Asianet Suvarna News Asianet Suvarna News

ವಿದೇಶಿ ಹಾಲಿಗೆ ರಾಜ್ಯದಲ್ಲಿ ವಿರೋಧ

ವಿದೇಶಿ ಹೈನೋತ್ಪನ್ನವನ್ನು ಹೊರಗಿಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ನಿರ್ಮಾಣ ಮಾಡಲು ಮುಂದಿನ ನಾಲ್ಕೈದು ದಿನಗಳಲ್ಲಿ ರಾಜ್ಯ ಸಂಸದರ ನಿಯೋಗದೊಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಭೇಟಿ ಮಾಡಲಿದೆ. 

Soon We Will Meet PM Modi For Milk Import Issue
Author
Bengaluru, First Published Oct 25, 2019, 8:49 AM IST

ಬೆಂಗಳೂರು [ಅ.25]:  ಭಾರತವು ಸಹಿ ಹಾಕಲು ಮುಂದಾಗಿರುವ ಮುಕ್ತ ವ್ಯಾಪಾರ ಒಡಂಬಡಿಕೆಯ ವ್ಯಾಪ್ತಿಯಿಂದ ಹೈನೋತ್ಪನ್ನವನ್ನು ಹೊರಗಿಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ನಿರ್ಮಾಣ ಮಾಡಲು ಮುಂದಿನ ನಾಲ್ಕೈದು ದಿನಗಳಲ್ಲಿ ರಾಜ್ಯ ಸಂಸದರ ನಿಯೋಗದೊಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಕೃಷಿ ಸಚಿವರನ್ನು ಭೇಟಿ ಮಾಡುವುದಾಗಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಜಿಕೆವಿಕೆ ಆವರಣದಲ್ಲಿ ನಾಲ್ಕು ದಿನಗಳ ಕಾಲ ಆಯೋಜಿಸಿರುವ ‘ಕೃಷಿ ಮೇಳ’ವನ್ನು  ಉದ್ಘಾಟಿಸಿ ಮಾತನಾಡಿದ ಅವರು, ವಿದೇಶದಿಂದ ಹಾಲು ಹಾಗೂ ಹಾಲು ಉತ್ಪನ್ನಗಳನ್ನು ಆಮದು ನಿಷೇಧಿಸುವುದಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೇಂದ್ರ ಸರ್ಕಾರಕ್ಕೆ ವಿವರವಾದ ಪತ್ರವನ್ನು ಬರೆಯಲಾಗಿದೆ. ಹಾಲು ಉತ್ಪಾದಕರಿಗೆ ತೊಂದರೆ ಉಂಟಾಗುವ ಒಪ್ಪಂದ ಕೈಬಿಡುವ ಕುರಿತು 28 ಲೋಕಸಭಾ ಸದಸ್ಯರ ನಿಯೋಗದೊಂದಿಗೆ ಪ್ರಧಾನಿ ಮತ್ತು ಕೃಷಿ ಸಚಿವರನ್ನು ಭೇಟಿ ಮಾಡಿ ಮನವಿ ಮಾಡುತ್ತೇವೆ. ಹಾಲು ಉತ್ಪಾದಕರಿಗೆ ತೊಂದರೆ ಉಂಟಾಗದಂತೆ ಎಲ್ಲ ರೀತಿಯ ಪ್ರಯತ್ನ ನಡೆಸುತ್ತೇವೆ ಎಂದು ಭರವಸೆ ನೀಡಿದರು.

ಸರ್ಕಾರ ರೈತರ ಏಳಿಗಾಗಿ ಹಲವಾರು ಯೋಜನೆಗಳನ್ನು ರೂಪಿಸಿದೆ. ರೈತರ ಬೆಳೆಗೆ ವೈಜ್ಞಾನಿಕ ಬೆಲೆ, ನೀರಿನ ವ್ಯವಸ್ಥೆ ಸಿಗುವಂತಾಗಬೇಕು. ರಾಜ್ಯದಲ್ಲಿ ಶೇ.35ರಷ್ಟುಮಾತ್ರ ನೀರಾವರಿ ಪ್ರದೇಶವಿದ್ದು, ಒಣ ಬೇಸಾಯದ ಮೇಲೆ ರೈತರು ಅವಲಂಬಿತರಾಗಿದ್ದಾರೆ. ಪ್ರಕೃತಿ ವಿಕೋಪದಿಂದ ಸಂಕಷ್ಟದಲ್ಲಿರುವ ರೈತರಿಗೆ ಕೇಂದ್ರ ಸರ್ಕಾರ ಸ್ಪಂದಿಸಿ ‘ರೈತ ಸಮ್ಮಾನ್‌’ ಯೋಜನೆ ಮೂಲಕ ಮೂರು ಕಂತುಗಳಲ್ಲಿ ಆರು ಸಾವಿರ ರು.ಗಳನ್ನು ಕೃಷಿಕರಿಗೆ ನೀಡುತ್ತಿದೆ. ಇದೇ ಯೋಜನೆಯಡಿ ರಾಜ್ಯ ಸರ್ಕಾರವೂ ಮೂರು ಕಂತುಗಳಲ್ಲಿ ತಲಾ ಎರಡು ಸಾವಿರ ರು. ನೀಡುವ ಯೋಜನೆ ರೂಪಿಸಿದ್ದು, ಈಗಾಗಲೇ ಮೊದಲ ಕಂತಿನ ಹಣ ಬಿಡುಗಡೆ ಮಾಡಲಾಗಿದೆ. ಇದರಿಂದ 25 ಲಕ್ಷ ರೈತರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ಸಂಸ್ಕರಿತ ಹಾಲೂ ಗುಣಮಟ್ಟದಲ್ಲಿ ಫೇಲ್!...

