Asianet Suvarna News Asianet Suvarna News

ಅಯೋಧ್ಯೆ ರಾಮಮಂದಿರ ಇಡೀ ವಿಶ್ವಕ್ಕೇ ದಾರಿದೀಪ: ಬಸವರಾಜ ಬೊಮ್ಮಾಯಿ ವಿಶೇಷ ಲೇಖನ

ಮಹಾತ್ಮಾ ಗಾಂಧೀಜಿ ರಾಮ ರಾಜ್ಯದ ಕನಸು ಕಂಡಿದ್ದರು. ರಾಮ ಅಂದರೆ ನ್ಯಾಯ, ನೀತಿ, ಸತ್ಯ, ಅಂತಃಕರಣದ ಪ್ರತೀಕ ರಾಮರಾಜ್ಯದಲ್ಲಿ ಯಾವುದೇ ತರಹ ಬೇಧ ಭಾವ ಇಲ್ಲ. ಎಲ್ಲದಕ್ಕೂ ರಾಮ ರಾಜ್ಯದಲ್ಲಿ ನ್ಯಾಯ ಮತ್ತು ಪರಿಹಾರ ಸಿಗುತ್ತದೆ.

Special Article By Ex CM Basavaraj Bommai Over Ayodhya Ram Mandir gvd
Author
First Published Jan 22, 2024, 8:03 AM IST

ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ

ಮಹಾತ್ಮಾ ಗಾಂಧೀಜಿ ರಾಮ ರಾಜ್ಯದ ಕನಸು ಕಂಡಿದ್ದರು. ರಾಮ ಅಂದರೆ ನ್ಯಾಯ, ನೀತಿ, ಸತ್ಯ, ಅಂತಃಕರಣದ ಪ್ರತೀಕ ರಾಮರಾಜ್ಯದಲ್ಲಿ ಯಾವುದೇ ತರಹ ಬೇಧ ಭಾವ ಇಲ್ಲ. ಎಲ್ಲದಕ್ಕೂ ರಾಮ ರಾಜ್ಯದಲ್ಲಿ ನ್ಯಾಯ ಮತ್ತು ಪರಿಹಾರ ಸಿಗುತ್ತದೆ. ಅಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರು ರಾಮರಾಜ್ಯ ಸ್ಥಾಪನೆ ಮಾಡುವ ಕೈಂಕರ್ಯ ತೊಟ್ಟು ಬಡವರಿಗೆ ದೀನ ದಲಿತರಿಗೆ ಮನೆಗಳ ನಿರ್ಮಾಣ, ವಿದುಚ್ಛಕ್ತಿ, ಶೌಚಾಲಯ ನಿರ್ಮಾಣ, ಉಜ್ವಲ ಗ್ಯಾಸ್ ಕೊಡುವ ಮೂಲಕ ಮನೆಯನ್ನು ನೆಮ್ಮದಿಯ ಕೇಂದ್ರವಾಗಿ ಮಾಡುವ ಸಂಕಲ್ಪವನ್ನು ಬಹುತೇಕವಾಗಿ ಯಶಸ್ವಿಯಾಗಿ ಈಡೇರಿಸುವ ಕೆಲಸ ಮಾಡುತ್ತಿದ್ದಾರೆ.

