ವಿಧಾನ ಪರಿಷತ್‌ (ಮಾ.18):  ಸರ್ಕಾರಿ ಜಮೀನಿನಲ್ಲಿ ಅನಧಿಕೃತ ಸಾಗುವಳಿ ಮಾಡುತ್ತಿರುವ ಜಮೀನು ಸಕ್ರಮಕ್ಕೆ ಮತ್ತೆ ಅರ್ಜಿ ಆಹ್ವಾನಿಸಲು ಕಾಯ್ದೆಗೆ ತಿದ್ದುಪಡಿ ತರುವ ಸಂಬಂಧ ಮುಖ್ಯಮಂತ್ರಿ ಜೊತೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಹೇಳಿದ್ದಾರೆ.

ಕಾಂಗ್ರೆಸ್‌ನ ಕೆ. ಪ್ರತಾಪ್‌ಚಂದ್ರ ಶೆಟ್ಟಿಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸರ್ಕಾರಿ ಜಮೀನಿನಲ್ಲಿ ಅನಧಿಕೃತ ಸಾಗುವಳಿ ಮಾಡುತ್ತಿರುವ ಸಣ್ಣ ,ಅತಿ ಸಣ್ಣ ರೈತರಿಗೆ ಆ ಜಮೀನನ್ನು ಸಕ್ರಮಗೊಳಿಸಲು ಕರ್ನಾಟಕ ಭೂ ಕಂದಾಯ ಕಾಯ್ದೆ 1964ಕ್ಕೆ ತಿದ್ದುಪಡಿ ಮಾಡಿ 2018ರ ಮಾ.17ರಿಂದ 2019ರ ಮಾ.16ರವರೆಗೆ ಅರ್ಜಿ ಆಹ್ವಾನಿಸಲಾಗಿತ್ತು.

ಬೆಂಗ್ಳೂರು ಸುತ್ತ ಸರ್ಕಾರಿ ಜಾಗ ರಕ್ಷಿಸಲು 100 ಕೋಟಿ ಕೊಡಿ: ಸಚಿವ ಅಶೋಕ್‌ ..

ಇದರಡಿ 8.02 ಲಕ್ಷ ಅರ್ಜಿಗಳು ಸ್ವೀಕೃತವಾಗಿವೆ. 2018ರ ಲೋಕಸಭಾ ಚುನಾವಣೆ ಘೋಷಣೆ ಬಳಿಕ ಈ ಅರ್ಜಿಗಳ ಸಂಬಂಧ ಪ್ರಕ್ರಿಯೆ ಮುಂದುವರೆದಿಲ್ಲ. ಸ್ವೀಕೃತ ಅರ್ಜಿಗಳನ್ನು ಅಪ್‌ಲೋಡ್‌ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಆದರೆ, ಹೊಸದಾಗಿ ಮತ್ತೆ ಅರ್ಜಿ ಆಹ್ವಾನಿಸಲು ಕಾಯ್ದೆಗೆ ಮತ್ತೆ ತಿದ್ದುಪಡಿ ತರಬೇಕಾಗುತ್ತದೆ. ಈ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ತಿದ್ದುಪಡಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ಪ್ರತಾಪ್‌ಚಂದ್ರಶೆಟ್ಟಿಮಾತನಾಡಿ, ಉಡುಪಿ ಜಿಲ್ಲೆಯಲ್ಲಿ ರೈತರಿಗೆ ಅರ್ಜಿ ಸಲ್ಲಿಸಲು ಸಮಯಾವಕಾಶವಿದ್ದರೂ 2018ರ ಲೋಕಸಭಾ ಚುನಾವಣೆ ಕಾರಣ ಎಂಟು ದಿನ ಮೊದಲೇ ಅರ್ಜಿ ಸ್ವೀಕಾರ ನಿಲ್ಲಿಸಲಾಗಿದೆ. ಎಲ್ಲ ಜಿಲ್ಲೆಗಳಲ್ಲೂ ಈ ರೀತಿ ಆಗಿರುವುದರಿಂದ ರೈತರು ತೊಂದರೆಯಲ್ಲಿದ್ದಾರೆ. ಹಾಗಾಗಿ ಅಗತ್ಯಬಿದ್ದರೆ ಕಾಯ್ದೆಗೆ ತಿದ್ದುಪಡಿ ತಂದು ಮತ್ತೆ ಅರ್ಜಿ ಆಹ್ವಾನಿಸಲು ಒತ್ತಾಯಿಸಿದರು.