ಶಿವಮೊಗ್ಗ(ಡಿ.05): ಅದು ಯಾವ ಜನ್ಮದ ಋಣಾನುಬಂಧವೋ? ಋಣಾನುಬಂಧ ರೂಪೇಣ ಪಶು, ಸುತಾಲಯ ಎಂದು ಪೂರ್ವಿಕರೂ ಹೇಳೋದು ಅಕ್ಷರಸಃ ಸತ್ಯ.  ಈ ತಾಯಿಯ ಹೊಟ್ಟೆಯಲ್ಲಿ ಹುಟ್ಟದಿದ್ದರೂ ಈ ಮೂಕ ಪ್ರಾಣಿ ಈ ಕಟುಂಬಕ್ಕೆ ದೇವರೇ ಕೊಟ್ಟ ವರ. ಈತ ಬಂದ ಮೇಲೆ ಈ ತಾಯಿಯ ಸಂಕಷ್ಟಗಳು ದೂರಾದವು ಪಿತ್ರಾರ್ಜಿತ ಅಸ್ತಿಯೂ ಬಂತು. ಎರಡು ಅವಳಿ - ಜವಳಿ ಗಂಡು ಮಕ್ಕಳ ಜೊತೆಗೆ ವಾನರ ಪುತ್ರ ಮಾರುತಿಯೇ ಈಕೆಯ ಮೂರನೇ ಮಗನಾಗಿ ಹೋಗಿದ್ದಾನೆ. 

ಇಂತಹ ವಾನರ ಪುತ್ರ ಮಂಗಣ್ಣನಿಗೆ ಈ ಮನೆಯಲ್ಲಿ ಅದ್ದೂರಿಯಾಗಿ 2 ನೇ ವರ್ಷದ ಬರ್ತಡೇ ಅಚರಿಸಲಾಯಿತು. ಹೌದು ಶಿವಮೊಗ್ಗದ ಎನ್.ಟಿ.ರಸ್ತೆಯ ಪಾರ್ವತಮ್ಮನವರಿಗೆ ಅಂಜನೇಯ ಸ್ವರೂಪಿ ಮಾರುತಿ ಅಲಿಯಾಸ್ ಮಂಗಣ್ಣನನ್ನು ಕೂಡ ಕಳೆದ ಎರಡೂವರೆ ವರ್ಷದಿಂದ ಮಗನಂತೆಯೇ ಸಾಕಿದ್ದಾರೆ.  

ಈ ಮಂಗಣ್ಣ ಬೆಳಿಗ್ಗೆ ಎದ್ದು ಕುಟುಂಬದವರ ಜೊತೆ ಟೀ ಕುಡಿತಾನೆ,  ಸ್ನಾನ ಮಾಡ್ತಾನೆ , ತಲೆ ಬಾಚ್ಕೋತಾನೆ , ಪೌಡರ್ ಹಚ್ಚಬೇಕು , ಕಾಡಿಗೆಗೂ ಇಡಬೇಕು, ಕೊನೆಗೆ ಚಂದದ ಉಡುಗೆ - ತೊಡುಗೆ ಹಾಕಿ ಮಿಂಚುತ್ತಾನೆ . ಮನೆಯಲ್ಲಿ ಮರದ ಕುದುರೆ ಏರಿ ಅಟ ಅಡ್ತಾನೆ, ಮನೆಯ ಹಾಲ್ ನಲ್ಲಿ ಕಟ್ಟಿದ ಜೋಕಾಲಿಯಲ್ಲಿ ಒಬ್ಬನೇ ಊಯ್ಯಾಲೆಯಾಡ್ತಾನೆ. 

ಕುಟುಂಬದ ಜೊತೆಗೆ ಬೆಂಗಳೂರು, ಮಂಗಳೂರು, ಮೈಸೂರು ಅಂತೆಲ್ಲ ಟೂರ್ ಹೊಡೆಯುತ್ತಾನೆ. ಮನೆಯವರಿಗೆಲ್ಲ ಮುತ್ತಿಟ್ಟು ಪ್ರೀತಿ ಮಾಡ್ತಾನೆ.  ಮನೆಯವರೆಲ್ಲ ಸೇರಿ ಈ ಮಂಗಣ್ಣನನ್ನು ಮಾರುತಿ ಎಂದೇ ಕರೆಯುತ್ತಾರೆ. ಈ ಮೂರುತಿರಾಯನ 2 ನೇ ವರ್ಷದ ಬರ್ತಡೇಯನ್ನು ಮನೆ ಮಂದಿಯ ಜೊತೆಗೆ ಅಕ್ಕಪಕ್ಕದರೆಲ್ಲ ಸೇರಿ ಅದ್ದೂರಿಯಾಗಿ ಆಚರಿಸಿದರು. ಮಂಗಣ್ಣನೇ ಕೇಕ್ ಕತ್ತರಿಸಿ ತಿಂದ, ಚೆರ್ರಿ ತಿಂದ, ಹಣ್ಣು - ಹಂಪಲ ತಿಂದ ಬರ್ತಡೇ ಆಚರಣೆಗೆ ಬಂದವರು ನೀಡಿದ ಗಿಫ್ಟ್ ಕೂಡ ಪಡೆದ.

