Asianet Suvarna News Asianet Suvarna News

ಗಡಿಭಾಗದ ಜಿಲ್ಲೆಗಳ ಅಭಿವೃದ್ಧಿಗೆ ಸರ್ಕಾರದಿಂದ ವಿಶೇಷ ಪ್ಯಾಕೇಜ್‌?

ಗಡಿ ವಿಚಾರದಲ್ಲಿ ರಾಜ್ಯದ ಇತರ ಭಾಗಕ್ಕಿಂತ ಹೆಚ್ಚಾಗಿ ಬೆಳಗಾವಿ ಜಿಲ್ಲೆಯ ಗಡಿ ಭಾಗದಲ್ಲಿ ಮಹಾರಾಷ್ಟ್ರ ಆಗಾಗ್ಗೆ ಕ್ಯಾತೆ ತೆಗೆಯುತ್ತಲೇ ಇರುತ್ತದೆ. ಹೀಗಾಗಿ ಈ ಭಾಗಕ್ಕೆ ಹೆಚ್ಚಿನ ಆದ್ಯತೆ ನೀಡುವ ಚಿಂತನೆ ಸರ್ಕಾರಕ್ಕಿದೆ. 

Special Package from Karnataka Government for Development of Border Districts grg
Author
First Published Dec 4, 2022, 6:17 AM IST

ಬೆಂಗಳೂರು(ಡಿ.04):  ಗಡಿ ವಿಚಾರದಲ್ಲಿ ಪದೇ ಪದೇ ಕ್ಯಾತೆ ತೆಗೆಯುತ್ತಿರುವ ನೆರೆ ರಾಜ್ಯ ಮಹಾರಾಷ್ಟ್ರಕ್ಕೆ ತಿರುಗೇಟು ನೀಡುವ ಸಂಬಂಧ ರಾಜ್ಯ ಸರ್ಕಾರವು ಗಡಿ ಜಿಲ್ಲೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲು ವಿಶೇಷ ಪ್ಯಾಕೇಜ್‌ ಘೋಷಿಸುವ ಸಾಧ್ಯತೆ ಇದೆ. ಇದೇ ತಿಂಗಳು 19ರಿಂದ 10 ದಿನಗಳ ಕಾಲ ಬೆಳಗಾವಿಯಲ್ಲಿ ವಿಧಾನಮಂಡಲದ ಚಳಿಗಾಲದ ಅಧಿವೇಶನ ನಡೆಯಲಿದೆ. ಈ ವೇಳೆ ಗಡಿ ಜಿಲ್ಲೆಗಳ ಅಭಿವೃದ್ಧಿಗೆ ಭರಪೂರ ಕೊಡುಗೆಗಳನ್ನು ಘೋಷಣೆ ಮಾಡುವ ಲೆಕ್ಕಾಚಾರ ಇದೆ. ಈ ಮೂಲಕ ಗಡಿ ಜಿಲ್ಲೆಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರವು ಬದ್ಧವಾಗಿದೆ ಎಂಬ ಸಂದೇಶವನ್ನು ನೀಡುವ ಚಿಂತನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಇದೆ ಎಂದು ಹೇಳಲಾಗಿದೆ.

ಗಡಿ ವಿಚಾರದಲ್ಲಿ ರಾಜ್ಯದ ಇತರ ಭಾಗಕ್ಕಿಂತ ಹೆಚ್ಚಾಗಿ ಬೆಳಗಾವಿ ಜಿಲ್ಲೆಯ ಗಡಿ ಭಾಗದಲ್ಲಿ ಮಹಾರಾಷ್ಟ್ರ ಆಗಾಗ್ಗೆ ಕ್ಯಾತೆ ತೆಗೆಯುತ್ತಲೇ ಇರುತ್ತದೆ. ಹೀಗಾಗಿ ಈ ಭಾಗಕ್ಕೆ ಹೆಚ್ಚಿನ ಆದ್ಯತೆ ನೀಡುವ ಚಿಂತನೆ ಸರ್ಕಾರಕ್ಕಿದೆ. ಬೆಳಗಾವಿ ಜಿಲ್ಲೆಯ ಗಡಿಯ ಜತೆಗೆ ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ ಗಡಿ ಭಾಗದ ಅಭಿವೃದ್ಧಿಗೆ ಒತ್ತು ನೀಡುವ ಕಾರ್ಯ ಮಾಡಲಾಗುತ್ತದೆ. ಈ ವಿಚಾರವಾಗಿ ಬೆಳಗಾವಿಯಲ್ಲಿ ನಡೆಯುವ ಅಧಿವೇಶದಲ್ಲಿ ಮಹತ್ವದ ತೀರ್ಮಾನಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

