ಮಾಲಿನ್ಯ ತಡೆಯದ ಕಾರ್ಖಾನೆ ಮೇಲೆ ಕ್ರಿಮಿನಲ್ ಕೇಸ್: ಸಚಿವ ಈಶ್ವರ್ ಖಂಡ್ರೆ
ನಿಯಮ ಉಲ್ಲಂಘನೆ ಮತ್ತು ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ಕೈಗಾರಿಕಾ ಘಟಕಗಳನ್ನು ಮುಚ್ಚಲು ಅಂತಿಮ ಆದೇಶ ನೀಡಿದ್ದರೂ, ಅದನ್ನು ಲೆಕ್ಕಿಸದೆ ಕಾರ್ಯನಿರ್ವಹಿಸುವ ಕೈಗಾರಿಕೆಗಳ ಮಾಲೀಕರು ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಅಧಿಕಾರಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ಸೂಚಿಸಿದ್ದಾರೆ.
ಬೆಂಗಳೂರು (ಜ.22): ನಿಯಮ ಉಲ್ಲಂಘನೆ ಮತ್ತು ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ಕೈಗಾರಿಕಾ ಘಟಕಗಳನ್ನು ಮುಚ್ಚಲು ಅಂತಿಮ ಆದೇಶ ನೀಡಿದ್ದರೂ, ಅದನ್ನು ಲೆಕ್ಕಿಸದೆ ಕಾರ್ಯನಿರ್ವಹಿಸುವ ಕೈಗಾರಿಕೆಗಳ ಮಾಲೀಕರು ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಅಧಿಕಾರಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ಸೂಚಿಸಿದ್ದಾರೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಪರಿಸರಕ್ಕೆ ತೀವ್ರ ಹಾನಿ ಮಾಡುತ್ತಿರುವ ಘಟಕಗಳನ್ನು ಪತ್ತೆ ಮಾಡಿ ಅವುಗಳ ವಿರುದ್ಧ ಕ್ರಮ ಕೈಗೊಳ್ಳಬೇಕು.
ಅದರಲ್ಲೂ ಪರಿಸರಕ್ಕೆ ಹಾನಿಯಾಗಲಿದೆ ಹೀಗಾಗಿ ಕೈಗಾರಿಕೆ ಮುಚ್ಚುವಂತೆ ಆದೇಶಿಸಿದ್ದರೂ, ಅದಕ್ಕೆ ಬೆಲೆ ಕೊಡದೆ ಕೈಗಾರಿಕೆ ನಡೆಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು. ಬೆಂಗಳೂರಿನ ಬೆಳ್ಳಂದೂರು, ವರ್ತೂರು ಕೆರೆಗಳಿಗೆ ಕಲುಷಿತ ನೀರು ಹರಿಸಲಾಗುತ್ತಿದೆ. ಹೀಗಾಗಿ ಕೆರೆ ಭಾಗದಲ್ಲಿ ತ್ಯಾಜ್ಯ ನೀರು ಶುದ್ಧೀಕರಣ ಘಟಕ ಅಳವಡಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಗಡುವು ನೀಡಿತ್ತು. ಆ ಗಡುವು ಈ ವರ್ಷದ ಡಿಸೆಂಬರ್‌ಗೆ ಅಂತ್ಯವಾಗಲಿದ್ದು, ಸ್ಥಳೀಯ ಸಂಸ್ಥೆಗಳೊಂದಿಗೆ ಸಮಾಲೋಚಿಸಿ ಎಸ್‌ಟಿಪಿ ನಿರ್ಮಾಣ ಕಾರ್ಯ ಪೂರ್ಣಗೊಳಿಸಬೇಕು ಎಂದು ಹೇಳಿದರು.
ಮರ ಕಡಿತ ಕೇಸಲ್ಲಿ ಕ್ರಮ ಆಗಿದೆ: ಎಚ್‌ಡಿಕೆಗೆ ಸಚಿವ ಈಶ್ವರ ಖಂಡ್ರೆ ತಿರುಗೇಟು!
ರಾಜ್ಯದಲ್ಲಿ ವೈದ್ಯಕೀಯ ತ್ಯಾಜ್ಯ ವಿಚಾರದಲ್ಲಿ ಆಸ್ಪತ್ರೆಗಳಿಗೆ ಕಿರುಕುಳ ನೀಡಲಾಗುತ್ತಿದೆ. ವೈದ್ಯಕೀಯ ತ್ಯಾಜ್ಯ ಸಂಗ್ರಹಣೆ, ಸಾಗಾಟ ಮತ್ತು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಲಾಗುತ್ತಿರುವ ಬಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಖುದ್ದು ಪರಿಶೀಲನೆ ನಡೆಸಬೇಕು. ಕೈಗಾರಿಕಾ ಘಟಕಗಳ ಕಾರ್ಯಾಚರಣೆಗೆ ಅನುಮತಿ ಕೋರಿ ಬಂದಿರುವ ಅರ್ಜಿಗಳು ವರ್ಷವಾದರೂ ವಿಲೇವಾರಿ ಮಾಡುವುದಿಲ್ಲ. ಅರ್ಜಿ ಸಲ್ಲಿಸಿದ ಕೂಡಲೆ ಅದರ ಪ್ರಕ್ರಿಯೆಗೆ ಚಾಲನೆ ನೀಡಬೇಕು. ಅನುಮೋದಿಸಬೇಕು ಅಥವಾ ತಿರಸ್ಕರಿಸಬೇಕು. ಅದಕ್ಕೆ ತಕ್ಕಂತೆ ತಂತ್ರಾಂಶ ಅಭಿವೃದ್ದಿಪಡಿಸಬೇಕು ಎಂದು ತಿಳಿಸಿದರು.