಯ ದೃಷ್ಟಿಯಿಂದ ಅಫಿಡವಿಟ್‌ನಲ್ಲಿ ವಿಸ್ತೃತ ಮಾಹಿತಿ ನೀಡುವ ಅಥವಾ ಬಹಿರಂಗವಾಗಿ ಚರ್ಚಿಸುವುದಕ್ಕೆ ಸಾಧ್ಯವಿಲ್ಲ. ಈ ಸಂಬಂಧ ವಿಷಯ ತಜ್ಞರ ಸಮಿತಿಯೊಂದನ್ನು ರಚನೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.