ಇನ್ನೊಂದೆಡೆ ಆರ್ಥಿಕವಾಗಿ ಸಾಮಾಜಿಕವಾಗಿ ಹಾಗೂ ರಕ್ಷಣೆಯಲ್ಲಿ ಶ್ರೇಷ್ಠ ಭಾರತವನ್ನು ಮಾಡಲು ಯಶಸ್ವಿಯಾಗಿದ್ದಾರೆ. ಅದರ ಜೊತೆಗೆ ಸಮಾಜದಲ್ಲಿರುವ ಸಂಘರ್ಷ, ಸಮನ್ವಯದ ಕೊರತೆ ನೀಗಿಸಲು ಶ್ರೀರಾಮಚಂದ್ರನ ದೇವಸ್ಥಾನವನ್ನು ಒಂದು ಭದ್ರ ಅಡಿಪಾಯವಾಗಿ ಪೂಜ್ಯ ಮಹಾತ್ಮಾಗಾಂಧಿ ಕಂಡ ಕನಸಿನಂತೆ ರಾಮಮಂದಿರ ದೊಡ್ಡ ಪ್ರೇರಣಾ ಶಕ್ತಿಯ ಪ್ರತೀಕವಾಗಿ ತಲೆ ಎತ್ತಿದೆ. ಮುಂದಿನ 25 ವರ್ಷ ಅಮೃತ ಕಾಲ ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದಾರೆ. ಅಮೃತ ಕಾಲ ಎಂದರೆ ರಾಮರಾಜ್ಯ ಸ್ಥಾಪನೆ. ಅಮೃತ ಕಾಲದಲ್ಲಿ ಎಲ್ಲರಿಗೂ ಸಮನಾದ ಅವಕಾಶಗಳು, ಆರ್ಥಿಕವಾಗಿ ಎಲ್ಲರೂ ಪ್ರಭಲರಾಗಿ ಅದರ ಜೊತೆಗೆ ದೇಶವನ್ನು ಅಷ್ಟೇ ಪ್ರಬಲವಾಗಿ ಕಟ್ಟುವ ಕಾಲ.

ಮಾಲಿನ್ಯ ತಡೆಯದ ಕಾರ್ಖಾನೆ ಮೇಲೆ ಕ್ರಿಮಿನಲ್‌ ಕೇಸ್‌: ಸಚಿವ ಈಶ್ವರ್‌ ಖಂಡ್ರೆ

ಕಲಿಯುಗದಲ್ಲಿ ಮುಂದಿನ 25 ವರ್ಷ ಮಹತ್ವದ ಕಾಲಘಟ್ಟ, ರಾಮಮಂದಿರ ಸ್ಥಾಪನೆಯ ಉತ್ತರಾದಿಯಲ್ಲಿ ರಾಮ ರಾಜ್ಯ ಸ್ಥಾಪನೆಯ ಕನಸು ಈಡೇರಿಸುವ ಕಾಲ. ಹೀಗಾಗಿ ಈ ಮಂದಿರ ಸ್ಥಾಪನೆಯ ಜೊತೆಗೆ ರಾಮರಾಜ್ಯ ಕಟ್ಟುವ ಸಂಕಲ್ಪ ಪ್ರತಿಯೊಬ್ಬ ಭಾರತೀಯನಿಗೆ ಇರಬೇಕಾಗುತ್ತದೆ. ಅದಕ್ಕಾಗಿ ಕಠಿಣ ಪರಿಶ್ರಮ ಬೇಕಾಗುತ್ತದೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ರಾಮ ರಾಜ್ಯಕ್ಕೆ ಅತ್ಯಂತ ಯಶಸ್ವಿ ಮುನ್ನುಡಿ ಬರೆದಿದ್ದಾರೆ. ಈ ಸಂದರ್ಭದಲ್ಲಿ ಅಪಸ್ವರ, ರಾಜಕೀಯ ಲೇಪಿತ ಹೇಳಿಕೆಗಳಿಂದ ಒಂದು ಮಹಾನ್ ಉದ್ದೇಶಕ್ಕೆ ಪೆಟ್ಟು ಕೊಡುವ ಕೆಲಸ ಆಗುವುದರಿಂದ ನಮ್ಮಲ್ಲಿರುವ ನಕಾರಾತ್ಮಕ ಶಕ್ತಿಗಳನ್ನು ಬದಿಗೊತ್ತಿ ಭಾರತವನ್ನು ರಾಮರಾಜ್ಯ ಮಾಡಲು ಸಕಾರಾತ್ಮಕ ಶಕ್ತಿ ಅವಶ್ಯಕತೆ ಇದೆ ಎಂದು ಭಾವಿಸುತ್ತೇನೆ.

