ಸಂಗಮೇಶ್ ಅಂಗಿ ಕೇಸ್ : ಸ್ಪೀಕರ್ ಕಾಗೇರಿ ಮಹತ್ವದ ಆದೇಶ
ಶಾಸಕ ಬಿ.ಕೆ. ಸಂಗಮೇಶ್ ಪ್ರಕರಣವನ್ನು ಕಾಂಗ್ರೆಸ್ ಸದಸ್ಯರ ತೀವ್ರ ವಿರೋಧದ ನಡುವೆಯೂ ಹಕ್ಕುಬಾಧ್ಯತಾ ಸಮಿತಿಗೆ ವಹಿಸಲಾಗಿದೆ.
ವಿಧಾನಸಭೆ (ಮಾ.10): ಸದನದಲ್ಲಿ ಅಂಗಿ ಕಳಚಿದ ಹಾಗೂ ಸಭಾಧ್ಯಕ್ಷರ ವಿರುದ್ಧ ಹೇಳಿಕೆ ನೀಡಿದ ಶಾಸಕ ಬಿ.ಕೆ. ಸಂಗಮೇಶ್ ಪ್ರಕರಣವನ್ನು ಕಾಂಗ್ರೆಸ್ ಸದಸ್ಯರ ತೀವ್ರ ವಿರೋಧದ ನಡುವೆಯೂ ಹಕ್ಕುಬಾಧ್ಯತಾ ಸಮಿತಿಗೆ ವಹಿಸಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಆದೇಶಿಸಿದ್ದಾರೆ.
ಸದನದಲ್ಲಿ ಮಂಗಳವಾರ ಈ ಬಗೆಗಿನ ಹಕ್ಕುಚ್ಯುತಿ ಪ್ರಸ್ತಾಪವನ್ನು ಮಂಡಿಸಿದ ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ಅವರು, ಸಂಗಮೇಶ್ ಸದನದಲ್ಲಿ ಅಂಗಿ ಕಳಚಿದ್ದು ಅಪರಾಧ. ಈ ಬಗ್ಗೆ ಕನಿಷ್ಠ ಪಾಪ ಪ್ರಜ್ಞೆ ಇಲ್ಲದೆ ಸ್ಪೀಕರ್ ಅವರನ್ನೇ ಬಿಜೆಪಿ ಏಜೆಂಟ್ ಎಂದು ಟೀಕಿಸಿ ಪೀಠಕ್ಕೆ ಅಗೌರವ ತೋರಿದ್ದಾರೆ. ಹೀಗಾಗಿ ಅವರ ಅಮಾನತನ್ನು ಅನಿರ್ದಿಷ್ಟಾವಧಿಗೆ ವಿಸ್ತರಿಸಬೇಕು. ಪ್ರಕರಣವನ್ನು ಹಕ್ಕುಬಾಧ್ಯತಾ ಸಮಿತಿಗೆ ವಹಿಸಬೇಕು ಎಂದು ಒತ್ತಾಯಿಸಿದರು.
ಕ್ಷೇತ್ರದಲ್ಲಿ ಸಮಸ್ಯೆಯಾದರೆ ಸ್ಪೀಕರ್ ಅವರ ಅನುಮತಿ ಪಡೆದು ಚರ್ಚಿಸಬೇಕು. ಆದರೆ, ಸಂಗಮೇಶ್ ಅವರು ಸದನದಲ್ಲಿ ಶರ್ಟ್ ಕಳಚಿದ್ದಾರೆ. ಅವರು ಪ್ಯಾಂಟ್ ಬಿಚ್ಚಿದ್ದರೆ ಏನು ಗತಿ? ಇದನ್ನು ಸಾಮಾನ್ಯ ವಿಷಯವಾಗಿ ಪರಿಗಣಿಸಲು ಸಾಧ್ಯವಿಲ್ಲ. ಇಷ್ಟಾದರೂ ಸದನದ ಹೊರಗಡೆ ಸ್ಪೀಕರ್ ಸರ್ವಾಧಿಕಾರಿ ಧೋರಣೆಯಿಂದ ವರ್ತಿಸಿದ್ದಾರೆ, ಬಿಜೆಪಿ ಏಜೆಂಟ್ ರೀತಿ ವರ್ತಿಸಿದ್ದಾರೆ ಎಂದು ಮಾತನಾಡಿದ್ದಾರೆ. ‘ಕನ್ನಡಪ್ರಭ’ ಸೇರಿದಂತೆ ಎಲ್ಲಾ ಪತ್ರಿಕೆಗಳಲ್ಲೂ ಇದು ವರದಿಯಾಗಿದೆ. ಹೀಗಾಗಿ ಸಂಗಮೇಶ್ ಅವರ ವಿರುದ್ಧ ಹಕ್ಕುಚ್ಯುತಿ ಮಂಡಿಸಿದ್ದೇನೆ ಎಂದರು.
'ಸಂಗಮೇಶ್ ವಿರುದ್ಧ 307 ಕೇಸ್ ಹಾಕಿ, ಬಿಜೆಪಿಗೆ ಕರ್ಕೊಂಡು ಹೋಗಲು ಯತ್ನಿಸಿದ್ದಾರೆ' ..
