Asianet Suvarna News Asianet Suvarna News

ಸೌಜನ್ಯ ರೇಪ್‌, ಕೊಲೆ ಪ್ರಕರಣ ಮರುತನಿಖೆ ಕೋರಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ದಕ್ಷಿಣ ಕನ್ನಡ ಜಿಲ್ಲೆ ಉಜಿರೆಯ ಸೌಜನ್ಯ ಕೊಲೆ ಮತ್ತು ಅತ್ಯಾಚಾರ ಪ್ರಕರಣವನ್ನು ಹೈಕೋರ್ಚ್‌ ಮೇಲ್ವಿಚಾರಣೆಯಲ್ಲಿ ಸಿಬಿಐ ಅಥವಾ ವಿಶೇಷ ತನಿಖಾ ತಂಡದಿಂದ (ಎಸ್‌ಐಟಿ) ಹೊಸದಾಗಿ ತನಿಖೆ ನಡೆಸಲು ಸರ್ಕಾರಕ್ಕೆ ಆದೇಶಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ಶುಕ್ರವಾರ ವಜಾಗೊಳಿಸಿದೆ.

Soujanya  rape and murder case petition seeking reinvestigation dismissed by highcourt rav
Author
First Published Sep 9, 2023, 10:05 AM IST

ಬೆಂಗಳೂರು (ಸೆ.9) :  ದಕ್ಷಿಣ ಕನ್ನಡ ಜಿಲ್ಲೆ ಉಜಿರೆಯ ಸೌಜನ್ಯ ಕೊಲೆ ಮತ್ತು ಅತ್ಯಾಚಾರ ಪ್ರಕರಣವನ್ನು ಹೈಕೋರ್ಚ್‌ ಮೇಲ್ವಿಚಾರಣೆಯಲ್ಲಿ ಸಿಬಿಐ ಅಥವಾ ವಿಶೇಷ ತನಿಖಾ ತಂಡದಿಂದ (ಎಸ್‌ಐಟಿ) ಹೊಸದಾಗಿ ತನಿಖೆ ನಡೆಸಲು ಸರ್ಕಾರಕ್ಕೆ ಆದೇಶಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ಶುಕ್ರವಾರ ವಜಾಗೊಳಿಸಿದೆ.

ಆರೋಪಿ ಖುಲಾಸೆಗೊಂಡಿರುವ ಹಿನ್ನೆಲೆಯಲ್ಲಿ ಮರು ತನಿಖೆಗೆ ಸಾರ್ವಜನಿಕರು ಪ್ರತಿಭಟನೆ ನಡೆಸಿ ಒತ್ತಾಯ ಮಾಡಿರುವ ಕಾರಣ ನೀಡಿ ಬೆಂಗಳೂರಿನ ಶೇಷಾದ್ರಿಪುರದ ಗಿರೀಶ್‌ ಭಾರದ್ವಾಜ್‌, ಬೆಳ್ತಂಗಡಿಯ ಜಿ.ನವೀನ್‌ ಕುಮಾರ್‌ ಮತ್ತು ಬಲ್ವಾಡು ಪುತ್ತೂರಿನ ವಿನಾಯಕ ಫ್ರೆಂಡ್‌್ಸ ಚಾರಿಟಬಲ್‌ ಟ್ರಸ್ಟ್‌ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌, ಅರ್ಜಿಯಲ್ಲಿ ಅರ್ಜಿದಾರರು ಎತ್ತಿರುವ ಮನವಿ ಕುರಿತು ಕಾನೂನಿನಡಿ ಲಭ್ಯವಿರುವ ಪರ್ಯಾಯ ವಿಧಾನಗಳ ಮೂಲಕ ಪರಿಹಾರ ಪಡೆಯಬಹುದು ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಿದೆ.

ಸೌಜನ್ಯಾ ಕೇಸ್‌: ಬೆಳ್ತಂಗಡಿಯ ಕಾಲ್ನಡಿಗೆ ಮೂಲಕ ಇಂದು ಬೆಂಗಳೂರಿಗೆ ಕೆಆರ್‌ಎಸ್ ಪಾರ್ಟಿ

ಮರುತನಿಖೆ ಅಗತ್ಯ:

