Asianet Suvarna News Asianet Suvarna News

‘ಕನ್ನಡಪ್ರಭ’ ವರದಿ ಪರಿಷತ್‌ನಲ್ಲಿ ಪ್ರತಿಧ್ವನಿ: 'ಅಕ್ರಮ ಬಾಂಗ್ಲನ್ನರ ಪತ್ತೆಗೆ ವಿಶೇಷ ಕಾರ್ಯಪಡೆ, ಜ್ಞಾನೇಂದ್ರ

*  ಪಕ್ಷವೊಂದರ ಮತ ಬ್ಯಾಂಕ್‌
*  ಸ್ಥಳೀಯರ ಉದ್ಯೋಗ ಕಸಿದುಕೊಳ್ಳುತ್ತಿರುವ ಅಕ್ರಮ ವಲಸಿಗರು 
*  ಕನ್ನಡ ಪ್ರಭದಿಂದ ಸರಣಿ ವರದಿ 
 

Special Task Force for Detection of Illegal Bangladeshis Says Araga Jnanendra grg
Author
Bengaluru, First Published Sep 17, 2021, 9:07 AM IST
  • Facebook
  • Twitter
  • Whatsapp

ಚಿಕ್ಕಮಗಳೂರು(ಸೆ.17):  ರಾಜ್ಯದಲ್ಲಿ ಅಕ್ರಮವಾಗಿ ಬಾಂಗ್ಲಾ ಹಾಗೂ ರೋಹಿಂಗ್ಯಾ ಮುಸ್ಲಿಮರು ವಾಸಿಸುತ್ತಿರುವ ಕುರಿತು ‘ಕನ್ನಡಪ್ರಭ’ ಪ್ರಕಟಿಸಿದ ಸರಣಿ ವರದಿ ವಿಧಾನ ಪರಿಷತ್‌ನಲ್ಲಿ ಪ್ರತಿಧ್ವನಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಆರಗ ಜ್ಞಾನೇಂದ್ರ, ‘ರಾಜ್ಯವನ್ನು ಧರ್ಮಛತ್ರ ಆಗಲು ಬಿಡುವುದಿಲ್ಲ. ಈ ಅಕ್ರಮ ವಲಸಿಗರ ಪತ್ತೆಗೆ ವಿಶೇಷ ಕಾರ್ಯಪಡೆ ರಚಿಸಲಾಗುತ್ತದೆ’ ಎಂದು ಘೋಷಿಸಿದ್ದಾರೆ.

ಪ್ರಶ್ನೋತ್ತರ ವೇಳೆ ಬಿಜೆಪಿ ಸದಸ್ಯ ಮುನಿರಾಜುಗೌಡ ಅವರು ‘ಕನ್ನಡಪ್ರಭ’ ವರದಿ ಉಲ್ಲೇಖಿಸಿ ಮಾತನಾಡಿ, ‘ಅಕ್ರಮವಾಗಿ ನೆಲೆಸಿರುವ ಬಾಂಗ್ಲಾ ಹಾಗೂ ರೋಹಿಂಗ್ಯಾ ಮುಸ್ಲಿಮರು ದೇಶದ್ರೋಹ ಕೆಲಸ ಮಾಡುತ್ತಿದ್ದು, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ. ಅವರನ್ನು ದೇಶದಿಂದ ಹೊರ ಹಾಕುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶಾಸಕರ ಮಾತಿಗೆ ಉತ್ತರಿಸಿದ ಗೃಹ ಸಚಿವ ಜ್ಞಾನೇಂದ್ರ, ಕರ್ನಾಟಕವನ್ನು ಧರ್ಮಛತ್ರವಾಗಲು ಬಿಡುವುದಿಲ್ಲ. ಇಲ್ಲಿ ಬಂದು ಏನು ಬೇಕಾದರೂ ಮಾಡಬಹುದು ಎಂಬ ಕಾಲ ಮುಗಿದಿದೆ. ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿಗರು, ಬಾಂಗ್ಲಾ ಹಾಗೂ ರೋಹಿಂಗ್ಯಾ ಮುಸ್ಲಿಮರನ್ನು ಪತ್ತೆ ಹಚ್ಚಲು ವಿಶೇಷ ಕಾರ್ಯಪಡೆ ರಚಿಸಲಾಗುವುದು. ಈ ವಿಷಯದಲ್ಲಿ ಸರ್ಕಾರಕ್ಕೆ ಬದ್ಧತೆ ಇದೆ ಎಂದು ಸ್ಪಷ್ಟಪಡಿಸಿದರು.

ಅಕ್ರಮ ಬಾಂಗ್ಲಾ ವಲಸಿಗರಿಗೆ ನಕಲಿ ದಾಖಲೆ ಪತ್ರ ನೆರವು; ಮಾಜಿ ಕೌನ್ಸಿಲರ್ ಅರೆಸ್ಟ್!

