* ಕೇರಳ, ಅಸ್ಸಾಂನಲ್ಲಿರುವ ವ್ಯವಸ್ಥೆ ನಮ್ಮಲ್ಲಿನ್ನೂ ಜಾರಿಯಾಗಿಲ್ಲ* ಅತ್ಯುತ್ತಮ ಶಾಸಕ ಪ್ರಶಸ್ತಿಗೆ ಚಿಂತನೆ* ಪರಿಷತ್ ಬಗ್ಗೆ ಜನಾಭಿಪ್ರಾಯ ಮೂಡಿಸಲಿ
ಬೆಂಗಳೂರು(ಆ.01): ಸಂಪೂರ್ಣ ಕಾಗದ ರಹಿತವಾಗಿ ವಿಧಾನ ಮಂಡಲವನ್ನು ನಡೆಸುವ ವ್ಯವಸ್ಥೆಯಾದ ಇ-ವಿಧಾನವನ್ನು ಕೇರಳ, ಅಸ್ಸಾಂ ರಾಜ್ಯಗಳ ವಿಧಾನಸಭೆಗಳು ಅಳವಡಿಸಿಕೊಂಡಿವೆ. ಆದರೆ, ಮಾಹಿತಿ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕದಲ್ಲಿ ಈ ವ್ಯವಸ್ಥೆ ಅಳವಡಿಸಲು ಆಧಿಕಾರಶಾಹಿ ಅಡ್ಡಿಯಾಗಿದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಬೇಸರಿಸಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ವಿಧಾನಸಭೆಯ ಎರಡು ವರ್ಷದ ಸಾಧನೆಯ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ಹಣಕಾಸಿನ ಕೊರತೆಯಿಂದ ಇ-ವಿಧಾನ ಅಳವಡಿಕೆ ಸಾಧ್ಯವಾಗಲಿಲ್ಲ. ಮುಂದೆ ಸರ್ಕಾರ ಸಹಕಾರ ನೀಡಿದರೆ ಜಾರಿಗೆ ತರಲಾಗುವುದು ಎಂದು ತಿಳಿಸಿದರು. ರಾಜ್ಯದ ಸಚಿವಾಲಯದಲ್ಲಿ ಇನ್ನೂ ಬ್ರಿಟಿಷ್ ಆಡಳಿತ ವ್ಯವಸ್ಥೆಯೇ ಮುಂದುವರೆದಿದ್ದು ಇದರ ಕಹಿ ಅನುಭವ ನನಗಾಗಿದೆ ಎಂದೂ ಅವರು ಅಸಮಾಧಾನ ವ್ಯಕ್ತಪಡಿಸಿದರು.
ಮಾಧ್ಯಮ ನಿರ್ಬಂಧ ವೈಯಕ್ತಿಕವಲ್ಲ:
ವಿಧಾನಸಭೆಯಿಂದ ಮಾಧ್ಯಮಗಳನ್ನು ಹೊರಗಿಟ್ಟನಿರ್ಧಾರ ವೈಯಕ್ತಿಕವಾದುದಲ್ಲ. ಅಧಿಕಾರಿಗಳ ವರದಿ ಆಧರಿಸಿ ಲೋಕಸಭಾಧ್ಯಕ್ಷರು ನೀಡಿದ ಸೂಚನೆಯಂತೆ ಈ ನಿರ್ಧಾರ ಕೈಗೊಳ್ಳಲಾಯಿತು ಎಂದು ಹೇಳಿದರು.