ಇದಕ್ಕೂ ಮುನ್ನ ವಿಚಾರಣೆ ವೇಳೆ ಕೆಲ ಕಾಲ ಅರ್ಜಿದಾರ ಪರ ಹಿರಿಯ ವಕೀಲ ಅರುಣ್‌ ಶ್ಯಾಮ್‌ ವಾದಿಸಿ, 2012ರಲ್ಲಿ ವಿದ್ಯಾರ್ಥಿನಿ ಸೌಜನ್ಯ ಕೊಲೆ ಮತ್ತು ಅತ್ಯಾಚಾರ ಘಟನೆ ನಡೆದಿದೆ. ಪ್ರಕರಣದ ಆರೋಪಿ ವಿರುದ್ಧ ಸೂಕ್ತ ಸಾಕ್ಷ್ಯಧಾರಗಳು ಇಲ್ಲ ಎಂಬ ಕಾರಣಕ್ಕೆ ಆತನನ್ನು ವಿಚಾರಣಾ ನ್ಯಾಯಾಲಯ ಖುಲಾಸೆಗೊಳಿಸಿದೆ. ಆದರೆ, ಘಟನೆ ನಡೆದಿರುವುದು ನಿಜವೆಂದು ಅಭಿಪ್ರಾಯ ವ್ಯಕ್ತಪಡಿಸಿದೆ. ಅಂದರೆ ನಿಜವಾದ ದೋಷಿ ಪ್ರಕರಣದಿಂದ ತಪ್ಪಿಸಿಕೊಂಡಿದ್ದಾರೆ. ಪ್ರಕರಣ ನಡೆದ ನಂತರದ ‘ಗೋಲ್ಡನ್‌ ಅವರ್‌’ ಅವಧಿಯಲ್ಲಿ ತನಿಖಾಧಿಕಾರಿ ಮತ್ತು ವೈದ್ಯರಿಂದ ಕೆಲವೊಂದು ಲೋಪಗಳು ನಡೆದಿವೆ. ಇದರಿಂದ ಮರು ತನಿಖೆ ನಡೆಸಬೇಕು ಎಂಬ ಅಭಿಪ್ರಾಯ ಸಾರ್ವಜನಿಕರಿಂದ ವ್ಯಕ್ತವಾಗಿದೆ. ಹಾಗಾಗಿ, ಸಿಬಿಐ, ಇಲ್ಲವೇ ಸ್ವತಂತ್ರ ತನಿಖಾ ಸಂಸ್ಥೆ ಅಥವಾ ಎಸ್‌ಐಟಿಯಿಂದ ಹೊಸದಾಗಿ/ಮರು ತನಿಖೆ ನಡೆಸುವಂತೆ ಸರ್ಕಾರಕ್ಕೆ ಆದೇಶಿಸಬೇಕು ಎಂದು ಕೋರಿದರು.

ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಪ್ರಕರಣದಲ್ಲಿ ಸರ್ಕಾರ, ಮೂಲ ದೂರುದಾರರು ಅಥವಾ ಸಂತ್ರಸ್ತ ಕುಟುಂಬ ಆರೋಪಿಯನ್ನು ದೋಷಮುಕ್ತಗೊಳಿಸಿದ ವಿಚಾರಣಾ ನ್ಯಾಯಾಲಯದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಕಾನೂನಿನಲ್ಲಿ ಅವಕಾಶವಿದೆ. ಮೇಲ್ಮನವಿಯಲ್ಲಿ ತನಿಖಾ ಲೋಪಗಳನ್ನು ಪರಿಗಣಿಸಬಹುದಾಗಿದೆ ಮತ್ತು ಈ ಅರ್ಜಿಯಲ್ಲಿ ಮಾಡಿರುವ ಮನವಿಗಳನ್ನು ವ್ಯವಹರಿಸಬಹುದಾಗಿದೆ ಎಂದು ನುಡಿಯಿತು.

ಅರುಣ್‌ ಶ್ಯಾಮ್‌ ಉತ್ತರಿಸಿ, ಸಂತ್ರಸ್ತ ಕುಟುಂಬವು ಮೇಲ್ಮನವಿ ಸಲ್ಲಿಸಿಲ್ಲ ಎಂದು ನ್ಯಾಯಪೀಠದ ಗಮನಕ್ಕೆ ತಂದರು.

