ಹುಬ್ಬಳ್ಳಿ (ಮಾ.21):  ರಾಜ್ಯದಲ್ಲಿ ಸರ್ವೇ ಸಮಸ್ಯೆ ನಿವಾರಣೆಗೆ 2032 ಸಿಬ್ಬಂದಿ ನೇಮಿಸಿಕೊಂಡಿದ್ದು, ಅವರಿಗೆ ಒಂದು ತಿಂಗಳ ತರಬೇತಿ ನೀಡಲಾಗುತ್ತಿದೆ. ಆ ಮೂಲಕ ಸರ್ವೇ ತೊಂದರೆಗಳನ್ನು ನಿವಾರಿಸುವ ಪ್ರಯತ್ನ ನಡೆದಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ತಿಳಿಸಿದರು.

ಛಬ್ಬಿ ಗ್ರಾಮ ವಾಸ್ತವ್ಯದ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಲಮಿತಿಯಲ್ಲಿ ಅರ್ಜಿಗಳು ವಿಲೇವಾರಿ ಆಗದೆ ಸಮಸ್ಯೆ ಇರುವುದು ಗಮನಕ್ಕಿದೆ. ಹೀಗಾಗಿ ಹೊಸದಾಗಿ ಸರ್ವೇಯರ್‌ಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಕಳೆದ ವರ್ಷ 33ಲಕ್ಷ ಪಹಣಿ ಅರ್ಜಿಗಳು ಬಂದಿದ್ದವು. ಅವುಗಳಲ್ಲಿ 32ಲಕ್ಷ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಇನ್ನೊಂದು ಲಕ್ಷ ಅರ್ಜಿಗಳ ವಿಲೇವಾರಿ ಬಾಕಿ ಇದೆ. ನಂತರ ಬಂದ 4 ಲಕ್ಷ ಅರ್ಜಿಗಳು ವಿಲೇವಾರಿ ಆಗಬೇಕಿದೆ ಎಂದರು.

ಅಕ್ರಮ ಸಾಗುವಳಿ ಸಕ್ರಮಕ್ಕೆ ಮತ್ತೆ ಅರ್ಜಿ ಆಹ್ವಾನ ...

ಇನ್ನು, ಕಳೆದ ಬಾರಿ ಗ್ರಾಮವಾಸ್ತವ್ಯ ಮಾಡಿದಾಗ 35 ಸಾವಿರ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿತ್ತು. ಮುಂದಿನ ಗ್ರಾಮ ವಾಸ್ತವ್ಯಗಳ ಸಂದರ್ಭದಲ್ಲಿ ಕನಿಷ್ಠ 50 ಸಾವಿರ ಅರ್ಜಿಗಳ ವಿಲೇವಾರಿ ಗುರಿಯನ್ನು ಇಟ್ಟುಕೊಳ್ಳಲಾಗುವುದು. ಈಗಾಗಲೆ 12-24 ಶಾಸಕರು, ಜಿಲ್ಲಾಧಿಕಾರಿಗಳು ತಮ್ಮ ಗ್ರಾಮಗಳಿಗೆ ಬರುವಂತೆ ಒತ್ತಾಯ ಮಾಡುತ್ತಿದ್ದಾರೆ. ಡಿಸಿ ಹಳ್ಳಿಗೆ ಹೋದಾಗ ಅಲ್ಲಿನ ಎಲ್ಲ ಸಮಸ್ಯೆಗಳನ್ನು ಬಗೆಹರಿಸಬೇಕು ಎಂಬುದು ನಮ್ಮ ಉದ್ದೇಶ. ಸರ್ಕಾರವನ್ನು ಹಳ್ಳಿಗೆ ತೆಗೆದುಕೊಂಡು ಹೋಗುವ ಗುರಿಯನ್ನು ಇಟ್ಟುಕೊಂಡಿದ್ದೇವೆ ಎಂದರು.

ಕಂದಾಯ ಇಲಾಖೆ ಮಾತೃ ಇಲಾಖೆಯಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ ಇಲಾಖೆಯ ಮಂತ್ರಿಗಳನ್ನು ಕರೆದುಕೊಂಡು ನಿರ್ಲಕ್ಷಿತ ಹಳ್ಳಿಗಳತ್ತ ತೆರಳಿ ಗ್ರಾಮ ವಾಸ್ತವ್ಯ ಮಾಡುವ ಪ್ರಯತ್ನ ಮಾಡಲಾಗುವುದು ಎಂದರು.

ಪ್ರವಾಹದಿಂದ ಸಂಕಷ್ಟಕ್ಕೀಡಾಗಿರುವವರ ಮನೆಗಳನ್ನು ಕಟ್ಟಿಸಿಕೊಡುವುದಕ್ಕಾಗಿಯೆ ಎಲ್ಲ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಸುಮಾರು .800 ಕೋಟಿ ಇದೆ. ಫಲಾನುಭವಿಗಳು 3-4ನೇ ಕಂತನ್ನು ಆದಷ್ಟುಬೇಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಸ್ಮಶಾನ ನಿರ್ಮಾಣಕ್ಕೆ ಭೂಮಿ:  ಧಾರವಾಡ ಜಿಲ್ಲೆಯಲ್ಲಿ 90 ಹಳ್ಳಿಗಳಿಗೆ ಸ್ಮಶಾನ ಇಲ್ಲ ಎಂಬ ವಿಚಾರ ಗಮನಕ್ಕಿದೆ. ಇದರ ಪರಿಹಾರಕ್ಕೆ ಇಲಾಖೆಯಿಂದ .2.67 ಕೋಟಿ ಬಿಡುಗಡೆ ಮಾಡಿದ್ದೇವೆ. ಜಿಲ್ಲಾಧಿಕಾರಿಗಳಿಗೆ ಸಂಪೂರ್ಣ ಅಧಿಕಾರ ನೀಡಲಾಗಿದ್ದು, ತಹಸೀಲ್ದಾರರು ಲಭ್ಯವಿರುವ ಸರ್ಕಾರಿ ಜಮೀನನ್ನು ಗುರುತಿಸಿ ಸ್ಮಶಾನ ಸಮಸ್ಯೆ ಬಗೆಹರಿಸಲು ಮುಂದಾಗಿದ್ದೇವೆ ಎಂದರು.