ನವದೆಹಲಿ[ಅ.19]: ಪ್ರಮುಖ ಬ್ರ್ಯಾಂಡುಗಳು ಸೇರಿದಂತೆ ಸಂಸ್ಕರಿಸಿದ ಹಾಲಿನ ಮಾದರಿಗಳು ಸೂಚಿತ ಗುಣಮಟ್ಟವನ್ನು ಹೊಂದಿಲ್ಲ ಎಂಬ ಆಘಾತಕಾರಿ ಸಂಗತಿ ಭಾರತೀಯ ಆಹಾರ ಸುರಕ್ಷತೆ ಹಾಗೂ ಗುಣಮಟ್ಟಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ)ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ.

ಎಫ್‌ಎಸ್‌ಎಸ್‌ಎಐ 2018ರ ಮೇ ಮತ್ತು ಅಕ್ಟೋಬರ್‌ ಅವಧಿಯಲ್ಲಿ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ 1,103 ನಗರ ಮತ್ತು ಪಟ್ಟಣಗಳಿಂದ ಸಂಸ್ಕರಿತ ಮತ್ತು ಕಚ್ಚಾ ಹಾಲಿನ 6,432 ಮಾದರಿ ಸಂಗ್ರಹಿಸಿ ಅಧ್ಯಯನಕ್ಕೆ ಒಳಪಡಿಸಿತ್ತು. ಸಂಸ್ಕರಿಸಿದ ಹಾಲಿನ ಮಾದರಿಗಳ ಪೈಕಿ ಶೇ.37.7ರಷ್ಟುಹಾಲಿನ ಮಾದರಿಗಳು ಸೂಚಿತ ಗುಣಮಟ್ಟಕಾಯ್ದುಕೊಳ್ಳುವಲ್ಲಿ ವಿಫಲವಾಗಿರುವುದು ಕಂಡುಬಂದಿದೆ. ಸುರಕ್ಷತೆ ಮಾನದಂಡವನ್ನು ಅನುಸರಿಸುವಲ್ಲಿಯೂ ಶೇ.10.4ರಷ್ಟು(2,607 ಮಾದರಿಗಳು) ಸಂಸ್ಕರಿಸಿದ ಹಾಲಿನ ಮಾದರಿಗಳು ವಿಫಲವಾಗಿವೆ. ಇವುಗಳಲ್ಲಿ ಅಫ್ಲಾಟಾಕ್ಸಿನ್‌ ಎಂ-1, ಪ್ರತಿಜೀವಕಗಳು ಮತ್ತು ಕೀಟನಾಶಕಗಳು ಕಂಡುಬಂದಿವೆ. ಸಂಸ್ಕರಿಸಿದ ಹಾಲಿನ ಕಲಬೆರಕೆಗಿಂತಲೂ, ಕಲ್ಮಶಲೀಖರಣ ಅತ್ಯಂತ ಗಂಭೀರ ಸಮಸ್ಯೆಯಾಗಿದೆ.

ಆದರೆ ಕೇವಲ 12 ಮಾದರಿಗಳು ಮಾತ್ರ ಕಲಬೆರಕೆ ಆಗಿರುವುದು ಕಂಡು ಬಂದಿದೆ. ಹೆಚ್ಚಿನ ಕಲಬೆರಕೆ ಹಾಲಿನ ಮಾದರಿಗಳು ತೆಲಂಗಾಣದಲ್ಲಿ ಕಂಡು ಬಂದಿದ್ದು, ನಂತರದಲ್ಲಿ ಮಧ್ಯ ಪ್ರದೇಶ ಮತ್ತು ಕೇರಳ ರಾಜ್ಯಗಳಿವೆ. ಸಕ್ಕರೆ ಮತ್ತು ಕೊಬ್ಬಿನ ಅಂಶ ಅಧಿಕವಾಗಿರುವ ಕಾರಣ ಸಂಸ್ಕರಿಸಿದ ಹಾಲು ಗುಣಮಟ್ಟಕಾಪಾಡಿಕೊಲ್ಳುವಲ್ಲಿ ವಿಫಲವಾಗಿದೆ ಎಂದು ಎಫ್‌ಎಸ್‌ಎಸ್‌ಎಐ ವರದಿ ತಿಳಿಸಿದೆ.

ಕಚ್ಚಾ ಹಾಲಿನ ಗುಣಮಟ್ಟಇನ್ನೂ ಕಳಪೆ

ಇನ್ನೊಂದೆಡೆ ಸಂಸ್ಕರಿಸಿದ ಹಾಲಿಗೆ ಹೋಲಿಸಿದರೆ ಕಚ್ಚಾ ಹಾಲಿನ ಗುಣಮಟ್ಟತೀರಾ ಕಳಪೆಯಾಗಿದೆ. ಒಟ್ಟು 3,825 ಮಾದರಿಗಳ ಪೈಕಿ, ಶೇ.47ರಷ್ಟುಹಾಲಿನ ಮಾದರಿಗಳು ಗುಣಮಟ್ಟವನ್ನು ಅನುಸರಿಸಿಲ್ಲ ಎಂದು ವರದಿ ತಿಳಿಸಿದೆ. ಆದರೆ, ಸಂಸ್ಕರಿಸಿದ ಹಾಲಿ ಮಾದರಿಗೆ ಹೋಲಿಸಿದರೆ, ಶೇ.4.8ರಷ್ಟುಕಚ್ಚಾಹಾಲಿನ ಮಾದರಿಗಳು ಮಾತ್ರ ಕಲ್ಮಶಗೊಂಡಿರುವುದು ಕಂಡುಬಂದಿದೆ. ಕಚ್ಚಾ ಹಾಲು ಉತ್ಪಾದಕರು ಅಸಂಘಟಿತ ವಲಯದವರಾಗಿರುವ ಕಾರಣ ಸರ್ಕಾರ ರೈತರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಎಫ್‌ಎಸ್‌ಎಸ್‌ಎಐನ ಸಿಇಒ ಪವನ್‌ ಅಗರ್ವಾಲ್‌ ಹೇಳಿದ್ದಾರೆ.