ಅಕ್ರಮ ವಲಸಿಗರನ್ನು ಪತ್ತೆ ಹಚ್ಚಲು ಕ್ರಮ ಕೈಗೊಳ್ಳಲಾಗುತ್ತಿದೆ. ರಾಜ್ಯದಲ್ಲಿ ಅಕ್ರಮ ಚಟುವಟಿಕೆ ನಡೆಸಲು ಬಿಡುವುದಿಲ್ಲ. ವೀಸಾ ಅವಧಿ ಮುಗಿದ ವಿದೇಶಿಗರ ವಿರುದ್ಧ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದಾರೆ. ವಿಶೇಷ ಕಾರ್ಯಪಡೆ ರಚಿಸಿ ಅಕ್ರಮವಾಗಿ ನೆಲೆಸಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ರೋಹಿಂಗ್ಯಾ ಸಮುದಾಯದ 190 ಜನ ಕ್ಯಾಂಪ್‌ಗಳಲ್ಲಿ ನೆಲೆಸಿದ್ದಾರೆ. ಈ ನಿರಾಶ್ರಿತರನ್ನು ವಾಪಸ್‌ ಕಳುಹಿಸುವ ಬಗ್ಗೆ ಕೇಂದ್ರ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆ. ವಿದೇಶಿಗರ ಮೇಲೆ ನಿಗಾ ಇಡುವಂತೆ ಎಲ್ಲ ಪೊಲೀಸ್‌ ಠಾಣೆಗಳಿಗೂ ಸೂಚಿಸಲಾಗಿದೆ. ಸಿವಿಲ್‌ ಡಿಟೆನ್ಷನ್‌ ಕೇಂದ್ರಗಳಲ್ಲಿ ಆಫ್ರಿಕನ್‌ ಪ್ರಜೆಗಳನ್ನು ಇರಿಸಲಾಗಿದೆ. ಕೆಲವರ ವಿರುದ್ಧ ಪ್ರಕರಣ ದಾಖಲಾಗಿದ್ದು ಇತ್ಯರ್ಥವಾಗದೇ ಅವರ ದೇಶಕ್ಕೆ ವಾಪಸ್‌ ಕಳುಹಿಸುವಂತಿಲ್ಲ ಎಂದು ವಿವರಿಸಿದರು.

ವೈದ್ಯಾಧಿಕಾರಿ ಅಮಾನತು:

ಅಕ್ರಮ ವಲಸಿಗರಿಗೆ ಆಧಾರ್‌ ಕಾರ್ಡ್‌ ಮತ್ತಿತರ ಸರ್ಕಾರಿ ಇಲಾಖೆಗಳ ಗುರುತಿನ ಚೀಟಿ ಮಾಡಿಸಿಕೊಟ್ಟಿದ್ದಕ್ಕೆ ಸಂಬಂಧಿಸಿದಂತೆ ಒಂದು ಪ್ರಕರಣ ಬೆಂಗಳೂರಿನಲ್ಲಿ ದಾಖಲಾಗಿದ್ದು ಒಬ್ಬ ವೈದ್ಯಾಧಿಕಾರಿಯನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಗಂಭೀರ ಅಪರಾಧ ಪ್ರಕರಣದಲ್ಲಿ ಭಾಗಿಯಾದ ಅಕ್ರಮ ವಲಸಿಗರು ಜಾಮೀನು ಪಡೆದು ಬಳಿಕ ದೇಶ ತೊರೆದಿರುವ ಯಾವ ಪ್ರಕರಣವೂ ವರದಿಯಾಗಿಲ್ಲ ಎಂದು ಮಾಹಿತಿ ನೀಡಿದರು.

ಕನ್ನಡ ಪ್ರಭದಿಂದ ಸರಣಿ ವರದಿ:

ಇದಕ್ಕೂ ಮುನ್ನ ಮಾತನಾಡಿದ ಮುನಿರಾಜುಗೌಡ, ಬಾಂಗ್ಲಾ ಹಾಗೂ ರೋಹಿಂಗ್ಯಾ ಮುಸ್ಲಿಮರು ರಾಜ್ಯದಲ್ಲಿ ನೆಲೆಸಿರುವ ಬಗ್ಗೆ ‘ಕನ್ನಡಪ್ರಭ’ದಲ್ಲಿ ಸರಣಿ ಲೇಖನಗಳು ಪ್ರಕಟವಾಗಿವೆ. ದೇಶದ್ರೋಹ ಕೃತ್ಯಗಳಲ್ಲಿ ಈ ಮುಸ್ಲಿಮರು ಪಾಲ್ಗೊಳ್ಳುತ್ತಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ. ನಮ್ಮ ಮುಂದಿನ ಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಕ್ರಮ ಕೈಗೊಳ್ಳಬೇಕು. ಆದರೆ ಸರ್ಕಾರ ಇಚ್ಛಾಶಕ್ತಿ ತೋರಿಸುತ್ತಿಲ್ಲ ಎಂದು ತರಾಟೆ ತೆಗೆದುಕೊಂಡರು.