ಧಮ್ಕಿ ಹಾಕಬೇಡಿ, ಬೆಳಗಾವಿಗೆ ಬಂದೇ ಬರ್ತೇವೆ!: ಗಡಿ ಸಚಿವ ಚಂದ್ರಕಾಂತ ಪಾಟೀಲ್

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸುವ ವಿಚಾರದಲ್ಲೂ ತೀರ್ಮಾನ ಕೈಗೊಳ್ಳುವ ನಿರೀಕ್ಷೆ ಇದೆ. ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡುವ ವಿಚಾರದಲ್ಲಿ ಈಗಾಗಲೇ ಸದನದೊಳಗೆ ಮತ್ತು ಹೊರಗೆ ಹೋರಾಟಗಳು ನಡೆದಿವೆ. ಚುನಾವಣೆ ಸಮೀಪಿಸಿರುವ ಹಿನ್ನೆಲೆಯಲ್ಲಿ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಈ ಮೂಲಕ ಪಂಚಮಸಾಲಿ ಕೆಂಗಣ್ಣಿಗೆ ಗುರಿಯಾಗುವುದರಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಲಿದೆ ಎಂದು ಹೇಳಲಾಗಿದೆ.

ಬೆಳಗಾವಿಗೆ ಬಂದೇ ಬರ್ತೇವೆ: ಮಹಾ ಸಚಿವ ಉದ್ಧಟತನ

ಬೆಳಗಾವಿ: ಕರ್ನಾಟಕ ಸರ್ಕಾರ ಬೆಳಗಾವಿ ಜಿಲ್ಲಾ ಗಡಿ ಪ್ರವೇಶಕ್ಕೆ ನಿರ್ಬಂಧ ಹೇರಿದರೂ ನಾವು ಡಿ.6 ರಂದು ಬೆಳಗಾವಿಗೆ ಭೇಟಿ ನೀಡಿಯೇ ತೀರುತ್ತೇವೆ. ನನಗೆ ಧಮ್ಕಿ ನೀಡಬೇಡಿ, ಸುಮ್ಮನಾಗುವ ವ್ಯಕ್ತಿ ನಾನಲ್ಲ. ಯಾವುದೇ ಸಂಘರ್ಷ ಮಾಡಲು ನಾವು ಕರ್ನಾಟಕಕ್ಕೆ ಬರುತ್ತಿಲ್ಲ, ಎಚ್ಚರಿಕೆ ನೀಡಲೂ ಹೋಗುತ್ತಿಲ್ಲ... ಇದು ಕರ್ನಾಟಕದ ವಿರುದ್ಧ ಮಹಾರಾಷ್ಟ್ರ ಗಡಿ ಸಮನ್ವಯ ಸಚಿವ ಚಂದ್ರಕಾಂತ ಪಾಟೀಲ್‌ ಅವರು ನೀಡಿದ ಉದ್ಧಟತನದ ಹೇಳಿಕೆ.

ಮಹಾ ಸಚಿವರನ್ನು ಬರಲು ಬಿಡಬೇಡಿ: ಕನ್ನಡ ಸಂಘಟನೆಗಳು

ಬೆಳಗಾವಿ: ಕರ್ನಾಟಕ ಸರ್ಕಾರ ಬೇಡವೆಂದರೂ ನಾವು ಬೆಳಗಾವಿಗೆ ಭೇಟಿ ನೀಡಿಯೇ ತೀರುತ್ತೇವೆಂಬ ಮಹಾರಾಷ್ಟ್ರ ಸಚಿವರ ಉದ್ಧಟತನದ ವಿರುದ್ಧ ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಮಹಾರಾಷ್ಟ್ರದ ಸಚಿವರು ಯಾವುದೇ ಕಾರಣಕ್ಕೂ ಬೆಳಗಾವಿ ಪ್ರವೇಶಿಸದಂತೆ ಮುಖ್ಯಮಂತ್ರಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿರುವ ಕನ್ನಡಪರ ಸಂಘಟನೆಗಳು ಶನಿವಾರವೂ ಬೆಳಗಾವಿಯಲ್ಲಿ ಪ್ರತಿಭಟನೆ, ಮೆರವಣಿಗೆ ನಡೆಸಿದ್ದಾರೆ.
 

Follow Us:
Download App:
  • android
  • ios