ಸುಮಲತಾ ಕಾಂಗ್ರೆಸ್ ಸೇರ್ಪಡೆ ಚರ್ಚೆಯೇ ಆಗಿಲ್ಲ: ಸಚಿವ ಚಲುವರಾಯಸ್ವಾಮಿ
ಸಂಸದೆ ಸುಮಲತಾ ಅವರು ಕಾಂಗ್ರೆಸ್ ಸೇರುವ ಬಗ್ಗೆ ಚರ್ಚೆಯೇ ಆಗಿಲ್ಲ. ಪಕ್ಷದೊಳಗೆ ಚರ್ಚೆಯೇ ಆಗದ ವಿಚಾರದ ಬಗ್ಗೆ ನಾನು ಪ್ರಸ್ತಾಪ ಮಾಡುವುದಿಲ್ಲ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ಮದ್ದೂರು (ಜ.22): ಸಂಸದೆ ಸುಮಲತಾ ಅವರು ಕಾಂಗ್ರೆಸ್ ಸೇರುವ ಬಗ್ಗೆ ಚರ್ಚೆಯೇ ಆಗಿಲ್ಲ. ಪಕ್ಷದೊಳಗೆ ಚರ್ಚೆಯೇ ಆಗದ ವಿಚಾರದ ಬಗ್ಗೆ ನಾನು ಪ್ರಸ್ತಾಪ ಮಾಡುವುದಿಲ್ಲ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು. ಪಟ್ಟಣದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿಧ ಅವರು, ಕಳೆದ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅವರು ಗೆದ್ದ ಬಳಿಕ ನನ್ನೊಂದಿಗೆ ರಾಜಕಾರಣದ ಚರ್ಚೆ ಮಾಡಿಲ್ಲ. ಆಗಾಗ ಸಿಕ್ಕ ವೇಳೆ ವಿಶ್ವಾಸದಿಂದ ಮಾತನಾಡಿದ್ದೇವೆ ಅಷ್ಟೇ, ಎಂದು ಹೇಳಿದರು.
ಸುಮಲತಾ ಕಾಂಗ್ರೆಸ್ ಸೇರ್ಪಡೆಗೆ ಡಿಕೆಶಿ ವಿರೋಧವಾಗಿರುವ ಬಗ್ಗೆ ಕೇಳಿದಾಗ, ಅವರಿಬ್ಬರ ನಡುವಿನ ಚರ್ಚೆಯ ವಿಚಾರ ನನಗೆ ತಿಳಿದಿಲ್ಲ. ನನಗೆ ಗೊತ್ತಿಲ್ಲದಿರುವುದನ್ನು ಏನೆಂದು ಹೇಳಲಿ ಎಂದು ಪ್ರಶ್ನಿಸಿದರು. ಸಚಿವರಿಗೆ ಹೈಕಮಾಂಡ್ ಚುನಾವಣೆಗೆ ಸ್ಪರ್ಧೆ ಮಾಡುವಂತೆ ಸೂಚಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು. ಕೆಲವು ಕಡೆ ಸ್ಪರ್ಧೆ ಮಾಡಿ ಎಂದು ಹೈಕಮಾಂಡ್ ಸಚಿವರಿಗೆ ಹೇಳಿರುವುದು ಸತ್ಯ. ಆದರೆ ನಮ್ಮ ಜಿಲ್ಲೆ ವಿಚಾರದಲ್ಲಿ ಈ ಬಗ್ಗೆ ಚರ್ಚೆಯಾಗಿಲ್ಲ ಎಂದು ಚುಟುಕಾಗಿ ಉತ್ತರಿಸಿದರು.
ವಿಧಾನಪರಿಷತ್ ಸದಸ್ಯ ಮಧು ಮಾದೇಗೌಡರ ಅಸಮಾಧಾನ ವಿಚಾರ ಕೇಳಿದಾಗ, ನಾನು ಮಧು ಮಾದೇಗೌಡರ ಜೊತೆ ಮಾತನಾಡಿದ್ದೇನೆ. ಕೆಲ ಸಮಸ್ಯೆಗಳ ಬಗ್ಗೆ ಅವರು ಮಾತನಾಡಿದ್ದಾರೆ. ಸಮಸ್ಯೆಗಳು ಪಕ್ಷದ ಆಂತರಿಕ ವಿಚಾರ. ಅದನ್ನು ಬಹಿರಂಗವಾಗಿ ಹೇಳಲು ಆಗುವುದಿಲ್ಲ. ಅವರು ನಮ್ಮ ಜೊತೆ ಚುನಾವಣೆಯಲ್ಲಿ ಸಕ್ರಿಯರಾಗಲಿದ್ದಾರೆ ಎಂದರು.
ಆವಿಷ್ಕಾರಗಳ ಫಲ ರೈತರಿಗೆ ತಲುಪಿಸಲು ವ್ಯವಸ್ಥೆ: ಸಚಿವ ಚಲುವರಾಯಸ್ವಾಮಿ
ಕುಮಾರಸ್ವಾಮಿ ಸ್ಪರ್ಧೆ ಮಾಡಿದರೆ ಮಾಡಲಿ. ಪ್ರತಿಸ್ಪರ್ಧಿಗಳನ್ನು ಅವರು ಬೇಡ ಇವರು ಬೇಡ ಎಂದಿಲ್ಲ. ಸ್ಥಳೀಯವಾಗಿ ಇಲ್ಲವಾದಾಗ ಅವರೋ ಇನ್ನೋಬ್ಬರೋ ನಿಂತುಕೊಳ್ಳುತ್ತಾರೆ. ನಮಗೆ ಸ್ಥಳೀಯವಾಗಿಯೇ ಅಭ್ಯರ್ಥಿ ಇದ್ದಾರೆ. ಪ್ರಬಲ, ದುರ್ಬಲ ಅಭ್ಯರ್ಥಿ ಅಂತೇನೂ ಇಲ್ಲ. ಜನರ ತೀರ್ಮಾನವೇ ಅಂತಿಮ ಎಂದು ನುಡಿದರು.