ಆಗ ನ್ಯಾಯಪೀಠ, ಹಾಗಾದರೆ ಮೇಲ್ಮನವಿ ಸಲ್ಲಿಸಲು ಸಂತ್ರಸ್ತ ಕುಟುಂಬಕ್ಕೆ ನೀವು ಸಹಾಯ ಮಾಡಿ ಎಂಬುದಾಗಿ ಸಲಹೆ ನೀಡಿತಲ್ಲದೆ, ಸಭೆ-ಸಮಾರಂಭ, ಧರಣಿ ಹಾಗೂ ಸಾರ್ವಜನಿಕರ ಭಾವನೆಗಳಿಂದ ಕಾನೂನು ಚೌಕಟ್ಟು ಮೀರಲು ಸಾಧ್ಯವಿಲ್ಲ. ಅರ್ಜಿದಾರರ ಉದ್ದೇಶ ಒಳ್ಳೆಯದಿದ್ದರೂ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕಾನೂನಿನ ಮಿತಿ ವ್ಯವಹರಿಸಬೇಕಾಗುತ್ತದೆ. ಅದರಂತೆ ಅರ್ಜಿ ಹಿಂಪಡೆದು ನಿಮ್ಮ ಮನವಿಗಳ ಕುರಿತು ಕಾನೂನಿನಡಿ ಲಭ್ಯವಿರುವ ಪರ್ಯಾಯ ವಿಧಾನಗಳ ಮೂಲಕ ಪರಿಹಾರ ಪಡೆದುಕೊಳ್ಳಬಹುದು ಎಂದು ತಿಳಿಸಿತು.

ಅರ್ಜಿ ಹಿಂಪಡೆಯಲು ನಿರಾಕರಿಸಿದ ಅರ್ಜಿದಾರ ಪರ ವಕೀಲರು, ಅರ್ಜಿ ಸಂಬಂಧ ಮೆರಿಟ್‌ ಮೇಲೆ ನ್ಯಾಯಾಲಯವು ಆದೇಶ ಮಾಡಬೇಕು ಎಂದು ಕೋರಿದರು. ಆಗ ನ್ಯಾಯಪೀಠವು ಅರ್ಜಿಯನ್ನು ವಜಾಗೊಳಿಸಲಾಗಿದೆ. ಆ ಕುರಿತು ವಿವರವಾದ ಆದೇಶವನ್ನು ಹೊರಡಿಸಲಾಗುವುದು ತಿಳಿಸಿತು.

ಸೌಜನ್ಯ ಕೇಸ್‌ನಲ್ಲಿ ತಪ್ಪು ಮಾಡಿಲ್ಲವೆಂದು ಅಣ್ಣಪ್ಪ ಸ್ವಾಮಿ ಮುಂದೆ ಆಣೆ; ಈ ದೈವದ ಬಗ್ಗೆ ನಿಮಗೆಷ್ಟು ಗೊತ್ತು?

2012ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯ ಎಸ್‌ಡಿಎಂ ಕಾಲೇಜಿನ ವಿದ್ಯಾರ್ಥಿನಿ ಸೌಜನ್ಯ ಕೊಲೆ ಮತ್ತು ಅತ್ಯಾಚಾರ ಘಟನೆ ನಡೆದಿತ್ತು. ಪ್ರಕರಣವನ್ನು ಮೊದಲಿಗೆ ಬೆಳ್ತಂಗಡಿ ಠಾಣಾ ಪೊಲೀಸರು ತನಿಖೆ ನಡೆಸಿದ್ದರು. ಬಳಿಕ ತನಿಖೆಯನ್ನು ಸಿಐಡಿಗೆ ವಹಿಸಲಾಗಿತ್ತು. 2013ರ ನ.6ರಂದು ಸರ್ಕಾರ ಸಿಬಿಐಗೆ ತನಿಖೆಗೆ ಆದೇಶಿಸಿತ್ತು. ತನಿಖಾಧಿಕಾರಿಗಳು ಕಾರ್ಕಳ ಮೂಲದ ಸಂತೋಷ್‌ ರಾವ್‌ ಎಂಬಾತನನ್ನು ಆರೋಪಿಯಾಗಿ ಗುರುತಿಸಿದ್ದರು. ಸಿಬಿಐ ವಿಶೇಷ ನ್ಯಾಯಾಲಯವು 2023ರ ಜು.16ರಂದು ಆರೋಪಿಯನ್ನು ಖುಲಾಸೆಗೊಳಿಸಿತ್ತು. ಇದರಿಂದ ವಿವಿಧ ಸಂಘಟನೆಗಳು ರಾಜಕೀಯ ಪಕ್ಷಗಳು ಪ್ರಕರಣದ ಮರು ತನಿಖೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು. ಹಾಗಾಗಿ, ಮರು ತನಿಖೆಗೆ ಆದೇಶಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಅರ್ಜಿದಾರರು ಹೈಕೋರ್ಟ್‌ಗೆ ಪಿಐಎಲ್‌ ಸಲ್ಲಿಸಿದ್ದರು.

Follow Us:
Download App:
  • android
  • ios