ಸರ್ಕಾರ ವಿರುದ್ಧ ಸ್ಪೀಕರ್ ಕಾಗೇರಿಗೆ ಸಿದ್ದು ದೂರು
ಸದನದಲ್ಲಿ ಅರ್ಥಪೂರ್ಣವಾಗಿ ಚರ್ಚೆ ನಡೆಸುವ ಶಾಸಕರಿಗೆ ಅತ್ಯುತ್ತಮ ಶಾಸಕ ಪ್ರಶಸ್ತಿ ಕೊಡುವ ಚಿಂತನೆ ಇದ್ದು, ಮುಂದಿನ ಅಧಿವೇಶನದಲ್ಲಿ ಇದನ್ನು ಜಾರಿ ಮಾಡಲಾಗುವುದು. ಸಚಿವಾಲಯದ ಅಧಿಕಾರಿ ಹಾಗೂ ಸಿಬ್ಬಂದಿಗೆ ತರಬೇತಿ ವ್ಯವಸ್ಥೆ ಮಾಡಿದ್ದು, ಕಾರ್ಯದ ವೇಗ ಹೆಚ್ಚಿಸಲಾಗಿದೆ ಎಂದು ವಿವರಿಸಿದರು.
ಪರಿಷತ್ ಬಗ್ಗೆ ಜನಾಭಿಪ್ರಾಯ ಮೂಡಿಸಲಿ:
ವಿಧಾನ ಪರಿಷತ್‌ಗೆ ಅದರದೇ ಆದ ಇತಿಹಾಸವಿದೆ. ಪರಿಷತ್ ಏಕೆ ಬೇಕು ಎಂಬ ಪ್ರಶ್ನೆ ಉದ್ಭವವಾಗುತ್ತಿದೆ. ಈ ಬಗ್ಗೆ ಪರಿಷತ್ ಸದಸ್ಯರು ಆತ್ಮಾವಲೋಕನ ಮಾಡಬೇಕು. ಪರಿಷತ್ ಬೇಕು ಎಂಬ ಜನಾಭಿಪ್ರಾಯ ಮೂಡಿಸುವ ಹೊಣೆ ಪರಿಷತ್ ಸದಸ್ಯರ ಮೇಲಿದೆ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.
ರಾಷ್ಟ್ರ ಮಟ್ಟದ ಸಂಶೋಧನಾ ಸಂಸ್ಥೆ ನೀಡಿರುವ ಸಮೀಕ್ಷಾ ವರದಿಯಲ್ಲಿ ಕರ್ನಾಟಕವು ವಿಧಾನಸಭೆ ಅಧಿವೇಶನ ನಡೆಸಿರುವ ರಾಜ್ಯಗಳಲ್ಲಿಯೇ ಅಗ್ರಸ್ಥಾನದಲ್ಲಿದೆ. ಕೊರೋನಾ ಸಂಕಷ್ಟದ ಸಮಯದಲ್ಲೂ 2020ರಲ್ಲಿ 31ದಿನ ಅಧಿವೇಶನ ನಡೆಸಿ 61 ವಿಧೇಯಕ ಅಂಗೀಕರಿಸಿರುವುದು ಸಂಸದೀಯ ವ್ಯವಸ್ಥೆಯಲ್ಲಿ ಮೈಲಿಗಲ್ಲಾಗಿದೆ. ಕೊರೋನಾದಿಂದಾಗಿ 60 ದಿವಸ ಕಲಾಪ ನಡೆಸಲು ಸಾಧ್ಯವಾಗಲಿಲ್ಲ. ಸಂವಿಧಾನದ ಕುರಿತು ಸದನದಲ್ಲಿ ವಿಶೇಷ ಚರ್ಚೆ ಹಮ್ಮಿಕೊಳ್ಳಲಾಗಿತ್ತು ಎಂದು ಸ್ಮರಿಸಿದರು. ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ ಮತ್ತಿತರರು ಉಪಸ್ಥಿತರಿದ್ದರು.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ವಿಧಾನಸಭೆಯ ಎರಡು ವರ್ಷದ ಸಾಧನೆಯ ಪುಸ್ತಕವನ್ನು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಬಿಡುಗಡೆಗೊಳಿಸಿದರು. ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ ಮತ್ತಿತರರು ಉಪಸ್ಥಿತರಿದ್ದರು.