ಮುಡಾ ಹಗರಣಕ್ಕೆ ಸಂಬಂಧಿಸಿದಂತೆ, ಲೋಕಾಯುಕ್ತ ಪೊಲೀಸರ 'ಬಿ' ರಿಪೋರ್ಟ್ ಅನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಅಂಗೀಕರಿಸಿದೆ. ಈ ಮೂಲಕ ಸಿಎಂ ಸಿದ್ದರಾಮಯ್ಯ ಸೇರಿದಂತೆ ನಾಲ್ವರು ಆರೋಪಿಗಳಿಗೆ ಕ್ಲೀನ್ ಚಿಟ್ ಸಿಕ್ಕಿದ್ದು, ಸ್ನೇಹಮಯಿ ಕೃಷ್ಣ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಬೆಂಗಳೂರು/ಮೈಸೂರು (ಜ.28): ಮೈಸೂರು ನಗರ ಅಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣದ ಕುರಿತಾಗಿ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ 'ಬಿ' ರಿಪೋರ್ಟ್ (B-Report) ಅನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಅಂಗೀಕರಿಸಿದ್ದು, ಸಿಎಂ ಸಿದ್ದರಾಮಯ್ಯ ಸೇರಿದಂತೆ 4 ಆರೋಪಿಗಳಿಗೆ ಕ್ಲೀನ್ ಚಿಟ್ ನೀಡಿದೆ. ಈ ಮೂಲಕ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಅವರು ದಾಖಲಿಸಿದ್ದ ಖಾಸಗಿ ದೂರಿಗೆ ಸೋಲುಂಟಾಗಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಸ್ನೇಹಮಯಿ ಕೃಷ್ಣ, ತಾವು ಕಾನೂನು ಹೋರಾಟವನ್ನು ಇಲ್ಲಿಗೆ ನಿಲ್ಲಿಸುವುದಿಲ್ಲ ಮತ್ತು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.
ನ್ಯಾಯಾಲಯದ ಆದೇಶವೇನು?
ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಸ್ನೇಹಮಯಿ ಕೃಷ್ಣ ಅವರು, ಎ1 ಸಿದ್ದರಾಮಯ್ಯ, ಪಾರ್ವತಿ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಸ್ವಾಮಿ ಹಾಗೂ ಎ4 ದೇವರಾಜು ಸೇರಿ ನಾಲ್ವರು ಆರೋಪಿಗಳ ವಿರುದ್ಧ ಖಾಸಗಿ ದೂರು ದಾಖಲಿಸಿದ್ದರು. ಈ ಕುರಿತು ತನಿಖೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಮಧ್ಯಂತರ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ತನಿಖಾ ವರದಿಯ ಪ್ರಕಾರ, ಆರೋಪಿಗಳ ವಿರುದ್ಧ ಯಾವುದೇ ಪ್ರಬಲ ಸಾಕ್ಷ್ಯಗಳು ಲಭ್ಯವಾಗಿಲ್ಲ ಎಂದು ಉಲ್ಲೇಖಿಸಿ 'ಬಿ' ರಿಪೋರ್ಟ್ ಸಲ್ಲಿಸಲಾಗಿತ್ತು. ಇದೀಗ ನ್ಯಾಯಾಲಯವು ಈ ವರದಿಯನ್ನು ಮಾನ್ಯ ಮಾಡಿದ್ದು, ಪ್ರಕರಣಕ್ಕೆ ತೆರೆ ಎಳೆದಂತಾಗಿದೆ. ಜೊತೆಗೆ, ತನಿಖಾಧಿಕಾರಿಗಳ ವಿರುದ್ಧ ಸ್ನೇಹಮಯಿ ಕೃಷ್ಣ ದಾಖಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯನ್ನೂ ಸಹ ಕೋರ್ಟ್ ವಜಾಗೊಳಿಸಿದೆ.
