ಬಾಗಲಕೋಟೆ :  ‘ರಾಜಕೀಯಕ್ಕೆ ಬರಬೇಕು ಎಂದು ಮನಸ್ಸು ಮಾಡಿದರೆ ಕೇವಲ ಒಂದು ವರ್ಷ ಟೈಮ್‌ ಸಾಕು. ಮುಂಬರುವ ದಿನಗಳಲ್ಲಿ ಇಡೀ ದೇಶವೇ ನೋಡುವಂಥ ಉತ್ತಮ ರಾಜಕಾರಣಿಯಾಗಿ ಬೆಳೆಯುತ್ತೇನೆ’ ಎಂದು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹೇಳಿದ್ದಾರೆ.

ಜಿಲ್ಲೆಯ ಬೆನಕಟ್ಟಿಗ್ರಾಮದಲ್ಲಿ ಶನಿವಾರ ವೇಮನ ಜಯಂತಿ ಕಾರ್ಯಕ್ರಮ ಹಾಗೂ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ನಾನು ರಾಜಕೀಯದಲ್ಲಿ ಇಲ್ಲವೆಂದಲ್ಲ, ಆದರೆ ಸಾರ್ವಜನಿಕ ಜೀವನದಲ್ಲಿ ಮತ್ತಷ್ಟುಕ್ರಿಯಾತ್ಮಕವಾಗಿ ಕಾರ್ಯನಿರ್ವಹಿಸಬೇಕೆಂದರೆ ನನಗೆ ಇನ್ನಷ್ಟುಸಮಯ ಬೇಕು. ಆ ಸಮಯ ಬಂದೇ ಬರುತ್ತದೆ. ಆಗ ನಾನು ಆ ಕುರಿತು ಮತ್ತಷ್ಟುಮಾತನಾಡುತ್ತೇನೆ. ನಾನು ರಾಜಕೀಯದಲ್ಲಿ ಬೆಳೆದೇ ಬೆಳೆಯುತ್ತೇನೆ. ಇಡೀ ದೇಶ ನೋಡುವಂಥ ಕರ್ನಾಟಕದ ಒಳ್ಳೆಯ ರಾಜಕಾರಣಿಯಾಗುತ್ತೇನೆ ಎಂದರು.

ನನ್ನ ಬದುಕಿನಲ್ಲಿ ಎರಡು ಅಧ್ಯಾಯಗಳಿವೆ. ಸಚಿವನಾಗಿ ಅ​ಧಿಕಾರ ಅನುಭವಿಸಿದ್ದು, ಕಾಪ್ಟರ್‌ನಲ್ಲಿ ಪಯಣಿಸಿದ್ದು ಮೊದಲ ಭಾಗವಾದರೆ, ಸದ್ಯ ರೆಡ್ಡಿ ಸಮಾಜದ ಜನರೊಂದಿಗಿನ ಜೀವನ ಎರಡನೇ ಹಂತದ ಅಧ್ಯಾಯವಾಗಿದೆ ಎಂದು ತಿಳಿಸಿದರು.

ಏತನ್ಮಧ್ಯೆ ಆ್ಯಂಬಿಡೆಂಟ್‌ ಪ್ರಕರಣದಲ್ಲಿ ದೋಷಾರೋಪ ಪಟ್ಟಿಸಲ್ಲಿಸಿರುವ ವಿಚಾರದ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಗರಂ ಆದ ಜನಾರ್ದನ ರೆಡ್ಡಿ, ನಿಮ್ಮ ಬಳಿ ದೋಷಾರೋಪ ಪಟ್ಟಿಏನಾದರೂ ಇದೆಯೇ? ನೀವು ಅದನ್ನು ನೋಡಿದ್ದೀರಾ ಎಂದು ಮರು ಪ್ರಶ್ನೆ ಎಸೆದರು. ಈ ಪ್ರಕರಣಕ್ಕೂ ನನಗೆ ಸಂಬಂಧವಿಲ್ಲವೆಂದು ಇಲಾಖೆಯವರೇ ನ್ಯಾಯಾಲಯಕ್ಕೆ ತಿಳಿಸಿದ್ದಾರೆ ಎಂದು ಸ್ಪಷ್ಟನೆ ನೀಡಿದರು.