ಭಾರತೀಯರ ಬಹುದಿನಗಳ ಕನಸು ಇಂದು ನನಸಾಗುತ್ತಿದ್ದು, ನಮ್ಮೆಲ್ಲರ ಆರಾಧ್ಯ ದೈವ ಶ್ರೀರಾಮನ ಮಂದಿರ ಸ್ಥಾಪನೆಯಾಗಿ ರಾಮನ ಪ್ರಾಣ ಪ್ರತಿಷ್ಠಾಪನೆ ಆಗುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿ. ಭಾರತೀಯರಾದ ನಮಗೆ ರಾಮ, ರಾಮಾಯಣ ಎನ್ನುವುದು ಪ್ರತಿ ನಿತ್ಯದ ಜೀವನದಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಹಾಸುಹೊಕ್ಕಾಗಿದೆ. ಮಹರ್ಷಿ ವಾಲ್ಮೀಕಿ ಅವರು ಬರೆದಿರುವ ರಾಮಾಯಣ ವಿಶ್ವದ ಅತ್ಯಂತ ಶ್ರೇಷ್ಠ ಕೃತಿಗಳಲ್ಲಿ ಒಂದಾಗಿದ್ದು, ಅದು ಪ್ರತಿಯೊಬ್ಬ ವ್ಯಕ್ತಿಯ ಜೀವನ ಸಂಬಂಧ ಹಾಗೂ ಬದುಕಿನ ಆದರ್ಶಗಳ ಬಗ್ಗೆ ಮಾರ್ಗ ತೋರಿಸುತ್ತದೆ.

ರಾಮಾಯಣ ರಾಮನ ಆದರ್ಶ ಜೀವನದ ಜೊತೆಗೆ ದಶರಥನ ಮೂಲಕ ತಂದೆ ಮಗನ ಸಂಬಂಧ, ಲಕ್ಷ್ಮಣ, ಭರತನ ತ್ಯಾಗಗಳ ಮೂಲಕ ಅಣ್ಣ ತಮ್ಮಂದಿರ ಸಂಬಂಧ, ಕೌಸಲ್ಯಳ ಮೂಲಕ ತಾಯಿ ಮಗನ ಸಂಬಂಧ, ರಾವಣನ ವಶದಲ್ಲಿದ್ದರೂ ಸೀತೆ ಪತಿವ್ರತಾ ಧರ್ಮ ಕಾಪಾಡುವ ಮೂಲಕ ಅದರ್ಶ ಪತ್ನಿಯ ಜೀವನದ ಪಾಠವನ್ನು ಕಲಿಸುತ್ತದೆ. ಪ್ರಸ್ತುತ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುವ ಮೂಲಕ ಭಾರತದ ಸಂಸ್ಕೃತಿ ಮತ್ತು ಪರಂಪರೆಗೆ ಮತ್ತೊಂದು ಗರಿ ಇಟ್ಟಂತಾಗಿದೆ. ರಾಮ ಮಂದಿರ ಕೇವಲ ಒಂದು ಧಾರ್ಮಿಕ ಶ್ರದ್ಧಾ ಕೇಂದ್ರವಾಗದೇ ಅಖಂಡ ಭಾರತದ ಪರಂಪರೆ, ಸಂಸ್ಕೃತಿ, ಜೀವನದ ಮೌಲ್ಯಗಳು, ದೇಶದ ಇತಿಹಾಸವನ್ನು ಜಗತ್ತಿಗೆ ಸಾರುವ ಕೇಂದ್ರವಾಗಿ ರೂಪಗೊಳ್ಳಬೇಕು.