ಸ್ನೇಹಮಯಿ ಕೃಷ್ಣ ಪ್ರತಿಕ್ರಿಯೆ:
ನ್ಯಾಯಾಲಯದ ಆದೇಶದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸ್ನೇಹಮಯಿ ಕೃಷ್ಣ, 'ನಾನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಪ್ರಬಲ ಸಾಕ್ಷ್ಯಗಳನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದೆ. ಆದರೂ ಲೋಕಾಯುಕ್ತ ಅಧಿಕಾರಿಗಳ 'ಬಿ ರಿಪೋರ್ಟ್' ಅನ್ನು ಅಂಗೀಕರಿಸಲಾಗಿದೆ. ಯಾವ ಆಧಾರದ ಮೇಲೆ ನ್ಯಾಯಾಲಯ ಈ ಆದೇಶ ನೀಡಿದೆ ಎಂಬುದನ್ನು ಕೂಲಂಕಷವಾಗಿ ಪರಿಶೀಲಿಸಬೇಕಿದೆ. ಸಂಪೂರ್ಣ ಆದೇಶದ ಪ್ರತಿ ಕೈ ಸೇರಿದ ನಂತರ ಮುಂದಿನ ನಿರ್ಧಾರ ಮಾಡುತ್ತೇನೆ' ಎಂದು ತಿಳಿಸಿದರು.
ಮುಂದುವರಿದು ಮಾತನಾಡಿದ ಅವರು, 'ಯಾವುದೇ ಕಾರಣಕ್ಕೂ ಈ ಕೇಸ್ ಅನ್ನು ನಾನು ಇಲ್ಲಿಗೆ ಬಿಡುವುದಿಲ್ಲ. ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಮೇಲ್ಮನವಿ (Appeal) ಸಲ್ಲಿಸುತ್ತೇನೆ. ಸತ್ಯ ಹೊರಬರುವವರೆಗೂ ನನ್ನ ಹೋರಾಟ ಮುಂದುವರಿಯಲಿದೆ' ಎಂದು ಮಾಧ್ಯಮಗಳ ಮುಂದೆ ತಿಳಿಸಿದರು.
ಎಸ್‌ಪಿಪಿ ವೆಂಕಟೇಶ್ ಅರಬಟ್ಟಿ ಸ್ಪಷ್ಟನೆ:
ಇದೇ ಸಂದರ್ಭದಲ್ಲಿ ಲೋಕಾಯುಕ್ತ ವಿಶೇಷ ಸರ್ಕಾರಿ ಅಭಿಯೋಜಕ (SPP) ವೆಂಕಟೇಶ್ ಅರಬಟ್ಟಿ ಅವರು ಮಾತನಾಡಿ, 'ಸ್ನೇಹಮಯಿ ಕೃಷ್ಣ ಅವರು ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಎ1 ಟು ಎ4 ವರೆಗೆ ತನಿಖೆ ನಡೆಸಿ ಮಧ್ಯಂತರ ವರದಿ ಸಲ್ಲಿಸಲಾಗಿತ್ತು. ಆ ವರದಿಯ ಅನ್ವಯ ಆರೋಪಿಗಳ ವಿರುದ್ಧ ಸಾಕ್ಷ್ಯಗಳಿಲ್ಲದ ಕಾರಣ 'ಬಿ' ರಿಪೋರ್ಟ್ ಹಾಕಲಾಗಿತ್ತು. ಈಗ ಆ ವರದಿ ಅಂಗೀಕಾರವಾಗಿದೆ. ಅಲ್ಲದೆ, ತನಿಖಾಧಿಕಾರಿಗಳ ಮೇಲೆ ಹೂಡಿದ್ದ ನ್ಯಾಯಾಂಗ ನಿಂದನೆ ಅರ್ಜಿಯೂ ವಜಾಗೊಂಡಿದೆ' ಎಂದು ಕಾನೂನು ಪ್ರಕ್ರಿಯೆಯ ವಿವರ ನೀಡಿದರು.
ಒಟ್ಟಾರೆಯಾಗಿ, ಕೆಳಹಂತದ ನ್ಯಾಯಾಲಯದಲ್ಲಿ ಹಿನ್ನಡೆಯಾಗಿದ್ದರೂ, ಮೇಲ್ಮನವಿ ಮೂಲಕ ಹೋರಾಟ ಮುಂದುವರಿಸಲು ಸ್ನೇಹಮಯಿ ಕೃಷ್ಣ ನಿರ್ಧರಿಸಿರುವುದು ಪ್ರಕರಣದ ಕುತೂಹಲವನ್ನು ಜೀವಂತವಾಗಿರಿಸಿದೆ.


