ಮುಡಾ ಅಕ್ರಮ ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಹಾಗೂ ಮುಡಾ ಮಾಜಿ ಅಧ್ಯಕ್ಷ ಕೆ. ಮರಿಗೌಡ ಅವರಿಗೆ ಸೇರಿದ ₹20.85 ಕೋಟಿ ಮೌಲ್ಯದ ಸ್ಥಿರಾಸ್ತಿಗಳನ್ನು ಜಾರಿ ನಿರ್ದೇಶನಾಲಯ (ಇಡಿ) ಮುಟ್ಟುಗೋಲು ಹಾಕಿಕೊಂಡಿದೆ. 

ಮೈಸೂರು(ಜ.22): ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಮುಡಾ (MUDA) ಹಗರಣದ ತನಿಖೆ ತೀವ್ರಗೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಹಾಗೂ ಮುಡಾ ಮಾಜಿ ಅಧ್ಯಕ್ಷ ಕೆ ಮರಿಗೌಡ ಅವರಿಗೆ ಜಾರಿ ನಿರ್ದೇಶನಾಲಯ (ED) ಬಿಸಿ ಮುಟ್ಟಿಸಿದೆ. ಅಕ್ರಮ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮರಿಗೌಡ ಅವರಿಗೆ ಸೇರಿದ ಕೋಟ್ಯಂತರ ರೂಪಾಯಿ ಮೌಲ್ಯದ ಸ್ಥಿರ ಆಸ್ತಿಗಳನ್ನು ಅಧಿಕಾರಿಗಳು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದ್ದಾರೆ.

20 ಕೋಟಿಗೂ ಅಧಿಕ ಮೌಲ್ಯದ ಆಸ್ತಿ ಜಪ್ತಿ!

ಮುಡಾ ಅಕ್ರಮದಲ್ಲಿ ಮರಿಗೌಡ ಅವರು ನೇರವಾಗಿ ಭಾಗಿಯಾಗಿರುವುದು ತನಿಖೆಯ ವೇಳೆ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಸೇರಿದ ಒಟ್ಟು 10 ಸ್ಥಿರ ಆಸ್ತಿಗಳನ್ನು ಇಡಿ ಮುಟ್ಟುಗೋಲು ಹಾಕಿಕೊಂಡಿದೆ. ಇದರಲ್ಲಿ 6 ಅಕ್ರಮ ಮುಡಾ ನಿವೇಶನಗಳು, 3 ಇತರ ಸ್ಥಿರ ಆಸ್ತಿಗಳು ಹಾಗೂ ಬರೋಬ್ಬರಿ 20.85 ಕೋಟಿ ರೂಪಾಯಿ ಮಾರುಕಟ್ಟೆ ಮೌಲ್ಯದ ಒಂದು ಬೃಹತ್ ವಾಣಿಜ್ಯ ಕಟ್ಟಡ ಸೇರಿದೆ. ನಿಯಮಗಳನ್ನು ಗಾಳಿಗೆ ತೂರಿ ಈ ಆಸ್ತಿಗಳನ್ನು ಸಂಪಾದಿಸಿರುವುದು ಇಡಿ ದಾಳಿ ವೇಳೆ ಪತ್ತೆಯಾಗಿತ್ತು.

ಜಿ.ಟಿ. ದಿನೇಶ್ ಕುಮಾರ್ ಕುಮ್ಮಕ್ಕಿನಿಂದ ನಡೆದ ಅಕ್ರಮ

ಮುಡಾದ ಮಾಜಿ ಆಯುಕ್ತ ಜಿ ಟಿ ದಿನೇಶ್ ಕುಮಾರ್ ಅವರ ಸಹಾಯದಿಂದಲೇ ಮರಿಗೌಡ ಅವರು ಈ ಅಕ್ರಮ ನಿವೇಶನಗಳನ್ನು ಗಿಟ್ಟಿಸಿಕೊಂಡಿದ್ದಾರೆ ಎನ್ನಲಾಗಿದೆ. ಸೈಟ್ ಹಂಚಿಕೆಯಲ್ಲಿ ಕಾನೂನು ಮತ್ತು ಮಾರ್ಗಸೂಚಿಗಳನ್ನು ಸಂಪೂರ್ಣವಾಗಿ ಉಲ್ಲಂಘನೆ ಮಾಡಲಾಗಿದ್ದು, ದಿನೇಶ್ ಕುಮಾರ್ ಅವರು ಮರಿಗೌಡಗೆ ಅಕ್ರಮ ಎಸಗಲು ಪರೋಕ್ಷವಾಗಿ ಸಾಥ್ ನೀಡಿದ್ದಾರೆ ಎಂಬ ಅಂಶ ವಿಚಾರಣೆಯಲ್ಲಿ ಬಯಲಾಗಿದೆ. ಇದಕ್ಕೂ ಮುನ್ನ ಹಲವು ಬಾರಿ ಇಡಿ ವಿಚಾರಣೆಗೆ ಹಾಜರಾಗಿದ್ದ ಮರಿಗೌಡ, ಅಧಿಕಾರಿಗಳ ಪ್ರಶ್ನೆಗಳಿಗೆ ಉತ್ತರಿಸಿದ್ದರು.

460 ಕೋಟಿ ರೂ. ದಾಟಿದ ಒಟ್ಟು ಮುಟ್ಟುಗೋಲು ಮೊತ್ತ!

ಮುಡಾ ಹಗರಣದ ತನಿಖೆ ಆರಂಭವಾದ ದಿನದಿಂದ ಇಡಿ ಅಧಿಕಾರಿಗಳು ಹಂತ ಹಂತವಾಗಿ ದೊಡ್ಡ ಮೊತ್ತದ ಆಸ್ತಿಗಳನ್ನು ಜಪ್ತಿ ಮಾಡುತ್ತಿದ್ದಾರೆ. ಈ ಹಿಂದೆ 283 ಮುಡಾ ಸೈಟ್‌ಗಳು ಮತ್ತು 3 ವೈಯಕ್ತಿಕ ಆಸ್ತಿಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಇಂದಿನ ಕಾರ್ಯಾಚರಣೆಯನ್ನೂ ಸೇರಿಸಿ, ಈ ಹಗರಣದಲ್ಲಿ ಇದುವರೆಗೆ ಅಂದಾಜು 460 ಕೋಟಿ ರೂಪಾಯಿ ಮೌಲ್ಯದ ಆಸ್ತಿಪಾಸ್ತಿಗಳನ್ನು ಇಡಿ ಮುಟ್ಟುಗೋಲು ಹಾಕಿಕೊಂಡಂತಾಗಿದೆ. ಈ ಬೆಳವಣಿಗೆಯು ಹಗರಣದ ಇತರ ಆರೋಪಿಗಳಲ್ಲಿ ನಡುಕ ಹುಟ್ಟಿಸಿದೆ.