ವಿಶ್ವದಲ್ಲಿ ಪ್ರತಿಯೊಂದು ದೇಶಗಳು ತಮ್ಮದೇ ಆದ ಇತಿಹಾಸ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿವೆ. ಆ ದೇಶಗಳು ತಮ್ಮ ದೇಶದ ಸಂಸ್ಕೃತಿ ಮತ್ತು ಪರಂಪರೆಯನ್ನು ದೇಶದ ಐತಿಹಾಸಿಕ ಕೇಂದ್ರಗಳ ರಕ್ಷಣೆ, ಪಾರಂಪರಿಕ ಸ್ಥಳಗಳು, ಧಾರ್ಮಿಕ ಕೇಂದ್ರಗಳ ಮೂಲಕ ವಿಶ್ವಕ್ಕೆ ಪರಿಚಯಿಸುವ ಕೆಲಸ ಮಾಡುತ್ತವೆ. ವಿಶೇಷವಾಗಿ ಯುರೋಪ್ ದೇಶಗಳು ತಮ್ಮ ದೇಶದ ಧಾರ್ಮಿಕ ಹಾಗೂ ಪಾರಂಪರಿಕ ಸ್ಥಳಗಳನ್ನು ವಿಶ್ವದರ್ಜೆಯ ಪ್ರವಾಸಿ ತಾಣಗಳಾಗಿ ಅಭಿವೃದ್ಧಿ ಪಡಿಸಿ, ತಮ್ಮ ಸಂಸ್ಕೃತಿ ಮತ್ತು ಪರಂಪರೆ ವಿಶ್ವಕ್ಕೆ ತೋರಿಸುವ ಕೆಲಸ ಮಾಡುತ್ತವೆ. ಆ ಮೂಲಕ ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ಆರ್ಥಿಕ ಪ್ರಗತಿಯನ್ನೂ ಸಾಧಿಸುತ್ತಿವೆ.

ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ರಾಮ ಮಂದಿರ ಕೇವಲ ಭಾರತೀಯರಿಗಷ್ಟೇ ಅಲ್ಲ. ವಿಶ್ವದ ಎಲ್ಲರಿಗೂ ಪ್ರವಾಸಿ ತಾಣವಷ್ಟೇ ಅಲ್ಲದೇ ಆ ಮೂಲಕ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ವಿಶ್ವಕ್ಕೆ ತೋರಿಸುವ ಕೇಂದ್ರವಾಗಿ ರೂಪಗೊಳ್ಳಲಿ ಎನ್ನುವುದು ಭಾರತೀಯರಾದ ನಮ್ಮೆಲ್ಲರ ಬಯಕೆ. ರಾಮ ಮಂದಿರ ನಿರ್ಮಾಣ ಭಾರತೀಯ ಜನತಾ ಪಕ್ಷದ ಬದ್ಧತೆಯಾಗಿದ್ದು, ಮಾಜಿ ಉಪ ಪ್ರಧಾನಿ ಲಾಲಕೃಷ್ಣ ಅಡ್ವಾಣಿ, ಮುರಳಿ ಮನೋಹರ್ ಜೋಷಿ, ಕಲ್ಯಾಣ್ ಸಿಂಗ್ ರಂತಹ ಹಿರಿಯರ ಹೋರಾಟ ಹಾಗೂ ತ್ಯಾಗದ ದ್ಯೋತಕವಾಗಿದ್ದು, ವಿಶ್ವನಾಯಕ ನಮ್ಮೆಲ್ಲರ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲಿ ರಾಮ ಮಂದಿರ ನಿರ್ಮಾಣವಾಗಿ ಪ್ರಧಾನಿಯವರ ಅಮೃತ ಹಸ್ತದಿಂದಲೇ ಉದ್ಘಾಟನೆಯಾಗುತ್ತಿರುವುದು ಪೂರ್ವ ನಿಗದಿತವೇ ಎನಿಸುತ್ತದೆ.