ಅಕ್ರಮ ವಲಸಿಗರು ಒಂದು ಪಕ್ಷದ ಮತ ಬ್ಯಾಂಕ್‌ ಆಗಿದ್ದಾರೆ. ಆದ್ದರಿಂದ ಅವರನ್ನು ರಕ್ಷಿಸಲು ರಾಜಕೀಯ ಪಕ್ಷಗಳು ಬರುತ್ತವೆ. ಇಲ್ಲಿ ಅಕ್ರಮವಾಗಿ ನೆಲೆಸಿರುವವರು ದೇಶದ್ರೋಹದ ಕೆಲಸ ಮಾಡಿದ್ದಾರೆ. ಮುಂಬೈ ದಾಳಿಯ ಪ್ರಮುಖ ಆರೋಪಿ ಕಸಬ್‌ಗೆ ನಾಗರಬಾವಿಯಲ್ಲಿ ಮತದಾರರ ಗುರುತಿನ ಚೀಟಿ ಮಾಡಿಕೊಡಲಾಗಿತ್ತು ಎಂದು ಪ್ರಕರಣದ ತನಿಖಾಧಿಕಾರಿ ಬರೆದಿರುವ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ ಎಂದು ಹೇಳಿ ಪುಸ್ತಕವನ್ನು ಪ್ರದರ್ಶಿಸಿದರು.

ರಾಜ್ಯದಲ್ಲಿ ಅಕ್ರಮ ಬಾಂಗ್ಲನ್ನರ ಲೆಕ್ಕವೇ ಇಲ್ಲ!

ಕಸ ಆಯುವುದು, ಹೋಟೆಲ್‌ಗಳಲ್ಲಿ ಕೆಲಸ ಮಾಡುವುದು ಸೇರಿದಂತೆ ನಗರದ ಎಲ್ಲ ಕಡೆಯೂ ರೋಹಿಂಗ್ಯಾ, ಬಾಂಗ್ಲಾ ಮುಸಲ್ಮಾನರು ಇದ್ದಾರೆ ಎಂದು ಪತ್ರಿಕೆಯಲ್ಲಿ ವರದಿಯಾಗಿದೆ. ನಕಲಿ ಗುರುತಿನ ಚೀಟಿ ಮಾಡಿಸಿಕೊಂಡು ಸ್ಥಳೀಯರ ಉದ್ಯೋಗ ಕಸಿದುಕೊಳ್ಳುತ್ತಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಅಕ್ರಮ ವಲಸಿಗರಿದ್ದು ಅವರನ್ನು ಹೊರ ಹಾಕಬೇಕು ಎಂದು ಒತ್ತಾಯಿಸಿದರು.

ಬಾಂಗ್ಲಾ ಹಾಗೂ ರೋಹಿಂಗ್ಯಾ ಮುಸ್ಲಿಮರು ಸಾವಿರಾರು ಸಂಖ್ಯೆಯಲ್ಲಿದ್ದರೂ ಸರ್ಕಾರ ಸರಿಯಾಗಿ ಮಾಹಿತಿ ಸಂಗ್ರಹಿಸಿಲ್ಲ. ನಕಲಿ ಆಧಾರ್‌ ಕಾರ್ಡ್‌, ಮತದಾರರ ಗುರುತಿನ ಚೀಟಿ ತಯಾರಿಸಿಕೊಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಆದರೆ ಒಬ್ಬರ ವಿರುದ್ಧ ಮಾತ್ರವೇ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ಉತ್ತರ ನೀಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಕ್ರಮ ವಲಸಿಗರು ಉಳಿದುಕೊಳ್ಳಲು ಮನೆ ನಿರ್ಮಿಸಿಕೊಟ್ಟವರು, ಮನೆ ಬಾಡಿಗೆ ನೀಡಿದವರು, ಸರ್ಕಾರಿ ಸೌಲಭ್ಯ ಒದಗಿಸಿಕೊಟ್ಟ ಏಜೆಂಟರ ವಿರುದ್ಧ ಕ್ರಮ ಕೈಗೊಳ್ಳಬೇಕು. ನಗರದ ಹೊರ ವಲಯದಲ್ಲಿ ಅವರಿಗೆ ಟೆಂಟ್‌ ಹಾಕಿಕೊಟ್ಟು ಬಾಡಿಗೆ ವಸೂಲು ಮಾಡುತ್ತಿದ್ದಾರೆ. ಇಂತಹವರಿಗೆ ಮುಂದೆ ಸುಲಭವಾಗಿ ಪೌರತ್ವವೂ ಸಿಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
 

Follow Us:
Download App:
  • android
  • ios