ಮಧ್ಯಪ್ರವೇಶಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಸ್ಪೀಕರ್ ಅವರು ಈಗಾಗಲೇ ಕಾನೂನುಬಾಹಿರವಾಗಿ ಸಂಗಮೇಶ್ ಅವರನ್ನು ಸದನದಿಂದ ಅಮಾನತು ಮಾಡಿದ್ದಾರೆ. ತಮ್ಮ ನೋವನ್ನು ಹೇಳಿಕೊಳ್ಳಲು ಬಂದ ಸದಸ್ಯರ ರಕ್ಷಣೆಗೆ ಬಾರದೆ ಅವರಿಗೆ ಶಿಕ್ಷೆ ವಿಧಿಸಿದ್ದಾರೆ. ಇದೀಗ ಸದನದಲ್ಲಿ ಇಲ್ಲದಿರುವ ವ್ಯಕ್ತಿಯ ಬಗ್ಗೆ ಹಕ್ಕುಚ್ಯುತಿ ಮಂಡಿಸುವುದು ತಪ್ಪು. ಇದಕ್ಕೆ ಅವಕಾಶ ನೀಡಬಾರದು ಎಂದು ಆಗ್ರಹಿಸಿ ಕಾಂಗ್ರೆಸ್ ಸದಸ್ಯರೊಂದಿಗೆ ಸದನದ ಬಾವಿಗಿಳಿದು ಧರಣಿ ಆರಂಭಿಸಿದರು.
ಈ ವೇಳೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸದನದಲ್ಲಿ ಇರದ ವ್ಯಕ್ತಿಗಳ ವಿರುದ್ಧ ಹಕ್ಕುಚ್ಯುತಿ ಮಂಡಿಸಲು ನಿಯಮಗಳಲ್ಲಿ ಅವಕಾಶವಿದೆ. ಆರಗ ಜ್ಞಾನೇಂದ್ರ ಅವರು ಹಕ್ಕುಚ್ಯುತಿ ಮಂಡಿಸಿದ್ದು, ಈ ಬಗ್ಗೆ ಚರ್ಚೆಗೆ ಅವಕಾಶ ಕಲ್ಪಿಸಿದ್ದರೂ ಪ್ರತಿಪಕ್ಷದ ಸದಸ್ಯರು ಚರ್ಚೆಯಲ್ಲಿ ಭಾಗವಹಿಸದೆ ಧರಣಿ ಮಾಡುತ್ತಿದ್ದೀರಿ. ಹೀಗಾಗಿ ಸಂಗಮೇಶ್ ವಿರುದ್ಧ ಹೆಚ್ಚುವರಿ ತನಿಖೆ ನಡೆಸಿ ವರದಿ ನೀಡಲು ಹಕ್ಕುಬಾಧ್ಯತಾ ಸಮಿತಿಗೆ ನೀಡುತ್ತಿರುವುದಾಗಿ ಹೇಳಿದರು.
ಇದನು ತೀವ್ರವಾಗಿ ವಿರೋಧಿಸಿದ ಕಾಂಗ್ರೆಸ್ ಸದಸ್ಯರು, ಸಿ.ಡಿ. ಸರ್ಕಾರಕ್ಕೆ ಧಿಕ್ಕಾರ ಎಂದು ಕೂಗಿದರು. ಗೃಹ ಸಚಿವ ಬಸವರಾಜ ಬೊಮ್ಮಾಯಿ, ಆರಗ ಜ್ಞಾನೇಂದ್ರ ಸೇರಿದಂತೆ ಯಾವ ಸದಸ್ಯರೂ ಮಾತನಾಡಲು ಅವಕಾಶ ನೀಡದೆ ‘ಸಿ.ಡಿ. ಸರ್ಕಾರ’, ‘ಸಿ.ಡಿ. ಸರ್ಕಾರ’ ಎಂದು ಘೋಷಣೆ ಕೂಗಿದರು. ಹೀಗಾಗಿ ಕಲಾಪವನ್ನು ಸ್ಪೀಕರ್ ಮಧ್ಯಾಹ್ನಕ್ಕೆ ಮುಂದೂಡಿದರು.
ಮುಂದೇನು?
- ಸಂಗಮೇಶ್ ಪ್ರಕರಣ ಹಕ್ಕು ಬಾಧ್ಯತಾ ಸಮಿತಿಗೆ ಹೋಗುತ್ತದೆ
- ಆ ಸಮಿತಿ ಪ್ರಕರಣದ ಕುರಿತು ಕೂಲಂಕಷ ಪರಿಶೀಲನೆ ನಡೆಸಲಿದೆ
- ಬಳಿಕ ವಿಧಾನಸಭೆಯ ಸ್ಪೀಕರ್ ಅವರಿಗೆ ವರದಿ ಸಲ್ಲಿಸುತ್ತದೆ
- ಸ್ಪೀಕರ್ ಅವರು ವರದಿಯನ್ನು ಅಧಿವೇಶನದಲ್ಲಿ ಮಂಡಿಸುತ್ತಾರೆ
- ಸದನ ಮುಂದೇನು ಮಾಡಬೇಕು ಎಂಬ ನಿರ್ಣಯ ಕೈಗೊಳ್ಳುತ್ತದೆ