ಆದರ್ಶ ರಾಮರಾಜ್ಯದ ಕನಸು ಹೊತ್ತು ಅಡಳಿತ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು ರಾಮ ಮಂದಿರ ನಿರ್ಮಾಣ ಮಾಡುವ ಮೂಲಕ ರಾಮರಾಜ್ಯ ಸ್ಥಾಪನೆಗೆ ಅಡಿಗಲ್ಲು ಹಾಕಿದ್ದಾರೆ. ರಾಮರಾಜ್ಯದ ಮೂಲಕ ಭಾರತವನ್ನು ವಿಶ್ವ ನಾಯಕನ್ನಾಗಿ ಮಾಡಲು ಹೆಜ್ಜೆ ಇಟ್ಟಿರುವ ಅವರು, ಕಳೆದ ಒಂಭತ್ತುವರೆ ವರ್ಷದ ಅಧಿಕಾರದಲ್ಲಿ ಉತ್ತಮ ಹಾಗೂ ಸದೃಢ ಆಡಳಿತ ನೀಡುವ ಮೂಲಕ ಇಡೀ ವಿಶ್ವವೇ ಭಾರತದ ಕಡೆಗೆ ನೋಡುವಂತೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಭಾರತದ ಬಗ್ಗೆ ಇದ್ದ ಅವರ ಮನಸ್ಥಿತಿಯನ್ನು ಬದಲಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಭವ್ಯ ರಾಮ ಮಂದಿರದ ಮೂಲಕ ಭವ್ಯ ಭಾರತ ನಿರ್ಮಾಣದ ಸಂದೇಶ ಸಾರುತ್ತಿರುವುದು ಅತ್ಯಂತ ಸ್ತುತ್ಯರ್ಹವಾಗಿದ್ದು, ಇಂತಹ ಮಹಾನ್ ಕಾರ್ಯ ನಡೆಯುತ್ತಿರುವ ಸಂದರ್ಭದಲ್ಲಿ ನಾವೆಲ್ಲರೂ ಸಾಕ್ಷಿಯಾಗುತ್ತಿರುವದೇ ನಮ್ಮ ಪೂರ್ವ ಜನ್ಮದ ಪುಣ್ಯ.

ಸುಮಲತಾ ಕಾಂಗ್ರೆಸ್ ಸೇರ್ಪಡೆ ಚರ್ಚೆಯೇ ಆಗಿಲ್ಲ: ಸಚಿವ ಚಲುವರಾಯಸ್ವಾಮಿ

ಈ ಸಂದರ್ಭದಲ್ಲಿ ಇಡೀ ದೇಶ ರಾಮನ ಪ್ರಾಣ ಪ್ರತಿಷ್ಠಾಪನೆ ಮಾಡುವ ಸಂದರ್ಭದಲ್ಲಿ ಭಾರತ ಹಳ್ಳಿ ಹಳ್ಳಿ ಮನೆ ಮನೆಗಳಲ್ಲಿ ತೋರಿರುವ ಉತ್ಸಾಹ ಇಡೀ ದೇಶವನ್ನು ಒಗ್ಗೂಡಿಸಿದೆ. ಮತ್ತು ಭವಿಷ್ಯದ ಭಾರತ ರೂಪಿಸುವಲ್ಲಿ ಸಂಕಲ್ಪದ ರೂಪದಲ್ಲಿ 22ನೇ ತಾರೀಖು ಇಡೀ ಭಾರತ ಏಕ ಶಿಲೆಯಾಗಿ ನಿಂತಿದೆ. ಭಾರತದ ನೇತೃತ್ವ ವಹಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸಂಕಲವೂ ಇದಾಗಿದೆ. ಆದ್ದರಿಂದ ರಾಮರಾಜ್ಯದ ಸಂಕಲ್ಪಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು. ನಮ್ಮ ಮುಂದಿನ ಪೀಳಿಗೆಗೆ ರಾಮ ರಾಜ್ಯ ಕಟ್ಟುವ ಸೌಭಾಗ್ಯ ನಮ್ಮದಾಗಿದೆ. ಆ ಕರ್ತವ್ಯವನ್ನು ನಾವು ಶ್ರದ್ದೆ, ಭಕ್ತಿಯಿಂದ ಮಾಡಿದರೆ, ಶ್ರೀರಾಮನ ಆದರ್ಶಕ್ಕೂ, ಭಾರತಕ್ಕೂ ಮಾಡುವ ಸೇವೆಯಾಗಲಿದೆ. ಈ ರಾಮ ಮಂದಿರದ ಮೂಲಕ ರಾಮನ ಆದರ್ಶಗಳು ಎಲ್ಲರಿಗೂ ಪ್ರೇರಣೆಯಾಗಲಿ, ಆ ಮೂಲಕ ರಾಮರಾಜ್ಯದ ಸಂಕಲ್ಪ ಕಾರ್ಯಸಿದ್ಧಿಯಾಗಲಿ ಎನ್ನುವ ಸದಾಶಯ ನನ್ನದು.

Follow Us:
Download App:
  • android
  • ios