2020ರ ಒಳಗಾಗಿ ರೈತರ ಆದಾಯ ಎರಡು ಪಟ್ಟು ಹೆಚ್ಚಿಸಬೇಕು ಎಂದು ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚನೆ ನೀಡಿದೆ. ಈ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿ ಮಾಡಿರುವ ಕೃಷಿ ವಿಕಾಸ್‌ ಯೋಜನೆ, ಜಾನುವಾರು ಯೋಜನೆ, ಜಲಶಕ್ತಿ ಯೋಜನೆ ಸೇರಿದಂತೆ ಅನೇಕ ಯೋಜನೆಗಳ ಪ್ರಯೋಜನ ಪಡೆದುಕೊಳ್ಳುವಂತೆ ರೈತರಿಗೆ ಮನವಿ ಮಾಡಿದರು.

ಇತ್ತೀಚೆಗೆ ವಿಶ್ವ ಸಂಸ್ಥೆ ನಡೆಸಿದ ಅಧ್ಯಯನದ ಪ್ರಕಾರ ಪ್ರತಿ ವರ್ಷ ದೇಶದಲ್ಲಿ ಉತ್ಪಾದನೆಯಾಗುವ ಆಹಾರ ಪದಾರ್ಥಗಳ ಪೈಕಿ ಶೇ.40ರಷ್ಟು, ಅಂದರೆ 50 ಸಾವಿರ ಕೋಟಿ ರು. ಮೊತ್ತದ ಆಹಾರ ಬಳಕೆಯಾಗದೇ ಪೋಲಾಗುತ್ತಿರುವುದು ಆತಂಕದ ವಿಷಯವಾಗಿದೆ. ಈ ಕುರಿತು ಕೃಷಿ ಉತ್ಪನ್ನಗಳ ಬಳಕೆ, ಸಂಗ್ರಹಣೆಯಲ್ಲಿ ಸುಧಾರಣೆ ತರಬೇಕಾಗಿದೆ ಎಂದು ಹೇಳಿದರು.

ಸಾವಯವ ಕೃಷಿಗೆ ಹೆಚ್ಚಿನ ಮಹತ್ವ ನೀಡಬೇಕಾಗಿದೆ. ಯುವಕರು ಕೃಷಿ ವಿಮುಖರಾಗಿ ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಪ್ಪಿಸಲು ಕೃಷಿಯನ್ನು ಲಾಭದಾಯವಾಗಿಸಲು ಕೃಷಿ ವಿಶ್ವವಿದ್ಯಾಲಯಗಳು ಮತ್ತು ಸರ್ಕಾರ ಯೋಜನೆ ರೂಪಿಸುವ ಅಗತ್ಯವಿದೆ ಎಂದರು.

ಉಪ ಮುಖ್ಯಮಂತ್ರಿ ಹಾಗೂ ಕೃಷಿ ಸಚಿವ ಲಕ್ಷ್ಮಣ ಸಂಗಪ್ಪ ಸವದಿ ಮಾತನಾಡಿ, ಕೃಷಿಯಲ್ಲಿ ರಸಗೊಬ್ಬರ, ಕ್ರಿಮಿನಾಶಕ ಬಳಸುವುದರಿಂದ ಜನರ ಆರೋಗ್ಯದ ಮೇಲೆ ಕೆಟ್ಟಪರಿಣಾಮ ಬೀಳುತ್ತಿದೆ. ಕೃಷಿ ವಿಶ್ವವಿದ್ಯಾಲಯಗಳು ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಚಿಂತನೆ ಮಾಡಬೇಕು. ಆದಾಯ ದ್ವಿಗುಣ ಮಾಡುವುದರ ಜೊತೆಗೆ ಜನರ ಆರೋಗ್ಯ ಕಾಪಾಡಬೇಕಿದೆ ಎಂದು ಹೇಳಿದರು.

ಮಾಜಿ ಸಚಿವ ಕೃಷ್ಣಬೈರೇಗೌಡ ಮಾತನಾಡಿ, ಬೆಳೆಯ ಅನಿಶ್ಚಿತತೆಯ ನಡುವೆ ರೈತರು ಬದುಕಿದ್ದಾರೆ ಎಂದರೆ ಹೈನುಗಾರಿಕೆ ಕಾರಣ. ಆದರೆ, ಕೇಂದ್ರ ಸರ್ಕಾರ ಈಗ ಅಂತಾರಾಷ್ಟ್ರೀಯ ಒಪ್ಪಂದ ಮಾಡಿ ವಿದೇಶದಿಂದ ಹಾಲು ಆಮದು ಮಾಡಿಕೊಳ್ಳುವ ಸುದ್ದಿ ಕೇಳಿಬಂದಿದೆ. ಇದು ರೈತ ಸಮುದಾಯವನ್ನು ಆತಂಕಕ್ಕೀಡು ಮಾಡಿದೆ. ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ ಹೊರ ದೇಶದ ಹಾಲು ಆಮದಾಗದಂತೆ ನೋಡಿಕೊಳ್ಳಬೇಕೆಂದು ಮನವಿ ಮಾಡಿದರು.

ಸಮಾರಂಭದಲ್ಲಿ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅತ್ಯುತ್ತಮ ರೈತ ಹಾಗೂ ರೈತ ಮಹಿಳಾ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಈ ವೇಳೆ ಜಿಕೆವಿಕೆ ಕುಲಪತಿ ಎಸ್‌. ರಾಜೇಂದ್ರ ಪ್ರಸಾದ್‌ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

Follow Us:
Download App:
  • android
  • ios