"

ಮಕ್ಕಳಂತೂ ಮಂಗಣ್ಣನ ಬರ್ತಡೇ ಪಾರ್ಟಿಯಲ್ಲಿ ಭಾಗವಹಿಸಿ ಮಂಗಣ್ಣನಿಗೆ ಹ್ಯಾಪಿ ಬರ್ತಡೇ ಹಾಡಿನ ಮೂಲಕ ಶುಭಾಶಯ ಕೋರಿ ಖುಷಿ ಪಟ್ಟರು. ಮಂಗಣ್ಣ ಬರ್ತಡೆಗಾಗಿ ಪಾರ್ವತಮ್ಮನವರ ಮಕ್ಕಳು ಮನೆಯನ್ನೆಲ್ಲ ಬಣ್ಣ ಬಣ್ಣದ ವಿದ್ಯುತ್ ದೀಪಾಲಂಕಾರ , ಬಣ್ಣದ ಬಲೂನ್ ಗಳು ಮೊದಲಾದವುಗಳಿಂದ ಶೃಂಗರಿಸಿ ಮನೆ ಕಲೆ ಕಟ್ಟುವಂತೆ ಮಾಡಿದ್ದರು. ಸುಮಾರು 6 ಕೆ.ಜಿ.ತೂಕದ ಮಾರುತಿಗೆ 8 ಕೆ.ಜಿ.ತೂಕದ ಕೇಕ್ ತರಿಸಿ ಕತ್ತರಿಸಲಾಯಿತು.   

ಪಾರ್ವತಮ್ಮನವರ ಅವಳಿ ಗಂಡು ಮಕ್ಕಳಾದ ಮಹೇಶ ಮತ್ತು ಮಂಜುನಾಥ ಇಬ್ಬರು ಹುಟ್ಟಿದ ದಿನವನ್ನೇ ಮಾರುತಿಯ ಹುಟ್ಟು ಹಬ್ಬವಾಗಿ ಆಚರಣೆ ಮಾಡಲಾಗುತ್ತದೆ. ಇವರೊಂದಿಗೆ ಸಹೋದರಿಯರಾದ ನೇತ್ರಾವತಿ ಮತ್ತು ಗೀತಾ ಬರ್ತಡೇ ಪಾರ್ಟಿಗೆ ಅಲಂಕಾರದ ಜವಾಬ್ದಾರಿ ಹೊತ್ತು ಬೊಂಬಾಟ್ ಅಲಂಕಾರ ಮಾಡ್ತಾರೆ. ಕಳೆದ ಎರಡೂವರೆ ವರ್ಷಗಳ ಹಿಂದೆ ದಾರಿಹೋಕರ ಬಳಿಯಿದ್ದ ಮಂಗಣ್ಣ ಪಾರ್ವತಮ್ಮನವರನ್ನು ನೋಡಿ ಹೆಗಲೇರಿ ಕುಳಿತಿದ್ದ. 

ಹೀಗೆ ಮಂಗಣ್ಣ ಮೈಮೇಲೆ ಏರಿ ಕುಳಿತ ಕಾರಣ ರೋಮಾಂಚಿತರಾದ ಪಾರ್ವತಮ್ಮ ತನ್ನ ಮಕ್ಕಳಿಗೆ ಹೇಳಿ 2 ಸಾವಿರ ರೂ.ಗಳಿಗೆ ಮಂಗನ ಮರಿಯನ್ನು ಪಡೆದಿದ್ದಾರೆ. ಅಂದಿನಿಂದ ಕುಟುಂಬದ ಸದಸ್ಯನಂತೆಯೇ ಬೆಳೆದ ಮಾರುತಿ ಎಲ್ಲರೊಂದಿಗೆ ಬರ್ತಡೇ ಆಚರಿಸಿ ತಾನು ಖುಷಿ ಪಟ್ಟು ಇತರಿಗೂ ಸಂತಸವನ್ನು ನೀಡುತ್ತಾ ಬಂದಿದ್ದಾನೆ. 

ಇನ್ನು ಈ ಮಂಗಣ್ಣನ ಬರ್ತಡೇ ಪಾರ್ಟಿಗೆ ಬಂದವರಿಗೆಲ್ಲ ಭೂರಿ ಬೋಜನವೇ ಕಾದಿತ್ತು. ಹೊಳಿಗೆ , ಬಾಳೆ ಹಣ್ಣಿನ ಸೀಕರಣೆ, ಬಿಳಿ ಹೋಳಿಗೆ, ಪಲ್ಯ, ಕೋಸಂಬರಿ , ಅನ್ನ, ತಿಳಿ ಸಾರು, ಸಾಂಬಾರು , ಮೆಣಸಿನ ಕಾಯಿ ಬೋಂಡಾ ಎಂದೆಲ್ಲ ಹೊಟ್ಟೆ ಬೀರಿಯುವಂತೆ ಊಟ ಹಾಕಲಾಯಿತು. ಅದಕ್ಕೆ ಹೇಳೋದು ಯಾವ ಜನ್ಮದ ಋಣವೋ ಈ ಮನೆಯಲ್ಲಿ ಮಾರುತಿ ಅದ್ದೂರಿಯಾಗಿ ಹುಟ್ಟುಹಬ್ಬವನ್ನು ಅಚರಿಸಿಕೊಳ್ಳುವ ಪುಣ್ಯ ಒದಗಿ ಬಂದಿದೆ.